ಅಮೆರಿಕ-ಇರಾನ್ ಶಾಂತಿ ಮಾತುಕತೆ ವಿಫಲ; ಇಸ್ಲಾಮಾಬಾದ್​ನಿಂದ ತೆರಳಿದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ | JD Vance

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್
Published on
ಇಸ್ಲಾಮಾಬಾದ್​: ಪಾಕಿಸ್ತಾನದ​ಲ್ಲಿ ನಡೆದ ಅಮೆರಿಕ-ಇರಾನ್ ನಡುವಿನ ಶಾಂತಿ ಮಾತುಕತೆ ವಿಫಲವಾಗಿದ್ದು, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್(JD Vance) ಮತ್ತು ಅವರ ನಿಯೋಗ​ ಇಸ್ಲಾಮಾಬಾದ್​ನಿಂದ ವಾಪಸ್ ಅಮೆರಿಕಗೆ ತೆರಳಿದೆ. ಈಗ ಮುಂದಿನ ಎಲ್ಲಾ ನಿರ್ಧಾರವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರತ್ತ ನೆಟ್ಟಿದೆ. 
ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಜೆಡಿ ವ್ಯಾನ್ಸ್​, ನಾವು ಯಾವುದೇ ಒಪ್ಪಂದಕ್ಕೆ ಬರದೇ ಇರುವುದು ಕೆಟ್ಟ ಸುದ್ದಿ. ಅದು ಅಮೆರಿಕಾಗೆ ಅನ್ನುವುದಕ್ಕಿಂತ ಇರಾನ್‌ಗೆ ಕೆಟ್ಟ ಸುದ್ದಿ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ನಾವು ಒಪ್ಪಂದಕ್ಕೆ ಬರದ ಕಾರಣ ಅಮೆರಿಕಕ್ಕೆ ಹಿಂತಿರುಗುತ್ತೇವೆ. ಅವರು ನಮ್ಮ ಷರತ್ತುಗಳನ್ನು ಒಪ್ಪದಿರಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಒಂದು ದಿನದ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಅವರು ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳದಿರಲು ನಿರ್ಧರಿಸಿದ್ದಾರೆ. ನಮ್ಮ ಅಧ್ಯಕ್ಷರು ನಾವು ಉತ್ತಮ ನಂಬಿಕೆಯಿಂದ ಬಂದು ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದ್ದರು. ಅದರೆ ದುರದೃಷ್ಟವಶಾತ್, ಯಾವುದೇ ಪ್ರಗತಿಯಾಗಲಿಲ್ಲ ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲ್ಲ ಮತ್ತು ಅಭಿವೃದ್ಧಿಪಡಿಸಲ್ಲ ಎಂಬ ಬದ್ಧತೆ ಅಮೆರಿಕಕ್ಕೆ ಬೇಕು. ಅವರ ಪರಮಾಣು ಕಾರ್ಯಕ್ರಮ ಸೌಲಭ್ಯಗಳ ಮೇಲೆ ದಾಳಿ ಮಾಡಿದ್ದರಿಂದ ನಾಶವಾಗಿವೆ. ಆದ್ರೆ ಮುಂದೆ ಅಭಿವೃದ್ಧಿಪಡಿಸಲ್ಲ ಎಂಬ ಭರವಸೆಯನ್ನು ಇರಾನ್ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಅಮೆರಿಕ ಇಟ್ಟ ಪ್ರಮುಖ ಷರತ್ತುಗಳೇನು? 

  1. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂಬ ಬಗ್ಗೆ ಲಿಖಿತ ಮತ್ತು ದೃಢವಾದ ಭರವಸೆ ನೀಡಬೇಕು. 
  2. ಪರಮಾಣು ಬಾಂಬ್ ತಯಾರಿಕೆಗೆ ಬಳಸಬಹುದಾದ ಸಾಧನಗಳ ಸಂಶೋಧನೆಯನ್ನು ನಿಲ್ಲಿಸಬೇಕು. 
  3. ಇರಾನಿನ ಪರಮಾಣು ಕೇಂದ್ರಗಳನ್ನು ಅಂತರಾಷ್ಟ್ರೀಯ ತಂಡಗಳು ಮುಕ್ತವಾಗಿ ತಪಾಸಣೆ ನಡೆಸಲು ಅನುಮತಿ ನೀಡಬೇಕು.

ಇರಾನ್ ಸೋಲಿಸಿದ್ದೇವೆ ಎಂದ ಟ್ರಂಪ್​​

ಇರಾನ್ ಅನ್ನು ನಾವು ಸಂಪೂರ್ಣವಾಗಿ ಸೋಲಿಸಿದ್ದೇವೆ. ಬಹುಶಃ ಅವರು ಒಪ್ಪಂದ ಮಾಡಿಕೊಳ್ಳಬಹುದು ಅಥವಾ ಮಾಡಿಕೊಳ್ಳದಿರಬಹುದು. ಅಮೆರಿಕದ ದೃಷ್ಟಿಕೋನದಿಂದ, ನನಗೆ ಅದು ಮುಖ್ಯವಲ್ಲ, ಟೆಹ್ರಾನ್ ಅನ್ನು ಮಿಲಿಟರಿಯಾಗಿ ಸೋಲಿಸಿದ್ದೇವೆ. ಅವರ ಮಿಲಿಟರಿಗೆ ವ್ಯಾಪಕ ಹಾನಿಯಾಗಿದೆ. ಅವರ ನೌಕಾಪಡೆಯನ್ನು, ವಾಯುಪಡೆಯನ್ನು ಸೋಲಿಸಿದ್ದೇವೆ. ಯುದ್ಧ ವಿಮಾನ ತಡೆಯುವ ಅವರ ರಾಡರ್ ಸಿಸ್ಟಮ್​ ಅನ್ನು ಹೊಡೆದಾಕಿದ್ದೇವೆ. ಅವರ ನಾಯಕರೆಲ್ಲರೂ ಸತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net