ಅಮೆರಿಕ-ಇರಾನ್ ಮಾತುಕತೆ: ಇಸ್ರೇಲ್ ಅತಂತ್ರ? ಏಕಾಂಗಿ ಹೋರಾಟಕ್ಕೆ ಸಜ್ಜಾದ ನೆತನ್ಯಾಹು! Israel-Iran War

ಅಮೆರಿಕ-ಇರಾನ್ ಮಾತುಕತೆ: ಇಸ್ರೇಲ್ ಅತಂತ್ರ? ಏಕಾಂಗಿ ಹೋರಾಟಕ್ಕೆ ಸಜ್ಜಾದ ನೆತನ್ಯಾಹು!
ಅಮೆರಿಕ-ಇರಾನ್ ಮಾತುಕತೆ: ಇಸ್ರೇಲ್ ಅತಂತ್ರ? ಏಕಾಂಗಿ ಹೋರಾಟಕ್ಕೆ ಸಜ್ಜಾದ ನೆತನ್ಯಾಹು!
Published on
ಜೆರುಸಲೆಮ್: ಇರಾನ್ ಮೇಲಿನ ದಾಳಿ ನಿಲ್ಲುವುದಿಲ್ಲ, ನಾವು ಈ ಮಾತುಕತೆಯ ಭಾಗವೂ ಅಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಇಸ್ರೇಲ್(Israel-Iran War) ರಾಯಭಾರಿ ಡ್ಯಾನಿ ಡ್ಯಾನನ್ ಅವರ ಈ ಒಂದು ಹೇಳಿಕೆ ಈಗ ಇಡೀ ಜಗತ್ತಿನ ಗಮನ ಸೆಳೆದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಡುವಿನ ಅಚಲ ಸ್ನೇಹಕ್ಕೆ ಈಗ ರಾಜತಾಂತ್ರಿಕ ಗ್ರಹಣ ಹಿಡಿದಂತಿದೆ.

ಟ್ರಂಪ್ ಅನಿರೀಕ್ಷಿತ ತಿರುವು

ಕೇವಲ 24 ಗಂಟೆಗಳ ಹಿಂದೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ಧೂಳೀಪಟ ಮಾಡುವುದಾಗಿ ಎಚ್ಚರಿಸಿದ್ದ ಟ್ರಂಪ್, ಸೋಮವಾರ ಹಠಾತ್ ಆಗಿ ಇರಾನ್ ಜೊತೆ ಒಪ್ಪಂದಕ್ಕೆ ಬರಲು ಪ್ರಮುಖ ಅಂಶಗಳು ಸಿದ್ಧವಾಗಿವೆ ಎಂದು ಘೋಷಿಸಿದ್ದು ಇಸ್ರೇಲ್ ಬೆಚ್ಚಿಬೀಳುವಂತೆ ಮಾಡಿದೆ. ಫೆಬ್ರವರಿ 28 ರಂದು ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ಸಾವಿಗೆ ಕಾರಣವಾದ ಜಂಟಿ ದಾಳಿಯ ನಂತರ, ಈ ಮಿತ್ರರಾಷ್ಟ್ರಗಳು ಒಂದೇ ದಾರಿಯಲ್ಲಿ ಸಾಗುತ್ತಿದ್ದವು. ಆದರೆ ಈಗ ಟ್ರಂಪ್ ಶಾಂತಿ ಮಂತ್ರ ಜಪಿಸುತ್ತಿರುವುದು ಇಸ್ರೇಲ್ ಅನ್ನು ಕೆರಳಿಸಿದೆ.

ಇಸ್ರೇಲ್ ಆತಂಕಕ್ಕೆ ಕಾರಣವೇನು..?

ಇಸ್ರೇಲ್‌ನ ಗುರಿ ಸ್ಪಷ್ಟವಾಗಿದೆ: ಇರಾನ್‌ನಲ್ಲಿ ಆಡಳಿತ ಬದಲಾವಣೆ ಮತ್ತು ಅದರ ಪರಮಾಣು ಯೋಜನೆಯನ್ನು ಸಂಪೂರ್ಣವಾಗಿ ನಾಶಪಡಿಸುವುದು. ಆದರೆ ಟ್ರಂಪ್ ಅವರಿಗೆ ಬೇಕಿರುವುದು ಬೇರೆಯೇ ಆಗಿದೆ.
ತೈಲ ಬೆಲೆ ನಿಯಂತ್ರಣ: ಅಮೆರಿಕಾದ ಮಧ್ಯಂತರ ಚುನಾವಣೆಗಳ ಮೇಲೆ ತೈಲ ಬೆಲೆ ಪ್ರಭಾವ ಬೀರದಂತೆ ತಡೆಯುವುದು.
ನೊಬೆಲ್ ಶಾಂತಿ ಪ್ರಶಸ್ತಿ: ದೊಡ್ಡ ಮಟ್ಟದ ಶಾಂತಿ ಒಪ್ಪಂದದ ಮೂಲಕ ತಮ್ಮ ಹೆಸರನ್ನು ಇತಿಹಾಸದಲ್ಲಿ ದಾಖಲಿಸುವುದು.
ಶೀಘ್ರ ಯುದ್ಧ ಅಂತ್ಯ: ಅಮೆರಿಕಾದ ಆರ್ಥಿಕ ಹೊರೆ ತಗ್ಗಿಸುವುದು.
ಇಸ್ರೇಲಿ ವಿಶ್ಲೇಷಕ ಒರಿ ಗೋಲ್ಡ್‌ಬರ್ಗ್ ಅವರ ಪ್ರಕಾರ, ಇದು ನೆತನ್ಯಾಹು ಅವರಿಗೆ ಆದ ಸೋಲು. ಟ್ರಂಪ್ ಇಸ್ರೇಲ್ ಅನ್ನು ಕೈಬಿಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಸ್ರೇಲ್ ಸಿದ್ಧತೆ: ನಾವು ಒಬ್ಬರೇ ಹೋರಾಡಬಲ್ಲೆವು

ಇಸ್ರೇಲ್ ಬಳಿ ಅತ್ಯಾಧುನಿಕ ಯುದ್ಧ ವಿಮಾನಗಳು ಮತ್ತು ಗುಪ್ತಚರ ವ್ಯವಸ್ಥೆ ಇದೆ. ಇರಾನ್ ಮೇಲೆ ಸ್ವತಂತ್ರವಾಗಿ ಬಾಂಬ್ ದಾಳಿ ನಡೆಸುವ ಶಕ್ತಿ ಅದಕ್ಕಿದೆ. ಆದರೆ, ದೀರ್ಘಕಾಲದ ಯುದ್ಧಕ್ಕೆ ಬೇಕಾದ B-2 ಬಾಂಬರ್ಸ್ ಅಥವಾ ಆರ್ಥಿಕ ಬೆಂಬಲಕ್ಕಾಗಿ ಅದು ಅಮೆರಿಕಾವನ್ನೇ ಅವಲಂಬಿಸಿದೆ. ಅಮೆರಿಕಾ ಮಾತುಕತೆಗೆ ಮುಂದಾದರೂ, ಇಸ್ರೇಲ್ ಮಾತ್ರ ತನ್ನ ದಾಳಿಯನ್ನು ಮುಂದುವರಿಸುವುದಾಗಿ ಹಠ ಹಿಡಿದಿದೆ.
ನಾವು ಇರಾನ್ ಮತ್ತು ಲೆಬನಾನ್ ಎರಡರ ಮೇಲೂ ದಾಳಿಯನ್ನು ಮುಂದುವರಿಸುತ್ತಿದ್ದೇವೆ. ಪರಮಾಣು ಮತ್ತು ಕ್ಷಿಪಣಿ ಯೋಜನೆಯನ್ನು ಧೂಳೀಪಟ ಮಾಡುತ್ತಿದ್ದೇವೆ ಎಂದು ಬೆಂಜಮಿನ್ ನೆತನ್ಯಾಹು ಗುಡುಗಿದ್ದಾರೆ.

ಸಂಧಾನಕಾರರ ನಡುವೆ ಇಸ್ರೇಲ್‌ಗೆ ಇಲ್ಲ ಸ್ಥಾನ

ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ದೇಶಗಳು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಸಂಧಾನಕಾರರಾಗಿ ಕೆಲಸ ಮಾಡುತ್ತಿವೆ. ಆದರೆ, ಈ ಯುದ್ಧದ ಪ್ರಮುಖ ಪಾಲುದಾರನಾಗಿದ್ದ ಇಸ್ರೇಲ್ ಅನ್ನು ಈ ಮಾತುಕತೆಗಳಿಂದ ಹೊರಗಿಟ್ಟಿರುವುದು ಆಶ್ಚರ್ಯಕರವಾಗಿದೆ. ಅಲ್ಲದೆ, ಇಸ್ರೇಲ್‌ಗೆ ಇಂತಹದೊಂದು ಮಾತುಕತೆ ನಡೆಯುತ್ತಿರುವ ಸುಳಿವೇ ಇರಲಿಲ್ಲ ಎನ್ನಲಾಗಿದೆ.

ಭವಿಷ್ಯದ ಹಾದಿ

ಅಮೆರಿಕಾ ರಾಜತಾಂತ್ರಿಕ ಹಾದಿ ಹಿಡಿದಿದ್ದರೆ, ಇಸ್ರೇಲ್ ಸೇನಾ ಹಾದಿಯಲ್ಲೇ ಮುಂದುವರಿಯುತ್ತಿದೆ. ಟ್ರಂಪ್ ಅವರು ಇರಾನ್ ಜೊತೆ ಮಾಡಿಕೊಳ್ಳಬಹುದಾದ ಯಾವುದೇ ಸಡಿಲ ಒಪ್ಪಂದವು ಇಸ್ರೇಲ್‌ನ ಭದ್ರತೆಗೆ ಅಪಾಯಕಾರಿ ಎಂಬುದು ನೆತನ್ಯಾಹು ಅವರ ವಾದವಾಗಿದ್ದು. ಫೆಬ್ರವರಿ 28 ರಂದು ಅಮೆರಿಕಾದ ಜೊತೆ ಯುದ್ಧಕ್ಕೆ ಹೋದ ಇಸ್ರೇಲ್, ಈಗ ಅದನ್ನು ಒಬ್ಬನೇ ಮುಗಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆಯೇ ಎಂಬ ಪ್ರಶ್ನೆ ಎದ್ದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net