ಅಮೆರಿಕದಲ್ಲಿ ಮಕಾಡೆ ಮಲಗಿದ ಟ್ರಂಪ್ ಪಡೆ: ಭಾರತೀಯ ಮತದಾರರು ತಿರುಗಿಬಿದ್ದಿದ್ದೇಕೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್! US Elections

Major setback for Trump's party in US midterm elections
ಯುಎಸ್ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಪಕ್ಷಕ್ಕೆ ಭಾರಿ ಮುಖಭಂಗ
Published on: 

ವಾಷಿಂಗ್ಟನ್​: ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಾರ್ಟಿಗೆ ಭಾರಿ ಮುಖಭಂಗವಾಗಿದೆ. ಈ ಚುನಾವಣೆಯಲ್ಲಿ, ಭಾರತೀಯ-ಅಮೆರಿಕನ್ ಸಮುದಾಯದ ವೋಟಿಂಗ್ ಪ್ಯಾಟರ್ನ್ ಇಡೀ ವಿಶ್ವದ ಗಮನ ಸೆಳೆಯುತ್ತಿದೆ.

ಟ್ರಂಪ್ ಅವರ ಕಠಿಣ ವಲಸೆ ನೀತಿ, H-1B ವೀಸಾ ಮೇಲಿನ ನಿರ್ಬಂಧಗಳು ಮತ್ತು ಭಾರತದ ವಿರುದ್ಧದ ವ್ಯಾಪಾರ ನೀತಿಗಳು ಈ ಚುನಾವಣೆಯಲ್ಲಿ ರಿಪಬ್ಲಿಕನ್ನರಿಗೆ ತೀವ್ರ ಮುಳುವಾಗಿ ಪರಿಣಮಿಸಿವೆ. ಭಾರತೀಯ ಮೂಲದ ಮತದಾರರು ರಿಪಬ್ಲಿಕನ್ ಪಕ್ಷಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದು, ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಜೈ ಎಂದಿದ್ದಾರೆ.

ಡೆಮಾಕ್ರಟ್‌ಗಳ ಕ್ಲೀನ್ ಸ್ವೀಪ್!

ಯುಎಸ್ ಕಾಂಗ್ರೆಸ್ ಚುನಾವಣೆಯಲ್ಲಿ ಭಾರತೀಯ ಮೂಲದ ಡೆಮಾಕ್ರಟ್‌ಗಳು ಅದ್ಭುತ ಜಯಭೇರಿ ಬಾರಿಸಿದ್ದಾರೆ. ಕ್ಯಾಲಿಫೋರ್ನಿಯಾದಿಂದ ಪ್ರಭಾವಿ ನಾಯಕ ರೋ ಖನ್ನಾ ತಮ್ಮ ಪ್ರತಿಸ್ಪರ್ಧಿ ರಿತೇಶ್ ಟಂಡನ್ ಅವರನ್ನು ಮಣಿಸಿ ಭರ್ಜರಿ ಜಯ ಸಾಧಿಸಿದರೆ, ವಾಷಿಂಗ್ಟನ್‌ನಲ್ಲಿ ಪ್ರಮೀಳಾ ಜಯಪಾಲ್ ರಿಪಬ್ಲಿಕನ್ ಸ್ಪರ್ಧಿ ನೀರವ್ ಶೇಟ್​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರು. ಅಮಿ ಬೆರಾ ಕ್ಯಾಲಿಫೋರ್ನಿಯಾದಿಂದ ದಾಖಲೆಯ ಎಂಟನೇ ಬಾರಿಗೆ ಆಯ್ಕೆಯಾಗಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.

ಇನ್ನು ವರ್ಜೀನಿಯಾದಲ್ಲಿ ಸುಹಾಸ್ ಸುಬ್ರಮಣ್ಯಂ ಮತ್ತೆ ವಿಜಯಪತಾಕೆ ಹಾರಿಸಿದರೆ, ಫ್ಲೋರಿಡಾದಲ್ಲಿ ಪಿಯಾ ದಾಂಡಿಯಾ ಹಾಗೂ ಅರಿಜೋನಾದಲ್ಲಿ ಅಮಿಶ್ ಶಾ ರೋಚಕ ಗೆಲುವು ದಾಖಲಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ, ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಆಗಿ ಅರುಣಾ ಮಿಲ್ಲರ್ ಮತ್ತೆ ಆಯ್ಕೆಯಾಗಿ ರಾಜ್ಯಮಟ್ಟದಲ್ಲೂ ಭಾರತೀಯರ ಶಕ್ತಿ ಪ್ರದರ್ಶಿಸಿದ್ದಾರೆ. ವಿಸ್ಕಾನ್ಸಿನ್‌ನಲ್ಲಿ ಅಟಾರ್ನಿ ಜನರಲ್ ಜೋಶ್ ಕೌಲ್ ಕೂಡ ಭರ್ಜರಿ ಜಯ ಕಂಡಿದ್ದಾರೆ. ಖನ್ನಾ ಮತ್ತು ಜಯಪಾಲ್ ಇಬ್ಬರೂ ಭಾರತೀಯ ಮೂಲದ ರಿಪಬ್ಲಿಕನ್ ಅಭ್ಯರ್ಥಿಗಳನ್ನೇ ಮಣಿಸಿದ್ದು ಈ ಚುನಾವಣೆಯ ವಿಶೇಷವಾಗಿತ್ತು.

Also Read
ಚುನಾವಣೆಯಲ್ಲಿ ಸೋತು ಸುಣ್ಣಾದ ರಿಪಬ್ಲಿಕನ್ಸ್​​​​: ‘ಬ್ಯಾಲೆಟ್‌ನಲ್ಲಿ ನನ್ನ ಹೆಸರಿದ್ದರೆ ಗೆಲುವು ನಮ್ಮದಾಗಿತ್ತು’; ಟ್ರಂಪ್​ ವಿಚಿತ್ರ ಸಮರ್ಥನೆ! Donald Trump
Major setback for Trump's party in US midterm elections

ವಿವೇಕ್ ರಾಮಸ್ವಾಮಿಗೆ ಭಾರೀ ಆಘಾತ!

ಇನ್ನೊಂದೆಡೆ, ಟ್ರಂಪ್ ಬೆಂಬಲಿತ ಸ್ಟಾರ್ ನಾಯಕ ಮತ್ತು ಮಾಜಿ ಅಧ್ಯಕ್ಷೀಯ ಆಕಾಂಕ್ಷಿ ವಿವೇಕ್ ರಾಮಸ್ವಾಮಿಗೆ ತೀವ್ರ ನಿರಾಸೆಯಾಗಿದೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ತವರು ರಾಜ್ಯವಾದ ಓಹಿಯೋದಲ್ಲಿ ನಡೆದ ಹೈ-ವೋಲ್ಟೇಜ್ ಗವರ್ನರ್ ಚುನಾವಣೆಯಲ್ಲಿ ರಾಮಸ್ವಾಮಿ, ಡೆಮಾಕ್ರಟಿಕ್ ಪಕ್ಷದ ಡಾ. ಆಮಿ ಆಕ್ಟನ್ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದಾರೆ.

ನ್ಯೂಯಾರ್ಕ್ ಅಟಾರ್ನಿ ಜನರಲ್ ರೇಸ್‌ನಲ್ಲಿದ್ದ ರಿಪಬ್ಲಿಕನ್ ಸರಿತಾ ಕೋಮತಿರೆಡ್ಡಿ, ನಾರ್ತ್ ಕ್ಯಾರೊಲಿನಾದಲ್ಲಿ ಮಹೇಶ್ ಮ್ಯಾಕ್ಸ್ ಗನೋರ್ಕರ್ ಸೇರಿದಂತೆ ಪ್ರಮುಖ ಭಾರತೀಯ-ಅಮೆರಿಕನ್ ರಿಪಬ್ಲಿಕನ್ ಮುಖಂಡರೆಲ್ಲರೂ ಸೋಲಿನ ಕಹಿ ಅನುಭವಿಸಿದ್ದಾರೆ.

ಟ್ರಂಪ್ ನೀತಿಗಳಿಗೆ ಭಾರತೀಯರ ತಿರುಗೇಟು?

ರಿಪಬ್ಲಿಕನ್ನರ ಈ ಹೀನಾಯ ಸೋಲಿಗೆ ಕಾರಣವೇನು? ಎಂಬ ಪ್ರಶ್ನೆಗೆ ರಾಜಕೀಯ ಪಂಡಿತರ ಪ್ರಕಾರ, ಟ್ರಂಪ್ ಅವರ ಕಠಿಣ ಧೋರಣೆಗಳೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳುತ್ತಿದ್ದಾರೆ.

H-1B ವೀಸಾ ಮೇಲಿನ ನಿರ್ಬಂಧ: ಅಮೆರಿಕದ ಟೆಕ್ ಜಗತ್ತಿನಲ್ಲಿ ಭಾರತೀಯ ಪ್ರತಿಭೆಗಳೇ ಮೇಲುಗೈ ಸಾಧಿಸಿದ್ದಾರೆ. ಆದರೆ ಹೊಸ H-1B ಅರ್ಜಿಗಳಿಗೆ ಬರೋಬ್ಬರಿ 100,000 ಡಾಲರ್​ ಶುಲ್ಕದ ಪ್ರಸ್ತಾಪ, ಕಠಿಣ ವೇತನ ಷರತ್ತುಗಳು ಮತ್ತು ಸೋಷಿಯಲ್ ಮೀಡಿಯಾ ಸ್ಕ್ರೀನಿಂಗ್​ಗೆ ಭಾರತೀಯ ಟೆಕ್ಕಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು.

ಗ್ರೀನ್ ಕಾರ್ಡ್ ಆತಂಕ: ದಶಕಗಳಿಂದ ಕಾಯುತ್ತಿರುವ ಗ್ರೀನ್ ಕಾರ್ಡ್ ಪ್ರಕ್ರಿಯೆ ಮತ್ತು ವೀಸಾ ನವೀಕರಣದ ಅನಿಶ್ಚಿತತೆ ಭಾರತೀಯ ಕುಟುಂಬಗಳನ್ನು ಕಂಗಾಲು ಮಾಡಿತ್ತು.

ಭಾರತದ ಮೇಲಿನ ಸುಂಕದ ಸಮರ: ಭಾರತದ ವಿರುದ್ಧ ಟ್ರಂಪ್ ಅನುಸರಿಸಿದ ಕಠಿಣ ವ್ಯಾಪಾರ ಹಾಗೂ ಸುಂಕ ನೀತಿಗಳು ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಲ್ಲಿ ತೀವ್ರ ಅಸಮಾಧಾನ ತಂದಿತ್ತು.

ತಮ್ಮ ಹಿತಾಸಕ್ತಿ, ವೃತ್ತಿಜೀವನ ಮತ್ತು ತಾಯ್ನಾಡಿನ ಗೌರವಕ್ಕೆ ಧಕ್ಕೆ ತರುವ ನೀತಿಗಳನ್ನು ಭಾರತೀಯ-ಅಮೆರಿಕನ್ನರು ತಿರಸ್ಕರಿಸಿದ್ದಾರೆ ಎಂಬುದಕ್ಕೆ ಈ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ. ಟ್ರಂಪ್ ಅವರ ಆಕರ್ಷಣೆ ಭಾರತೀಯ ವಲಯದಲ್ಲಿ ಕುಸಿದಿದೆಯೇ ಎಂಬ ಚರ್ಚೆ ಈಗ ವಾಷಿಂಗ್ಟನ್‌ನಿಂದ ಹಿಡಿದು ಭಾರತದವರೆಗೆ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ, (ಎಜೆನ್ಸೀಸ್​).