ಇರಾನ್ ಕ್ಷಿಪಣಿಗಳ ಅಬ್ಬರಕ್ಕೆ ನಲುಗಿದ ಅಮೆರಿಕದ ರಕ್ಷಣಾ ಕವಚ: ಜಗತ್ತಿನ ಕೇವಲ 8 ಕಡೆ ಇದ್ದ ಈ ಬ್ರಹ್ಮಾಸ್ತ್ರ ಈಗ ಉಡೀಸ್! THAAD Radar Destroyed

ಇರಾನ್ ಕ್ಷಿಪಣಿಗಳ ಅಬ್ಬರಕ್ಕೆ ನಲುಗಿದ ಅಮೆರಿಕದ ರಕ್ಷಣಾ ಕವಚ: ಜಗತ್ತಿನ ಕೇವಲ 8 ಕಡೆ ಇದ್ದ ಈ ಬ್ರಹ್ಮಾಸ್ತ್ರ ಈಗ ಉಡೀಸ್!
ಇರಾನ್ ಕ್ಷಿಪಣಿಗಳ ಅಬ್ಬರಕ್ಕೆ ನಲುಗಿದ ಅಮೆರಿಕದ ರಕ್ಷಣಾ ಕವಚ: ಜಗತ್ತಿನ ಕೇವಲ 8 ಕಡೆ ಇದ್ದ ಈ ಬ್ರಹ್ಮಾಸ್ತ್ರ ಈಗ ಉಡೀಸ್!
Published on
ಅಮ್ಮಾನ್: ಪಶ್ಚಿಮ ಏಷ್ಯಾದ ಯುದ್ಧರಂಗದಲ್ಲಿ ಅಮೆರಿಕಕ್ಕೆ ಅನಿರೀಕ್ಷಿತ ಮತ್ತು ಅತ್ಯಂತ ಭೀಕರ ಪೆಟ್ಟು ಬಿದ್ದಿದೆ. ಇಡೀ ವಿಶ್ವವೇ ಹೆದರುವ ಅಮೆರಿಕದ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಥಾಡ್ (THAAD Radar Destroyed) ಅನ್ನು ಇರಾನ್ ಧೂಳೀಪಟ ಮಾಡಿದೆ. ಜೋರ್ಡಾನ್‌ನ ಮುವಾಫಕ್ ಸಾಲ್ಟಿ ವಾಯುನೆಲೆಯ ಮೇಲೆ ಇರಾನ್ ನಡೆಸಿದ ಭೀಕರ ದಾಳಿಯಲ್ಲಿ ಸುಮಾರು $300 ಮಿಲಿಯನ್ (ಅಂದಾಜು 2,500 ಕೋಟಿ ರೂಪಾಯಿ) ಮೌಲ್ಯದ ರೇಡಾರ್ ವ್ಯವಸ್ಥೆ ಸಂಪೂರ್ಣ ನಾಶವಾಗಿದೆ ಎಂದು ಉಪಗ್ರಹ ಚಿತ್ರಗಳು ಸಾಬೀತುಪಡಿಸಿವೆ.
ಇದು ಕೇವಲ ಒಂದು ಉಪಕರಣದ ನಷ್ಟವಲ್ಲ, ಬದಲಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹೊಂದಿದ್ದ ರಕ್ಷಣಾ ಕವಚಕ್ಕೇ ಬಿದ್ದ ದೊಡ್ಡ ರಂಧ್ರ ಎಂದು ವಿಶ್ಲೇಷಿಸಲಾಗುತ್ತಿದೆ.

ಏನಿದು ಘಟನೆ? ರೇಡಾರ್ ನಾಶವಾಗಿದ್ದು ಹೇಗೆ..?

CNN ವರದಿ ಮಾಡಿರುವ ಪ್ರಕಾರ, ಜೋರ್ಡಾನ್‌ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ನೆಲೆ ಮುವಾಫಕ್ ಸಾಲ್ಟಿ ಏರ್ ಬೇಸ್ ಮೇಲೆ ಇರಾನ್ ಫೆಬ್ರವರಿ 28 ಮತ್ತು ಮಾರ್ಚ್ 3 ರಂದು ಕ್ಷಿಪಣಿ ದಾಳಿ ನಡೆಸಿತ್ತು. ಆರಂಭದಲ್ಲಿ ಅಮೆರಿಕ ಈ ದಾಳಿಗಳನ್ನು ತಡೆಹಿಡಿಯಲಾಗಿದೆ ಎಂದು ಹೇಳಿಕೊಂಡಿತ್ತಾದರೂ, ಈಗ ಹೊರಬಂದಿರುವ ವಾಣಿಜ್ಯ ಉಪಗ್ರಹ ಚಿತ್ರಗಳು ಭಿನ್ನವಾದ ಕಥೆಯನ್ನು ಹೇಳುತ್ತಿವೆ.
RTX ಕಾರ್ಪೊರೇಶನ್ ತಯಾರಿಸಿದ AN/TPY-2 ರೇಡಾರ್ ಮತ್ತು ಅದರ ಪೂರಕ ಉಪಕರಣಗಳು ದಾಳಿಯಲ್ಲಿ ಭಸ್ಮವಾಗಿವೆ. ಇದು ಅಮೆರಿಕದ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಬ್ಯಾಟರಿಗಳ ಕಣ್ಣು ಮತ್ತು ಕಿವಿ ಇದ್ದಂತೆ. ಈ ರೇಡಾರ್ ಇಲ್ಲದೆ ಕ್ಷಿಪಣಿಗಳನ್ನು ಪತ್ತೆಹಚ್ಚುವುದು ಮತ್ತು ಹೊಡೆದು ಉರುಳಿಸುವುದು ಅಸಾಧ್ಯವಾಗಿದೆ.

ಅಮೆರಿಕಕ್ಕೆ ಇದು ಏಕೆ ದೊಡ್ಡ ಪೆಟ್ಟು..?

ಅಮೆರಿಕದ ಮಿಲಿಟರಿ ಶಕ್ತಿಯ ಹೆಮ್ಮೆಯ ಸಂಕೇತವಾದ THAAD ವ್ಯವಸ್ಥೆಯ ಬಗ್ಗೆ ಕೆಲವು ಆಘಾತಕಾರಿ ಸತ್ಯಗಳು ಇಲ್ಲಿವೆ.
ಅತ್ಯಂತ ವಿರಳ ಸಂಪನ್ಮೂಲ: ಇಡೀ ವಿಶ್ವದಲ್ಲಿ ಅಮೆರಿಕದ ಬಳಿ ಇರುವುದು ಕೇವಲ 8 THAAD ಬ್ಯಾಟರಿಗಳು ಮಾತ್ರ. ಒಂದು ಬ್ಯಾಟರಿ ತಯಾರಿಸಲು ಸುಮಾರು $1 ಬಿಲಿಯನ್ ವೆಚ್ಚವಾಗುತ್ತದೆ. ಅದರಲ್ಲಿ ರೇಡಾರ್ ಬೆಲೆಯೇ $300 ಮಿಲಿಯನ್ ಆಗಿದೆ.
ಕ್ಷಿಪಣಿ ದಾಸ್ತಾನು ಕೊರತೆ: ರೇಡಾರ್ ನಾಶವಾಗಿರುವುದರಿಂದ ಈಗ ರಕ್ಷಣೆಯ ಜವಾಬ್ದಾರಿ ಪೇಟ್ರಿಯಾಟ್ ವ್ಯವಸ್ಥೆಯ ಮೇಲೆ ಬಿದ್ದಿದೆ. ಆದರೆ ಪೇಟ್ರಿಯಾಟ್ ಕ್ಷಿಪಣಿಗಳ ದಾಸ್ತಾನು ಈಗಾಗಲೇ ವಿಶ್ವದಾದ್ಯಂತ ತೀವ್ರವಾಗಿ ಕಡಿಮೆಯಾಗಿದೆ.
ತಾಂತ್ರಿಕ ಹಿನ್ನಡೆ: ಕತಾರ್‌ನಲ್ಲಿರುವ ಅಮೆರಿಕದ ಮತ್ತೊಂದು ಎಚ್ಚರಿಕೆ ರೇಡಾರ್ ಕೂಡ ಈಗಾಗಲೇ ಇರಾನ್ ದಾಳಿಯಿಂದ ಹಾನಿಗೊಳಗಾಗಿದೆ. ಇದು ಅಮೆರಿಕದ ಗುಪ್ತಚರ ಮತ್ತು ರಕ್ಷಣಾ ವ್ಯವಸ್ಥೆಯನ್ನು ಕುರುಡಾಗಿಸಿದೆ.

ಬಾಹ್ಯಾಕಾಶದ ಅಂಚಿನ ರಕ್ಷಣೆ ಈಗ ಅಸಾಧ್ಯ?

ಥಾಡ್ ವ್ಯವಸ್ಥೆಯ ವಿಶೇಷತೆಯೆಂದರೆ ಇದು ಶತ್ರುಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯ ವಾತಾವರಣದ ಅಂಚಿನಲ್ಲೇ ಪತ್ತೆಹಚ್ಚಿ ನಾಶಪಡಿಸುತ್ತದೆ. ಆದರೆ ಈ AN/TPY-2 ರೇಡಾರ್ ಇಲ್ಲದೆ ಹೋದರೆ, ಇರಾನ್‌ನಿಂದ ಬರುವ ಹೈಪರ್ಸಾನಿಕ್ ಕ್ಷಿಪಣಿಗಳನ್ನು ತಡೆಯುವುದು ಅಮೆರಿಕದ ಪಡೆಗಳಿಗೆ ಅಸಾಧ್ಯವಾಗಲಿದೆ.
ಇದು ಅಮೆರಿಕದ ಕಾರ್ಯತಂತ್ರದ ಮೇಲೆ ಬಿದ್ದ ಬಲವಾದ ಹೊಡೆತ. ನಮ್ಮ ಬಳಿ ಹೆಚ್ಚುವರಿ ರೇಡಾರ್‌ಗಳು ದಾಸ್ತಾನಿನಲ್ಲಿ ಇಲ್ಲ ಎಂದು ಕ್ಷಿಪಣಿ ರಕ್ಷಣಾ ತಜ್ಞ ಟಾಮ್ ಕರಾಕೊ ಕಳವಳ ವ್ಯಕ್ತಪಡಿಸಿದ್ದಾರೆ.

ವೈಟ್ ಹೌಸ್‌ನಲ್ಲಿ ತುರ್ತು ಸಭೆ

ಈ ಘಟನೆಯ ಬೆನ್ನಲ್ಲೇ ವಾಷಿಂಗ್ಟನ್‌ನಲ್ಲಿ ಸಂಚಲನ ಮೂಡಿದೆ. ಲಾಕ್ಹೀಡ್ ಮಾರ್ಟಿನ್ ಮತ್ತು ಆರ್‌ಟಿಎಕ್ಸ್‌ನಂತಹ ದೈತ್ಯ ರಕ್ಷಣಾ ಕಂಪನಿಗಳ ಮುಖ್ಯಸ್ಥರೊಂದಿಗೆ ವೈಟ್ ಹೌಸ್ ತುರ್ತು ಸಭೆ ನಡೆಸಿದೆ. ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ವೇಗಗೊಳಿಸಲು ಪೆಂಟಗನ್ ಸೂಚನೆ ನೀಡಿದೆ. ಇರಾನ್‌ನ ಈ ಯಶಸ್ವಿ ದಾಳಿಯು ಅಮೆರಿಕದ ಮಿಲಿಟರಿ ತಂತ್ರಜ್ಞಾನದ ಅಜೇಯತೆಯನ್ನು ಪ್ರಶ್ನಿಸುವಂತೆ ಮಾಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net