Iran ಮೇಲೆ ಮತ್ತೆ ಅಮೆರಿಕ ದಾಳಿ: ಪ್ರತಿಯಾಗಿ ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ; ಹೋರ್ಮುಜ್ ಜಲಸಂಧಿ ಬಂದ್ ಎಂದ ಇರಾನ್!

Iran
Iran
Published on
ತೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಅಮೆರಿಕ ಮತ್ತು ಇರಾನ್(Iran) ನಡುವಿನ ಸಂಘರ್ಷ ಹೊಸ ಹಂತ ತಲುಪಿದೆ. ಅಮೆರಿಕ ಸೇನೆ ಇರಾನ್‌ನ ಹಲವು ಪ್ರದೇಶಗಳ ಮೇಲೆ ಮತ್ತೊಮ್ಮೆ ದಾಳಿ ನಡೆಸಿದ ಬೆನ್ನಲ್ಲೇ, ಇರಾನ್ ತನ್ನ ಪ್ರತೀಕಾರ ಕಾರ್ಯಾಚರಣೆಯನ್ನು ಆರಂಭಿಸಿದೆ. ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) "ಸ್ವಯಂ ರಕ್ಷಣೆಯ ಕ್ರಮ" ಎಂದು ಹೇಳಿಕೊಂಡು ಇರಾನ್‌ನ ಹಲವು ಗುರಿಗಳ ಮೇಲೆ ದಾಳಿ ನಡೆಸಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಪಶ್ಚಿಮ ತೆಹ್ರಾನ್, ಫಾರ್ಸ್ ಪ್ರಾಂತ್ಯ, ಬಂದರ್ ಅಬ್ಬಾಸ್, ಕ್ವೆಶ್ಮ್ ದ್ವೀಪ, ಕಿಶ್ ದ್ವೀಪ, ಮಿನಾಬ್ ಹಾಗೂ ಇಸ್ಫಹಾನ್ ಭಾಗಗಳಲ್ಲಿ ಸ್ಫೋಟಗಳು ಸಂಭವಿಸಿವೆ.
ಇದಕ್ಕೆ ಪ್ರತಿಯಾಗಿ ಇರಾನ್‌ನ IRGC ತನ್ನ ವಾಯುಪಡೆ ಮತ್ತು ನೌಕಾಪಡೆಯ ಮೂಲಕ ಎರಡು ಹಂತಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಅಮೆರಿಕ ಪಡೆಗಳು ನೆಲೆಸಿರುವ 18 ಪ್ರಮುಖ ಸೇನಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇದಷ್ಟೇ ಅಲ್ಲದೆ, ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖವಾಗಿರುವ ಹೋರ್ಮುಜ್ ಜಲಸಂಧಿಯನ್ನು (Strait of Hormuz) ಎಲ್ಲಾ ಹಡಗುಗಳಿಗೆ ಮುಚ್ಚಲಾಗಿದೆ ಎಂದು IRGC ಘೋಷಿಸಿದೆ. ತೈಲ ಟ್ಯಾಂಕರ್‌ಗಳು ಮತ್ತು ವಾಣಿಜ್ಯ ಹಡಗುಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದೆ. ಈ ಘೋಷಣೆಯಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಾಗಿದೆ.
ಈ ನಡುವೆ ಅಮೆರಿಕ ಅಧ್ಯಕ್ಷ Donald Trump ಮಾಧ್ಯಮಗಳೊಂದಿಗೆ ಮಾತನಾಡಿ, ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಮಾಡದಿದ್ದರೆ ದಾಳಿಗಳು ಮುಂದುವರಿಯಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ 49 ಟೊಮಾಹಾಕ್ ಕ್ಷಿಪಣಿಗಳನ್ನು ಬಳಸಿ ಇರಾನ್‌ನ ಹಲವು ಗುರಿಗಳನ್ನು ಹೊಡೆದಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಅಮೆರಿಕದ ಯುದ್ಧ ವಿಮಾನಗಳು ಇರಾನ್ ಆಕಾಶದಲ್ಲಿ ಕಾರ್ಯಾಚರಣೆ ನಡೆಸಿ ರಾಡಾರ್ ಹಾಗೂ ವಾಯು ರಕ್ಷಣಾ ವ್ಯವಸ್ಥೆಗಳನ್ನು ಧ್ವಂಸಗೊಳಿಸುತ್ತಿವೆ ಎಂದೂ ತಿಳಿಸಿದ್ದಾರೆ.
ಟ್ರಂಪ್ ಮತ್ತೊಂದು ಮಹತ್ವದ ಹೇಳಿಕೆ ನೀಡಿದ್ದು, ಇರಾನ್‌ನ ಕೆಲವು ಹಿರಿಯ ಅಧಿಕಾರಿಗಳು ತಮ್ಮೊಂದಿಗೆ ಸಂಪರ್ಕ ಸಾಧಿಸಿ ದಾಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಆರೋಪವನ್ನು ಇರಾನ್ ತಳ್ಳಿ ಹಾಕಿದೆ. ಅಮೆರಿಕ ಮತ್ತು ಇರಾನ್ ಅಧಿಕಾರಿಗಳ ನಡುವೆ ಯಾವುದೇ ದೂರವಾಣಿ ಮಾತುಕತೆ ನಡೆದಿಲ್ಲ ಎಂದು ಇರಾನ್ ಮಾಧ್ಯಮಗಳು ಸ್ಪಷ್ಟಪಡಿಸಿವೆ.
ಇರಾನ್‌ನ ವಾಯುಪಡೆ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮಜಿದ್ ಮೌಸವಿ ಅಮೆರಿಕಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಹೋರ್ಮುಜ್ ಜಲಸಂಧಿಯ ಭದ್ರತೆಗೆ ಧಕ್ಕೆ ಉಂಟಾದರೆ, ಸಂಪೂರ್ಣ ಪ್ರದೇಶದಲ್ಲಿ ಅಮೆರಿಕಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಇರಾನ್ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ Bahrain ದೇಶದ ಹಲವು ಪ್ರದೇಶಗಳಲ್ಲಿ ಏರ್‌ರೇಡ್ ಸೈರನ್‌ಗಳು ಮೊಳಗಿವೆ. ಅಲ್ಲಿನ ಗೃಹ ಸಚಿವಾಲಯ ಜನರಿಗೆ ಶಾಂತವಾಗಿರಲು ಹಾಗೂ ಸಮೀಪದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ.
ಅಮೆರಿಕ-ಇರಾನ್ ಸಂಘರ್ಷ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತಷ್ಟು ಹೆಚ್ಚಾಗಿದೆ. ಈ ಬೆಳವಣಿಗೆಗಳು ಜಾಗತಿಕ ತೈಲ ಬೆಲೆ, ವ್ಯಾಪಾರ ಮತ್ತು ಭದ್ರತೆ ಮೇಲೂ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net