2ನೇ ವಿಶ್ವ ಧ್ಯಾನ ದಿನದ ಆಚರಣೆ: ವಿಶ್ವಸಂಸ್ಥೆಯಲ್ಲಿ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಪ್ರಧಾನ ಭಾಷಣ, ಸಾಮೂಹಿಕ ಧ್ಯಾನ! Sri Sri Ravi Shankar

ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ ಶ್ರೀ ಶ್ರೀ ರವಿಶಂಕರ್
Published on
Sri Sri Ravi Shankar : ನೂಯಾರ್ಕ್​ನಲ್ಲಿನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಎರಡನೇ ವಿಶ್ವ ಧ್ಯಾನ ದಿನದ ಅಂಗವಾಗಿ ಆಯೋಜಿಸಲಾದ ‘ಜಾಗತಿಕ ಶಾಂತಿ ಮತ್ತು ಸೌಹಾರ್ದತೆಗಾಗಿ ಧ್ಯಾನ’ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮತ್ತು ಅದರ ಅಂಗ ಸಂಸ್ಥೆಗಳು ಭಾಗವಹಿಸಿ, ಜಾಗತಿಕ ಶಾಂತಿ, ಮಾನಸಿಕ ಸುಸ್ಥಿತಿ ಮತ್ತು ನಾಯಕತ್ವದಂತಹ ವಿಷಯಗಳಲ್ಲಿ ಧ್ಯಾನದ ಮಹತ್ತರವಾದ ಪಾತ್ರವನ್ನು ಗುರುತಿಸಿದವು.
ಭಾರತ, ಶ್ರೀಲಂಕಾ, ಅಂಡೋರಾ, ಮೆಕ್ಸಿಕೊ, ನೇಪಾಳ ಸೇರಿದಂತೆ ಹಲವು ಸದಸ್ಯ ರಾಷ್ಟ್ರಗಳ ಶಾಶ್ವತ ಪ್ರತಿನಿಧಿಗಳು ಹಾಗೂ ವಿಶ್ವಸಂಸ್ಥೆಯ ವಿವಿಧ ಸಂಸ್ಥೆಗಳು ಒಟ್ಟಾಗಿ ಸೇರಿ, ಪ್ರಸ್ತುತ ಕಾಲದ ಜಾಗತಿಕ ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಆರೋಗ್ಯಗಳ ಸವಾಲುಗಳಿಗೆ ಪರಿಹಾರಕ್ಕೆ ಪ್ರಾಚೀನ ಧ್ಯಾನ ಪದ್ಧತಿಯು ಹೇಗೆ ಸಹಾಯಕವೆಂದು ಚರ್ಚಿಸಿದರು.
ಈ ಸಂದರ್ಭದಲ್ಲಿ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಪ್ರಧಾನ ಭಾಷಣ ನೀಡಿ, ಮಾರ್ಗದರ್ಶಿತ ಧ್ಯಾನವನ್ನು ನಡೆಸಿಕೊಡುವ ಮೂಲಕ, ಭಾರತದ ನಾಗರಿಕತೆಯ ಪರಂಪರೆಯಲ್ಲಿ ಬೇರೂರಿರುವ ಧ್ಯಾನ ಪದ್ಧತಿಯನ್ನು ವಿಶ್ವದ ಅತ್ಯಂತ ಮಹತ್ವದ ರಾಜತಾಂತ್ರಿಕ ವೇದಿಕೆಯ ಮೂಲಕ ಮುನ್ನೆಲೆಗೆ ತಂದರು.
ಭಾಷಣದ ಆರಂಭದಲ್ಲೇ ಗುರುದೇವರು ಒಂದು ಸರಳವಾದ ಮತ್ತು ಅರ್ಥಪೂರ್ಣವಾದ ಕಥೆಯನ್ನು ಹಂಚಿಕೊಂಡರು. ಒಮ್ಮೆ ತತ್ವಜ್ಞಾನಿಗಳ ಗುಂಪೊಂದು ಧ್ಯಾನದ ಸಾರವನ್ನು ವಿವರಿಸಲು ಧ್ಯಾನಗುರುವೊಬ್ಬರನ್ನು ಕೇಳಿತು. ಅದಕ್ಕೆ ಗುರುಗಳು, “ನೀವು ಅತ್ಯಂತ ಮೌಲ್ಯವಾದ ವಸ್ತುವನ್ನು ಒಂದು ಪಾತ್ರೆಯಲ್ಲಿ ತಂದುಕೊಡಿ” ಎಂದರು. ಅವರುಗಳು ನೀರು, ಮಣ್ಣು, ಎಣ್ಣೆ, ಜೇನು ಮತ್ತು ಹಾಲು ತುಂಬಿದ ಪಾತ್ರೆಗಳೊಂದಿಗೆ ಮರಳಿದರು. ಅವುಗಳನ್ನೆಲ್ಲ ಒಂದೇ ಪಾತ್ರೆಯಲ್ಲಿ ಸುರಿದಾಗ, ಅವರ ಪಾತ್ರೆಗಳು ಖಾಲಿಯಾದವು. “ಇದೇ ಧ್ಯಾನ” ಎಂದು ಗುರುಗಳು ಉತ್ತರಿಸಿದರು.
ಈ ಕಥೆಯನ್ನು ವಿವರಿಸುತ್ತಾ ಗುರುದೇವರು, ತತ್ವಶಾಸ್ತ್ರಗಳು ಮನಸ್ಸೆಂಬ ಪಾತ್ರೆಯನ್ನು ತುಂಬುತ್ತವೆ ಆದರೆ, ಧ್ಯಾನವು ಚಿಂತನೆಯಾಚೆ ಕರೆದೊಯ್ದು ಅಂತರಂಗದಲ್ಲಿ ಸ್ಪಷ್ಟತೆ ಮತ್ತು ಶಾಂತಿ - ನೆಮ್ಮದಿಯನ್ನು ಅನುಭವಿಸಲು ಅವಕಾಶ ಮಾಡಿಕೊಡುತ್ತದೆ ಎಂದು ವಿವರಿಸಿದರು. ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಇಂದಿನ ಜಗತ್ತಿನಲ್ಲಿ, ಧ್ಯಾನವನ್ನು ಅತ್ಯಂತ ತುರ್ತಾಗಿ ಅಭ್ಯಾಸ ಮಾಡಬೇಕಾಗಿದೆ ಎಂದು ಅವರು ಉಲ್ಲೇಖಿಸಿದರು. ವಿಶ್ವದಾದ್ಯಂತ ಸುಮಾರು 500ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಈಗಾಗಲೇ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳುತ್ತಿರುವುದನ್ನೂ ಅವರು ಗಮನಾರ್ಹವಾಗಿ ಪ್ರಸ್ತಾಪಿಸಿದರು.
ಸಂಘರ್ಷ ಪ್ರದೇಶಗಳ ಪರಿವರ್ತನೆಯ ಅನುಭವಗಳನ್ನು ಹಂಚಿಕೊಂಡ ಗುರುದೇವರು, ಯುಕ್ರೇನ್‌ನಲ್ಲಿನ 8,000ಕ್ಕೂ ಹೆಚ್ಚು ಸೈನಿಕರು ಆಘಾತ ಮತ್ತು ಒತ್ತಡದಿಂದ ಹೊರಬರಲು ಧ್ಯಾನವನ್ನು ಕಲಿತಿದ್ದಾರೆ ಎಂದರು. “ಧ್ಯಾನವೂ ಅವರ ಮನೋಬಲವನ್ನು ಮರುಸ್ಥಾಪಿಸಿತು” ಎಂದು ಅವರು ಹೇಳಿ, ಧ್ಯಾನವು ಕೇವಲ ಶಾಲಾ ತರಗತಿಗಳಲ್ಲಿ ಚಿಕಿತ್ಸೆಗಳಲ್ಲಿ ಮಾತ್ರವಲ್ಲದೇ, ಯುದ್ಧಭೂಮಿಯಲ್ಲೂ ಇದರ ಪಾತ್ರ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 21 ಅನ್ನು ವಿಶ್ವ ಧ್ಯಾನ ದಿನವೆಂದು ಅಧಿಕೃತವಾಗಿ ಘೋಷಿಸಿ, ಧ್ಯಾನವನ್ನು ಭಾವನಾತ್ಮಕ ಸ್ಥೈರ್ಯ, ಮಾನಸಿಕ ಆರೋಗ್ಯ ಮತ್ತು ಶಾಂತಿ ಸಾಮರಸ್ಯಕ್ಕೆ ನೆರವಾಗುವ ವಿಶ್ವವ್ಯಾಪಿ ಅನುಸರಿಸಬಹುದಾದ ಪದ್ಧತಿಯಾಗಿ ಗುರುತಿಸಿದೆ. ಭಾರತಕ್ಕೆ ದೀರ್ಘಕಾಲದಿಂದ ಪರಿಚಿತವಾಗಿರುವ ಈ ಚಿಂತನ ಪರಂಪರೆ, ಇಂದಿನ ಜಾಗತಿಕ ಸವಾಲುಗಳನ್ನು ಎದುರಿಸಲು ಉಪಯುಕ್ತ ಸಾಧನವಾಗಿ ಜಾಗತಿಕ ಸ್ವೀಕಾರ ಪಡೆಯುತ್ತಿರುವುದನ್ನು ಈ ಘೋಷಣೆ ಪ್ರತಿಬಿಂಬಿಸುತ್ತದೆ.
ಕಾರ್ಯಕ್ರಮದ ಅಂತ್ಯದಲ್ಲಿ ಗುರುದೇವರು, ರಾಯಭಾರಿಗಳು ಮತ್ತು ಪ್ರತಿನಿಧಿಗಳಿಗೆ 20 ನಿಮಿಷಗಳ ಮಾರ್ಗದರ್ಶಿತ ಧ್ಯಾನವನ್ನು ನಡೆಸಿಕೊಟ್ಟರು. ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಪರೂಪದ ನಿಶ್ಶಬ್ದ ಕ್ಷಣವೊಂದು ಮೂಡಿತು. ಪ್ರಾಚೀನ ಪರಂಪರೆಯಿಂದ ಹುಟ್ಟಿದ ಪದ್ಧತಿಯು ಇಂದಿಗೂ ಜಾಗತಿಕ ವೇದಿಕೆಯಲ್ಲಿ ಹೊಸ ಅರ್ಥವನ್ನು ಪಡೆದುಕೊಳ್ಳುತ್ತಿರುವುದಕ್ಕೆ ಈ ಮೌನದ ಕ್ಷಣ ಸಾಕ್ಷಿಯಾಯಿತು.
ಡಿಸೆಂಬರ್ 21ರಂದು ವಿಶ್ವ ಧ್ಯಾನಕ್ಕೆ ಜಗತ್ತು ಸಜ್ಜಾಗುತ್ತಿರುವಾಗ, ಈ ಆಂದೋಲನವು ಈಗಾಗಲೇ ವಿಶ್ವ ಸಂಸ್ಥೆಯ ಗಡಿಯನ್ನು ದಾಟಿದೆ. ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ “World Meditates with Gurudev” ಎಂಬ ಸಂದೇಶದ ಜಾಹೀರಾತುಗಳು ಮಿನುಗಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಆಧ್ಯಾತ್ಮಿಕ ನಾಯಕರೊಬ್ಬರು ಮುನ್ನಡೆಸುತ್ತಿರುವ ಅಪರೂಪದ ಕ್ಷಣವನ್ನು ಸೂಚಿಸುತ್ತಿವೆ. ನ್ಯೂಯಾರ್ಕ್‌ನಿಂದಲೇ ಗುರುದೇವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ವಿಶ್ವದಾದ್ಯಂತದ ಧ್ಯಾನವನ್ನು ನೇರ ಪ್ರಸಾರದಲ್ಲಿ ಮಾರ್ಗದರ್ಶನ ಮಾಡಲಿದ್ದು, ಭಾರತ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಈ ಸಮೂಹ ಧ್ಯಾನದಲ್ಲಿ ಭಾಗವಹಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net