

ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೊಮ್ಮೆ ಬಂದೂಕು ಸಂಸ್ಕೃತಿಯ ರೌದ್ರನರ್ತನ ಕಂಡುಬಂದಿದೆ. ಹೌದು, ಹುಟ್ಟುಹಬ್ಬಕ್ಕೆ ತಾಯಿ ಉಡುಗೊರೆಯಾಗಿ ನೀಡಿದ ಗನ್‌ನಿಂದಲೇ 16 ವರ್ಷದ ಬಾಲಕನೊಬ್ಬ ಪ್ರಾಥಮಿಕ ಶಾಲೆಯೊಂದಕ್ಕೆ ನುಗ್ಗಿ ಮೂವರು ಮಕ್ಕಳು ಸೇರಿದಂತೆ ನಾಲ್ವರನ್ನು ಬರ್ಬರವಾಗಿ ಹತ್ಯೆ ( US School Shooting ) ಮಾಡಿರುವ ಅತ್ಯಂತ ಆಘಾತಕಾರಿ ಮತ್ತು ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಅಮೆರಿಕದ ಒರೆಗಾನ್ ರಾಜ್ಯದ ಬೆಂಡ್ ನಗರದಲ್ಲಿ ಕಳೆದ ವಾರ ಈ ದುರ್ಘಟನೆ ನಡೆದಿದೆ. ಶೂಟೌಟ್ ನಡೆಸಿದ 16 ವರ್ಷದ ಗ್ರಿಫಿನ್ ಜೆ. ಜಾನ್ II ಎಂಬ ಬಾಲಕನಿಗೆ ಆತನ ತಾಯಿ ಶೌಂಟೈ ನಿಕರ್ಸನ್ ಇತ್ತೀಚೆಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಮ್ಯಾವರಿಕ್ 88 ಪಂಪ್-ಆಕ್ಷನ್ 12-ಗೇಜ್ ಶಾಟ್‌ಗನ್ ಅನ್ನು ಕಾನೂನುಬದ್ಧವಾಗಿ ಖರೀದಿಸಿ ನೀಡಿದ್ದರು. ಮನರಂಜನಾ ಬಳಕೆಗಾಗಿ ತಾಯಿ ನೀಡಿದ ಈ ಮಾರಕ ಆಯುಧವೇ ಈಗ ನಾಲ್ಕು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುವ ಮೂಲಕ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಸಿಲ್ವರ್ ರೈಲ್ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದ ಈ ಹದಿಹರೆಯದ ಬಾಲಕ, ಕಳೆದ ಗುರುವಾರ ಅದೇ ಶಾಲೆಗೆ ನುಗ್ಗಿ ರಕ್ತಪಾತ ಸೃಷ್ಟಿಸಿದ್ದಾನೆ. ಘಟನೆಗೂ ಮುನ್ನ ಜಾನ್ II ರಸ್ತೆಯಲ್ಲಿ ಹೋಗುತ್ತಿದ್ದ ಪಿಕ್ಅಪ್ ಟ್ರಕ್ ಮೇಲೆ ಗುಂಡು ಹಾರಿಸಿದ್ದು, ಇದರ ಚಾಲಕನೇ ಮೊದಲು ತುರ್ತು ಸಂಖ್ಯೆ 911 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಶಾಲೆಗೆ ಬಂದ ಆತ, ಲಾಕ್ ಮಾಡಲಾಗಿದ್ದ ಗಾಜಿನ ಬಾಗಿಲುಗಳನ್ನು ಗುಂಡು ಹಾರಿಸಿ ಒಡೆದು ಒಳಗೆ ನುಗ್ಗಿದ್ದಾನೆ.
ಶಾಲೆ ಪ್ರವೇಶಿಸಿದ ತಕ್ಷಣ ಬಲ ಭಾಗದ ಮೊದಲ ತರಗತಿ ಕೊಠಡಿಗೆ ನುಗ್ಗಿದ ಆತ ಮನಬಂದಂತೆ ಗುಂಡಿನ ಮಳೆಗೈದಿದ್ದಾನೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ 5 ವರ್ಷದ ರೋಮ್ ಸಮ್ಮರ್ ಸೇರಿದಂತೆ 8 ಮತ್ತು 11 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಹಾಗೂ 25 ವರ್ಷದ ಮೇಗನ್ ಲ್ಯಾಂಬರ್ಟ್ ಎಂಬ ಶಿಕ್ಷಕಿ ಸೇರಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಆ ತರಗತಿಯಲ್ಲಿ ನಾಲ್ವರು ವಯಸ್ಕರು ಹಾಗೂ ಐದು ಮಕ್ಕಳು ಸೇರಿದಂತೆ ಒಟ್ಟು ಒಂಭತ್ತು ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಭೀಕರ ದಾಳಿಯನ್ನು ತಡೆಯಲು ಯತ್ನಿಸಿದ ಶಾಲೆಯ ಶಿಕ್ಷಕಿಯೊಬ್ಬರು ಬಂದೂಕಿಗಾಗಿ ಬಾಲಕನೊಂದಿಗೆ ಸೆಣಸಾಟ ನಡೆಸುತ್ತಿದ್ದ ವೇಳೆ, ಅದೇ ಶಾಲೆಯಲ್ಲಿ ಇಬ್ಬರು ಮಕ್ಕಳನ್ನು ಹೊಂದಿರುವ 36 ವರ್ಷದ ಕಯಲುಬ್ ಜಿಯಾಮಾಂಕೊ ಎಂಬ ಸ್ಥಳೀಯ ನಿವಾಸಿ ಧೈರ್ಯ ಮಾಡಿ ಶಾಲೆಯೊಳಗೆ ನುಗ್ಗಿದ್ದಾರೆ. ಬಾಲಕ ಟ್ರಕ್ ಮೇಲೆ ಗುಂಡು ಹಾರಿಸುವುದನ್ನು ಗಮನಿಸಿ ಹಿಂಬಾಲಿಸಿಕೊಂಡು ಬಂದಿದ್ದ ಅವರು, ಶಿಕ್ಷಕಿಯನ್ನು ರಕ್ಷಿಸಲು ಮುಂದಾಗಿ ಬಾಲಕನ ಮೇಲೆ ಗುಂಡು ಹಾರಿಸಿ ಆತನನ್ನು ಸ್ಥಳದಲ್ಲೇ ಹತ್ಯೆ ಮಾಡುವ ಮೂಲಕ ಮತ್ತಷ್ಟು ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.
ಈ ಘಟನೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮತ್ತೊಂದೆಡೆ, ತಮ್ಮ ಕಂದಮ್ಮಗಳನ್ನು ಕಳೆದುಕೊಂಡ ಪೋಷಕರು ಶಾಲೆಯ ಸುರಕ್ಷತಾ ಕ್ರಮಗಳು ಮತ್ತು ಆ ಬಾಲಕನಿಗೆ ಅಷ್ಟು ಸುಲಭವಾಗಿ ಮಾರಕ ಆಯುಧ ಹೇಗೆ ಸಿಕ್ಕಿತು ಎಂಬುದರ ಕುರಿತು ತನಿಖೆ ನಡೆಸಲು ವಕೀಲರನ್ನು ನೇಮಿಸಿಕೊಂಡಿದ್ದಾರೆ. ಈ ಸಂಬಂಧ ಶಾಲಾ ಆಡಳಿತ ಮಂಡಳಿಯ ಹೊಣೆಗಾರಿಕೆಯ ಬಗ್ಗೆಯೂ ಪ್ರಾಸಿಕ್ಯೂಟರ್‌ಗಳು ಕಾನೂನು ಪರಿಶೀಲನೆ ನಡೆಸುತ್ತಿದ್ದಾರೆ, (ಏಜೆನ್ಸೀಸ್).