ಇರಾನ್ ಮೇಲಿನ ದಾಳಿ ತಡೆದ ಟ್ರಂಪ್; ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಕುಸಿತ! ಪೆಟ್ರೋಲ್ ಬೆಲೆ ಏರಿಕೆಗೆ ಬೀಳಲಿದೆಯೇ ಬ್ರೇಕ್? Crude Oil Price Drop

ಇರಾನ್ ಮೇಲಿನ ದಾಳಿ ತಡೆದ ಟ್ರಂಪ್; ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಕುಸಿತ! ಪೆಟ್ರೋಲ್ ಬೆಲೆ ಏರಿಕೆಗೆ ಬೀಳಲಿದೆಯೇ ಬ್ರೇಕ್?
ಇರಾನ್ ಮೇಲಿನ ದಾಳಿ ತಡೆದ ಟ್ರಂಪ್; ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಕುಸಿತ! ಪೆಟ್ರೋಲ್ ಬೆಲೆ ಏರಿಕೆಗೆ ಬೀಳಲಿದೆಯೇ ಬ್ರೇಕ್?
Published on
ನವದೆಹಲಿ: ಕಳೆದ ನಾಲ್ಕು ವಾರಗಳಿಂದ ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿದ್ದ ಇರಾನ್-ಅಮೆರಿಕ ಸಂಘರ್ಷದಲ್ಲಿ ಈಗ ಅನಿರೀಕ್ಷಿತ ತಿರುವು(Crude Oil Price Drop) ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದ ಬೆನ್ನಲ್ಲೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬರೊಬ್ಬರಿ ಶೇ. 13 ರಿಂದ 15 ರಷ್ಟು ಕುಸಿದಿದೆ.

ಬ್ರೆಂಟ್ ಕ್ರೂಡ್ ಬೆಲೆ $100 ಕ್ಕಿಂತ ಕೆಳಕ್ಕೆ!

ಟ್ರಂಪ್ ಅವರ ಈ ನಿರ್ಧಾರವು ಮಾರುಕಟ್ಟೆಯಲ್ಲಿ ಧನಾತ್ಮಕ ಸಂಚಲನ ಮೂಡಿಸಿದೆ. ಹೂಡಿಕೆದಾರರಲ್ಲಿ ಯುದ್ಧದ ಭೀತಿ ತುಸು ಕಡಿಮೆಯಾಗಿದ್ದರಿಂದ, ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 15 ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರಲ್‌ಗೆ $96 ಕ್ಕೆ ತಲುಪಿದೆ. ಮಾರ್ಚ್ 11 ರ ನಂತರ ಮೊದಲ ಬಾರಿಗೆ ತೈಲ ಬೆಲೆ $100 ರ ಗಡಿಗಿಂತ ಕೆಳಕ್ಕೆ ಇಳಿದಿರುವುದು ಗಮನಾರ್ಹ. ಅತ್ತ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯಟ್ ಕೂಡ ಶೇ. 13.5 ರಷ್ಟು ಕುಸಿದು $85.25 ಕ್ಕೆ ಬಂದು ನಿಂತಿದೆ.

ಟ್ರಂಪ್ ನೀಡಿದ ಆ 5 ದಿನಗಳ ಗಡುವು ಏನು?

ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಟ್ರಂಪ್, ಇರಾನ್ ಜೊತೆಗಿನ ಮಾತುಕತೆಗಳು ಪ್ರಗತಿಯಲ್ಲಿದೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಈ ಚರ್ಚೆಗಳು ಸಕಾರಾತ್ಮಕವಾಗಿವೆ. ಹೀಗಾಗಿ, ಮುಂದಿನ 5 ದಿನಗಳ ಕಾಲ ಇರಾನ್‌ನ ವಿದ್ಯುತ್ ಸ್ಥಾವರಗಳು ಅಥವಾ ಇಂಧನ ಮೂಲಸೌಕರ್ಯಗಳ ಮೇಲೆ ಯಾವುದೇ ಮಿಲಿಟರಿ ದಾಳಿ ನಡೆಸದಂತೆ ನಾನು ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ. ಈ ಘೋಷಣೆಯು ಯುದ್ಧ ತಾರಕಕ್ಕೇರುತ್ತದೆ ಎಂಬ ಭೀತಿಯಲ್ಲಿದ್ದ ಜಾಗತಿಕ ಆರ್ಥಿಕತೆಗೆ ದೊಡ್ಡ ರಿಲೀಫ್ ನೀಡಿದೆ.

ಇರಾನ್‌ನ ನಿಗೂಢ ಮೌನ ಮತ್ತು ನಿರಾಕರಣೆ

ಆದರೆ, ಕಥೆಯಲ್ಲಿ ಅತಿದೊಡ್ಡ ಟ್ವಿಸ್ಟ್ ಎಂದರೆ ಇರಾನ್‌ನ ಪ್ರತಿಕ್ರಿಯೆ. ಅಮೆರಿಕದೊಂದಿಗೆ ನಾವು ಯಾವುದೇ ಸಂಧಾನ ನಡೆಸುತ್ತಿಲ್ಲ ಎಂದು ಇರಾನ್ ಸರ್ಕಾರ ಸ್ಪಷ್ಟಪಡಿಸಿದೆ. ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ IRNA ಪ್ರಕಾರ, ಅಮೆರಿಕದ ಜೊತೆ ಯಾವುದೇ ನೇರ ಅಥವಾ ಮಧ್ಯಸ್ಥಿಕೆದಾರರ ಮೂಲಕ ಮಾತುಕತೆ ನಡೆದಿಲ್ಲ. ಇರಾನ್ ನೀಡಿದ ಕಠಿಣ ಎಚ್ಚರಿಕೆಗೆ ಹೆದರಿ ಟ್ರಂಪ್ ದಾಳಿಯನ್ನು ಮುಂದೂಡಿದ್ದಾರೆ ಎಂದು ವರದಿ ಮಾಡಿದೆ. ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಇರಾನ್‌ನ ನಿರ್ಧಾರದಿಂದ ಜಾಗತಿಕ ಇಂಧನ ಪೂರೈಕೆ ಅಸ್ತವ್ಯಸ್ತಗೊಂಡಿರುವುದು ಟ್ರಂಪ್ ಬೆನ್ನಿಗೆ ಬಿದ್ದಿರುವ ದೊಡ್ಡ ಸವಾಲಾಗಿದೆ.

ಭಾರತೀಯ ರೂಪಾಯಿ ಮೇಲೆ ಯುದ್ಧದ ಪ್ರಹಾರ

ಮಧ್ಯಪ್ರಾಚ್ಯದ ಸಂಘರ್ಷ ಏಷ್ಯಾದಲ್ಲಿ ಅತಿ ಹೆಚ್ಚು ಪರಿಣಾಮ ಭಾರತದ ಮೇಲಾಗಿದ್ದು. ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ದಾಖಲೆ ಮಟ್ಟದ ಕುಸಿತ ಕಂಡು 94.01 ಕ್ಕೆ ತಲುಪಿದೆ. ಇದು ಭಾರತದ ಆಮದು ವೆಚ್ಚವನ್ನು ಹೆಚ್ಚಿಸಿದ್ದು, ಹಣದುಬ್ಬರದ ಭೀತಿ ಮೂಡಿಸಿದೆ. ಈಗ ತೈಲ ಬೆಲೆಯಲ್ಲಿ ಕಂಡುಬಂದಿರುವ ಈ ಕುಸಿತವು ರೂಪಾಯಿ ಮೌಲ್ಯ ಸ್ಥಿರಗೊಳ್ಳಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಬ್ರೇಕ್ ಹಾಕಲು ಸಹಕಾರಿಯಾಗಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಮಧ್ಯಪ್ರಾಚ್ಯದ ಈ ಇಲಿ-ಬೆಕ್ಕಿನಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದು ಮುಂದಿನ 5 ದಿನಗಳಲ್ಲಿ ನಿರ್ಧಾರವಾಗಲಿದೆ. ಒಂದು ವೇಳೆ ಸಂಧಾನ ವಿಫಲವಾದರೆ ಮತ್ತೆ ತೈಲ ಬೆಲೆ ಗಗನಕ್ಕೇರುವ ಸಾಧ್ಯತೆ ದಟ್ಟವಾಗಿದೆ.,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net