ಅಮೆರಿಕದ KC-135 ಯುದ್ಧ ವಿಮಾನ ಪತನ: ಇರಾನ್ ಯುದ್ಧದ ಮಧ್ಯೆ ಅಮೆರಿಕ ಕಳೆದುಕೊಂಡ 4ನೇ ವಿಮಾನವಿದು!

KC-135
KC-135
Published on
ಬಾಗ್ದಾದ್/ವಾಷಿಂಗ್ಟನ್: ಪಶ್ಚಿಮ ಇರಾಕ್‌ನಲ್ಲಿ ಅಮೆರಿಕದ KC-135 ಸ್ಟ್ರಾಟೋಟ್ಯಾಂಕರ್ (ಆಕಾಶದಲ್ಲೇ ಇಂಧನ ತುಂಬಿಸುವ ವಿಮಾನ) ಪತನಗೊಂಡಿದ್ದು, ಇರಾನ್ ವಿರುದ್ಧ ನಡೆಯುತ್ತಿರುವ 'ಆಪರೇಷನ್ ಎಪಿಕ್ ಫ್ಯೂರಿ' (Operation Epic Fury) ಕಾರ್ಯಾಚರಣೆಯ ನಡುವೆ ಅಮೆರಿಕದ ಸೇನೆಗೆ ದೊಡ್ಡ ಆಘಾತ ಎದುರಾಗಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಗುರುವಾರ ಪಶ್ಚಿಮ ಇರಾಕ್‌ನ ಸ್ನೇಹಿ ವಾಯುಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಎರಡು ವಿಮಾನಗಳು ಭಾಗಿಯಾಗಿದ್ದವು ಎನ್ನಲಾಗಿದ್ದು, ಒಂದು ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ಆದರೆ, KC-135 ವಿಮಾನವು ನೆಲಕ್ಕೆ ಅಪ್ಪಳಿಸಿದೆ.
"ಇದು ಶತ್ರುಗಳ ದಾಳಿಯಿಂದ ಅಥವಾ ಅಪ್ಪಿತಪ್ಪಿ ನಡೆದ ದಾಳಿಯಿಂದ (Friendly Fire) ಸಂಭವಿಸಿದ ಅಪಘಾತವಲ್ಲ. ತಾಂತ್ರಿಕ ಕಾರಣ ಅಥವಾ ಆಕಸ್ಮಿಕವಾಗಿ ನಡೆದ ಘಟನೆ" ಎಂದು ಸೇನೆ ಸ್ಪಷ್ಟಪಡಿಸಿದೆ.

ನಾಲ್ಕನೇ ವಿಮಾನ ನಷ್ಟ!

ಫೆಬ್ರವರಿ 28 ರಿಂದ ಆರಂಭವಾಗಿರುವ ಇರಾನ್-ಅಮೆರಿಕ ಸಂಘರ್ಷದಲ್ಲಿ ಅಮೆರಿಕವು ಇದುವರೆಗೆ ಕಳೆದುಕೊಂಡ ನಾಲ್ಕನೇ ಪ್ರಮುಖ ವಿಮಾನ ಇದಾಗಿದೆ. ಈ ಹಿಂದೆ ಕುವೈತ್ ಗಡಿಯಲ್ಲಿ ನಡೆದ ಸಂಘರ್ಷದ ವೇಳೆ ಮೂರು F-15E ಯುದ್ಧ ವಿಮಾನಗಳು ಕುವೈತ್ ಪಡೆಗಳ ತಪ್ಪಿನಿಂದಾಗಿ (Friendly Fire) ಪತನಗೊಂಡಿದ್ದವು. ಆದರೆ ಆ ಘಟನೆಯಲ್ಲಿ ಎಲ್ಲ ಆರು ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದರು.
KC-135 ವಿಮಾನದ ವಿಶೇಷತೆ
ಇಂಧನ ತುಂಬಿಸುವ ಶಕ್ತಿ: ಈ ವಿಮಾನವು ಯುದ್ಧ ವಿಮಾನಗಳು ಮತ್ತು ಬಾಂಬರ್‌ಗಳಿಗೆ ಹಾರಾಟದ ನಡುವೆಯೇ ಇಂಧನ ತುಂಬಿಸುವ ಕೆಲಸ ಮಾಡುತ್ತದೆ.
ಸಿಬ್ಬಂದಿ: ಸಾಮಾನ್ಯವಾಗಿ ಪೈಲಟ್, ಕೋ-ಪೈಲಟ್ ಮತ್ತು ಬೂಮ್ ಆಪರೇಟರ್ ಸೇರಿದಂತೆ ಮೂವರು ಇರುತ್ತಾರೆ. ಆದರೆ ಈ ಬಾರಿ ವಿಮಾನದಲ್ಲಿ ಕನಿಷ್ಠ 5 ರಿಂದ 6 ಜನ ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.
ಪ್ರಾಮುಖ್ಯತೆ: ಇದು ಕಳೆದ 60 ವರ್ಷಗಳಿಂದ ಅಮೆರಿಕದ ವಾಯುಪಡೆಯ ಬೆನ್ನೆಲುಬಾಗಿ ಸೇವೆ ಸಲ್ಲಿಸುತ್ತಿದೆ.
ರಕ್ಷಣಾ ಕಾರ್ಯಾಚರಣೆ ಚುರುಕು
ಪತನಗೊಂಡ ವಿಮಾನದಲ್ಲಿದ್ದ ಸಿಬ್ಬಂದಿಗಳ ಸ್ಥಿತಿ ಬಗ್ಗೆ ಇನ್ನು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಯುಎಸ್ ಕಮಾಂಡೋಗಳು ಮತ್ತು ರಕ್ಷಣಾ ಪಡೆಗಳು ಪಶ್ಚಿಮ ಇರಾಕ್‌ನ ಮರುಭೂಮಿ ಪ್ರದೇಶದಲ್ಲಿ ಸಿಬ್ಬಂದಿಗಳ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿವೆ.

ಯುದ್ಧದ ಹಿನ್ನೆಲೆ

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ಭಾರಿ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇರಾನ್ ಸಹ ಈ ಪ್ರದೇಶದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ತಿರುಗೇಟು ನೀಡುತ್ತಿದೆ. ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಗುಂಪುಗಳು ಈ ವಿಮಾನವನ್ನು ನಾವೇ ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿದ್ದರೂ, ಅಮೆರಿಕ ಇದನ್ನು ತಳ್ಳಿಹಾಕಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net