ತಿಳಿವಳಿಕೆ ಒಪ್ಪಂದ ಪತ್ರಕ್ಕಿಂತ ಮುಖ್ಯ ವಾಸ್ತವದ ತಿಳುವಳಿಕೆ

US IRAN
US IRAN
Published on

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಒಂದೂಕಾಲು ತಿಂಗಳ ನೇರ ಸಮರ, ಎರಡೂವರೆ ತಿಂಗಳ ಕದನವಿರಾಮವೆಂಬ ಮುಸುಕಿನ ಗುದ್ದಾಟದ ನಂತರ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಜತೆಗಿನ ಮನಸ್ತಾಪವನ್ನು ಕೊನೆಗಾಣಿಸುವ 14 ಅಂಶಗಳ ಮೆಮೊರ್ಯಾಂಡಮ್‌ ಆಫ್‌ ಅಂಡರ್‌ಸ್ಟಾಂಡಿಂಗ್‌ ಅಂದರೆ ತಿಳಿವಳಿಕೆ ಒಪ್ಪಂದ ಪತ್ರಕ್ಕೆ ಜೂ. 17ರಂದು ಐತಿಹಾಸಿಕ ವರ್ಸೇಲ್ಸ್‌ ಅರಮನೆಯಲ್ಲಿ ಸಹಿ ಹಾಕಿದರು. ಆ ಪ್ರಕಾರ ಇರಾನಿ ಬಂದರುಗಳ ಮೇಲಿನ ದಿಗ್ಬಂಧನ ತೆಗೆಯುವುದರೊಂದಿಗೆ ಆ ರಾಷ್ಟ್ರಕ್ಕೆ ಅತ್ಯಗತ್ಯವಾದ ಬಿಲಿಯನ್‌ಗಟ್ಟಲೆ ವಿದೇಶಿ ವಿನಿಮಯದ ಹರಿವಿಗೆ ಅಮೆರಿಕ ಅವಕಾಶ ಮಾಡಿಕೊಡುವ; ಪ್ರತಿಯಾಗಿ ಹೊರ್ಮುಜ್‌ ಜಲಸಂಧಿಯ ಮೇಲಿನ ತನ್ನ ದಿಗ್ಬಂಧನವನ್ನು ತೆಗೆಯುವುದರ ಜತೆಗೆ ಅಣ್ವಸ್ತ್ರ ಯೋಜನೆಯನ್ನು ಇರಾನ್‌ ಕೈಬಿಡುವ ಬಗೆಗೂ ಎರಡೂ ಪಕ್ಷಗಳ ನಡುವೆ ಸಹಮತಿ ಏರ್ಪಟ್ಟಂತಾಯಿತು.
ಈ ವ್ಯವಸ್ಥೆ 2 ತಿಂಗಳವರೆಗೆ ಜಾರಿಯಲ್ಲಿರಲು ಅನುಕೂಲವಾಗುವಂತೆ ಮಾಡಲು ಅಗತ್ಯವಾದ ವಾತಾವರಣ ನಿರ್ಮಿಸಲು ಉಭಯ ಪಕ್ಷಗಳ ಹಾಗೂ ಮಧ್ಯವರ್ತಿಗಳಾದ ಪಾಕಿಸ್ತಾನ ಮತ್ತು ಕತಾರ್‌ನ ಉನ್ನತ ಪ್ರತಿನಿಧಿಗಳು 4 ದಿನಗಳ ನಂತರ ಒಟ್ಟುಗೂಡಬೇಕೆಂದೂ ತೀರ್ಮಾನವಾಯಿತು. ಆಗ ಸುಮಾರು ಮೂರೂವರೆ ತಿಂಗಳುಗಳಿಂದಲೂ ಇಂಧನ ಬಿಕ್ಕಟ್ಟಿಗೆ ಸಿಲುಕಿದ್ದ ಜಗತ್ತಿಗೆ ನೆಮ್ಮದಿಯ ನಿಟ್ಟುಸಿರು. ವರ್ಸೇಲ್ಸ್‌ ಒಪ್ಪಂದಗಳಲ್ಲೊಂದಾದ ಲೆಬನಾನ್‌ ಕದನವಿರಾಮ "ತಿಳಿವಳಿಕೆ'ಗನುಗುಣವಾಗಿ ಇಸ್ರೇಲ್‌ ನಡೆದುಕೊಳ್ಳದ್ದನ್ನು ಮುಂದೊಡ್ಡಿ ಹೊರ್ಮುಜ್‌ ಜಲಸಂಧಿಯನ್ನು ತೆರೆಯುವ ತನ್ನ ವಾಗ್ದಾನದಿಂದ ದೂರಸರಿಯುವುದಾಗಿ ಇರಾನ್‌ ಹೇಳಿದಾಗ ಮತ್ತೆ ಎಲ್ಲೆಡೆ ಆತಂಕ. ಹಾಗೇನೂ ಆದಂತೆ ಕಾಣುತ್ತಿಲ್ಲ. ಕಚ್ಚಾತೈಲ, ನೈಸರ್ಗಿಕ ಅನಿಲ ಹಾಗೂ ರಸಗೊಬ್ಬರಗಳ ಮೂಲವಸ್ತುಗಳನ್ನು ಹೊತ್ತ ಜಹಜುಗಳು ಹೆಚ್ಚೇನೂ ತೊಂದರೆಯಿಲ್ಲದೇ ಜಲಸಂಧಿಯನ್ನು ಹಾದುಹೋಗತೊಡಗಿದ್ದು ಆತಂಕಭರಿತ ಆಶಾವಾದಕ್ಕೆ ದಾರಿಮಾಡಿಕೊಟ್ಟಿತು.
ಈ ಹಿನ್ನೆಲೆಯಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಮತ್ತು ಸ್ಟೀವ್_ ವಿಟ್‌ಕಾಫ್‌, ಇರಾನಿ ವಿದೇಶಮಂತ್ರಿ ಅಬ್ಬಾಸ್‌ ಅರಾಗ್ಚಿ ಮತ್ತು ಸಂಸತ್‌ ಅಧ್ಯಕ್ಷ ಮಹಮ್ಮದ್‌ ಬಾಘೇರ್ ಗಾಲಿಬಾಫ್‌, ಕತಾರ್‌ನ ಎಮೀರ್‌ ಷೇಖ್_ ತಮೀಮ್‌ ಬಿನ್‌ ಹಮಾದ್_ ಅಲ್‌ ತಾನಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್‌ ಮತ್ತು ಸೇನಾ ದಂಡನಾಯಕ ಆಸಿಮ್‌ ಮುನೀರ್‌ ಸ್ವಿಟ್ಜರ್‌ಲ್ಯಾಂಡ್‌ನ ರಮಣೀಯ ಲುಸರ್ನ್ ಸರೋವರ ತೀರದ ಬರ್ಗನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಜೂ. 21ರಂದು ಸಭೆ ಸೇರಿ 18 ತಾಸುಗಳ ದೀರ್ಘಕಾಲ ಜತೆಯಾಗಿದ್ದರು. ಅಷ್ಟೂ ಕಾಲ ಅವರೆಲ್ಲರೂ ಶಾಂತಿ ಮಾತುಕತೆಯಲ್ಲೇ ತೊಡಗಿದ್ದರೇ, ಅದರ ಹೊರತಾಗಿ ಏನೇನು ಮಾಡಿದರು ಮತ್ತು ಆಡಿದರು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಭವಿಷ್ಯವೇನು ಎನ್ನುವುದರ ಸ್ಥೂಲ ಚಿತ್ರಣ ಸಿಗುತ್ತದೆ.
ಮೊದಲಿಗೆ ಬರ್ಗನ್‌ಸ್ಟಾಕ್ ರೆಸಾರ್ಟ್‌ನ ಮಹತ್ವದ ಬಗ್ಗೆ ಒಂದೆರಡು ಮಾತುಗಳು. ಅಲ್ಲಿ ಜಗತ್ತಿನ ಹಲವು ಮಹತ್ವದ ವ್ಯಕ್ತಿಗಳು ತಂಗಿದ್ದಾರೆ. ಅವರಲ್ಲಿ ಶೀತಲಸಮರದ ಗತಿಯನ್ನೇ ಬದಲಿಸಿದ ಇಬ್ಬರು ಅಮೆರಿಕನ್‌ ನಾಯಕರಾದ ಹೆನ್ರಿ ಕಿಸಿಂಜರ್_ ಹಾಗೂ ಜಿಮ್ಮಿ ಕಾರ್ಟರ್‌ ಸಹ ಸೇರಿದ್ದಾರೆ. ಅಲ್ಲಿ ಜಗತ್ಪ್ರಸಿದ್ಧ ಚಿತ್ರತಾರೆಯರ ವಿವಾಹಮಹೋತ್ಸವಗಳೂ ಜರುಗಿದ್ದುಂಟು. ಅಷ್ಟೇ ಅಲ್ಲ, ನಮ್ಮ ಪ್ರೀತಿಯ ಚಾಚಾ ನೆಹರೂ ಸಹ ಅಲ್ಲಿ ರಜಾದ ಮಜಾ ಅನುಭವಿಸಿದ್ದರು ಎಂಬ ಐತಿಹಾಸಿಕ ಸತ್ಯ ಆ ರೆಸಾರ್ಟನ್ನು ನಮಗೆ, ಮುಖ್ಯವಾಗಿ ಕಾಂಗ್ರೆಸ್ಸಿಗರಿಗೆ ಪವಿತ್ರ ಕ್ಷೇತ್ರವನ್ನಾಗಿಸಲೂಬಹುದು.
ಈಗ ಜೂ. 21ಕ್ಕೆ ಬರೋಣ. ಅಂದು ಆ ರೆಸಾರ್ಟ್‌ನ ಸಭಾ ಸ್ಥಳಕ್ಕೆ ಮೊದಲು ಆಗಮಿಸಿದವರು ಅಮೆರಿಕ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು. ನಂತರ ಬಂದ ಕತಾರ್‌ನ ಎಮೀರ್‌, ಪಾಕಿಸ್ತಾನಿ ಪ್ರಧಾನಿ ಶರೀಫ್‌ರ ಬಳಿಸಾರಿ ಅವರೊಂದಿಗೆ ಆತ್ಮೀಯವಾಗಿ ವರ್ತಿಸಿದರು. ಪಕ್ಕದಲ್ಲೇ ನಿಂತಿದ್ದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ರತ್ತ ಸಣ್ಣನೆಯ ನಗೆ ಬೀರಿದರಷ್ಟೇ; ಹತ್ತಿರ ಹೋಗಲಿಲ್ಲ. ಇರಾನಿ ವಿದೇಶಮಂತ್ರಿ ಅಬ್ಬಾಸ್‌ ಅರಾಗ್ಚಿ ಸಹ ಪಾಕಿಸ್ತಾನಿ ಪ್ರಧಾನಿಯನ್ನು ಆತ್ಮೀಯವಾಗಿ ಅಪ್ಪಿಕೊಂಡರು. ದಂಡನಾಯಕ ಆಸಿಮ್‌ ಮುನೀರ್‌ ಮುಂದೆ ಬಂದು ಸ್ಟೀವ್_ ವಿಟ್‌ಕಾಫ್‌ರನ್ನು "ನನ್ನ ಸಹೋದರ' ಎಂದು ಕರೆಯುತ್ತ ಅಪ್ಪಿಕೊಂಡರು. ಜೆಡಿ ವ್ಯಾನ್ಸ್‌ರನ್ನು ಕೇಳುವವರೇ ಇಲ್ಲ!
ಪಾಪ, ನಿರ್ಲಕ್ಷ್ಯಕ್ಕೊಳಗಾದಂತಹ ವ್ಯಾನ್ಸ್‌ ಅಲ್ಲಿ ತಾವಿದ್ದೇವೆ ಎನ್ನುವುದನ್ನು ತೋರಿಸಿಕೊಳ್ಳಲೆಂದೋ ಏನೋ, ನಗೆಚಟಾಕಿಯಂತೆ ಮಾತೊಂದನ್ನಾಡಿದರು. ಅದು ಹೀಗಿತ್ತು: "ನನ್ನ ಬದುಕಿನಲ್ಲಿ ಇಬ್ಬರು ವ್ಯಕ್ತಿಗಳು, ಒಬ್ಬರು ಭಾರತೀಯರು, ಮತ್ತೊಬ್ಬರು ಪಾಕಿಸ್ತಾನಿ, ಮಹತ್ವದ ಸ್ಥಾನದಲ್ಲಿದ್ದಾರೆ. ಭಾರತೀಯರೆಂದರೆ ನನ್ನ ಪತ್ನಿ ಉಷಾ, ಪಾಕಿಸ್ತಾನಿಯೆಂದರೆ ಫೀಲ್ಡ್_ ಮಾರ್ಷಲ್‌ ಆಸಿಮ್‌ ಮುನೀರ್‌.
ಅಮೆರಿಕದ ಈಗಿನ ಉಪಾಧ್ಯಕ್ಷರ ಈ ಮಾತಿನ ವಿಶ್ಲೇಷಣೆ ಭಾರತೀಯರಾದ ನಮಗೆ ಅಗತ್ಯ. ಆದರೆ ಅದನ್ನು ಸ್ವಲ್ಪ ಹೊತ್ತಿನ ನಂತರ ಮಾಡೋಣ. ಮೊದಲಿಗೆ ಬರ್ಗನ್‌ಸ್ಟಾಕ್ ಶಾಂತಿ ಸಭೆ ಆರಂಭವಾದ ಬಗೆಯತ್ತಲೇ ಗಮನಹರಿಸೋಣ. ಇರಾನಿ, ಪಾಕಿಸ್ತಾನಿ ಮತ್ತು ಕತಾರ್‌ನ ನೇತಾರರ ವರ್ತನೆಯಿಂದಲೇ ಅವರು ಯಾವ ಮನಸ್ಥಿತಿಯಲ್ಲಿ ಆ ಸಭೆಗೆ ಹಾಜರಾದರು ಎಂಬ ಕಲ್ಪನೆ ಮಾಡಿಕೊಳ್ಳೋಣ. ನಂತರ ಮಾತುಕತೆ ಆರಂಭವಾದ ಸ್ವಲ್ಪ ಹೊತ್ತಿನಲ್ಲಿ, ನಮ್ಮ ಮಾತುಗಳಿಗೆ ಇರಾನಿ ಪ್ರತಿನಿಧಿಗಳು ಸಮ್ಮತಿಸದೇ ಹೋದರೆ ಅವರು ತಮ್ಮ ದೇಶಕ್ಕೆ ಹಿಂತಿರುಗಲಾರರು ಎಂದು ಅಧ್ಯಕ್ಷ ಟ್ರಂಪ್‌ ಫಾಕ್ಸ್_ ನ್ಯೂಸ್_ ವಾರ್ತಾವಾಹಿನಿಯಲ್ಲಿ ಹೇಳಿದ ಮಾತು ಇರಾನಿ ಪ್ರತಿನಿಧಿಗಳ ಕಿವಿ ಸೇರಿ ಅವರೆಲ್ಲರೂ ಏಕಾಏಕಿ ವ್ಯಗ್ರರಾದರು. ಟ್ರಂಪ್‌ರ ಈ ಧಮಕಿ ವರ್ಸೇಲ್ಸ್‌ನಲ್ಲಿ ನೀಡಲಾದ ವಾಗ್ದಾನಕ್ಕೆ ವಿರುದ್ಧವಾದುದು, ಹೀಗಾಗಿ ನಾವು ಈ ಸಭೆಯಿಂದ ಹೊರಹೋಗುತ್ತಿದ್ದೇವೆ ಎಂದು ಅಬ್ಬಾಸ್‌ ಅರಾಗ್ಚಿ ಕೋಪದಲ್ಲಿ ಶೆಹಬಾಜ್‌ ಶರೀಫ್‌ರಿಗೆ ಹೇಳಿ ಎದ್ದೇಬಿಟ್ಟರು. ಆಗ ದಿಕ್ಕೆಟ್ಟವರಂತೆ ನಿಂತ ಪಾಕಿಸ್ತಾನಿ ಪ್ರಧಾನಿಯ ಚಿತ್ರವನ್ನು ನೀವು ಕಂಡಿರಲೇಬೇಕು.
ಆಮೇಲೆ ಹೇಗೋ ಸಮಾಧಾನಿಸಿ ಇರಾನೀಯರನ್ನು ಸಭೆಯಲ್ಲಿ ಕೂರಿಸಿ "ಶಾಂತಿ' ಮಾತುಕತೆಯನ್ನು ಮುಂದುವರಿಸಲಾಯಿತು. ಒಟ್ಟು 18 ತಾಸು ಅವರೆಲ್ಲರೂ ಒಟ್ಟಿಗಿದ್ದು ತೆಗೆದುಕೊಂಡ ತೀರ್ಮಾನಗಳು ಹೇಳುವುದು ವರ್ಸೇಲ್ಸ್‌ ಒಪ್ಪಂದದಲ್ಲಿ ದಾಖಲಾಗಿರುವಂತಹವೇ. ಅವೆಲ್ಲವನ್ನೂ ನಾನೂ ಮೇಲೆಯೇ ದಾಖಲಿಸಿದ್ದೇನೆ.
ಅವೆಲ್ಲವುಗಳ ಪ್ರಕಾರ ಕತಾರ್‌ ತಾನು ಫ್ರೀಜ್ ಮಾಡಿಟ್ಟುಕೊಂಡಿರುವ ಇರಾನಿ ಹಣ 6 ಬಿಲಿಯನ್‌ ಡಾಲರ್‌ಗಳನ್ನು ಆ ದೇಶಕ್ಕೆ ತಕ್ಷಣವೇ ಲಭ್ಯವಾಗುವಂತೆ ಮಾಡಲಿದೆ, ಯುದ್ಧದಿಂದಾದ ಹಾನಿಗಳಿಂದ ಸಂಭಾಳಿಸಿಕೊಳ್ಳಲು 300 ಬಿಲಿಯನ್‌ ಡಾಲರ್‌ಗಳಷ್ಟು ದೊಡ್ಡ ಮೊತ್ತ ಇರಾನ್‌ಗೆ ಲಭ್ಯವಾಗುವಂತೆ ಅಮೆರಿಕ ವ್ಯವಸ್ಥೆ ಮಾಡಲಿದೆ. ಜತೆಗೆ ಇರಾನ್‌ ತನ್ನ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲವನ್ನು ರಫ್ತು ಮಾಡಿ ಆದಾಯ ಗಳಿಸಲೂ ಯಾವ ತಡೆಯೂ ಇಲ್ಲ. ಪ್ರತಿಯಾಗಿ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನೇನೂ ಬಂದ್ ಮಾಡುವುದಿಲ್ಲ. ಈ ವ್ಯವಸ್ಥೆ ಆ. 21ರವರೆಗೆ. ಆಮೇಲೆ?
ಆಮೇಲೂ ಇದೇ ವ್ಯವಸ್ಥೆ ಮುಂದುವರಿದು ಎಲ್ಲರೂ ಬಹುಕಾಲ ಸುಖವಾಗಿ ಬಾಳುವಂತೆ ಮಾಡಲು ಅನುಕೂಲವಾಗುವಂತಹ ನಿರ್ಧಾರಗಳನ್ನು ಸಂಬಂಧಪಟ್ಟ ಎಲ್ಲ ಪಕ್ಷಗಳೂ ಮುಂದಿನ 2 ತಿಂಗಳುಗಳಲ್ಲಿ ತೆಗೆದುಕೊಳ್ಳಬೇಕು, ಅವುಗಳಿಗೆ ನಿಷ್ಠರಾಗಿ ನಡೆದುಕೊಳ್ಳಬೇಕು. ಪ್ರಶ್ನೆಗಳು ಎದುರಾಗುವುದು ಇಲ್ಲಿ.
ಅಮೆರಿಕ ಈ ಯುದ್ಧವನ್ನಾರಂಭಿಸಿದ್ದೇ ಇರಾನ್‌ನ ಅಣ್ವಸ್ತ್ರ ಯೋಜನೆ ನಿಲ್ಲಿಸಲು. ಆದರೆ ಈ ವಿಷಯದಲ್ಲಿ ಯಾವ ಪ್ರಗತಿಯಾಗಿದೆ, ಇರಾನ್‌ನ ವಾಗ್ದಾನಗಳೇನು, ಅವುಗಳಿಗೆ ಆ ದೇಶ ಎಷ್ಟರಮಟ್ಟಿಗೆ ನಿಷ್ಠ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ವರ್ಷದ ಹಿಂದೆ ಇಸ್ಫಹಾನ್‌, ನತಾಂಜ್‌ ಹಾಗೂ ಫೊರ್ಡೋ ಸಂಯಂತ್ರಗಳ ಮೇಲೆ ಅಮೆರಿಕ ಬಂಕರ್‌ ಬಸ್ಟರ್‌ ಬಾಂಬ್‌ಗಳನ್ನು ಹಾಕಿ ನಾಶಪಡಿಸಿದೆ ಎಂದು ಬೀಗುತ್ತಿರುವಾಗಲೇ ಇರಾನ್‌ ತನ್ನ 60% ಸಂಸ್ಕರಿತ 440 ಕೆಜಿ ಯುರೇನಿಯಂ ಅನ್ನು ಬೇರೆಲ್ಲೋ ಸಾಗಿಸಿದೆ ಎಂಬ ಸುದ್ದಿ ಬಂತು. ಆಮೇಲೆ ಅದನ್ನು ಇರಾನ್‌ 80%ವರೆಗೆ ಸಂಸ್ಕರಿಸುವುದರಲ್ಲಿ ಯಶಸ್ವಿಯಾಗಿರುವ ಸಾಧ್ಯತೆಯಿದೆ ಎಂದು ಇಂಟರ್‌ನ್ಯಾಷನಲ್‌ ಅಟಾಮಿಕ್ ಎನರ್ಜಿ ಏಜೆನ್ಸಿ (ಐಎಇಎ) ಮಹಾನಿರ್ದೇಶಕ ರಾಫೆಲ್ ಮರಿಯಾನೋ ಗ್ರೋಸಿ ಕಳೆದ ಅಕ್ಟೋಬರ್‌ನಲ್ಲೇ ಹೇಳಿದರು! ಇದು ನಿಜವೇ ಇದ್ದರೆ ಅಮೆರಿಕ ಮತ್ತು ಇಸ್ರೇಲ್‌ನಿಂದ ಹೊಡೆತ ತಿಂದ ಮೂರೇ ತಿಂಗಳಲ್ಲಿ ಯುರೇನಿಯಂ ಸಂಸ್ಕರಣೆಯನ್ನು 60ರಿಂದ 80%ಗೆ ಏರಿಸಿದ ಇರಾನ್‌ಗೆ ಬಾಂಬ್‌ ತಯಾರಿಕೆಗೆ ಅಗತ್ಯವಾದ ಇನ್ನು ಕೇವಲ 10% ಹೆಚ್ಚುವರಿ ಸಂಸ್ಕರಣೆಯನ್ನು ಸಾಧಿಸಲು ಹೆಚ್ಚೆಂದರೆ 2 ತಿಂಗಳು ಬೇಕಾಗಿದ್ದಿರಬಹುದು. ಇದರರ್ಥ ಫೆ. 28ರಂದು ಯುದ್ಧ ಆರಂಭವಾಗುವ ಹೊತ್ತಿಗಾಗಲೇ ಇರಾನ್‌ ಆ ಸಾಮರ್ಥ್ಯ ಪಡೆದುಕೊಂಡಿತ್ತೇ? ಅದು ಅಮೆರಿಕ, ಇಸ್ರೇಲ್‌ಗಳ "ತಿಳಿವಳಿಕೆ'ಗೆ ತಡವಾಗಿ ಬಂತೇ? ಇರಾನಿ ಧಾರ್ಮಿಕ ಮೂಲಭೂತವಾದಿ ಸತ್ತೆಯನ್ನು ನಿರ್ಮೂಲನ ಮಾಡುವ, ಇರಾನನ್ನು ಶಿಲಾಯುಗಕ್ಕೆ ಕಳುಹಿಸುವ ಮಾತುಗಳನ್ನಾಡಿದ ಟ್ರಂಪ್‌ ಅದಾಗುವ ಮೊದಲೇ ಕದನವಿರಾಮ ಘೋಷಿಸಿದ್ದು, ಹೊರ್ಮುಜ್‌ನಲ್ಲಿ ಇರಾನ್‌ನ ಖರತ್‌ನಕ್ ನೌಟಂಕಿಗಳನ್ನೆಲ್ಲಾ ಎರಡೂಕಾಲು ತಿಂಗಳು ಸಹಿಸಿಕೊಂಡದ್ದು ಇರಾನ್‌ನ ಹೊಸ ಅಣ್ವಸ್ತ್ರ ಸಾಮರ್ಥ್ಯಕ್ಕೆ ಹೆದರಿಯೇ?
ಈಗಲೂ ಇರಾನ್‌ನ ಅಣುಸಂಸ್ಕರಣೆಯ ಹಕ್ಕನ್ನು ಅಲ್ಲಿನ ನಾಯಕರು ಮತ್ತೆಮತ್ತೆ ದೊಡ್ಡದಾಗಿ ಹೇಳುತ್ತಲೇ ಇದ್ದಾರೆ. ಇತರ ಹಲವು ದೇಶಗಳಿಗೆ ಆ ಹಕ್ಕು ಇರುವುದಾದರೆ ಇರಾನ್‌ಗೂ ಅದು ಇದ್ದರೆ ತಪ್ಪೇನೂ ಇಲ್ಲ ಎಂದು ಅಧ್ಯಕ್ಷ ಟ್ರಂಪ್‌ ವರ್ಸೇಲ್ಸ್‌ ಒಪ್ಪಂದವಾದ ಮರುಗಳಿಗೆಯೇ ಹೇಳಿ ನಮ್ಮೆಲ್ಲರನ್ನೂ ದಂಗುಬಡಿಸಿದ್ದಾರೆ.
ಇಷ್ಟಾಗಿಯೂ ಟ್ರಂಪ್‌ ಪೂರ್ತಿಯಾಗಿ ಕೈಚೆಲ್ಲಿ ಕೂತಿದ್ದಾರೆ ಎಂದು ಹೇಳಲಾಗದು. ಅವರೀಗ ಸಿಕ್ಕಿಬಿದ್ದಿರುವ ಸಂದಿಗ್ಧಕ್ಕೆ ಮುಖ್ಯ ಕಾರಣ ಹಿಂದಿನ ಅಧ್ಯಕ್ಷರಾದ ಒಬಾಮಾ, ಬೈಡನ್‌ ಇರಾನ್‌ ಬಗ್ಗೆ ತೋರಿದ ಸಡಿಲ ನೀತಿಗಳು. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಸೋಲದಿದ್ದರೆ ಇರಾನ್‌ ಕುರಿತಂತೆ ಅವರ ಕೈ ಮೇಲಾಗಿರುತ್ತಿತ್ತು. ಒಬಾಮಾರ ತಪ್ಪನ್ನು ಸರಿಪಡಿಸಲು ಅವರು ತಮ್ಮ ಮೊದಲ ಅವಧಿಯಲ್ಲಿ ಪ್ರಯತ್ನಿಸಿದರು, ಈಗ ಬೈಡನ್‌ರ ತಪ್ಪು ಸರಿಪಡಿಸಲು ಹೆಣಗುತ್ತಿದ್ದಾರೆ. ಪರಿಸ್ಥಿತಿ ಕೈಮೀರಿಹೋಗಿದೆ ಎಂದು ಬಹುಶಃ ಅವರಿಗೆ ತಡವಾಗಿ ಅರಿವಾಗಿ ಮತ್ತೆಮತ್ತೆ ಹತಾಶೆಗೊಳಗಾಗುತ್ತಿದ್ದಾರೆ, ನಾಲಿಗೆ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ.
ಆದಾಗ್ಯೂ ಏಪ್ರಿಲ್‌ ಆರಂಭದಿಂದ ಇಲ್ಲಿಯವರೆಗೆ, ಮುಖ್ಯವಾಗಿ ವರ್ಸೇಲ್ಸ್‌ ಒಪ್ಪಂದದ ಹೊತ್ತಿಗೆ ಅವರು ತಳೆದ ನಿಲುವುಗಳನ್ನು ಅವಲೋಕಿಸಿದರೆ ಕೆಲವು ಅಸಾಧಾರಣ ವಾಸ್ತವಗಳ ಚಿತ್ರಣ ತೆರೆದುಕೊಳ್ಳುತ್ತದೆ. ಮೊದಲಿಗೆ ಇರಾನ್‌ನ ಅಣ್ವಸ್ತ್ರ ಸಾಮರ್ಥ್ಯವನ್ನು ಅವರು ಗುರುತಿಸಿ ಒಪ್ಪಿಕೊಂಡಿದ್ದಾರೆ, ತನ್ನ ಘಾತಕ ಶಕ್ತಿಯನ್ನು ಬಳಸದಂತೆ ಇರಾನ್‌ ಮೇಲೆ ಯಶಸ್ವಿಯಾಗಿ ಒತ್ತಡ ಹಾಕಿದ್ದಾರೆ. ಆ ಹತಾಶ ಪ್ರಯತ್ನದಲ್ಲಿ ಅವರು ತಮ್ಮ ಸ್ವಾಭಿಮಾನ ಬದಿಗಿಟ್ಟು ಜಿನ್‌ಪಿಂಗ್‌ ಹಾಗೂ ಪುಟಿನ್‌ರ ಸಹಾಯಕ್ಕಾಗಿ ಕೈಚಾಚಿ ಯಶಸ್ವಿಯಾಗಿದ್ದಾರೆ ಎನ್ನುವುದನ್ನು ಇರಾನ್‌ನ ಇಲ್ಲಿಯವರೆಗಿನ ಪ್ರತಿಕ್ರಿಯೆಗಳಲ್ಲಿ ನೋಡಬಹುದು. ಆದರೆ ಇದೆಷ್ಟು ದಿನದ ಆಟ?
ಅಮೆರಿಕ-ಇಸ್ರೇಲ್‌ ಜತೆಗಿನ ಸಂಘರ್ಷದಲ್ಲಿ ತನಗೆ ಬೆಂಬಲವಾಗಿ ನಿಲ್ಲುತ್ತಲೇ ಬಂದಿರುವ ಚೀನಾ ಮತ್ತು ರಷ್ಯಾದ ಬುದ್ಧಿಮಾತುಗಳನ್ನು ತಳ್ಳಿಹಾಕುವ ಸ್ಥಿತಿಯಲ್ಲಿ ಇರಾನ್‌ ಇಲ್ಲ. ಆದರೆ ತನ್ನ ಅಣ್ವಸ್ತ್ರ ಸಾಮರ್ಥ್ಯದಿಂದಾಗಿ ಅದು ಟ್ರಂಪ್‌ರನ್ನು ಬ್ಲಾಕ್‌ಮೇಲ್_ ಮಾಡುವ, ಅವರ ಪ್ರತಿನಿಧಿಗಳನ್ನು ಅವಮಾನಿಸುವ ತಪ್ಪುಗಳನ್ನು ಮತ್ತೆಮತ್ತೆ ಎಸಗುತ್ತಿದೆ. ಇದರ ಅಂತಿಮ ಪರಿಣಾಮ ಒಂದು ದಿನ ಮಾಸ್ಕೋ ಮತ್ತು ಬೀಜಿಂಗ್‌ಗಳನ್ನೇ ಇರಾನ್‌ ಉಡಾಫೆಯಿಂದ ನೋಡಬಹುದು. ಟ್ರಂಪ್‌ ಹತಾಶೆಯಿಂದ ಹೊರಬಂದು ಅಂತಿಮ ಕಾಳಗಕ್ಕೆ ತಯಾರಾಗಬಹುದು. ಈ ಎರಡರಲ್ಲಿ ಒಂದು ಘಟಿಸಿದಾಗ ಜಗತ್ತು ಪಶ್ಚಿಮ ಏಷ್ಯಾದಲ್ಲಿ ಭೀಕರ ಕದನವೊಂದನ್ನು ಕಾಣುತ್ತದೆ. ಅಂತಹದೊಂದು ನಿರ್ಣಾಯಕ ಕಾಳಗವಾಗಿ ಇತಿಹಾಸದ ಚಕ್ರವನ್ನು ತುಸು ಹಿಂದಕ್ಕೆ ಸರಿಸದ ಹೊರತು ಆ ವಲಯದಲ್ಲಿ ಶಾಂತಿ ಸಾಧ್ಯವೇ ಇಲ್ಲ. ಅದು ಕಾಲದ ಅನಿವಾರ್ಯತೆ. ಈ ಸರಳ ತಿಳಿವಳಿಕೆ ವರ್ಸೇಲ್ಸ್‌ ಒಪ್ಪಂದ ಪತ್ರಕ್ಕಿಂತ ಹೆಚ್ಚು ಅರ್ಥಪೂರ್ಣ.
ಇಂತಹ ಸನ್ನಿವೇಶದಲ್ಲಿ ನನಗೆ ಮತ್ತೆಮತ್ತೆ ಅನಿಸುವುದೇನೆಂದರೆ ಟ್ರಂಪ್‌ರಂತಹ ಜಾಗತಿಕ ನಾಯಕ ಕನಿಷ್ಠ ಒಂದೂವರೆ ದಶಕದ ಹಿಂದೆಯೇ ಬರಬೇಕಿತ್ತು, ಒಬಾಮಾ ಮತ್ತು ಬೈಡನ್‌ರಂಥವರಿಗೆ ಶ್ವೇತಭವನದ ಬಾಗಿಲು ಎಂದೂ ತೆರೆಯಬಾರದಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net