ಟ್ರಂಪ್​ಗೆ ಹಿನ್ನಡೆ, ಮಾರುಕಟ್ಟೆ ಮುನ್ನಡೆ! ಅಲ್ಲಿ ತಲೆಬಾಗಿದ ಆನೆ, ಇಲ್ಲಿ ಮುನ್ನುಗ್ಗಿದ ಗೂಳಿ

ಟ್ರಂಪ್​ಗೆ ಹಿನ್ನಡೆ, ಮಾರುಕಟ್ಟೆ ಮುನ್ನಡೆ! ಅಲ್ಲಿ ತಲೆಬಾಗಿದ ಆನೆ, ಇಲ್ಲಿ ಮುನ್ನುಗ್ಗಿದ ಗೂಳಿ
Published on: 

| ದೀಪಕ ತಲವಾಯಿ, ಹುಬ್ಬಳ್ಳಿ

ಕಳೆದ ಕೆಲ ತಿಂಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕವಿದಿದ್ದ ಕಾಮೋಡ ಒಂದೇ ವಾರದಲ್ಲಿ ಕರಗಿ ಹೋಗಿದೆ. ದೀಪಾವಳಿ ಸಂಭ್ರಮದ ಬೆನ್ನಲ್ಲೇ ಮಾರುಕಟ್ಟೆ ಹೂಡಿಕೆದಾರರ ಕಣ್ಣಲ್ಲಿ ಬೆಳಕು ಮೂಡಿದೆ. ವಿದೇಶಿ ಬಂಡವಾಳದ ನಿರಂತರ ಹಿಂಪಡೆಯುವಿಕೆ, ಜಾಗತಿಕ ಭೌಗೋಳಿಕ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಳಿತದಿಂದ ಕಂಗೆಟ್ಟಿದ್ದ ದಲಾಲ್ ಸ್ಟ್ರೀಟ್ ವಾರದ ಕೊನೆಯ ಟ್ರೇಡಿಂಗ್ ಅವಧಿ ಮುಗಿಯುತ್ತಿದ್ದಂತೆ ಸಂಪೂರ್ಣ ಸಂಭ್ರಮದ ವಾತಾವರಣಕ್ಕೆ ತಿರುಗಿದೆ.

ಶುಕ್ರವಾರ ಸಂಜೆ ವಹಿವಾಟು ಮುಕ್ತಾಯಗೊಳ್ಳುತ್ತಿದ್ದಂತೆ ಹೂಡಿಕೆದಾರರನ್ನು ಚಿಂತೆಗೀಡು ಮಾಡಿದ್ದ ಕೆಂಪು ಸಮುದ್ರ ಸಂಪೂರ್ಣವಾಗಿ ಹಸಿರಾಗಿ ಬದಲಾಗಿತ್ತು. ಸೆನ್ಸೆಕ್ಸ್ 81,000 ಅಂಕಗಳ ಗಡಿ ದಾಟಿದರೆ, ನಿಫ್ಟಿ 50 ಅತ್ಯಂತ ಸುಲಭವಾಗಿ 25,000 ಅಂಕಗಳ ಮೇಲೇರಿತು. ಕೇವಲ ಐದು ಟ್ರೇಡಿಂಗ್ ದಿನಗಳಲ್ಲಿ, ಭಾರತೀಯ ಷೇರು ಮಾರುಕಟ್ಟೆಯು ಈ ವರ್ಷದ ಅತ್ಯಂತ ನಿರ್ಣಾಯಕ ವಾರದ ಜಿಗಿತ ದಾಖಲಿಸಿದ್ದು, ಹೂಡಿಕೆದಾರರ ಸಂಪತ್ತಿಗೆ ಕೋಟ್ಯಂತರ ರೂಪಾಯಿಗಳನ್ನು ಸೇರಿಸಿದೆ. ಪ್ರಮುಖವಾಗಿ ಬುಧವಾರ ಮತ್ತು ಗುರುವಾರ ಎರಡೇ ದಿನಗಳಲ್ಲಿ 21,085 ಕೋಟಿ ರೂ. ನಿವ್ವಳ ಬಂಡವಾಳ ಹರಿದು ಬಂದಿರುವುದು ಮಾರುಕಟ್ಟೆಗೆ ಬಲವಾದ ಚೈತನ್ಯ ತುಂಬಿದೆ.

ಈ ದಿಢೀರ್ ಜಿಗಿತಕ್ಕೆ ಬದಲಾದ ಭೌಗೋಳಿಕ ರಾಜಕೀಯ, ಆರ್ಥಿಕ ಸಮಾಧಾನ ಮತ್ತು ಬೃಹತ್ ಸಾಂಸ್ಥಿಕ ಬಂಡವಾಳ ಹರಿವು ಒಟ್ಟಾಗಿ ಸೇರಿದ್ದು ಕಾರಣವಾಗಿತ್ತು. ಭಾರತ ಸೇರಿ ಜಾಗತಿಕ ಮಾರುಕಟ್ಟೆಗಳಿಗೆ ತಲೆನೋವಾಗಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಂತರ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಂತೆ ಭಾರತೀಯ ಮಾರುಕಟ್ಟೆ ಪುಟಿದೆದ್ದಿದೆ. ಡೆಮಾಕ್ರಟಿಕ್ ಪಕ್ಷದ ಗೆಲುವಿನೊಂದಿಗೆ ಅಧಿಕಾರದ ಪ್ರಮುಖ ಬದಲಾವಣೆ ಖಚಿತವಾಗುತ್ತಿದ್ದಂತೆ, ಜಾಗತಿಕ ಅನಿಶ್ಚಿತತೆ ತಣ್ಣಗಾಗಿದೆ. ಇದರೊಂದಿಗೆ ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಉದ್ವಿಗ್ನತೆಯೂ ಮಾರುಕಟ್ಟೆಯ ಹಿನ್ನಡೆಗೆ ಕಾರಣವಾಗಿದೆ.

ಇದೀಗ ಅಮೆರಿಕ ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ವಾಣಿಜ್ಯ ಸಂಘರ್ಷಗಳನ್ನು ಬಗೆಹರಿಸಲು ಮುಂದಾಗಬಹುದು ಎನ್ನುವ ಆಶಾಭಾವ ಗೂಳಿಯ ನಾಗಾಲೋಟಕ್ಕೆ ಕಾರಣವಾಗಿದೆ. ಭೌಗೋಳಿಕ ರಾಜಕೀಯ ಅಪಾಯ ಕಡಿಮೆ ಯಾಗುವ ಲಕ್ಷಣ ಕಂಡಿದ್ದರಿಂದ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಕುಸಿದಿದೆ. ಇದರಿಂದ ಭಾರತದ ಆರ್ಥಿಕತೆಗೆ ಉಂಟಾಗಿದ್ದ ತಲೆ ನೋವು ಕಡಿಮೆ ಆದಂತಾಗಿದೆ.

ಎಫ್​ಐಐಗಳಿಂದ ಹೂಡಿಕೆ

ನವೆಂಬರ್ 6

  • ಒಟ್ಟು ಖರೀದಿ - 30445.63 ಕೋಟಿ ರೂ.

  • ಒಟ್ಟು ಮಾರಾಟ - 16705.81 ಕೋಟಿ ರೂ.

  • ನಿವ್ವಳ ಹೂಡಿಕೆ -13749.82 ಕೋಟಿ ರೂ.

ನವೆಂಬರ್ 5

  • ಒಟ್ಟು ಖರೀದಿ - 29,886.70 ಕೋಟಿ ರೂ.

  • ಒಟ್ಟು ಮಾರಾಟ - 16,084.87 ಕೋಟಿ ರೂ.

  • ನಿವ್ವಳ ಹೂಡಿಕೆ - 13,801.83 ಕೋಟಿ ರೂ.

ನವೆಂಬರ್ 4

  • ಒಟ್ಟು ಖರೀದಿ - 21,60747.38 ಕೋಟಿ ರೂ.

  • ಒಟ್ಟು ಮಾರಾಟ - 14,323.35 ಕೋಟಿ ರೂ.

  • ನಿವ್ವಳ ಹೂಡಿಕೆ - 7284.02 ಕೋಟಿ ರೂ.

ಮುಹೂರ್ತದ ಗೆಲುವಿನ ಸರಣಿಗೆ ಬ್ರೇಕ್!

ಹಿಂದೂ ಸಂಪ್ರದಾಯದಂತೆ ದೀಪಾವಳಿಯಂದು ಹೊಸ ಲೆಕ್ಕಪತ್ರ ಆರಂಭಿಸಲಾಗುತ್ತದೆ. ಹೀಗಾಗಿ ಪ್ರತಿವರ್ಷ ದೀಪಾವಳಿಗೆ ಮುಹೂರ್ತ ಟ್ರೇಡಿಂಗ್ ನಡೆಸಲಾಗುತ್ತದೆ. ಭಾನುವಾರ ಮಧ್ಯಾಹ್ನ 2.20ರಿಂದ 3.30ರವರೆಗೆ ಷೇರು ಮಾರುಕಟ್ಟೆ ಕಾರ್ಯನಿರ್ವಹಿಸಿತು. ಪ್ರಮುಖ ಸೂಚ್ಯಂಕಗಳು ಆರಂಭದಲ್ಲಿ ಏರಿಕೆ ದಾಖಲಿಸಿದರೂ ಅಂತ್ಯಕ್ಕೆ ಲಾಭ ಕಳೆದುಕೊಂಡು ಅಲ್ಪ ಪ್ರಮಾಣದ ಇಳಿಕೆಯೊಂದಿಗೆ ಮುಕ್ತಾಯಗೊಂಡವು. ಇದರಿಂದ ಪ್ರಮುಖ ಸೂಚ್ಯಂಕಗಳ 8 ವರ್ಷಗಳ ಮುಹೂರ್ತ ವಹಿವಾಟಿನ ಗೆಲುವಿನ ಸರಣಿಗೆ ತಡೆ ಬಿದ್ದಂತಾಯಿತು.

ಸೆನ್ಸೆಕ್ಸ್ 28.62 ಅಂಕ ಕುಸಿದು 80,999.40 ಕ್ಕೆ ಮುಕ್ತಾಯಗೊಂಡಿತು. ನಿಫ್ಟಿ 43.95 ಅಂಕ ಇಳಿಕೆಯಾಗಿ 24,986.40ಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 270ಕ್ಕೂ ಹೆಚ್ಚು ಅಂಕಗಳೊಂದಿಗೆ ಏರಿಕೆ ಕಂಡರೆ, ನಿಫ್ಟಿ 25,050ರಿಂದ 25,100ರವರೆಗೆ ವಹಿವಾಟು ನಡೆಸಿತು. ಆದರೆ, ಕೊನೆಯಲ್ಲಿ ಹೂಡಿಕೆದಾರರು ಲಾಭವನ್ನು ಬುಕ್ ಮಾಡಿದ್ದರಿಂದ ಇಳಿಕೆ ಕಂಡುಬಂತು. ಪ್ರಮುಖ ಸೂಚ್ಯಂಕಗಳಲ್ಲಿ ಅಲ್ಪ ಇಳಿಕೆ ಕಂಡುಬಂದರೂ, ಒಟ್ಟಾರೆ ಮಾರುಕಟ್ಟೆ ಸಕಾರಾತ್ಮಕವಾಗಿತ್ತು. ಕುಸಿದ ಷೇರುಗಳಿಗಿಂತ (913) ಏರಿಕೆ ಕಂಡ ಷೇರುಗಳ ಸಂಖ್ಯೆ (3,136) ದೊಡ್ಡದಿರುವುದು ಗಮನಾರ್ಹ.

ವಿದೇಶಿ ಹೂಡಿಕೆಯ ಸುನಾಮಿ

ಹಲವು ತಿಂಗಳುಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) ಮಾರುಕಟ್ಟೆ ಗಳಿಂದ ಸತತವಾಗಿ ಹಣ ಹಿಂಪಡೆಯುತ್ತಿದ್ದರು. ಆದರೆ ಈ ವಾರ, ಆ ಚಿತ್ರಣ ಸಂಪೂರ್ಣ ಬದಲಾಯಿತು. ಜಾಗತಿಕ ಟೆಕ್ ವಲಯದ ಏರಿಳಿತಗಳ ನಡುವೆಯೂ ಭಾರತದ ಬಲವಾದ ಆರ್ಥಿಕ ಸ್ಥಿರತೆಯನ್ನು ಗುರುತಿಸಿದ ಜಾಗತಿಕ ಫಂಡ್​ಗಳು ಭಾರತಕ್ಕೆ ಮರಳಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಗದು ಮಾರುಕಟ್ಟೆಗೆ ಹತ್ತಾರು ಸಾವಿರ ಕೋಟಿ ರೂ. ಹರಿಸಿದರು. ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ರಿಲಯನ್ಸ್​ನಂತಹ ಇಂಧನ ದೈತ್ಯ ಷೇರುಗಳಲ್ಲಿ ಶಾರ್ಟ್-ಕವರಿಂಗ್ ರ‍್ಯಾಲಿ ಕಂಡುಬಂದು ದಿನದಿಂದ ದಿನಕ್ಕೆ ಸೂಚ್ಯಂಕಗಳನ್ನು ಎತ್ತರಕ್ಕೆ ಕೊಂಡೊಯ್ದವು. ಅಲ್ಲದೆ, ದೇಶೀಯ ನೀತಿಗಳಲ್ಲಿ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆ ಪರಿಶೀಲನೆಯ ಕುರಿತು ಕೇಳಿಬರುತ್ತಿರುವ ಮಾತುಕತೆಗಳು, ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ದೀರ್ಘಾವಧಿಯ ಹೂಡಿಕೆ ಮಾಡಲು ಹೆಚ್ಚುವರಿ ಪ್ರೋತ್ಸಾಹ ನೀಡಿದವು.

ಹಬ್ಬದ ಉತ್ಸಾಹ- ಹೆಚ್ಚಿದ ಖರೀದಿ

ಸಾಂಪ್ರದಾಯಿಕವಾಗಿ ಹೊಸ ಹಣಕಾಸು ವರ್ಷದ ಆರಂಭದ ಸಮಯವಾಗಿರುವುದರಿಂದ, ಹೂಡಿಕೆದಾರರು ದೀರ್ಘಾವಧಿಯ ಪೋರ್ಟ್​ಫೋಲಿಯೋ ನಿರ್ವಿುಸಲು ಮಾರುಕಟ್ಟೆಗೆ ಬಂದರು. ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್(ಎಸ್​ಐಪಿ)ಗಳ ಮೂಲಕ ರಿಟೇಲ್ ಹೂಡಿಕೆ ಹರಿವು ಗಟ್ಟಿಯಾಗಿ ನಿಂತು ಉತ್ತಮ ಬೆಂಬಲ ನೀಡಿದರೆ, ದೇಶೀಯ ಸಂಸ್ಥೆಗಳೂ ಹಬ್ಬದ ಖರೀದಿಯಲ್ಲಿ ಜೊತೆಯಾದವು. ಆಟೋಮೊಬೈಲ್, ಗ್ರಾಹಕ ಬಳಕೆ ವಸ್ತುಗಳು, ರಿಯಲ್ ಎಸ್ಟೇಟ್ ಮತ್ತು ಬ್ಯಾಂಕಿಂಗ್ ಷೇರುಗಳು ಟ್ರೇಡಿಂಗ್ ಡ್ಯಾಶ್​ಬೋರ್ಡ್​ಗಳಲ್ಲಿ ಹಸಿರು ಬಣ್ಣದಲ್ಲಿ ಹೊಳೆಯುತ್ತ ನೆಲಮಟ್ಟದಲ್ಲಿನ ಬಲವಾದ ಹಬ್ಬದ ಬೇಡಿಕೆಯನ್ನು ಪ್ರತಿಬಿಂಬಿಸಿದವು.