

ನ್ಯೂಯಾರ್ಕ್: ಇಂದು (ಮಂಗಳವಾರ, ಸೆ.22) ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ದೇಶದ ಅಪ್ರತಿಮ ಮಿಲಿಟರಿ ಶಕ್ತಿಯನ್ನು ಜಗತ್ತಿನೆದುರು ಎತ್ತಿ ತೋರಿಸುತ್ತಾ, ಇರಾನ್ ದೇಶಕ್ಕೆ ಖಡಕ್ ಎಚ್ಚರಿಕೆ ನೀಡುವ ಜೊತೆಗೆ, ಮಾತುಕತೆಯ ಮೂಲಕ ಒಪ್ಪಂದ ಮಾಡಿಕೊಳ್ಳುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.
ವಿಶ್ವಸಂಸ್ಥೆಯ ಸಭೆಯಲ್ಲಿ ಪ್ರತಿನಿಧಿಗಳನ್ನು ಸ್ವಾಗತಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಅಮೆರಿಕದ ತಾಕತ್ತು ಏನೆಂಬುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಮೆರಿಕ ಮರಳಿದೆ. ನಮ್ಮ ದೇಶವು ಹಿಂದೆಂದಿಗಿಂತಲೂ ಇಂದು ಹೆಚ್ಚು ಬಲಶಾಲಿಯಾಗಿದೆ. ನವೀಕೃತ ಶಕ್ತಿ ಮತ್ತು ಅಪಾರ ಸಾಮರ್ಥ್ಯದೊಂದಿಗೆ, ಅಮೆರಿಕ ತನ್ನ ಸಂಪತ್ತು, ಬಲ, ಉತ್ಸಾಹ ಹಾಗೂ ವೇಗದ ಮೂಲಕ ಜಗತ್ತನ್ನು ಮುನ್ನಡೆಸಿಕೊಂಡು ಹೋಗುತ್ತಿದೆ ಎಂದು ಟ್ರಂಪ್ ಎದೆಎತ್ತಿ ಘೋಷಿಸಿದ್ದಾರೆ.
ಅಮೆರಿಕದ ಸೇನಾ ಬಲವನ್ನು ಹೆಚ್ಚಿಸಲು ತಮ್ಮ ಸರಕಾರ ಮಾಡುತ್ತಿರುವ ಖರ್ಚಿನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಟ್ರಂಪ್, ಕಳೆದ 12 ತಿಂಗಳುಗಳಲ್ಲಿ ಇತಿಹಾಸದಲ್ಲೇ ಕಾಣದಷ್ಟು ಹಣವನ್ನು ಮಿಲಿಟರಿಗಾಗಿ ಸುರಿಯಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಅಮೆರಿಕ ತನ್ನ ಮಿಲಿಟರಿಗಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಿದೆ. ಈ ಬಾರಿ ನಮ್ಮ ಮಿಲಿಟರಿ ವೆಚ್ಚ ಬರಾಬ್ಬರಿ 1.5 ಟ್ರಿಲಿಯನ್ ಡಾಲರ್ ಮುಟ್ಟಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಅಮೆರಿಕದ ಸೇನಾ ಪ್ರಾಬಲ್ಯ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ.
ಟ್ರಂಪ್ ಭಾಷಣದ ಮುಖ್ಯ ಕೇಂದ್ರಬಿಂದುವಾಗಿದ್ದ ಇರಾನ್ ದೇಶದ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷ, ಟೆಹ್ರಾನ್ ಜಗತ್ತಿಗೆ ಮತ್ತು ಮಧ್ಯಪ್ರಾಚ್ಯಕ್ಕೆ ಒಡ್ಡುತ್ತಿರುವ ಬೆದರಿಕೆಯನ್ನು ಅಮೆರಿಕ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.
ಬಾಬಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಮರೆಯಲ್ಲಿ ಇರಾನ್ ಪರಮಾಣು ಬಾಂಬ್ ತಯಾರಿಸಲು ನಡೆಸಿದ ಪ್ರಯತ್ನಗಳನ್ನು ಅಮೆರಿಕ ಯಶಸ್ವಿಯಾಗಿ ತಡೆಗಟ್ಟಿದೆ ಎಂದು ತಿಳಿಸಿದ ಟ್ರಂಪ್, ಒಂದು ವೇಳೆ ಇರಾನ್ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರೆ, ಜಗತ್ತಿನಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿತ್ತು ಎಂದಿದ್ದಾರೆ.
ಇರಾನ್ ವಿಚಾರದಲ್ಲಿ ತಾವು ಬಹಳ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಸಂದರ್ಭ ಎದುರಾಗಿದೆ ಎಂದು ಹೇಳುತ್ತಾ ಟ್ರಂಪ್ ರೋಚಕ ಹೇಳಿಕೆಯೊಂದನ್ನು ನೀಡಿದ್ದಾರೆ. ನಾನು ಇಸ್ಲಾಮಿಕ್ ಗಣರಾಜ್ಯವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲೇ? ಅಥವಾ ಇರಾನ್‌ನೊಂದಿಗೆ ಒಪ್ಪಂದ ಮಾಡಿಕೊಂಡು, ಅವರು ತಮ್ಮ ದೇಶವನ್ನು ಪುನರ್ನಿರ್ಮಿಸಲು ಹಾಗೂ ಜಗತ್ತಿನ ಅತ್ಯುತ್ತಮ ದೇಶವನ್ನಾಗಿ ರೂಪಿಸಲು ಅವಕಾಶ ನೀಡಬೇಕೇ? ಎಂದು ಪ್ರಶ್ನಿಸಿದ್ದಾರೆ.
ಅವರನ್ನು ನರಕಕ್ಕೆ ತಳ್ಳಿದರೆ ಅಲ್ಲಿ ಬದುಕುಳಿಯುವ ಯಾವುದೇ ಅವಕಾಶವಿರುವುದಿಲ್ಲ. ಆದರೆ, ಮುಂಬರುವ ಚುನಾವಣೆಯ ನಂತರ ನಾವು ಇರಾನ್ ಜೊತೆ ಒಂದು ಉತ್ತಮ ಒಪ್ಪಂದಕ್ಕೆ ಬರಬಹುದು ಎಂಬ ಗಟ್ಟಿ ನಂಬಿಕೆ ನನಗಿದೆ ಎಂದು ಟ್ರಂಪ್ ಹೇಳುವ ಮೂಲಕ, ಒಂದು ಕಡೆ ಕಠಿಣ ಕ್ರಮದ ಎಚ್ಚರಿಕೆ ನೀಡುತ್ತಲೇ ಮತ್ತೊಂದು ಕಡೆ ಶಾಂತಿ ಮಾತುಕತೆಯ ಕಿಟಿಕಿಯನ್ನು ತೆರೆದಿಟ್ಟಿದ್ದಾರೆ.
ಟ್ರಂಪ್ ಅವರ ಈ ಬಿರುಸಿನ ಭಾಷಣವು ಈಗ ಜಾಗತಿಕ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ-ಇರಾನ್ ಸಂಬಂಧ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್).