ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ಹೊರ್ಮುಜ್ ಜಲಸಂಧಿಯಲ್ಲಿ ತಲ್ಲಣ, ಇರಾನಿ ಸೇನಾ ನೆಲೆಗಳು ಧ್ವಂಸ! US - Iran War

ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ಹೊರ್ಮುಜ್ ಜಲಸಂಧಿಯಲ್ಲಿ ತಲ್ಲಣ, ಇರಾನಿ ಸೇನಾ ನೆಲೆಗಳು ಧ್ವಂಸ! US - Iran War
ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ಹೊರ್ಮುಜ್ ಜಲಸಂಧಿಯಲ್ಲಿ ತಲ್ಲಣ, ಇರಾನಿ ಸೇನಾ ನೆಲೆಗಳು ಧ್ವಂಸ! US - Iran War
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್‌ನ ಸೇನಾ ನೆಲೆಗಳ ಮೇಲೆ ಅಮೆರಿಕ ಮಿಲಿಟರಿ ದಾಳಿ
  • ಮೂರು ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಪ್ರತಿಕಾರ ತೀರಿಸಿಕೊಂಡ ಅಮೆರಿಕ
  • ತಾತ್ಕಾಲಿಕ ಶಾಂತಿ ಒಪ್ಪಂದ ಸಂಪೂರ್ಣ ಮುಕ್ತಾಯ ಎಂದು ಇರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಟ್ರಂಪ್ ಆಕ್ರೋಶ
  • ಬುಧವಾರ ತಡರಾತ್ರಿ ನಡೆದ ದಾಳಿಯಲ್ಲಿ ಡಜನ್‌ಗಟ್ಟಲೆ ಐಆರ್‌ಜಿಸಿ ಸೇನಾ ನೆಲೆಗಳು ಉಡೀಸ್
ಟೆಹರಾನ್​​: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿದಿದ್ದು, ಜಾಗತಿಕ ತೈಲ ಸಾಗಣೆಯ ಪ್ರಮುಖ ನರನಾಡಿಯಂತಿರುವ 'ಸ್ಟ್ರೇಟ್ ಆಫ್ ಹೊರ್ಮುಜ್' (ಹಾರ್ಮುಜ್ ಜಲಸಂಧಿ) ಜಲಮಾರ್ಗಕ್ಕೆ ಇರಾನ್‌ನಿಂದ ಎದುರಾಗಿದ್ದ ಭದ್ರತಾ ಭೀತಿಯನ್ನು ಹತ್ತಿಕ್ಕಲು ಅಮೆರಿಕದ ಮಿಲಿಟರಿ ಪಡೆಗಳು ಬುಧವಾರ ರಾತ್ರಿ ಇರಾನ್ ಮೇಲೆ ಭೀಕರ ವಾಯುದಾಳಿ ( US - Iran War ) ನಡೆಸಿವೆ. 
ವಾಣಿಜ್ಯ ಹಡಗುಗಳ ಮೇಲೆ ಇರಾನ್​ ನಡೆಸಿದ ಸರಣಿ ದಾಳಿಗೆ ಪ್ರತಿಯಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಈ ದಾಳಿ ನಡೆಸಿದ್ದು, ಕರಾವಳಿ ರಾಡಾರ್‌ಗಳು ಹಾಗೂ ಐಆರ್‌ಜಿಸಿ (IRGC) ನೌಕೆಗಳು ಸೇರಿದಂತೆ ಡಜನ್‌ಗಟ್ಟಲೆ ಇರಾನಿ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದೆ. ಅಚ್ಚರಿಯ ಬೆಳವಣಿಗೆಯಾಗಿ, ಈ ದಾಳಿ ನಡೆದ ಕೆಲವೇ ಗಂಟೆಗಳ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಜೊತೆಗಿನ ತಾತ್ಕಾಲಿಕ ಶಾಂತಿ ಒಪ್ಪಂದವು ಸಂಪೂರ್ಣವಾಗಿ ಮುಕ್ತಾಯಗೊಂಡಿದೆ ಮತ್ತು ಅವರೊಂದಿಗೆ ಮಾತುಕತೆ ನಡೆಸುವುದು ಕೇವಲ ಸಮಯ ವ್ಯರ್ಥ ಎಂದು ಘೋಷಿಸಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಮಂಗಳವಾರದಂದು ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಮೂರು ವಾಣಿಜ್ಯ ಸರಕು ಸಾಗಣೆ ಹಡಗುಗಳ ಮೇಲೆ ನಡೆದ ಭೀಕರ ದಾಳಿಗೆ ಪ್ರತಿಯಾಗಿ ಅಮೆರಿಕ ಇದೀಗ ದಾಳಿ ನಡೆಸಿದೆ. ಜಾಗತಿಕವಾಗಿ ಅತ್ಯಂತ ಆಯಕಟ್ಟಿನ ಹಾಗೂ ಆರ್ಥಿಕವಾಗಿ ಅತ್ಯಂತ ಪ್ರಮುಖವಾಗಿರುವ ಈ ಜಲಮಾರ್ಗದಲ್ಲಿ ಮುಕ್ತ ಅಂತಾರಾಷ್ಟ್ರೀಯ ಹಡಗು ಸಂಚಾರವನ್ನು ಸುರಕ್ಷಿತವಾಗಿಡುವುದು ಮತ್ತು ಇರಾನ್‌ನಿಂದ ಎದುರಾಗುವ ಭೀತಿಯನ್ನು ಸಂಪೂರ್ಣವಾಗಿ ಮಟ್ಟ ಹಾಕುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಅಮೆರಿಕದ ಮಿಲಿಟರಿ ಮೂಲಗಳು ಸ್ಪಷ್ಟಪಡಿಸಿವೆ.
ಈ ಕುರಿತು ‘ಎಕ್ಸ್’ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM), ಹೊರ್ಮುಜ್ ಜಲಸಂಧಿಯಲ್ಲಿ ಅಂತಾರಾಷ್ಟ್ರೀಯ ನೌಕಾಯಾನದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವ ಇರಾನ್ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಲು ನಮ್ಮ ಪಡೆಗಳು ಹೆಚ್ಚುವರಿ ವಾಯುದಾಳಿಗಳನ್ನು ಆರಂಭಿಸಿವೆ. ಜಾಗತಿಕ ಜಲಮಾರ್ಗದಲ್ಲಿ ಮುಕ್ತವಾಗಿ ಚಲಿಸುವ ವಾಣಿಜ್ಯ ಹಡಗುಗಳು ಹಾಗೂ ಮುಗ್ಧ ನಾಗರಿಕ ಸಿಬ್ಬಂದಿಗಳ ಮೇಲೆ ಇರಾನ್ ನಡೆಸಿರುವ ಇತ್ತೀಚಿನ ಅಪ್ರಚೋದಿತ ಆಕ್ರಮಣಕ್ಕೆ ಅಮೆರಿಕ ಅವರನ್ನು ಖಂಡಿತವಾಗಿಯೂ ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಸೆಂಟ್ರಲ್​ ಕಮಾಂಡ್​ ಎಚ್ಚರಿಸಿದೆ. ಅಲ್ಲದೆ, ಬುಧವಾರ ನಡೆದಿರುವ ಈ ದಾಳಿಗಳು ಮಂಗಳವಾರ ನಡೆದ ದಾಳಿಗಳಿಗಿಂತಲೂ ಅತ್ಯಂತ ತೀವ್ರ ಹಾಗೂ ವಿನಾಶಕಾರಿಯಾಗಿವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಟ್ರಂಪ್ ಎಚ್ಚರಿಕೆ!

ಅಮೆರಿಕದ ಈ ವಿನಾಶಕಾರಿ ವಾಯುದಾಳಿಗಳು ಆರಂಭವಾಗುವ ಕೆಲವೇ ಗಂಟೆಗಳ ಮುನ್ನ, ವಾಷಿಂಗ್ಟನ್ ಬುಧವಾರ ರಾತ್ರಿ ಇರಾನ್ ಮೇಲೆ ಮತ್ತಷ್ಟು ಭೀಕರ ದಾಳಿಗಳನ್ನು ನಡೆಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದರು. ಟರ್ಕಿಯಲ್ಲಿ ನಡೆಯುತ್ತಿರುವ ನಾಟೋ (NATO) ಶೃಂಗಸಭೆಯಲ್ಲಿ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಟ್ರಂಪ್, ನಾನು ಇರಾನ್‌ಗೆ ಒಂದು ಸಣ್ಣ ಮುನ್ಸೂಚನೆ ನೀಡುತ್ತಿದ್ದೇನೆ, ಇವತ್ತು ರಾತ್ರಿ ನಾವು ಅವರ ಮೇಲೆ ಅತ್ಯಂತ ಕ್ರೂರವಾಗಿ ಮತ್ತು ತೀವ್ರವಾಗಿ ದಾಳಿ ನಡೆಸಲಿದ್ದೇವೆ ಎಂದಿದ್ದರು.
ಟರ್ಕಿಯ ಅಂಕಾರಾದಲ್ಲಿ ನಡೆದ ನಾಟೋ ಶೃಂಗಸಭೆಯ ನಂತರ ತಮ್ಮ 'ಟ್ರೂತ್ ಸೋಶಿಯಲ್' ಜಾಲತಾಣದಲ್ಲಿ ಇರಾನ್ ಮೇಲಿನ ದಾಳಿಯ ವಿಡಿಯೋಗಳನ್ನು ಹಂಚಿಕೊಂಡ ಡೊನಾಲ್ಡ್ ಟ್ರಂಪ್, ಇದು ನಮ್ಮ ಹಡಗುಗಳ ಮೇಲಿನ ದಾಳಿಗೆ ಇರಾನ್ ಅನುಭವಿಸುತ್ತಿರುವ ಶಿಕ್ಷೆ, ಇನ್ನೊಮ್ಮೆ ಹೀಗಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, ಜೂನ್ 17 ರಂದು ಮಾಡಿಕೊಂಡಿದ್ದ ತಾತ್ಕಾಲಿಕ ಒಪ್ಪಂದವು ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಘೋಷಿಸಿದ ಟ್ರಂಫಪ್​, ಇರಾನ್ ವಿಶ್ವಾಸಾರ್ಹ ದೇಶವಲ್ಲದ ಕಾರಣ ಅವರೊಂದಿಗೆ ಇನ್ನು ಮುಂದೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ. ಆದಾಗ್ಯೂ, ಈ ಸಂಘರ್ಷವು ಸುದೀರ್ಘ ಯುದ್ಧವಾಗಿ ಬದಲಾಗುವುದಿಲ್ಲ, ಎಲ್ಲವೂ ಕೆಲವೇ ದಿನಗಳಲ್ಲಿ ಮುಕ್ತಾಯವಾಗಿ ಜಾಗತಿಕ ತೈಲ ಸಾಗಣೆಗೆ ಸುರಕ್ಷಿತ ವಾತಾವರಣ ನಿರ್ಮಾಣವಾಗಲಿದೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.
ಅಮೆರಿಕದ ಈ ಭೀಕರ ವಾಯುದಾಳಿಗಳಿಂದಾಗಿ ಹೊರ್ಮುಜ್ ಜಲಸಂಧಿಯಿಂದ ಹಿಡಿದು ಒಮಾನ್ ಕೊಲ್ಲಿಯವರೆಗಿನ ಇರಾನ್‌ನ ದಕ್ಷಿಣ ಕರಾವಳಿಯ ಪ್ರಮುಖ ನಗರಗಳು ಸರಣಿ ಸ್ಫೋಟಗಳಿಂದ ನಡುಗಿದ್ದು, ಇರಾನ್‌ನ ಅತಿದೊಡ್ಡ ಬಂದರು ಹಾಗೂ ನೌಕಾಪಡೆ ಮತ್ತು ರೆವಲ್ಯೂಷನರಿ ಗಾರ್ಡ್ಸ್‌ನ ಮುಖ್ಯ ನೆಲೆಗಳನ್ನು ಹೊಂದಿರುವ 'ಬಂದರ್ ಅಬ್ಬಾಸ್' ನಗರದಲ್ಲೇ ಸುಮಾರು ಎಂಟು ಪ್ರಬಲ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇನ್ನು ಚಬಹಾರ್ ಮತ್ತು ಕೊನಾರಕ್ ನಗರಗಳಲ್ಲಿ ಸರಣಿ ಸ್ಫೋಟಗಳು ಕೇಳಿಬಂದಿದ್ದು, ಪ್ರೆಸ್ ಟಿವಿ ವರದಿ ಪ್ರಕಾರ ಚಬಹಾರ್‌ನ ಶಾಹಿದ್ ಬೆಹೆಶ್ತಿ ಬಂದರು, ಕಲಂತಾರಿ ಬಂದರು ಹಾಗೂ ಕರಾವಳಿ ಸಂಚಾರ ನಿಯಂತ್ರಣ ಗೋಪುರಗಳು (ಟ್ರಾಫಿಕ್ ಕಂಟ್ರೋಲ್ ಟವರ್) ತೀವ್ರವಾಗಿ ಜಖಂಗೊಂಡಿದ್ದಲ್ಲದೆ ಇಡೀ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅತ್ಯಂತ ಆತಂಕಕಾರಿ ವಿಷಯವೆಂದರೆ, ಚಬಹಾರ್ ನಗರದ ಮೇಲಿನ ದಾಳಿಯ ವೇಳೆ ಅಮೆರಿಕದ ಕ್ಷಿಪಣಿಗಳ ಅವಶೇಷಗಳು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಅಪ್ಪಳಿಸಿದ್ದು, ಇದರೊಂದಿಗೆ ಇರಾನ್‌ಶಹರ್, ಸಿರಿಕ್, ಅಬು ಮೂಸಾ ದ್ವೀಪ, ಬೂಶೆಹರ್ ಮತ್ತು ಜಾಸ್ಕ್ ಸೇರಿದಂತೆ ಇರಾನ್‌ನ ದಕ್ಷಿಣ ಕರಾವಳಿಯುದ್ದಕ್ಕೂ ಅಮೆರಿಕದ ಪ್ರಬಲ ದಾಳಿಗೆ ಇರಾನಿ ಸೇನಾ ನೆಲೆಗಳು ಧ್ವಂಸಗೊಂಡಿವೆ.
ಅಮೆರಿಕದ ಈ ವಾಯುದಾಳಿಗಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಇರಾನ್ ಸಜ್ಜಾಗಿದ್ದು, ಈ ವಲಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಭೀಕರ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವುದಾಗಿ ಇರಾನ್‌ನ ಉನ್ನತ ಭದ್ರತಾ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ‘ನೂರ್‌ನ್ಯೂಸ್’ ಸೇನಾ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದಕ್ಕೂ ಮುನ್ನ ಮಾತನಾಡಿದ್ದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೇಯ್, ಜೂನ್ 17 ರ ಒಪ್ಪಂದದ ಪ್ರಕಾರ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರದ ನಿಯಮಾವಳಿಗಳನ್ನು ನಿರ್ಧರಿಸುವ ಹಕ್ಕು ಇರಾನ್‌ಗೆ ಸೇರಿದ್ದಾಗಿದೆ, ಆದರೆ ವಾಷಿಂಗ್ಟನ್ ಇದಕ್ಕೆ ಸವಾಲು ಹಾಕುವ ಮೂಲಕ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು. ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ನಡೆಸಿದ ವಾಯುದಾಳಿಯೊಂದಿಗೆ ಆರಂಭವಾದ ಈ ಯುದ್ಧದ ಮುಂಚಿನವರೆಗೂ ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗ ಈ ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತಿತ್ತು. ಮಂಗಳವಾರ ಇರಾನ್ ಇಲ್ಲಿ ಮೂರು ಸರಕು ಹಡಗುಗಳ ಮೇಲೆ ದಾಳಿ ನಡೆಸಿತ್ತು ಎನ್ನಲಾಗಿದ್ದು, ಈ ಮೂಲಕ ಸಂಘರ್ಷವನ್ನು ಉಲ್ಬಣಗೊಳಿಸಿ ಮಾತುಕತೆಯಲ್ಲಿ ಮೇಲುಗೈ ಸಾಧಿಸಲು ಇರಾನ್ ಯತ್ನಿಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ತನ್ನ ಮೂಲಸೌಕರ್ಯಗಳ ಮೇಲೆ ಅಮೆರಿಕ ಈ ಹಿಂದೆ ನಡೆಸಿದ್ದ ದಾಳಿಗಳಿಗೆ ಪ್ರತಿಯಾಗಿ ತಾನು ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಬುಧವಾರ ಒಪ್ಪಿಕೊಂಡಿದೆ. ಆದರೆ ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿಯೇ ತಾನು ಇರಾನ್ ಮೇಲೆ ದಾಳಿ ಮಾಡಿರುವುದಾಗಿ ವಾಷಿಂಗ್ಟನ್ ಪ್ರತಿಪಾದಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಈ ಹೊಸ ಸರಣಿ ವಾಯುದಾಳಿಗಳು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ತೀವ್ರ ಪರಿಣಾಮ ಬೀರಿದ್ದು, ಬುಧವಾರದ ಜಾಗತಿಕ ಮಾರುಕಟ್ಟೆ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 1 ಡಾಲರ್‌ಗಿಂತಲೂ ಹೆಚ್ಚು ಏರಿಕೆಯಾಗಿ 79.28 ಡಾಲರ್‌ಗೆ ತಲುಪಿದೆ. ಆದಾಗ್ಯೂ, ಕಳೆದ ಏಪ್ರಿಲ್ ಅಂತ್ಯದಲ್ಲಿ ದಾಖಲಾಗಿದ್ದ ಗರಿಷ್ಠ ಬೆಲೆಯಾದ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ಗೆ ಹೋಲಿಸಿದರೆ ಪ್ರಸ್ತುತ ತೈಲ ಬೆಲೆ ಸಾಕಷ್ಟು ನಿಯಂತ್ರಣದಲ್ಲಿದೆ ಎನ್ನಬಹುದು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net