ಮಧ್ಯಪ್ರಾಚ್ಯಕ್ಕೆ ಅಮೆರಿಕ ನೌಕಾಪಡೆ ಶಿಫ್ಟ್​​; ಇಂಡೋ-ಪೆಸಿಫಿಕ್​ನಲ್ಲಿ ಆತಂಕ; ಲಾಭ ಪಡೆಯಲು ಮುಂದಾದ ಡ್ರ್ಯಾಗನ್​ ರಾಷ್ಟ್ರ! US Navy and China

ಮಧ್ಯಪ್ರಾಚ್ಯದ ಜಂಜಾಟಕ್ಕೆ ತನ್ನ ಪ್ರಮುಖ ನೌಕಾಪಡೆಯನ್ನು ಪೆಸಿಫಿಕ್‌ನಿಂದ ಶಿಫ್ಟ್ ಮಾಡುತ್ತಿರುವ ಅಮೆರಿಕ
ಮಧ್ಯಪ್ರಾಚ್ಯದ ಜಂಜಾಟಕ್ಕೆ ತನ್ನ ಪ್ರಮುಖ ನೌಕಾಪಡೆಯನ್ನು ಪೆಸಿಫಿಕ್‌ನಿಂದ ಶಿಫ್ಟ್ ಮಾಡುತ್ತಿರುವ ಅಮೆರಿಕ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದ ಜಂಜಾಟಕ್ಕೆ ತನ್ನ ಪ್ರಮುಖ ನೌಕಾಪಡೆಯನ್ನು ಪೆಸಿಫಿಕ್‌ನಿಂದ ಶಿಫ್ಟ್ ಮಾಡುತ್ತಿರುವ ಅಮೆರಿಕ
  • ಇದರ ಲಾಭ ಪಡೆಯಲು ಮುಂದಾದ ಚೀನಾ
  • ಯುಎಸ್ ನೌಕಾಪಡೆಯ ಈ ತಂತ್ರ ಹಾಗೂ ಜಾಗತಿಕ ರಾಜಕಾರಣದ ಸಂಪೂರ್ಣ ವಿಶ್ಲೇಷಣೆ
ವಾಷಿಂಗ್ಟನ್: ಇರಾನ್ ವಿರುದ್ಧದ ಸಂಘರ್ಷ ಮತ್ತು ಮಧ್ಯಪ್ರಾಚ್ಯದ ಬಿಕ್ಕಟ್ಟನ್ನು ಬಗೆಹರಿಸಲು ಅಮೆರಿಕ ತನ್ನ ಪ್ರಮುಖ ಸೇನಾ ಬಲವನ್ನು ಬೇರೆಡೆಗೆ ತಿರುಗಿಸುತ್ತಿದೆ. ಪರಿಣಾಮವಾಗಿ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅಮೆರಿಕದ ಪ್ರಭಾವ ತಗ್ಗುತ್ತಿದ್ದು, ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಚೀನಾ (US Navy and China) ಹೊಂಚುಹಾಕುತ್ತಿದ್ದು, ಜಾಗತಿಕ ರಾಜಕಾರಣದಲ್ಲಿ ಇದು ಹೊಸ ಸಂಚಲನ ಸೃಷ್ಟಿಸಿದೆ.

ಮಧ್ಯಪ್ರಾಚ್ಯದತ್ತ ಮುಖಮಾಡಿದ ಯುಎಸ್ ನೌಕಾಪಡೆ

ಅಮೆರಿಕದ ಮಹತ್ವದ ಯುದ್ಧನೌಕೆಯಾದ ಯುಎಸ್‌ಎಸ್ ಜಾರ್ಜ್ ವಾಷಿಂಗ್ಟನ್ ತನ್ನ ಪ್ರಮುಖ ಪೆಸಿಫಿಕ್ ನೆಲೆ ತೊರೆದು ಮಧ್ಯಪ್ರಾಚ್ಯದತ್ತ ಹೊರಟಿದೆ. ಅಲ್ಲಿ ಈಗಾಗಲೇ ನಿಯೋಜನೆಗೊಂಡಿರುವ ಯುಎಸ್‌ಎಸ್ ಅಬ್ರಹಾಂ ಲಿಂಕನ್ ನೌಕೆಯ ಬದಲಿಗೆ ಇದು ಕಾರ್ಯಾಚರಣೆ ನಡೆಸಲಿದೆ. ಇರಾನ್ ಮೇಲಿನ ಅಮೆರಿಕದ ಕಾರ್ಯಾಚರಣೆಗೆ ಬೆಂಬಲ ನೀಡಲು ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಅನಿರೀಕ್ಷಿತ ನಿರ್ಧಾರದಿಂದ ತಾತ್ಕಾಲಿಕವಾಗಿ ಪೆಸಿಫಿಕ್ ಸಾಗರದಲ್ಲಿ ಅಮೆರಿಕದ ಯಾವುದೇ ವಿಮಾನವಾಹಕ ನೌಕೆ ಇಲ್ಲದಂತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬರುವ ತಿಂಗಳುಗಳಲ್ಲಿ ಹೊಸ ನೌಕೆ ಬರುವವರೆಗೆ ಈ ಪ್ರದೇಶದಲ್ಲಿ ಬಲಹೀನತೆ ಎದುರಾಗಲಿದೆ ಎಂದು ರಕ್ಷಣಾ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ತೈವಾನ್ ಮೇಲೆ ಕಣ್ಣಿಟ್ಟಿರುವ ಚೀನಾ!


ಅಮೆರಿಕದ ಗಮನ ಬೇರೆಡೆಗೆ ಸರಿದಿರುವುದನ್ನು ಚೀನಾ ತನ್ನ ಬಲ ಪ್ರದರ್ಶನಕ್ಕೆ ಅತ್ಯುತ್ತಮ ಅವಕಾಶವಾಗಿ ಬಳಸಿಕೊಳ್ಳುತ್ತಿದೆ. ವಿಶೇಷವಾಗಿ ಸ್ವಾಯತ್ತ ದ್ವೀಪವಾದ ತೈವಾನ್ ಹಾಗೂ ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಹಿಡಿತ ಸಾಧಿಸಲು ಡ್ರ್ಯಾಗನ್ ರಾಷ್ಟ್ರ ತನ್ನ ಮಿಲಿಟರಿ ಚಟುವಟಿಕೆಗಳನ್ನು ತೀವ್ರಗೊಳಿಸಿದೆ ಎಂದು ಹೇಳಲಾಗುತ್ತಿದೆ.
ಫಿಲಿಪೈನ್ಸ್, ಜಪಾನ್ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಇನ್ನು ಮುಂದೆ ಅಮೆರಿಕ ತನ್ನ ಮಿತ್ರರಾಷ್ಟ್ರಗಳ ಭದ್ರತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಲು ಚೀನಾ ಯತ್ನಿಸುತ್ತಿದೆ.
ಇತ್ತೀಚೆಗೆ ಇಂಡೋನೇಷ್ಯಾ ಜತೆ ನೌಕಾ ವ್ಯಾಯಾಮ ನಡೆಸಿರುವ ಚೀನಾ, ಜಪಾನ್ ಗಡಿಯಲ್ಲೂ ತನ್ನ ಮಿಲಿಟರಿ ಕವಾಯತು ಮುಂದುವರಿಸಿದೆ. ಸ್ಕಾರ್ಬರೋ ಶೋಲ್ ಬಳಿ ಮಿಲಿಟರಿ ಕವಾಯತು ಹಾಗೂ ಒಕಿನೊಟೊರಿ ಬಳಿ ಲೈಫ್-ಫೈರ್ ವ್ಯಾಯಾಮ ನಡೆಸುವ ಮೂಲಕ ತನ್ನ ಪ್ರಾಬಲ್ಯ ಮೆರೆಯುತ್ತಿದೆ.

ಆತಂಕದಲ್ಲಿ ಮಿತ್ರರಾಷ್ಟ್ರಗಳು; ಅಮೆರಿಕದ ಸಮಾಧಾನದ ತಂತ್ರ


ಪೆಸಿಫಿಕ್ ಭಾಗದಲ್ಲಿ ಅಮೆರಿಕದ ಪ್ರಮುಖ ನೌಕೆಗಳು ಇಲ್ಲದಿರುವುದು ಈ ಭಾಗದ ಮಿತ್ರರಾಷ್ಟ್ರಗಳಲ್ಲಿ ತಳಮಳ ಸೃಷ್ಟಿಸಿದೆ. ಅಮೆರಿಕ ನಮ್ಮ ಕೈಬಿಡುತ್ತಿದೆಯೇ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಡಿವಾಣ ಹಾಕಲು ಅಮೆರಿಕ ರಾಜತಾಂತ್ರಿಕ ಹಾಗೂ ಮಿಲಿಟರಿ ಮಟ್ಟದಲ್ಲಿ ಸಮಾಧಾನದ ಕಸರತ್ತು ನಡೆಸುತ್ತಿದೆ.
ಯುಎಸ್ ವಿಶೇಷ ಕಾರ್ಯಾಚರಣೆ ಕಮಾಂಡ್‌ನ ಮುಖ್ಯಸ್ಥರು ಇತ್ತೀಚೆಗೆ ಮನಿಲಾಗೆ ಭೇಟಿ ನೀಡಿ, ಫಿಲಿಪೈನ್ಸ್ ಅಧಿಕಾರಿಗಳೊಂದಿಗೆ ಜಂಟಿ ವ್ಯಾಯಾಮ ವಿಸ್ತರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೂ, ದೀರ್ಘಕಾಲದವರೆಗೆ ನೌಕೆಗಳ ಅನುಪಸ್ಥಿತಿ ಇರುವುದು ಮಿತ್ರರಾಷ್ಟ್ರಗಳಲ್ಲಿ ಮಾನಸಿಕ ಹಿಂಜರಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತಿಂಗಳುಗಟ್ಟಲೆ ಸಮುದ್ರದಲ್ಲೇ ಇರುವ ಸೈನಿಕರು

ಮಧ್ಯಪ್ರಾಚ್ಯದ ಸುದೀರ್ಘ ಕಾರ್ಯಾಚರಣೆಗಳು ಯುಎಸ್ ನೌಕಾಪಡೆಯ ಸಿಬ್ಬಂದಿಯ ಮೇಲೆ ತೀವ್ರ ಮಾನಸಿಕ ಹಾಗೂ ದೈಹಿಕ ಒತ್ತಡ ಹೇರುತ್ತಿವೆ. 'ಯುಎಸ್‌ಎಸ್ ಅಬ್ರಹಾಂ ಲಿಂಕನ್' ನೌಕೆಯು ಸತತ 240 ದಿನಗಳಿಗಿಂತ ಹೆಚ್ಚು ಕಾಲ ಸಮುದ್ರದಲ್ಲೇ ಕಳೆದಿದೆ. ಇದು ಸಿಬ್ಬಂದಿಯ ಆರೋಗ್ಯದ ಬಗ್ಗೆ ಗಂಭೀರ ಕಳವಳ ಮೂಡಿಸಿದೆ.
ವಿಯೆಟ್ನಾಂ ಯುದ್ಧದ ನಂತರ ಅತಿ ಹೆಚ್ಚು ಕಾಲ (11 ತಿಂಗಳು) ಸಮುದ್ರದಲ್ಲಿದ್ದ ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್' ನೌಕೆಯಲ್ಲೂ ಇಂಥದ್ದೇ ತೊಂದರೆಗಳು ಕಾಣಿಸಿಕೊಂಡಿದ್ದವು. ಲಾಂಡ್ರಿ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ನೂರಾರು ನಾವಿಕರು ಮಲಗಲು ಸೂಕ್ತ ಸ್ಥಳವಿಲ್ಲದೆ ಪರದಾಡಬೇಕಾಯಿತು. ಸತತ ವಿಶ್ರಾಂತಿಯಿಲ್ಲದೆ ಕೆಲಸ ಮಾಡುವುದರಿಂದ ಸೈನಿಕರ ದಕ್ಷತೆ ಕುಸಿಯುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ನಿರ್ವಹಣಾ ಬಿಕ್ಕಟ್ಟಿನ ಸುಳಿಯಲ್ಲಿ ನೌಕಾಪಡೆ

ಅಮೆರಿಕದ ನೌಕಾಪಡೆಯ ಬಳಿ ಒಟ್ಟು 11 ವಿಮಾನವಾಹಕ ನೌಕೆಗಳಿದ್ದರೂ, ನಿರಂತರ ನಿಯೋಜನೆಗಳಿಂದಾಗಿ ಅವುಗಳ ನಿರ್ವಹಣೆ ಕಷ್ಟಕರವಾಗುತ್ತಿದೆ. ಹಡಗುಗಳಿಗೆ ನಿರಂತರ ದುರಸ್ತಿ ಹಾಗೂ ವಿಶ್ರಾಂತಿಯ ಅಗತ್ಯವಿರುತ್ತದೆ. ಆದರೆ ನಿರಂತರ ಯುದ್ಧ ಕಾರ್ಯಾಚರಣೆಗಳಿಂದಾಗಿ ನಿರ್ವಹಣಾ ವೆಚ್ಚ ಬೆಳೆಯುತ್ತಿದ್ದು, ಇದು ಭವಿಷ್ಯದಲ್ಲಿ ಅಮೆರಿಕದ ನೌಕಾ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುವ ಅಪಾಯವಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net