165 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್​! ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟ್ರಂಪ್​...

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​
Published on

ಪ್ರಮುಖ ಮುಖ್ಯಾಂಶಗಳು

  • ಸಂಚಲನ ಮೂಡಿಸಿದ ಅಮೆರಿಕದ ನಿರ್ಧಾರ
  • 165 ವರ್ಷಗಳ ಸಂಪ್ರದಾಯಕ್ಕೆ ಎಳ್ಳು-ನೀರು ಬಿಟ್ಟ ಡೊನಾಲ್ಡ್​ ಟ್ರಂಪ್ ಸರ್ಕಾರ
  • ಹೊಸ ವಿನ್ಯಾಸದ ನೋಟುಗಳಿಗೆ ಟ್ರಂಪ್​ರ ನೇರ ಸಹಿ
ವಾಷಿಂಗ್ಟನ್​: ಪ್ರಸ್ತುತ, ಇರಾನ್​ ವಿರುದ್ಧದ ಯುದ್ಧದಲ್ಲಿ ತೊಡಗಿರುವ ಅಮೆರಿಕ, ತಮ್ಮ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತಿಗೆ ಬದ್ಧವಾಗಿ, ವೈರಿ ರಾಷ್ಟ್ರವನ್ನು ಸಂಪೂರ್ಣವಾಗಿ ನೆಲಸಮ ಮಾಡಲು ಪಣತೊಟ್ಟು ನಿಂತಿದೆ. ಮತ್ತೊಂದೆಡೆ, ಟ್ರಂಪ್ ಆಡಳಿತ 165 ವರ್ಷಗಳ ಹಳೆಯ ಸಂಪ್ರದಾಯವನ್ನು ಇದೀಗ ಮುರಿದು ಹಾಕಿರುವುದು ಸದ್ಯ ಯುಎಸ್​ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ದೇಶದಲ್ಲಿ ಹೊಸ ಡಿಸೈನ್​ನೊಂದಿಗೆ ಚಾಲ್ತಿಗೆ ಬರಲು ಸಜ್ಜಾಗಿರುವ ಯುಎಸ್ ನೋಟುಗಳಿಗೆ ಸಹಿ ಹಾಕಿದ ಮೊದಲ ಅಧ್ಯಕ್ಷರಾಗಿ ಟ್ರಂಪ್​ ಹೊರಹೊಮ್ಮಲಿದ್ದಾರೆ. ಈ ಕುರಿತಾಗಿ ಅಮೆರಿಕ ಖಜಾನೆ ಇಲಾಖೆ ಅಧಿಕೃತವಾಗಿ ಘೋಷಿಸಿದ್ದು, 2026ರ ಜುಲೈ 4ರಂದು ನಡೆಯಲಿರುವ ಅಮೆರಿಕದ ಸ್ವಾತಂತ್ರ್ಯದ 250ನೇ ವಾರ್ಷಿಕೋತ್ಸವದ ಸಂದರ್ಭದ ಹಿನ್ನೆಲೆ ಈ ನಿರ್ಧಾರವನ್ನು ಕೈಗೊಂಡಿದ್ದಾಗಿ ತಿಳಿಸಿದೆ.
ಯುಎಸ್ ಕರೆನ್ಸಿ ನೋಟುಗಳ ಮೇಲೆ ಖಜಾಂಚಿ ಮತ್ತು ಖಜಾನೆ ಕಾರ್ಯದರ್ಶಿಯ ಸಹಿ 1861ರಿಂದ ನಡೆದು ಬಂದ ಹಿಂದಿನ ಸಂಪ್ರದಾಯ. ಆದರೀಗ, ಟ್ರಂಪ್ ಆಡಳಿತವು 165 ವರ್ಷಗಳ ಸಂಪ್ರದಾಯವನ್ನು ಅಂತ್ಯಗೊಳಿಸಿದ್ದಾರೆ. ವರ್ಷಗಳಿಂದ, ಖಜಾಂಚಿ ಮತ್ತು ಖಜಾನೆ ಕಾರ್ಯದರ್ಶಿಯ ಸಹಿಗಳು ಮಾತ್ರ ಯುಎಸ್ ಕರೆನ್ಸಿಯಲ್ಲಿ ಮುದ್ರಣವಾಗುತ್ತಿತ್ತು. ಅದೇ ಇನ್ಮುಂದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯೂ ಇರಲಿದೆ ಎಂದು ಇಲಾಖೆ ಘೋಷಿಸಿದೆ. ಅಮೆರಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರೆನ್ಸಿ ನೋಟುಗಳನ್ನು ಪ್ರಸ್ತುತ ಅಧಿಕಾರದಲ್ಲಿರುವ ಅಧ್ಯಕ್ಷರ ಸಹಿಯೊಂದಿಗೆ ಮುದ್ರಿಸಲಾಗಿದೆ.
ಖಜಾನೆ ಇಲಾಖೆಯ ಹೇಳಿಕೆ ಪ್ರಕಾರ, ಈ ವರ್ಷದ ಕೊನೆಯ ತ್ರೈಮಾಸಿಕದಿಂದ ಆರಂಭವಾಗುವ ನೋಟುಗಳ ಹೊಸ ವಿನ್ಯಾಸದಲ್ಲಿ ಟ್ರಂಪ್ ಅವರ ಸಹಿ ಗೋಚರಿಸಲಿದೆ. ಈ ಬದಲಾವಣೆಯು ಅಮೆರಿಕ ಕರೆನ್ಸಿಗೆ ರಾಷ್ಟ್ರೀಯ ಗುರುತು ಮತ್ತು ನಾಯಕತ್ವದ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಹೊಸ ನೋಟುಗಳನ್ನು ಮುದ್ರಿಸಲು ಸಂಬಂಧಿಸಿದ ತಾಂತ್ರಿಕ ಪ್ರಕ್ರಿಯೆಗಳು ಈಗಾಗಲೇ ಪ್ರಾರಂಭವಾಗಿವೆ ಮತ್ತು ಟ್ರಂಪ್ ಅವರ ಸಹಿಯೊಂದಿಗೆ ಮೊದಲ 100 ಡಾಲರ್​ ನೋಟುಗಳನ್ನು ಇದೇ ಜೂನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net