ಸ್ವಂತ ಸೈನ್ಯಕ್ಕೇ 'ಕಡಲ್ಗಳ್ಳರು' ಎಂದ ಟ್ರಂಪ್! ಸೈನಿಕರ ಬಗ್ಗೆ ಅಮೆರಿಕ ಅಧ್ಯಕ್ಷ ಆಡಿದ 5 ಭಯಾನಕ ಮಾತುಗಳಿವು! Trump Pirates Comment

ಸ್ವಂತ ಸೈನ್ಯಕ್ಕೇ 'ಕಡಲ್ಗಳ್ಳರು' ಎಂದ ಟ್ರಂಪ್! ಸೈನಿಕರ ಬಗ್ಗೆ ಅಮೆರಿಕ ಅಧ್ಯಕ್ಷ ಆಡಿದ 5 ಭಯಾನಕ ಮಾತುಗಳಿವು!
ಸ್ವಂತ ಸೈನ್ಯಕ್ಕೇ 'ಕಡಲ್ಗಳ್ಳರು' ಎಂದ ಟ್ರಂಪ್! ಸೈನಿಕರ ಬಗ್ಗೆ ಅಮೆರಿಕ ಅಧ್ಯಕ್ಷ ಆಡಿದ 5 ಭಯಾನಕ ಮಾತುಗಳಿವು!
Published on
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump Pirates Comment) ಮತ್ತೊಮ್ಮೆ ತಮ್ಮ ಸ್ಫೋಟಕ ಹೇಳಿಕೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ನೌಕಾಪಡೆಯ ಕಾರ್ಯಾಚರಣೆಯನ್ನು ಟೀಕಿಸಿರುವ ಟ್ರಂಪ್​, ಅಮೆರಿಕನ್ ನೌಕಾಪಡೆ ಕಡಲ್ಗಳ್ಳರಂತೆ ವರ್ತಿಸುತ್ತಿದೆ ಎಂದು ಹೇಳುವ ಮೂಲಕ ಸ್ವಂತ ಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೇನಾ ವ್ಯೂಹಗಳು, ಸೈನಿಕರು ಮತ್ತು ಯುದ್ಧದ ಬಗ್ಗೆ ಟ್ರಂಪ್ ನೀಡಿರುವ ಇತ್ತೀಚಿನ ಈ ಆರು ವಿಲಕ್ಷಣ ಹಾಗೂ ವಿವಾದಾತ್ಮಕ ಹೇಳಿಕೆಗಳು ಇಲ್ಲಿವೆ.

1. ಅಮೆರಿಕ ನೌಕಾಪಡೆ ಕಡಲ್ಗಳ್ಳರಂತೆ ವರ್ತಿಸುತ್ತಿದೆ (2026)

ಇರಾನ್ ಸಂಘರ್ಷದ ಭಾಗವಾಗಿ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಹಡಗುಗಳನ್ನು ವಶಪಡಿಸಿಕೊಳ್ಳುತ್ತಿರುವ ಅಮೆರಿಕ ನೌಕಾಪಡೆಯ ಬಗ್ಗೆ ಮಾತನಾಡುತ್ತಾ, ನಮ್ಮ ಪಡೆಗಳು ಕಡಲ್ಗಳ್ಳರಂತೆ ವರ್ತಿಸುತ್ತಿವೆ ಎಂದು ಟ್ರಂಪ್ ಕಿಡಿಕಾರಿದ್ದಾರೆ. ಇಂತಹ ಕಾರ್ಯಾಚರಣೆಗಳು ಲಾಭದಾಯಕ ಎಂದು ಟ್ರಂಪ್​ ವ್ಯಾಖ್ಯಾನಿಸಿರುವುದು ಅಂತಾರಾಷ್ಟ್ರೀಯ ಕಾನೂನು ತಜ್ಞರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸೇನಾ ಕಾರ್ಯಾಚರಣೆಯನ್ನು ಅಸಡ್ಡೆಯಿಂದ ನೋಡಿದಂತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
2. ಅವುಗಳನ್ನು ಮುಳುಗಿಸುವುದೇ ಹೆಚ್ಚು ಮೋಜಿನ ಸಂಗತಿ
ಇರಾನ್‌ನ ಯುದ್ಧನೌಕೆಗಳ ಜೊತೆಗಿನ ಮುಖಾಮುಖಿಯ ಕುರಿತು ಮಾತನಾಡುತ್ತಾ, ಶತ್ರು ಹಡಗುಗಳನ್ನು ವಶಪಡಿಸಿಕೊಳ್ಳುವುದಕ್ಕಿಂತ ಅವುಗಳನ್ನು ಸಮುದ್ರದಲ್ಲಿ ಮುಳುಗಿಸುವುದು ಹೆಚ್ಚು ಮೋಜು ನೀಡುತ್ತದೆ ಎಂದು ಟ್ರಂಪ್ ಹೇಳಿದ್ದರು. ಯುದ್ಧದಂತಹ ಗಂಭೀರ ವಿಷಯದ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಒಬ್ಬ ಅಧ್ಯಕ್ಷರಿಗೆ ಶೋಭಿಸುವುದಿಲ್ಲ ಎಂದು ಟೀಕಾಕಾರರು ವಾಗ್ದಾಳಿ ನಡೆಸಿದ್ದಾರೆ.

3. ಗುಂಡು ಹಾರಿಸಿ ನಾಶಪಡಿಸಿ ಎಂಬ ಆದೇಶ (2020)

2020ರಲ್ಲಿ ಇರಾನ್‌ನ ಸಣ್ಣ ಯುದ್ಧನೌಕೆಗಳು ಅಮೆರಿಕದ ಹಡಗುಗಳಿಗೆ ತೊಂದರೆ ನೀಡಿದರೆ ಅವುಗಳನ್ನು ಶೂಟ್ ಡೌನ್ ಮಾಡಿ ಮತ್ತು ನಾಶಪಡಿಸಿ ಎಂದು ಬಹಿರಂಗವಾಗಿ ಟ್ವೀಟ್ ಮಾಡಿದ್ದರು. ಸಾಮಾನ್ಯವಾಗಿ ಸೇನಾ ಕಾರ್ಯಾಚರಣೆಗಳು ಕಟ್ಟುನಿಟ್ಟಾದ ಶಿಷ್ಟಾಚಾರಗಳನ್ನು ಹೊಂದಿರುತ್ತವೆ. ಆದರೆ ಟ್ರಂಪ್ ಅವರ ಈ ಸಾರ್ವಜನಿಕ ಘೋಷಣೆ ಪೆಂಟಗನ್ ಅಧಿಕಾರಿಗಳನ್ನೂ ಗೊಂದಲಕ್ಕೀಡುಮಾಡಿತ್ತು.
4. ಅಮೆರಿಕದ ಶಸ್ತ್ರಾಸ್ತ್ರಗಳು ಕಳೆದುಹೋಗಿವೆ ಎಂಬ ಒಪ್ಪಿಗೆ
ಯುದ್ಧ ಪೀಡಿತ ಪ್ರದೇಶಗಳಿಗೆ ಅಮೆರಿಕ ಪೂರೈಸುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಲೆಕ್ಕಾಚಾರ ಸಿಗುತ್ತಿಲ್ಲ ಮತ್ತು ಅವು ಕಳೆದುಹೋಗಿವೆ ಎಂದು ಟ್ರಂಪ್ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಇದು ಅಮೆರಿಕದ ಶಸ್ತ್ರಾಸ್ತ್ರ ವರ್ಗಾವಣೆಯ ಜವಾಬ್ದಾರಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಪ್ರಶ್ನೆಗಳನ್ನು ಎತ್ತುವಂತೆ ಮಾಡಿತು.

5. ಹುತಾತ್ಮ ಸೈನಿಕರನ್ನು ‘ಸೋತವರು’ ಎಂದು ಕರೆದ ವಿವಾದ

2018ರ ಫ್ರಾನ್ಸ್ ಭೇಟಿಯ ವೇಳೆ ಯುದ್ಧದಲ್ಲಿ ಮಡಿದ ಅಮೆರಿಕದ ಸೈನಿಕರನ್ನು ಸೋತವರು ಮತ್ತು ಮೂರ್ಖರು ಎಂದು ಟ್ರಂಪ್ ಕರೆದಿದ್ದರು ಎಂಬ ವರದಿ ಭಾರೀ ವಿವಾದ ಸೃಷ್ಟಿಸಿತ್ತು. ಟ್ರಂಪ್ ಇದನ್ನು ನಿರಾಕರಿಸಿದ್ದರೂ, ಯುದ್ಧ ವೀರ ಜಾನ್ ಮೆಕೇನ್ ಬಗ್ಗೆ ಮಾತನಾಡುತ್ತಾ, ಶತ್ರುಗಳಿಗೆ ಸೆರೆಯಾಗದ ಸೈನಿಕರೆಂದರೆ ನನಗೆ ಇಷ್ಟ ಎಂದು ಹೇಳಿ ಮಾಜಿ ಸೈನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು.

6. ಅಮೆರಿಕ ಸೈನ್ಯ ‘ದುರ್ಬಲ’ವಾಗಿದೆ ಎಂಬ ಹೇಳಿಕೆ

ತಮ್ಮ ಆಡಳಿತಕ್ಕೂ ಮುನ್ನ ಅಮೆರಿಕದ ಸೈನ್ಯ ಹಳೆಯದಾಗಿದೆ ಮತ್ತು ದುರ್ಬಲವಾಗಿದೆ ಎಂದು ಟ್ರಂಪ್ ಪದೇಪದೆ ಹೇಳುತ್ತಿದ್ದರು. ಆದರೆ ರಕ್ಷಣಾ ತಜ್ಞರು ಇದನ್ನು ತಳ್ಳಿಹಾಕಿದ್ದು, ಅಮೆರಿಕ ಆಗಲೂ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಶಕ್ತಿಯಾಗಿತ್ತು ಎಂದು ಅಂಕಿಅಂಶಗಳ ಸಮೇತ ಪ್ರತಿಕ್ರಿಯಿಸಿದ್ದರು.

ಪರಿಣಾಮವೇನು..?

ಟ್ರಂಪ್ ಅವರ ಈ ರೀತಿಯ ನೇರ ಮತ್ತು ವಿವಾದಾತ್ಮಕ ಮಾತುಗಳನ್ನು ಅವರ ಬೆಂಬಲಿಗರು ಹಸಿಬಿಸಿ ಸತ್ಯ ಎಂದು ಕೊಂಡಾಡಿದರೆ, ಟೀಕಾಕಾರರು ಇದು ಅಮೆರಿಕದ ಜಾಗತಿಕ ಪ್ರತಿಷ್ಠೆಗೆ ಮತ್ತು ಸೈನಿಕರ ನೈತಿಕ ಸ್ಥೈರ್ಯಕ್ಕೆ ಧಕ್ಕೆ ತರುತ್ತದೆ ಎಂದು ವಾದಿಸುತ್ತಿದ್ದಾರೆ. ಇರಾನ್ ಜೊತೆಗಿನ ಯುದ್ಧದ ಕಾರ್ಮೋಡ ಕವಿದಿರುವ ಈ ಹೊತ್ತಿನಲ್ಲಿ ಅಧ್ಯಕ್ಷರ ಇಂತಹ ಹೇಳಿಕೆಗಳು ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿವೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net