ತಾನೇ ಜೀಸಸ್ ಎಂದು AI ಪೋಟೋ ಹಂಚಿಕೊಂಡ ಟ್ರಂಪ್; 'ನಿಮ್ಮ ಕೆಲಸ ಮಾಡಿ ಬೇರೆಲ್ಲ ನಖರ ಬೇಡ' ಎಂದು Pope Leo ವಿರುದ್ಧ ಕಿಡಿ

Pope Leo XIV, Trump
Pope Leo XIV, Trump
Published on

ಪ್ರಮುಖ ಮುಖ್ಯಾಂಶಗಳು

  • ಟ್ರಂಪ್​ನ ವಿದೇಶಾಂಗ ನೀತಿ, ಇರಾನ್​ ಮೇಲಿನ ದಾಳಿ ಖಂಡಿಸಿದ ಪೋಪ್​ ಲಿಯೋ
  • ಯುದ್ಧ ಎಲ್ಲದಕ್ಕೂ ಪರಿಹಾರವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಪೋಪ್ ಲಿಯೋ XIV
  • ನಾನೇನು ನಿಮ್ಮ ಅಭಿಮಾನಿಯಲ್ಲ, ನಿಮ್ಮ ಕೆಲಸ ಮಾಡಿ ರಾಜಕಾರಣಕ್ಕೆ ತಲೆ ಹಾಕ್ಬೇಡಿ ಎಂದ ಟ್ರಂಪ್
ವಾಷಿಂಗ್ಟನ್ ಡಿಸಿ: ಜೀಸಸ್​ ಶಾಂತಿಯ ಸಂಕೇತ ಅವರೆಂದಿಗೂ ಯುದ್ಧವನ್ನು ಬೆಂಬಲಿಸೋದಿಲ್ಲ. ಯೇಸು ದಮನಿತರ ಪರ ಎಂದು ಪೋಪ್ ಲಿಯೋ XIV ಹೇಳಿಕೆ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಂಚಿಕೊಂಡ ಪೋಸ್ಟ್​ವೊಂದು ವೈರಲ್​ ಆಗುತ್ತಿದೆ. ಈ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಟ್ರಂಪ್​ ಪೋಸ್ಟ್​ನಲ್ಲಿ ಏನಿದೆ?

ಪೋಪ್ ಲಿಯೋ XIV ಅವರ ಪೋಸ್ಟ್​ ಉಲ್ಲೇಖಿಸಿ ಟ್ರುಥ್​​​ ಸೋಶಿಯಲ್​ ಮೀಡಿಯಾದಲ್ಲಿ ಡೊನಾಲ್ಡ್​ ಟ್ರಂಪ್​ ಎಐ ಜನರೇಟೆಡ್​ ಪೋಸ್ಟ್​ ಹಂಚಿಕೊಂಡಿದ್ದಾರೆ. ಇದರಲ್ಲಿ ತಾವೇ ಜೀಸಸ್​ ಎಂದು ಹೋಲುವಂತೆ, ತಾವೇ ಜನರ ರೋಗ ನಿವಾರಿಸುವಂತಹ ಫೋಟೋ ಕ್ರಿಯೇಟ್​ ಮಾಡಿಕೊಂಡಿದ್ದಾರೆ. ಈ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಶ್ವೇತಭವನ ಮತ್ತು ವ್ಯಾಟಿಕನ್​ ನಡುವೆ ಸಂಬಂಧ ಹದಗೆಟ್ಟಿರುವ ಹೊತ್ತಲ್ಲಿ ಈ ಪೋಸ್ಟ್​ ಹಂಚಿಕೊಂಡಿರುವುದು ಬಹಳಷ್ಟು ವಿವಾದಕ್ಕೆ ಕಾರಣವಾಗಿದೆ.

ಪೋಪ್ ಹೇಳಿದ್ದೇನು?

ಟ್ರಂಪ್​ನ ಕಠಿಣ ವಲಸೆ ನೀತಿಯಿಂದ ಬೀರುತ್ತಿರುವ ಪರಿಣಾಮ, ಇರಾನ್​ ಮೇಲಿನ ದಾಳಿಯನ್ನು ಉಲ್ಲೇಖಿಸಿ ಪೋಪ್ ಲಿಯೋ​ ಹಲವಾರು ಬಾರಿ ಮಾತನಾಡಿದ್ದರು. ಜೊತೆಗೆ ಸಂಯಮ ಮತ್ತು ಶಾಂತಿ ಕೋರಿದ್ದರು. "ಜೀಸಸ್​ ಯುದ್ಧಕ್ಕೆ ಎಂದಿಗೂ ಪ್ರೇರಣೆ ನೀಡಿಲ್ಲ. ಹಿಂಸೆಯನ್ನು ಒಪ್ಪುವುದಿಲ್ಲ. ಯುದ್ಧ ಮಾಡುವವರ ಪ್ರಾರ್ಥನೆಯನ್ನು ಅವರೆಂದಿಗೂ ಆಲಿಸೋದಿಲ್ಲ. ತುಳಿತಕ್ಕೊಳಗಾದವರ ಪರ ಅವರು ನಿಲ್ಲುತ್ತಾರೆ ಸ್ವಾಂತ್ವನ ನೀಡುತ್ತಾರೆ. ಸಮಸ್ಯೆಗೆ ಯುದ್ಧ ಪರಿಹಾರವಲ್ಲ" ಎಂದು ಹೇಳಿದ್ದರು.

ಟ್ರಂಪ್​ ಟೀಕೆ ಏನು?

ಈ ಹೇಳಿಕೆ ಉಲ್ಲೇಖಿಸಿ ಮಾತನಾಡಿರುವ ಅವರು "ಪೋಪ್​ಗೆ ವಿದೇಶಾಂಗ ನೀತಿ ಬಗ್ಗೆ ಗಾಳಿ-ಗಂಧವೂ ಗೊತ್ತಿಲ್ಲ. ನಾನೇನೂ ಅವರ ಅಭಿಮಾನಿಯೂ ಅಲ್ಲ. ಇರಾನ್​​ ಪರಮಾಣು ಹೊಂದಲಿ ಎಂದು ಬಯಸುವ ಪೋಪ್​ ನಮಗೆ ಬೇಡ" ಎಂದು ಟ್ರಂಪ್​ ಗುಡುಗಿದ್ದಾರೆ.
ಮುಂದುವರೆದು, " ನಾನು ಶ್ವೇತಭವನದಲ್ಲಿ ಇಲ್ಲದಿದ್ದರೆ, ಪೋಪ್​ ಲಿಯೋ ವ್ಯಾಟಿಕನ್​ ನಲ್ಲಿ ಇರುತ್ತಿರಲಿಲ್ಲ. ನಾನಿಲ್ಲದಿದ್ದರೆ ಪೋಪ್​ ಆಗೋಕೆ ಆಗ್ತಿರಲಿಲ್ಲ. ಅಮೆರಿಕನ್ ಆದ ಕಾರಣ ಅವರು ಪೋಪ್ ಆಗಿದ್ದಾರೆ. ಪೋಪ್​ ಆಗಿ ಏನು ಕೆಲಸ ಇದೆಯೋ ಅದನ್ನು ಮಾಡಿಕೊಂಡು ಹೋದರೆ ಸಾಕು ಎಂದು ಲೇವಡಿ ಮಾಡಿದ್ದಾರೆ. ಸದ್ಯ ಅವರು ಸಂಪೂರ್ಣ ಎಡಪಂಥೀಯರ ಜೊತೆ ಸೇರಿಕೊಂಡಿದ್ದಾರೆ. ಪೋಪ್​ ಅವರ ಸಹೋದರ ನನ್ನ MAGA ಚಳುವಳಿಯನ್ನು ಬೆಂಬಲಿಸುತ್ತಾರೆ ನನಗೆ ಅವರೇ ಇಷ್ಟ" ಎಂದು ಟ್ರಂಪ್​ ಮಾತನಾಡಿದ್ದಾರೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net