ಇರಾನ್ ಒಂಟಿ ಮಾಡಲು ಪಣ ತೊಟ್ಟ ಟ್ರಂಪ್: 4 ಭಾರತೀಯ ಕಂಪನಿಗಳು, 3 ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ! | US Sanctions

US Sanctions | 4 ಭಾರತೀಯ ಕಂಪನಿಗಳು, 3 ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ!
US Sanctions | 4 ಭಾರತೀಯ ಕಂಪನಿಗಳು, 3 ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ!
Published on

ಇರಾನ್‌ನ ಇಸ್ಲಾಮಿಕ್ ಆಡಳಿತಕ್ಕೆ ಹಣಕಾಸಿನ ನೆರವು ನೀಡುವ ಆದಾಯದ ಮೂಲಗಳನ್ನು ಕತ್ತರಿಸುವ ಉದ್ದೇಶದಿಂದ ಅಮೆರಿಕ ಹೊಸದಾಗಿ ಆರಂಭಿಸಿರುವ ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್ (Operation Economic Outcast) ಯೋಜನೆಯಡಿ, ಇರಾನ್‌ನ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ವಹಿವಾಟಿನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಭಾರತ ಮೂಲದ ನಾಲ್ಕು ಕಂಪನಿಗಳು ಹಾಗೂ ಮೂವರು ಭಾರತೀಯ ಪ್ರಜೆಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.

ಇದಲ್ಲದೆ, ಪೋರ್ಟೀಸ್ ಸಂಸ್ಥೆಯ ನಿಯೋಜಿತ ಭಾಗೀದಾರರಾದ ಹರೀಶ್ ರಾಮಚಂದ್ರ ರಂಗಿ ಮತ್ತು ಇಂದ್ರಿಸ್ಮಿಯಾ ಅಶ್ರಫ್ಮಿಯಾ ಶೇಖ್ ಹಾಗೂ ಪಿಪಿ ಸಾಫ್ಟ್‌ಟೆಕ್ ಸಂಸ್ಥೆಯ ಪ್ರಶಾಂತ್ ಗರ್ಗ್ ಎಂಬ ಮೂವರು ಭಾರತೀಯ ಪ್ರಜೆಗಳನ್ನು ಕೂಡ ಅಮೆರಿಕ ತನ್ನ ದಿಗ್ಬಂಧನ ಪಟ್ಟಿಗೆ ಸೇರಿಸಿದೆ.

ವಹಿವಾಟಿನ ವಿವರ ಮತ್ತು ಆರೋಪಗಳು

ಪೋರ್ಟೀಸ್ ಪಾರ್ಟ್‌ನರ್ಸ್: ಕಸ್ಟಮ್ಸ್ ಬ್ರೋಕರ್ ಆಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು ಇರಾನ್‌ನ ಪೆಟ್ರೋಕೆಮಿಕಲ್ ಉತ್ಪನ್ನಗಳ ರವಾನೆಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಸುಗಮಗೊಳಿಸಿದ ಆರೋಪ ಎದುರಿಸುತ್ತಿದೆ.
ಸದಾಶಿವ ಓವರ್‌ಸೀಸ್: ವಿವಿಧ ಕಂಪನಿಗಳಿಂದ ಸುಮಾರು 69 ಮಿಲಿಯನ್ ಡಾಲರ್ ಮೌಲ್ಯದ ಇರಾನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ವಾಷಿಂಗ್ಟನ್ ಆರೋಪಿಸಿದೆ.
ಪಿಪಿ ಸಾಫ್ಟ್‌ಟೆಕ್ ಮತ್ತು ಪ್ರಕೃತಿ ಇನ್ಫ್ರಾ: ಈ ಎರಡೂ ಕಂಪನಿಗಳು ತಲಾ ಸುಮಾರು 25 ಮಿಲಿಯನ್ ಡಾಲರ್ ಮೌಲ್ಯದ ಇರಾನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿವೆ ಎಂದು ವಿದೇಶಾಂಗ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಮೆರಿಕ ವಿದೇಶಾಂಗ ಇಲಾಖೆಯ ಪ್ರಕಾರ, ಈ ವ್ಯಕ್ತಿಗಳು ಮತ್ತು ಕಂಪನಿಗಳು ತಿಳಿದಿದ್ದೇ ಇರಾನ್‌ನಿಂದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಕೊಳ್ಳುವುದು, ಮಾರಾಟ ಮಾಡುವುದು ಅಥವಾ ಸಾಗಿಸುವುದರಲ್ಲಿ ದೊಡ್ಡ ಮಟ್ಟದಲ್ಲಿ ಭಾಗಿಯಾಗಿದ್ದಕ್ಕಾಗಿ ಈ ದಿಗ್ಬಂಧನ ವಿಧಿಸಲಾಗಿದೆ. ಸೋಮವಾರ ಅಮೆರಿಕದ ಖಜಾನೆ ಇಲಾಖೆ ದಿಗ್ಬಂಧನ ಹೇರಿದ ಒಟ್ಟು 60 ವ್ಯಕ್ತಿಗಳು, ಸಂಸ್ಥೆಗಳು ಮತ್ತು ಹಡಗುಗಳ ಪಟ್ಟಿಯಲ್ಲಿ ಇವರ ಹೆಸರೂ ಇದೆ.

ಅಮೆರಿಕ ಎಚ್ಚರಿಕೆ!

ಇರಾನ್ ಆರ್ಥಿಕತೆಗೆ ಪೆಟ್ಟು ನೀಡುವ ಪ್ರಯತ್ನದ ಭಾಗವಾಗಿ, ಆ ದೇಶದ ಜೊತೆ ವಹಿವಾಟು ಮುಂದುವರಿಸುವ ದೇಶಗಳಿಗೆ ಶಿಕ್ಷೆ ವಿಧಿಸುವುದಾಗಿ ಈ ವಾರದ ಆರಂಭದಲ್ಲಿ ಅಮೆರಿಕ ಎಚ್ಚರಿಸಿತ್ತು, ಆದರೆ ತಕ್ಷಣವೇ ಯಾವುದೇ ದಂಡವನ್ನು ವಿಧಿಸುವುದಿಲ್ಲ ಎಂದು ಹೇಳಿದೆ.
ಮತ್ತೊಂದೆಡೆ, ಉದ್ವಿಗ್ನತೆಯ ಹೊರತಾಗಿಯೂ, ಇರಾನ್ ಜೊತೆಗಿನ ಉದ್ವಿಗ್ನತೆಯ ಮಧ್ಯೆ ತೆರವುಗೊಳಿಸಲಾದ ಅಥವಾ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಲಾಗಿದ್ದ ಮಧ್ಯಪ್ರಾಚ್ಯದ ಕೆಲವು ರಾಜತಾಂತ್ರಿಕ ನಿಯೋಗಗಳಿಗೆ ಅಮೆರಿಕವು ತನ್ನ ಸಿಬ್ಬಂದಿಯನ್ನು ಮತ್ತೆ ಕಳುಹಿಸಲು ಪ್ರಾರಂಭಿಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಕೆಲವು ರಾಯಭಾರ ಕಚೇರಿಗಳು ಆರಂಭದಲ್ಲಿ ಪೂರ್ಣ ಪ್ರಮಾಣಕ್ಕಿಂತ ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿವೆಯಾದರೂ, ಇರಾನ್ ಜೊತೆಗಿನ ಸಂಘರ್ಷ ತಕ್ಷಣಕ್ಕೆ ಹೆಚ್ಚಾಗುವ ಅಪಾಯ ಇಲ್ಲ ಎಂದು ಅಮೆರಿಕಾ ಭಾವಿಸಿರುವುದನ್ನು ಈ ನಡೆ ಸೂಚಿಸುತ್ತದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net