ಮಡುರೊ ಬಂಧನದ ಬೆನ್ನಲ್ಲೇ ರಷ್ಯಾ ತೈಲ ನೌಕೆ ವಶಕ್ಕೆ ಪಡೆದ ಅಮೆರಿಕ! | Russian Oil Tanker

Russian Oil Tanker
Russian Oil Tanker
Published on
ಅಮೆರಿಕ: ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ವಿಶೇಷ ಪಡೆಗಳು ಬಂಧಿಸಿದ ಕೆಲವೇ ದಿನಗಳಲ್ಲಿ, ಇದೀಗ ಅಟ್ಲಾಂಟಿಕ್ ಸಾಗರದಲ್ಲಿ ವೆನೆಜುವೆಲಾದೊಂದಿಗೆ ನಂಟು ಹೊಂದಿದ್ದ ರಷ್ಯಾ ಧ್ವಜದ 'ಮರಿನೆರಾ' (Marinera) ಎಂಬ ತೈಲ ನೌಕೆಯನ್ನು ಅಮೆರಿಕನ್ ಪಡೆಗಳು ವಶಪಡಿಸಿಕೊಂಡಿವೆ ಎಂದು ಬುಧವಾರ ವರದಿಯಾಗಿದೆ.
ಈ ಹಿಂದೆ 'ಬೆಲ್ಲಾ-1' ಎಂದು ಕರೆಯಲ್ಪಡುತ್ತಿದ್ದ ಈ ನೌಕೆಯನ್ನು ಸುಮಾರು ಎರಡು ವಾರಗಳ ಕಾಲ ಅಟ್ಲಾಂಟಿಕ್ ಸಾಗರದಲ್ಲಿ ಬೆನ್ನಟ್ಟಿದ ಅಮೆರಿಕದ ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆ, ಐಸ್‌ಲ್ಯಾಂಡ್ ಸಮೀಪ ಅದನ್ನು ವಶಕ್ಕೆ ಪಡೆದಿದೆ ಎಂದು ವರದಿ ಉಲ್ಲೇಖಿಸಿದೆ.
ರಷ್ಯಾದ ಹಸ್ತಕ್ಷೇಪ: ನೌಕೆಯನ್ನು ರಕ್ಷಿಸಲು ರಷ್ಯಾವು ಒಂದು ಸಬ್‌ಮರೀನ್ ಮತ್ತು ಯುದ್ಧನೌಕೆಯನ್ನು ನಿಯೋಜಿಸಿತ್ತು ಎನ್ನಲಾಗಿದೆ. ಇದು ಅಮೆರಿಕ ಮತ್ತು ರಷ್ಯಾ ನಡುವೆ ನೇರ ಸಂಘರ್ಷದ ಭೀತಿಯನ್ನು ಹುಟ್ಟುಹಾಕಿತ್ತು. ವೆನೆಜುವೆಲಾದ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಉಲ್ಲಂಘಿಸಿ ತೈಲ ಸಾಗಾಟ ಮಾಡುತ್ತಿದ್ದ 'ನೆರಳು ನೌಕೆ'ಗಳ (Shadow Fleet) ವಿರುದ್ಧ ಅಮೆರಿಕ ಆರಂಭಿಸಿರುವ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ಶನಿವಾರವಷ್ಟೇ ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾ ರಾಜಧಾನಿ ಕಾರಕಾಸ್‌ನಲ್ಲಿ ನಡೆಸಿದ ದಾಳಿಯಲ್ಲಿ ಮಡುರೊ ಅವರನ್ನು ಸೆರೆಹಿಡಿದು ಅಮೆರಿಕಕ್ಕೆ ಕರೆದೊಯ್ದಿದ್ದವು. ಇದರ ಬೆನ್ನಲ್ಲೇ ತೈಲ ದಿಗ್ಬಂಧನವನ್ನು ಮತ್ತಷ್ಟು ಬಿಗಿಗೊಳಿಸಲು ಈ ನೌಕೆಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಘಟನೆಯು ಅಮೆರಿಕ ಮತ್ತು ರಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆಯಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net