ನಮಗೆ ಮಜಾ ಬೇಕಲ್ವಾ? ಖಾರ್ಗ್​ ದ್ವೀಪದ ಮೇಲೆ ಇನ್ನೆರೆಡು ಬಾರಿ ದಾಳಿ! ಭಯ ಹುಟ್ಟಿಸುತ್ತಿದೆ ಟ್ರಂಪ್​ ಮಾತುಗಳು | Trump

ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್​
ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್​
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಮತ್ತು ಇಸ್ರೇಲ್​-ಅಮೆರಿಕ ನಡುವಿನ ಯುದ್ಧ 16ನೇ ದಿನಕ್ಕೆ
  • ಎರಡೂ ರಾಷ್ಟ್ರಗಳ ಸಂಘರ್ಷ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ
  • ಇರಾನ್​ನ ಖಾರ್ಗ್​ ದ್ವೀಪ ಉಡೀಸ್​ಗೆ ಟ್ರಂಪ್​ ಪಣ
ವಾಷಿಂಗ್ಟನ್​: ಪ್ರಸ್ತುತ ಮಧ್ಯಪ್ರಾಚ್ಯ ಉದ್ವಿಗ್ನಗೊಂಡಿದ್ದು, ಇರಾನ್​ ಮತ್ತು ಇಸ್ರೇಲ್​-ಅಮೆರಿಕ ನಡುವಿನ ಯುದ್ಧ ಇದೀಗ 16ನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ರಾಷ್ಟ್ರಗಳ ಮಧ್ಯೆ ಶುರುವಾಗಿರುವ ಸಂಘರ್ಷ ಸದ್ಯಕ್ಕೆ ಅಥವಾ ಮುಂದಿನ 10-20 ದಿನಗಳಲ್ಲಿ ಅಂತ್ಯ ಕಾಣುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದಕ್ಕೆ ಮುಖ್ಯ ಕಾರಣವೇ, ಸರ್ವಾಧಿಕಾರ ತೋರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬೆನ್ನಿಗೆ ನಿಂತಿರುವ ಟ್ರಂಪ್​, ಇರಾನ್ ಸುಪ್ರೀಂ ಲೀಡರ್​ ಖಮೇನಿ ಹತ್ಯೆಗೈಯುವಲ್ಲಿ ಯಶಸ್ವಿಯಾದರು. ಅವರ ಬೆನ್ನಲ್ಲೇ ಇರಾನ್​ ಅನ್ನು ಸಂಪೂರ್ಣ ನಾಶ ಮಾಡುವುದಾಗಿಯೂ ತಿಳಿಸಿರುವುದು ಸದ್ಯ ಇಡೀ ಜಗತ್ತಿಗೆ ದೊಡ್ಡ ಆತಂಕ ಎದುರಾಗಿದೆ. ಮತ್ತೊಂದೆಡೆ, ಅಮೆರಿಕದ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ಪಣತೊಟ್ಟು ನಿಂತಿರುವ ಇರಾನ್​ ಸೇನೆ, ದಾಳಿಗೆ ಪ್ರತಿದಾಳಿ ನಡೆಸುವ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ. ಈ ಹೆಜ್ಜೆಗೆ ಟ್ರಂಪ್​ ತಮ್ಮ ಅಸಲಿ ಆಟದ ಗತ್ತು ತೋರಿಸುತ್ತೀನಿ ಎಂದು ಇದೀಗ ಇರಾನಿನ ತೈಲ ಮೂಲವಾದ ಖಾರ್ಗ್ ದ್ವೀಪದ ಉಡೀಸ್​ಗೆ ಮುಂದಾಗಿದ್ದಾರೆ.
ಈ ಕುರಿತಂತೆ ಶನಿವಾರ (ಮಾ.14) ಮಾತನಾಡಿದ ಅಮೆರಿಕ ಅಧ್ಯಕ್ಷ, ನಮ್ಮ ಪಡೆಗಳು ಇಸ್ಲಾಮಿಕ್ ರಾಷ್ಟ್ರದ ಕಿರೀಟ ರತ್ನದ ಮೇಲೆ ದಾಳಿಗಳನ್ನು ನಡೆಸಿವೆ. ಈಗ ಅದನ್ನು ಡಬಲ್ ಮಾಡುವ ಸಮಯ. ಮುಂದಿನ ದಿನಗಳಲ್ಲಿ ಇನ್ನೂ ಒಂದೆರೆಡು ಬಾರಿ ಖಾರ್ಗ್ ದ್ವೀಪದ ಮೇಲೆ ದಾಳಿ ಮಾಡುವ ಎಲ್ಲ ಸಾಧ್ಯತೆಗಳಿವೆ. ಈ ದಾಳಿಯು ನಮಗೆ ಮಜಾ ಬೇಕಲ್ಲವೇ ಅದಕ್ಕೆ ಎಂದು ಹೇಳಿದ್ದಾರೆ. ಇದನ್ನು ನೋಡಿದರೆ, ಟ್ರಂಪ್​ ಇರಾನ್​ನ್ನು ಭೂಪಟದಿಂದಲೇ ಅಳಿಸಿ ಹಾಕಲು ಸಜ್ಜಾಗಿದ್ದಾರೆ ಎಂಬಂತೆ ಗೋಚರಿಸುತ್ತಿದೆ.
ದೇಶದ ತೈಲ ರಫ್ತುಗಳನ್ನು ಮೇಲ್ವಿಚಾರಣೆ ಮಾಡುವ ಮುಖ್ಯ ಟರ್ಮಿನಲ್ ಇದಾಗಿರುವುದರಿಂದ ಈ ದ್ವೀಪವು ಇರಾನ್‌ನ ತೈಲ ವ್ಯವಸ್ಥೆಗೆ ಬಹುಮುಖ್ಯ ಕೇಂದ್ರವಾಗಿದೆ. ಅತಿ ಮುಖ್ಯವಾಗಿ, ಈ ದ್ವೀಪವು ಇರಾನ್‌ನ ಸುಮಾರು ಶೇ.90ರಷ್ಟು ತೈಲ ಸಾಗಣೆಗೆ ರಫ್ತು ಟರ್ಮಿನಲ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜಲಸಂಧಿಯ ವಾಯುವ್ಯಕ್ಕೆ ಸರಿಸುಮಾರು 483 ಕಿ.ಮೀ ದೂರದಲ್ಲಿದೆ ಎಂಬುದು ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net