ಏನಿದು ‘ಸುನೇಹರ’ ವಿವಾದ? ಆಫೀಸ್​ಗೆ ಪುರುಷರು ಶಾರ್ಟ್ಸ್​​ ಧರಿಸಿ ಬಂದಿದ್ದಕ್ಕೆ ತಮ್ಮದೇ ಸರ್ಕಾರ ವಿರುದ್ಧ ಮಹಿಳೆಯರು ಕೆಂಡ

ಆಫೀಸ್​ಗೆ ಪುರುಷರು ಶಾರ್ಟ್​ ಧರಿಸಿ ಬಂದಿದ್ದಕ್ಕೆ ತಮ್ಮದೇ ಸರ್ಕಾರ ವಿರುದ್ಧ ಮಹಿಳೆಯರು ಕೆಂಡ
ಆಫೀಸ್​ಗೆ ಪುರುಷರು ಶಾರ್ಟ್​ ಧರಿಸಿ ಬಂದಿದ್ದಕ್ಕೆ ತಮ್ಮದೇ ಸರ್ಕಾರ ವಿರುದ್ಧ ಮಹಿಳೆಯರು ಕೆಂಡ
Published on

ಪ್ರಮುಖ ಮುಖ್ಯಾಂಶಗಳು

  • ಪುರುಷರಿಗೆ ಶಾರ್ಟ್ಸ್‌ ಮತ್ತು ಟೀ-ಶರ್ಟ್‌ ಧರಿಸಿ ಕಚೇರಿಗೆ ಬರಲು ಸರ್ಕಾರ ಅವಕಾಶ
  • ಈ ಸರಳ ಡ್ರೆಸ್‌ಕೋಡ್ ಬದಲಾವಣೆ ಇದೀಗ ಹೊಸ ಹಾಗೂ ವಿಚಿತ್ರ ವಿವಾದಕ್ಕೆ ನಾಂದಿ
  • ಶಾರ್ಟ್ಸ್​ ಧರಿಸಿ ಕಚೇರಿಗೆ ಬರುವ ಪುರುಷರ ಕಾಲಿನ ರೋಮ ನೋಡಿ ತೀವ್ರ ಮುಜುಗರ
ಟೋಕಿಯೊ: ಏಪ್ರಿಲ್​ನಲ್ಲಿಬೇಸಿಗೆಯ ಬಿಸಿಲು ವಿಪರೀತಗೊಂಡ ಹಿನ್ನೆಲೆ ಪುರುಷ ಉದ್ಯೋಗಿಗಳಿಗೆ ಶಾರ್ಟ್ಸ್‌ ಮತ್ತು ಟೀ-ಶರ್ಟ್‌ ಧರಿಸಿ ಕಚೇರಿಗೆ ಬರಲು ಟೋಕಿಯಾ ಮೆಟ್ರೋಪಾಲಿಟನ್​ ಸರ್ಕಾರ ಮುಕ್ತ ಅವಕಾಶ ನೀಡಿತು. ಆದರೆ, ಈ ಸರಳ ಡ್ರೆಸ್‌ಕೋಡ್ ಬದಲಾವಣೆ ಇದೀಗ ಹೊಸ ಹಾಗೂ ವಿಚಿತ್ರ ವಿವಾದಕ್ಕೆ ನಾಂದಿ ಹಾಡಿದೆ (Leg Hair Harassment). 
ಶಾರ್ಟ್ಸ್​ ಧರಿಸಿ ಕಚೇರಿಗೆ ಬರುವ ಪುರುಷರ ಕಾಲಿನ ರೋಮವು ತಮಗೆ ತೀವ್ರ ಮುಜುಗರ ಉಂಟು ಮಾಡುತ್ತೆ. ಇದನ್ನು ನಮ್ಮಿಂದ ಸಹಿಸಲು ಸಾಧ್ಯವಿಲ್ಲ ಎಂದು ಮಹಿಳಾ ಸಹೋದ್ಯೋಗಿಗಳು ಸರ್ಕಾರ ಆದೇಶದ ವಿರುದ್ಧ ಸಿಡಿದೆದ್ದಿದ್ದಾರೆ. ಜತೆಗೆ ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಅಸಮಾಧಾನ ಹೊರಹಾಕಿ, ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಮತ್ತೊಂದೆಡೆ, ಈ ವಿವಾದದ ಬೆನ್ನಲ್ಲೇ ‘ಸುನೇಹರ’ ಎಂಬ ಹೊಸ ಪದವೂ ಹುಟ್ಟಿಕೊಂಡಿರುವುದು ಹಲವರಲ್ಲಿ ಗೊಂದಲ, ಅಚ್ಚರಿ ಮೂಡಿಸಿದೆ.

ಅಷ್ಟಕ್ಕೂ ಏನಿದು ‘ಸುನೇಹರ’?

ಜಪಾನ್‌ನಲ್ಲಿ ಪುರುಷರ ಕಾಲಿನ ಕೂದಲನ್ನು ನೋಡಿ ಉಂಟಾಗುವ ಮುಜುಗರ ಅಥವಾ ಅಸ್ವಸ್ಥತೆಯನ್ನು ಸೂಚಿಸಲು ‘ಸುನೇಹರ’ ಎಂಬ ಪದ ಬಳಕೆಯಾಗುತ್ತಿದೆ. ‘ಸುನೆ’ ಎಂದರೆ ಕಾಲಿನ ಕೂದಲು ಮತ್ತು ಹರ ಎಂಬುದು ಇಂಗ್ಲಿಷ್​ನ ಹರಾಸ್​ಮೆಂಟ್​ ಎಂಬ ಪದವನ್ನು ಸೂಚಿಸುತ್ತದೆ ಎಂದು ವಿವರಿಸಲಾಗಿದೆ. ಇವರೆಡು ಸೇರಿದಾಗ ಈ ಹೊಸ ಹಾಗೂ ವಿಚಿತ್ರ ಪದ ರೂಪುಗೊಂಡಿದೆ ಎಂದು ತಿಳಿಸಲಾಗಿದೆ.

ಜಾಲತಾಣಗಳಲ್ಲಿ ಭಾರಿ ಚರ್ಚೆ

ಕೆಲವು ಮಹಿಳಾ ಉದ್ಯೋಗಿಗಳು ಕಚೇರಿ ವಾತಾವರಣದಲ್ಲಿ ಪುರುಷರ ಅಚ್ಚುಕಟ್ಟಾಗಿರದ ಕಾಲಿನ ಕೂದಲು ಕಾಣಿಸುವುದು ನಮಗೆ ತೀರ ಮುಜುಗರ ಉಂಟು ಮಾಡುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಈ ಚರ್ಚೆಯೇ ಲಿಂಗ ತಾರತಮ್ಯದ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಪುರುಷರಿಗೆ ಈ ಆಯ್ಕೆ ನೀಡಿರುವ ಸರ್ಕಾರ, ಮಹಿಳೆಯರು ಬಿಸಿಲಿನ ನಡುವೆಯೂ ಪ್ಯಾಂಟ್​ ಅಥವಾ ದೇಹದ ಕೂದಲನ್ನು ಮುಚ್ಚುವಂತಹ ಉಡುಪುಗಳನ್ನು ಧರಿಸಬೇಕೆಂಬ ಒತ್ತಡ ಏಕೆ? ಪುರುಷರಿಗೆ ಮಾತ್ರ ಶಾರ್ಟ್ಸ್‌ ಧರಿಸುವ ಸ್ವಾತಂತ್ರ್ಯ ಕೊಟ್ಟಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. 

ಪುರುಷರಲ್ಲಿ ಹೆಚ್ಚಿದ ಮಾನಸಿಕ ಒತ್ತಡ

ಗೊರಿಲ್ಲಾ ಕ್ಲಿನಿಕ್ ನಡೆಸಿದ ಸಮೀಕ್ಷೆಯಲ್ಲಿ, ಶೇ.53.5ರಷ್ಟು ಮಂದಿ ಪುರುಷರು ಕಚೇರಿಯಲ್ಲಿ ಶಾರ್ಟ್ಸ್‌ ಧರಿಸುವುದನ್ನು ವಿರೋಧಿಸಿದರೆ, ಶೇ.46.5ರಷ್ಟು ಮಂದಿ ಬೆಂಬಲಿಸಿದ್ದಾರೆ. ವಿರೋಧಕ್ಕೆ ಪ್ರಮುಖ ಕಾರಣಗಳಲ್ಲಿ ಕಾಲಿನ ಆಕಾರ ಮತ್ತು ಕೂದಲು ಎನ್ನಲಾಗಿದೆ. ಈ ಬೆಳವಣಿಗೆಯಿಂದ ಸಹೋದ್ಯೋಗಿಗಳ ಮುಂದೆ ಅಸಹಜವಾಗಿ ಕಾಣಿಸಿಕೊಳ್ಳುವ ಭಯ ಕೆಲವು ಪುರುಷರಲ್ಲಿ ಕಾಡಲಾರಂಭಿಸಿದೆ. ಪರಿಣಾಮವಾಗಿ, ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲದೆ, ಆಫೀಸ್​ನ ಶಿಷ್ಟಾಚಾರ ಕಾಪಾಡಿಕೊಳ್ಳಲು ಕೂಡ ಪುರುಷರು ಕೂದಲು ತೆಗೆಯುವ ಚಿಕಿತ್ಸೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಲೂನ್​ಗಳಿಗೆ ಭರ್ಜರಿ ಆದಾಯ

‘ಸುನೇಹರ’ ಚರ್ಚೆಯ ಬೆನ್ನಲ್ಲೇ ಜಪಾನ್‌ನ ಪುರುಷರು ಗ್ರೂಮಿಂಗ್‌ ಮಾಡುವ ಸಲೂನ್​ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿರುವುದರಿಂದ ಸಲೂನ್​ ಉದ್ಯಮದಲ್ಲೂ ನಿರೀಕ್ಷೆಗೂ ಮೀರಿದ ಆದಾಯ ಶುರುವಾಗಿದೆ. ಲೇಸರ್‌ ಹೇರ್‌ ರಿಮೂವಲ್‌, ವ್ಯಾಕ್ಸಿಂಗ್‌, ಕೂದಲಿನ ದಪ್ಪ, ಕಡಿಮೆ ಮಾಡುವ ಚಿಕಿತ್ಸೆಗಳು ಸೇರಿದಂತೆ ವಿವಿಧ ಸರ್ವೀಸ್​ಗಳಿಗೆ ಬೇಡಿಕೆ ಹೆಚ್ಚಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net