ಇಂಥಾ ಜನರು ನಮಗೆ ಬೇಕಿಲ್ಲ! ಇರಾನ್​ ದಾಳಿಯ ಬೆನ್ನಲ್ಲೇ ಯುಕೆ ಪ್ರಧಾನಿಗೆ ಟ್ರಂಪ್​ ಖಡಕ್​ ವಾರ್ನಿಂಗ್​ | Trump

ಯುಕೆ ಪ್ರಧಾನಿ ಸ್ಟಾರ್ಮರ್(ಎಡ), ಅಮೆರಿಕ ಅಧ್ಯಕ್ಚ ಡೊನಾಲ್ಡ್ ಟ್ರಂಪ್​(ಬಲ)
ಯುಕೆ ಪ್ರಧಾನಿ ಸ್ಟಾರ್ಮರ್(ಎಡ), ಅಮೆರಿಕ ಅಧ್ಯಕ್ಚ ಡೊನಾಲ್ಡ್ ಟ್ರಂಪ್​(ಬಲ)
Published on

ಪ್ರಮುಖ ಮುಖ್ಯಾಂಶಗಳು

  • ಫೆ.28ರಂದು ಇರಾನ್​ ಮೇಲೆ ಇಸ್ರೇಲ್​-ಅಮೆರಿಕ ಜಂಟಿಯಾಗಿ ನಡೆಸಿದ ಕ್ಷಿಪಣಿ ದಾಳಿ
  • 9ನೇ ದಿನಕ್ಕೆ ಕಾಲಿಟ್ಟ ಇರಾನ್​ ಮತ್ತು ಇಸ್ರೇಲಿ-ಅಮೆರಿಕ ಯುದ್ಧ
  • ಯುಕೆ ಪ್ರಧಾನಿಗೆ ಟ್ರಂಪ್​ ಮಾತಿ ಚಾಟಿ
ನವದೆಹಲಿ: ಫೆ.28ರಂದು ಇರಾನ್​ ಮೇಲೆ ಇಸ್ರೇಲ್​-ಅಮೆರಿಕ ಜಂಟಿಯಾಗಿ ನಡೆಸಿದ ಕ್ಷಿಪಣಿ ದಾಳಿ ಇದೀಗ ಮಧ್ಯಪ್ರಾಚ್ಯದಲ್ಲಿ ಭಾರೀ ಉದ್ವಿಗ್ನತೆ ಸೃಷ್ಟಿಸಿದೆ. ಕೇವಲ ದುಬೈ, ಕುವೈತ್​, ಬೆಹ್ರೈನ್​ ಮತ್ತು ಇಸ್ಲಾಮಿಕ್​ ರಾಷ್ಟ್ರಗಳ ಮೇಲೆ ಮಾತ್ರವಲ್ಲ, ಭಾರತಕ್ಕೂ ಈ ಯುದ್ಧದ ಬಿಸಿ ತಟ್ಟಿದೆ. ಖಮೇನಿ ಹತ್ಯೆ ಬಳಿಕ ಪ್ರತೀಕಾರದ ದಾಳಿಯನ್ನು ಇನ್ನಷ್ಟು ಪ್ರಬಲವಾಗಿ ಮುಂದುವರಿಸಿರುವ ಇರಾನ್​, ಯುಎಸ್​ನ ಆಪ್ತ ದೇಶಗಳ ಮೇಲೆ ಭೀಕರ ದಾಳಿಗಳನ್ನು ನಡೆಸುತ್ತಿದೆ.

9ನೇ ದಿನಕ್ಕೆ ಕಾಲಿಟ್ಟ ಯುದ್ಧ

ಯುದ್ಧ ಶುರುವಾಗಿ ಇಂದಿಗೆ 9 ದಿನಗಳೇ ಕಳೆದಿವೆ. ಇಷ್ಟಾದರೂ ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ದಾಳಿಗೆ ಪ್ರತಿದಾಳಿಯನ್ನು ನಡೆಸುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ತಮ್ಮ ಸುಪ್ರೀಂ ನಾಯಕರಾಗಿದ್ದ ಖಮೇನಿಯನ್ನು ಕೊಂದ ಯುಎಸ್​ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಜಿದ್ದಿಗೆ ನಿಂತಿರುವ ಇರಾನ್​, ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳ ಮೇಲಿನ ಬಾಂಬ್​ ದಾಳಿಗಳನ್ನು ತೀವ್ರವಾಗಿಸಿದೆ. ಇದರ ಪರಿಣಾಮ, ಯುದ್ಧವು ಶೀಘ್ರದಲ್ಲೇ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುನೈಟೆಡ್​ ಕಿಂಗ್​ಡಮ್​ ಪ್ರಧಾನಿಗಳ ಮೇಲೆ ತೀವ್ರ ಕೋಪಗೊಂಡಿದ್ದಾರೆ.
ಯುಕೆ ಪ್ರಧಾನಿ ಸ್ಟಾರ್ಮರ್ ಟೀಕಿಸಿರುವ ಟ್ರಂಪ್​, ಪರೋಕ್ಷವಾಗಿ ಎಚ್ಚರಿಕೆಯನ್ನು ಕೂಡ ರವಾನಿಸಿದ್ದಾರೆ. ಮಧ್ಯಪ್ರಾಚ್ಯಕ್ಕೆ ವಿಮಾನವಾಹಕ ನೌಕೆಗಳನ್ನು ಕಳುಹಿಸುವ ಬಗ್ಗೆ ಯುಕೆ ಸರ್ಕಾರದ ಅನಿರ್ದಿಷ್ಟ ನಿರ್ಧಾರದ ಬಗ್ಗೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಿನ್ಸ್ ಆಫ್ ವೇಲ್ಸ್ ವಿಮಾನವಾಹಕ ನೌಕೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಬ್ರಿಟಿಷ್ ರಕ್ಷಣಾ ಸಚಿವಾಲಯ ತಿಳಿಸಿದ್ದು, ಮಧ್ಯಪ್ರಾಚ್ಯಕ್ಕೆ ಅದನ್ನು ಕಳುಹಿಸುವ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಬ್ರಿಟಿಷ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಟ್ರಂಪ್​ ಪರೋಕ್ಷ ಎಚ್ಚರಿಕೆ

ಅದೇ ಸಮಯದಲ್ಲಿ, ಯುಕೆ ಪ್ರಧಾನಿ ಸ್ಟಾರ್ಮರ್ ಇತ್ತೀಚೆಗೆ ತಮ್ಮ ಪಡೆಗಳು ಯುಎಸ್-ಇಸ್ರೇಲಿ ಯುದ್ಧದಲ್ಲಿ ನೇರವಾಗಿ ಭಾಗಿಯಾಗುವುದಿಲ್ಲ. ಆದರೆ, ಯುಎಸ್ ಮತ್ತು ಇಸ್ರೇಲ್ ಸ್ವರಕ್ಷಣೆಗಾಗಿ ತಮ್ಮ ಮಿಲಿಟರಿ ನೆಲೆಗಳನ್ನು ಬಳಸಲು ಅನುಮತಿ ನೀಡಲಾಗುವುದು ಎಂದು ಹೇಳಿದರು. ಈ ಮಾತುಗಳನ್ನು ಕೇಳುತ್ತಿದ್ದಂತೆ ಟ್ರಂಪ್​ ಪಿತ್ತ ನೆತ್ತಿಗೇರಿದೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣವಾದ ಟ್ರೂತ್ ಸೋಷಿಯಲ್‌ನಲ್ಲಿ ಈ ಕುರಿತಂತೆ ವಿಶ್ವದ ದೊಡ್ಡಣ್ಣ ಪೋಸ್ಟ್ ಮಾಡಿದ್ದಾರೆ.

ನಮಗೆ ಬೇಕಿಲ್ಲ!

"ಯುಕೆ ಒಂದು ಕಾಲದಲ್ಲಿ ನಮಗೆ ಮಿತ್ರ ರಾಷ್ಟ್ರವಾಗಿತ್ತು. ಅವರು ಎರಡು ವಿಮಾನವಾಹಕ ನೌಕೆಗಳನ್ನು ಪಶ್ಚಿಮ ಏಷ್ಯಾಕ್ಕೆ ಕಳುಹಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಆದರೆ, ಅಮೆರಿಕಕ್ಕೆ ಇನ್ನು ಮುಂದೆ ಅವುಗಳ ಅಗತ್ಯವಿಲ್ಲ. ಈ ನಡೆಯನ್ನು ನಾವು ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಯುದ್ಧ ಗೆದ್ದ ಬಳಿಕ ಕೈಜೋಡಿಸುವ ಜನರು ನಮಗೆ ಬೇಕಿಲ್ಲ" ಎಂದು ಯುಕೆ ಪ್ರಧಾನಿ ಸ್ಟಾರ್ಮರ್‌ಗೆ ಪರೋಕ್ಷವಾಗಿ ಟ್ರಂಪ್​ ಎಚ್ಚರಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net