ಇನ್ಮುಂದೆ ಯಾವ ಗಡಿಯೂ ಸುರಕ್ಷಿತವಲ್ಲ! ಸತತ 7ನೇ ದಿನವೂ ಭೀಕರ ಕ್ಷಿಪಣಿ ಸಮರ ಬೆನ್ನಲ್ಲೇ ಅಮೆರಿಕಕ್ಕೆ ಇರಾನ್​​ ಎಚ್ಚರಿಕೆ​

ಅಮೆರಿಕ​-ಇರಾನ್​ ಯುದ್ಧ, ಚಿತ್ರಕೃಪೆ: AFP
ಅಮೆರಿಕ​-ಇರಾನ್​ ಯುದ್ಧ, ಚಿತ್ರಕೃಪೆ: AFP
Published on

ಪ್ರಮುಖ ಮುಖ್ಯಾಂಶಗಳು

  • ಸತತ 7ನೇ ದಿನವೂ ಇರಾನ್​ ಮೇಲೆ ಅಮೆರಿಕ ಭೀಕರ ಕ್ಷಿಪಣಿ ಸಮರ
  • ಇನ್ಮುಂದೆ ಯಾವ ಗಡಿಯೂ ಸುರಕ್ಷಿತವಲ್ಲ ಎಂದು ಇರಾನ್​ ಎಚ್ಚರಿಕೆ
ಟೆಹ್ರಾನ್: ವಿಶ್ವಸಂಸ್ಥೆಯ ತೀವ್ರ ಕಳವಳದ ನಡುವೆಯೂ ಅಮೆರಿಕ ಮತ್ತು ಇರಾನ್ ರಾಷ್ಟ್ರಗಳು ಶಾಂತಿ ಒಪ್ಪಂದವನ್ನು ಮೂಲೆಗೆಸೆದು ಮತ್ತೆ ಭೀಕರ ಯುದ್ಧದಲ್ಲಿ ತೊಡಗಿರುವುದು ಇಡೀ ಜಗತ್ತಿಗೆ ದೊಡ್ಡ ಆತಂಕ ಕಾಡಲಾರಂಭಿಸಿದೆ.
ಶುಕ್ರವಾರ ರಾತ್ರಿಯೂ ಉಭಯ ದೇಶಗಳು ಪರಸ್ಪರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ್ದು, ಅಮೆರಿಕ ಯುದ್ಧದ ಕಿಚ್ಚನ್ನು ಹೊತ್ತಿಸಿದೆ. ಇರಾನಿನ ಪ್ರಮುಖ ನೆಲೆಗಳ ಮೇಲೆ ಅಮೆರಿಕ ಪಡೆಗಳು ಸತತ 7ನೇ ರಾತ್ರಿಯೂ ವಾಯುದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಮಿಲಿಟರಿ ಸಲಹೆಗಾರರು, ಅಮೆರಿಕ ಹೀಗೆ ದಾಳಿಯನ್ನು ಮುಂದುವರಿಸಿದರೆ ಇನ್ಮುಂದೆ ಯಾವುದೇ ರಾಜಕೀಯ ಗಡಿಗಳು ಸುರಕ್ಷಿತವಾಗಿರುವುದಿಲ್ಲ ಎಂದು ಟ್ರಂಪ್​ ರಾಷ್ಟ್ರಕ್ಕೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಮೇಲಿನ ದಾಳಿಗಿಲ್ಲ ಫುಲ್​ಸ್ಟಾಪ್​

ಅಮೆರಿಕದ ಸೆಂಟ್ರಲ್ ಕಮಾಂಡ್ ತನ್ನ ಎಕ್ಸ್ (X) ಖಾತೆಯಲ್ಲಿ ಈ ದಾಳಿಯನ್ನು ಖಚಿತಪಡಿಸಿದೆ. ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ಉದ್ದೇಶದಿಂದ ಸತತ ಏಳನೇ ರಾತ್ರಿಯೂ ಇರಾನ್‌ನ ಪ್ರಮುಖ ಸ್ಥಳಗಳ ಮೇಲೆ ನಮ್ಮ ಮಿಲಿಟರಿ ಪಡೆಗಳು ವೈಮಾನಿಕ ದಾಳಿಯನ್ನು ನಡೆಸಿರುವುದಾಗಿ ತಿಳಿಸಿದೆ.
ಅತ್ತ ಇರಾನ್​, ಈ ಬಾರಿಯ ದಾಳಿಯಲ್ಲಿ ಅಮೆರಿಕ ಪಡೆಗಳು ಇರಾನ್‌ನ ನಾಗರಿಕ ಮೂಲಸೌಕರ್ಯಗಳಾದ ಏರ್​ಪೋರ್ಟ್​, ರೈಲ್ವೆ ನಿಲ್ದಾಣ ಹಾಗೂ ಎರಡು ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿಕೊಂಡು ಛಿದ್ರಗೊಳಿಸಿವೆ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಆಸ್ತಿಪಾಸ್ತಿಗಳ ಮೇಲೆ ನಮ್ಮ ದಾಳಿಯೂ ಅತ್ಯಂತ ಘೋರವಾಗಿರಲಿದೆ ಎಂದು ಎಚ್ಚರಿಸಿದೆ.

ಯಾವ ಗಡಿಯೂ ಸುರಕ್ಷಿತವಲ್ಲ

ಇರಾನ್‌ನ ಸುಪ್ರೀಂ ಲೀಡರ್ ಅವರ ಹಿರಿಯ ಮಿಲಿಟರಿ ಸಲಹೆಗಾರ ಮೇಜರ್ ಜನರಲ್ ಮೊಹ್ಸೆನ್ ರೆಜಾಯಿ ಅಮೆರಿಕಕ್ಕೆ ಓಪನ್​ ಚಾಲೆಂಜ್​ ಹಾಕಿದ್ದಾರೆ. "ಯುಸ್​ ದಾಳಿಗಳು ಇನ್ನು ಎರಡು ಅಥವಾ ಮೂರು ದಿನ ಮುಂದುವರಿದರೆ, ಇರಾನ್ ಪೂರ್ಣ ಪ್ರಮಾಣದ ಆಕ್ರಮಣಕಾರಿ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಿದೆ. ಇನ್ಮುಂದೆ ನಾವು ಕೇವಲ ಪ್ರತೀಕಾರದ ದಾಳಿಗಳಿಗೆ ಮಾತ್ರವಲ್ಲ, ಯಾವುದೇ ರಾಜಕೀಯ ಗಡಿಯೂ ಸುರಕ್ಷಿತವಾಗಿ ಉಳಿಯುವುದಿಲ್ಲ" ಎಂದು ಗುಡುಗಿದ್ದಾರೆ.
ಮತ್ತೊಂದೆಡೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಮಜೀದ್ ಮೂಸಾವಿ ಮಾತನಾಡಿ, "ದಕ್ಷಿಣ ಕರಾವಳಿ ಪ್ರದೇಶಗಳು ಮತ್ತು ಹೊರ್ಮುಜ್ ಜಲಸಂಧಿಯ ಸುತ್ತಲಿನ ನಮ್ಮ ಸೌಲಭ್ಯಗಳ ಮೇಲಿನ ದಾಳಿಯನ್ನು ಅಮೆರಿಕ ಅಂತ್ಯವಾಡುವವರೆಗೂ ಶತ್ರುಗಳ ಮೇಲಿನ ನಮ್ಮ ಟಾರ್ಗೆಟ್​ ದಾಳಿಗಳು ಎಂದಿನಂತೆ ಎಗ್ಗಿಲ್ಲದೆ ಸಾಗಲಿವೆ" ಎಂದು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net