_1773857430790.webp?w=480&auto=format%2Ccompress&fit=max)
_1773857430790.webp?w=480&auto=format%2Ccompress&fit=max)
ಅತಿಯಾದ ಆತ್ಮವಿಶ್ವಾಸದಲ್ಲಿ ಇರಾನ್ ಮೇಲೆ ಯುದ್ಧ ಸಾರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇರಾನ್ನಿಂದ ಇಂಥ ಪ್ರತಿದಾಳಿ ದಿಗ್ಭ್ರಮೆ ಮೂಡಿಸಿದೆ. ಇದನ್ನು ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ. ಅಲ್ಲದೆ, ಯುದ್ಧದಲ್ಲಿ ಈಗ ಟ್ರಂಪ್ ಏಕಾಂಗಿಯಾಗಿದ್ದು, ನ್ಯಾಟೋ ದೇಶಗಳು, ‘ಇದು ನಮ್ಮ ಹೋರಾಟವಲ್ಲ’ ಎಂದು ಸ್ಪಷ್ಟಪಡಿಸಿದ್ದು, ಹೊಮುಜ್ ಜಲಸಂಧಿ ಮರು ಆರಂಭಕ್ಕೆ ನಿರಾಕರಿಸಿದ್ದಾರೆ. ಇದರಿಂದ ಟ್ರಂಪ್ಗೆ ಮತ್ತೊಂದು ಆಘಾತವಾದಂತಾಗಿದೆ. ಹದಿನೆಂಟು ದಿನದ ನಂತರವೂ ಯುದ್ಧ ಇನ್ನು ಯಾವುದೇ ನಿರ್ಣಾಯಕ ಹಂತಕ್ಕೆ ಬಂದಿಲ್ಲ ಮತ್ತು ಮುಗಿಯುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಇಂಥ ಸಂದಿಗ್ಧ ಹೊತ್ತಲ್ಲಿ ಟ್ರಂಪ್ ಯಾವ ನಿರ್ಧಾರ ತಳೆಯುತ್ತಾರೆ ಎಂಬುದರ ಮೇಲೆ ಹಲವು ಸಂಗತಿಗಳು ಸ್ಪಷ್ಟವಾಗಲಿವೆ. ‘ಇದು ಯುರೋಪಿನ ಸಮರವಲ್ಲ’ ಎಂದು ಜರ್ಮನಿ ಸ್ಪಷ್ಟವಾಗಿ ಹೇಳಿದ್ದರೆ, ‘ಈ ಯುದ್ಧದಲ್ಲಿ ನಾವು ಸಿಲುಕಿಕೊಳ್ಳುವುದಿಲ್ಲ’ ಎಂದು ಬ್ರಿಟನ್ ಪ್ರತಿಕ್ರಿಯಿಸಿದೆ. ‘ಸಮರವಲ್ಲ, ಮಾತುಕತೆಯ ಮೂಲಕ ಪರಿಹಾರ ಕಂಡುಹಿಡಿಯಬೇಕು’ ಎಂದು ಇಟಲಿ ಹೇಳಿದೆ. ಈ ನಡುವೆ, ಮುಂಬರುವ ಮೂರು ವಾರಗಳಿಗೆ ಸಮರದ ಯೋಜನೆ ಸಿದ್ಧವಾಗಿದೆ ಎಂದು ಇಸ್ರೇಲ್ ಪ್ರತಿಕ್ರಿಯಿಸಿದೆ.
ಅಮೆರಿಕಕ್ಕೆ ‘ಅಮೆರಿಕ ಫಸ್ಟ್ ನೀತಿ’ ಇರುವಂತೆ ಉಳಿದ ದೇಶಗಳಿಗೂ ಅವರವರ ಹಿತವೇ ಮೊದಲ ಆದ್ಯತೆ. ಈ ಸರಳಸತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಿದ್ದು, ಈಗ ಯುದ್ಧರಂಗದಲ್ಲಿ ಮಿತ್ರದೇಶಗಳಿಂದಲೇ ಬೆಂಬಲ ಸಿಗದೆ ಏಕಾಂಗಿಯಾಗಿದ್ದಾರೆ. ಇರಾನ್ನಿಂದ ತೀಕ್ಷ ್ಣ ಪ್ರತಿಕ್ರಿಯೆ ನಿರೀಕ್ಷಿಸದಿದ್ದ ಟ್ರಂಪ್, ಈಗ ಇರಾನ್ನ್ನು ಎದುರಿಸಲು ಮಿತ್ರರಾಷ್ಟ್ರಗಳ ಬೆಂಬಲ ಕೋರಿದಾಗ ನಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಅಮೆರಿಕ ತನ್ನ ಹಿತಾಸಕ್ತಿಗಳಿಗಾಗಿ ಮಾತ್ರ ಯುದ್ಧ ಮಾಡುತ್ತಿದೆ ಎಂದು ನ್ಯಾಟೋ ರಾಷ್ಟ್ರಗಳು ಸ್ಪಷ್ಟ ದನಿಯಲ್ಲಿ ಹೇಳಿವೆ. ಹಾಗಾಗಿ, ಯುದ್ಧದ ಸಂದರ್ಭದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನ್ಯಾಟೋ ರಾಷ್ಟ್ರಗಳ ನಡುವಿನ ಸಂಬಂಧವು ತೀವ್ರ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಇರಾನ್ ಜೊತೆಗಿನ ಯುದ್ಧ ಮತ್ತು ಹಾಮುಜ್ ಜಲಸಂಧಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕಕ್ಕೆ ಮಿಲಿಟರಿ ನೆರವು ನೀಡಲು ನ್ಯಾಟೋ ರಾಷ್ಟ್ರಗಳು ಸ್ಪಷ್ಟವಾಗಿ ನಿರಾಕರಿಸಿವೆ. ಟ್ರಂಪ್ ಮಿತ್ರರಾಷ್ಟ್ರಗಳೊಂದಿಗೆ ರ್ಚಚಿಸದೆ ಏಕಪಕ್ಷೀಯವಾಗಿ ಇರಾನ್ ಮೇಲೆ ದಾಳಿ ನಡೆಸಿದ್ದಾರೆ ಎಂಬುದು ಯುರೋಪಿಯನ್ ರಾಷ್ಟ್ರಗಳ ಆರೋಪ. ನ್ಯಾಟೋ ದೇಶಗಳು ತಮ್ಮ ಜಿಡಿಪಿಯ 5% ರಷ್ಟನ್ನು ರಕ್ಷಣಾ ವೆಚ್ಚಕ್ಕೆ ಬಳಸಬೇಕು ಎಂದು ಟ್ರಂಪ್ ಒತ್ತಾಯಿಸುತ್ತಿರುವುದು ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದೆ.
ಇರಾನ್ ಹಾಮುಜ್ ಜಲಸಂಧಿಯನ್ನು ಮುಚ್ಚುತ್ತದೆ ಎಂದು ಅಮೆರಿಕ ನಿರೀಕ್ಷೆ ಮಾಡಿರಲಿಲ್ಲ. ಅಮೆರಿಕ ಸೇನಾ ದಾಳಿಗಳಿಗೆ ತೀವ್ರ ಪ್ರತ್ಯುತ್ತರ ನೀಡುತ್ತಿರುವ ಇರಾನ್ ಹಾಮುಜ್ ಜಲಸಂಧಿಯನ್ನು ಮುಚ್ಚಿದೆ ಮತ್ತು ಈ ಸಂಬಂಧ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಮುಜ್ ಜಲಸಂಧಿ ಮರು ಆರಂಭಿಸಲು ಮಿತ್ರರಾಷ್ಟ್ರಗಳು ಪ್ರಯತ್ನಿಸಬೇಕು ಎಂಬ ಟ್ರಂಪ್ ಆಗ್ರಹಕ್ಕೆ ನ್ಯಾಟೋ ಮೈತ್ರಿಕೂಟದ ರಾಷ್ಟ್ರಗಳು ಸಮ್ಮತಿಸಿಲ್ಲ. ಹೀಗಾಗಿ, ಮುಂಬರುವ ದಿನಗಳಲ್ಲಿ ಹಾಮುಜ್ ಜಲಸಂಧಿಗೆ ಸಂಬಂಧಿಸಿ ಮತ್ತಷ್ಟು ಮಹತ್ವದ ಬೆಳವಣಿಗೆಗಳು ನಡೆಯುವ ನಿರೀಕ್ಷೆ ಇದೆ ಎನ್ನುತ್ತಾರೆ ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು.
‘ನಾವು ಈ ವಿಸõತ ಯುದ್ಧದೊಳಗೆ ಸಿಲುಕಿಕೊಳ್ಳಲು ಇಷ್ಟಪಡುವುದಿಲ್ಲ’ ಎಂದು ಬ್ರಿಟನ್ ಪ್ರಧಾನಿ ಕೈರ್ ಸ್ಟಾರ್ಮರ್ ಹೇಳಿದ್ದಾರೆ. ‘ಇದು ನಮ್ಮ ಯುದ್ಧವಲ್ಲ’ ಎಂದು ಜರ್ಮನಿ ರಕ್ಷಣಾ ಸಚಿವ ಬೋರಿಸ್ ಪಿಸ್ಟೋರಿಯಸ್ ಸ್ಪಷ್ಟಪಡಿಸಿದ್ದಾರೆ. ‘ಈ ಯುದ್ಧದ ಉದ್ದೇಶಗಳೇನು ಎಂಬುದು ನಮಗೆ ಅರ್ಥವಾಗುತ್ತಿಲ್ಲ, ನಮ್ಮೊಂದಿಗೆ ಯಾರೂ ಸಮಾಲೋಚನೆ ನಡೆಸಿಲ್ಲ’ ಎಂದು ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥ ಕಾಜಾ ಕಲ್ಲಾಸ್ ್ಥ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನ್ಯಾಟೋ ಒಂದು ರಕ್ಷಣಾತ್ಮಕ ಮೈತ್ರಿಕೂಟವಾಗಿದ್ದು, ಪ್ರಸ್ತುತ ಯುದ್ಧದಲ್ಲಿ ನೇರವಾಗಿ ಭಾಗವಹಿಸುವ ಯಾವುದೇ ಯೋಜನೆ ಇಲ್ಲ’ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರಟ್ಟೆ ತಿಳಿಸಿದ್ದಾರೆ.
ನ್ಯಾಟೋ (NATO- North Atlantic Treaty organization) ಎನ್ನುವುದು ಉತ್ತರ ಅಮೆರಿಕ ಮತ್ತು ಯುರೋಪ್ ಖಂಡಗಳ ರಾಷ್ಟ್ರಗಳ ನಡುವಿನ ಒಂದು ಪ್ರಮುಖ ಮಿಲಿಟರಿ ಮೈತ್ರಿಕೂಟವಾಗಿದೆ. ಬೆಲ್ಜಿಯಂನ ಬ್ರಸೆಲ್ಸ್ ನಗರದಲ್ಲಿ ಪ್ರಧಾನ ಕಚೇರಿ ಇದೆ. 2024ರಲ್ಲಿ ಸ್ವೀಡನ್ ಅಧಿಕೃತವಾಗಿ ಸೇರಿದ ನಂತರ, ಪ್ರಸ್ತುತ ಈ ಮೈತ್ರಿಕೂಟದಲ್ಲಿ ಒಟ್ಟು 32 ಸದಸ್ಯ ರಾಷ್ಟ್ರಗಳಿವೆ. ಈ ಮೈತ್ರಿಕೂಟದ ಯಾವುದಾದರೂ ಒಂದು ಸದಸ್ಯ ರಾಷ್ಟ್ರದ ಮೇಲೆ ದಾಳಿಯಾದರೆ, ಅದನ್ನು ಎಲ್ಲ 32 ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲರೂ ಒಟ್ಟಾಗಿ ಎದುರಿಸುತ್ತಾರೆ.
ಸ್ಥಾಪಕ ಸದಸ್ಯ ರಾಷ್ಟ್ರಗಳು (1949ರಲ್ಲಿ ಸೇರಿದವು) (ಈ 12 ರಾಷ್ಟ್ರಗಳು ನ್ಯಾಟೋ ಒಪ್ಪಂದಕ್ಕೆ ಸಹಿ ಹಾಕಿದ ಮೂಲ ಸದಸ್ಯರು) ಅಮೆರಿಕ, ಯುನೈಟೆಡ್ ಕಿಂಗ್ಡಮ್, ಕೆನಡಾ, ಫ್ರಾನ್ಸ್, ಇಟಲಿ, ನೆದರ್ಲೆಂಡ್ಸ್, ಬೆಲ್ಜಿಯಂ, ನಾರ್ವೆ, ಡೆನ್ಮಾರ್ಕ್, ಪೋರ್ಚುಗಲ್, ಐಸ್ಲ್ಯಾಂಡ್, ಲಕ್ಸೆಂಬರ್ಗ್
1952: ಗ್ರೀಸ್ ಮತ್ತು ಟರ್ಕಿ
1955: ಜರ್ಮನಿ 1982: ಸ್ಪೇನ್ 1999: ಹಂಗೇರಿ, ಪೋಲೆಂಡ್ ಮತ್ತು ಜೆಕ್ ರಿಪಬ್ಲಿಕ್
2004: ಬಲ್ಗೇರಿಯಾ, ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ, ರೊಮೇನಿಯಾ, ಸ್ಲೋವಾಕಿಯಾ ಮತ್ತು ಸ್ಲೋವೇನಿಯಾ.
2009: ಅಲ್ಬೇನಿಯಾ ಮತ್ತು ಕ್ರೊಯೇಷಿಯಾ.
2017: ಮಾಂಟೆನೆಗ್ರೊ
2020: ಉತ್ತರ ಮೆಸಿಡೋನಿಯಾ
2023: ಫಿನ್ಲೆಂಡ್ ?2024: ಸ್ವೀಡನ್
ಮೈತ್ರಿಕೂಟ ಅಂತ್ಯದ ಭೀತಿ: ನ್ಯಾಟೋದಿಂದ ಅಮೆರಿಕ ಹೊರಬರಬಹುದು ಅಥವಾ ಈ ಮೈತ್ರಿಕೂಟವು ದುರ್ಬಲಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಆದರೆ, ಅಮೆರಿಕ ಮತ್ತು ಯುರೋಪ್ ನಡುವಿನ ಬಿರುಕು ರಷ್ಯಾ ಮತ್ತು ಚೀನಾಕ್ಕೆ ಅನುಕೂಲಕರವಾಗಿ ಪರಿಣಮಿಸಬಹುದು.
ಆರ್ಥಿಕ ಹೊಡೆತ: ಹಾಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವುದರಿಂದ ಜಾಗತಿಕ ತೈಲ ಬೆಲೆಗಳಲ್ಲಿ ತೀವ್ರ ಏರಿಕೆಯಾಗುವ ಸಾಧ್ಯತೆಯಿದೆ.
ಏಕಾಂಗಿ ಹೋರಾಟ: ಅಮೆರಿಕವು ಇಸ್ರೇಲ್ ಜೊತೆಗೂಡಿ ಏಕಾಂಗಿಯಾಗಿ ಯುದ್ಧ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಟ್ರಂಪ್ ಈಗಾಗಲೇ ‘ನಮಗೆ ಯಾರ ನೆರವೂ ಬೇಕಿಲ್ಲ, ಅಮೆರಿಕ ಅತ್ಯಂತ ಶಕ್ತಿಶಾಲಿ ದೇಶ’ ಎಂದು ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಅಪ್ಘಾನಿಸ್ತಾನದಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ನ್ಯಾಟೋ ಮಿತ್ರರಾಷ್ಟ್ರಗಳ ಸೇನಾಪಡೆಯು ಫ್ರಂಟ್ ಲೈನ್ನಲ್ಲಿ ಇರಲಿಲ್ಲ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಅತ್ಯಂತ ಅವಮಾನಕರ. 2001ರಲ್ಲಿ ಅಮೆರಿಕದಲ್ಲಿ ನಡೆದ ದಾಳಿಯ ಬಳಿಕ ಅಪ್ಘಾನಿಸ್ತಾನದಲ್ಲಿ ನಡೆದ ಸಂಘರ್ಷದ ಸಂದರ್ಭದಲ್ಲಿ 457 ಬ್ರಿಟಿಷ್ ಯೋಧರು ಮೃತಪಟ್ಟಿದ್ದರು. ಟ್ರಂಪ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲಿ.
-ಕೀರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿ
ನ್ಯಾಟೋ ರಾಷ್ಟ್ರಗಳ ರಕ್ಷಣೆಗೆ ನೂರಾರು ಶತಕೋಟಿ ಡಾಲರ್ ಖರ್ಚು ಮಾಡಿದ್ದೇನೆ. ಆದರೆ, ನಮಗೆ ಅಗತ್ಯವಿರುವ ಸಂದರ್ಭದಲ್ಲಿ ಅವರು ನಮಗಾಗಿ ಏನನ್ನೂ ಮಾಡಿಲ್ಲ. ಅವರದ್ದು ‘ಒನ್ ವೇ ಟ್ರಾಫಿಕ್’. ನಾವು ಕಾರ್ಯಾಚರಣೆ ಮಾಡಬಾರದೆಂದು ನ್ಯಾಟೋ ಎಂದೂ ಹೇಳಿಲ್ಲ. ಆದರೆ, ಈಗ ಮೂರ್ಖತನದ ಕೆಲಸ ಮಾಡುತ್ತಿದೆ. ಇದು ನ್ಯಾಟೋ ಪಾಲಿಗೆ ಕೆಟ್ಟದೆಂದು ಭಾವಿಸುತ್ತೇನೆ. ನಮಗೆ ಯಾರ ಸಹಾಯವೂ ಅಗತ್ಯವಿಲ್ಲ. ನಾವು ಮಾಡಿದ ಕೆಲಸಕ್ಕೆ ನ್ಯಾಟೋ ಪಡೆಗಳ ಬೆಂಬಲವಿತ್ತು. ಇರಾನ್ನ ಪರಮಾಣು ಬೆದರಿಕೆಯನ್ನು ತೊಲಗಿಸುವುದು ಅಗತ್ಯವಾಗಿತ್ತು. ನಾವದನ್ನು ಮಾಡಿದ್ದೇವೆ. ಅವರ ಮಿಲಿಟರಿ, ನೌಕಾಪಡೆಯನ್ನು ನಾಶಮಾಡಿದ್ದೇವೆ. ವಾಯುಪಡೆ ಸಹ ನಾಶವಾಗಿದೆ. ಅಲ್ಲಿ ಯಾವುದೇ ನೌಕೆ ಅಥವಾ ರೇಡಾರ್ಗಳಿಲ್ಲ. ಯುದ್ಧವಿಮಾನ ವಿರೋಧಿ ಉಪಕರಣಗಳಿಲ್ಲ. ಎಲ್ಲವೂ ನಾಶವಾಗಿದೆ.
-ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ