ಇನ್ನೂ ಕಾಲ ಮಿಂಚಿಲ್ಲ, ಎಚ್ಚರ! ಇರಾನ್ ವಿರುದ್ಧ ಗುಡುಗಿದ ಟ್ರಂಪ್‌; ಸಂಧಾನ ಮಾತುಕತೆಗೂ ಮುನ್ನವೇ ಯುದ್ಧದ ಕಾರ್ಮೋಡ! Donald Trump

ಇನ್ನೂ ಕಾಲ ಮಿಂಚಿಲ್ಲ, ಎಚ್ಚರ! ಇರಾನ್ ವಿರುದ್ಧ ಗುಡುಗಿದ ಟ್ರಂಪ್‌; ಸಂಧಾನ ಮಾತುಕತೆಗೂ ಮುನ್ನವೇ ಯುದ್ಧದ ಕಾರ್ಮೋಡ!
ಇನ್ನೂ ಕಾಲ ಮಿಂಚಿಲ್ಲ, ಎಚ್ಚರ! ಇರಾನ್ ವಿರುದ್ಧ ಗುಡುಗಿದ ಟ್ರಂಪ್‌; ಸಂಧಾನ ಮಾತುಕತೆಗೂ ಮುನ್ನವೇ ಯುದ್ಧದ ಕಾರ್ಮೋಡ!
Published on
ನ್ಯೂಯಾರ್ಕ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಇರಾನ್ ನಾಯಕರಿಗೆ ಅಂತಿಮ ಎಚ್ಚರಿಕೆ ನೀಡಿದ್ದು, ಸಂಧಾನಕ್ಕೆ ಒಪ್ಪದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ. 
ಈ ಬಗ್ಗೆ ಟ್ರೂತ್ ಸೋಶಿಯಲ್​ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್, ಇರಾನ್ ಸಂಧಾನಕಾರರನ್ನು ವಿಚಿತ್ರ ವ್ಯಕ್ತಿಗಳು ಎಂದು ಕರೆದಿದ್ದು, ರಣರಂಗದಲ್ಲಿ ಸೋತು ಸುಣ್ಣವಾಗಿರುವ ಇರಾನ್ ಈಗ ಮಾತುಕತೆಗಾಗಿ ಬೇಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಸೇನಾ ಶಕ್ತಿ ಧೂಳೀಪಟವಾಗಿದೆ: ಟ್ರಂಪ್ ವಾಗ್ದಾಳಿ

ಇರಾನ್ ಸೇನಾಪಡೆಗಳು ಈಗಾಗಲೇ ಧೂಳೀಪಟವಾಗಿವೆ. ಅವರು ಮತ್ತೆ ಚೇತರಿಸಿಕೊಳ್ಳುವ ಶಕ್ತಿಯನ್ನು ಹೊಂದಿಲ್ಲ. ಆದರೆ ಹೊರಗಿನ ಪ್ರಪಂಚಕ್ಕೆ ಮಾತ್ರ ನಾವು ಅಮೆರಿಕದ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದು ತಪ್ಪು ಎಂದು ಟ್ರಂಪ್ ಬರೆದಿದ್ದಾರೆ. ಇರಾನ್ ಸಂಧಾನಕಾರರು ಗಂಭೀರವಾಗಿ ವರ್ತಿಸದಿದ್ದರೆ, ಒಮ್ಮೆ ಯುದ್ಧದ ಪೂರ್ಣ ಪ್ರಮಾಣದ ಕಾರ್ಯಾಚರಣೆ ಶುರುವಾದ ಮೇಲೆ ಹಿಂದೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದ್ದಾರೆ.

ಅಮೆರಿಕದ 15 ಅಂಶಗಳ ಶಾಂತಿ ಪ್ರಸ್ತಾವನೆ ಏನು..?

ಅಮೆರಿಕವು ಇರಾನ್ ಮುಂದೆ ಇಟ್ಟಿರುವ ಶಾಂತಿ ಒಪ್ಪಂದದಲ್ಲಿ ಪ್ರಮುಖವಾಗಿ ಈ ಕೆಳಗಿನ ಅಂಶಗಳಿವೆ.
ಪರಮಾಣು ಕಾರ್ಯಕ್ರಮ ಸ್ಥಗಿತ: ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಕ್ಷಿಪಣಿ ಸಾಮರ್ಥ್ಯಕ್ಕೆ ಮಿತಿ: ಇರಾನ್‌ನ ದೀರ್ಘ ವ್ಯಾಪ್ತಿಯ ಕ್ಷಿಪಣಿ ಅಭಿವೃದ್ಧಿಗೆ ಬ್ರೇಕ್ ಹಾಕಬೇಕು.
ಹಾರ್ಮುಜ್ ಜಲಸಂಧಿ ಮುಕ್ತ: ಜಾಗತಿಕ ತೈಲ ಸಾಗಾಣಿಕೆಯ ಶೇ. 20ರಷ್ಟಟು ಪಾಲು ಹೊಂದಿರುವ ಹಾರ್ಮುಜ್ ಜಲಸಂಧಿಯನ್ನು ಅಂತಾರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು.
ನಿರ್ಬಂಧಗಳ ಸಡಿಲಿಕೆ: ಈ ಷರತ್ತುಗಳಿಗೆ ಒಪ್ಪಿದರೆ ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ತೆಗೆದುಹಾಕಲಿದೆ.

ಇರಾನ್‌ನ ಉಲ್ಟಾ ಸವಾರಿ: ತನ್ನದೇ ಆದ ಡಿಮಾಂಡ್!

ಅಮೆರಿಕದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಇರಾನ್, ತನ್ನದೇ ಆದ ಷರತ್ತುಗಳನ್ನು ಮುಂದಿಟ್ಟಿದೆ.
ಇರಾನ್ ಅಧಿಕಾರಿಗಳನ್ನು ಗುರಿಯಾಗಿಸಿ ನಡೆಸುವ ದಾಳಿಗಳನ್ನು ತಕ್ಷಣ ನಿಲ್ಲಿಸಬೇಕು.
ಯುದ್ಧದಿಂದಾದ ನಷ್ಟಕ್ಕೆ ಅಮೆರಿಕ ಪರಿಹಾರ ನೀಡಬೇಕು.
ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಸಾರ್ವಭೌಮತ್ವವನ್ನು ಜಗತ್ತು ಒಪ್ಪಿಕೊಳ್ಳಬೇಕು.

ರಕ್ತಸಿಕ್ತ ಸಂಘರ್ಷ: ಸತ್ತವರ ಸಂಖ್ಯೆ ಏರಿಕೆ

ಈ ಯುದ್ಧವು ಇಡೀ ಪಶ್ಚಿಮ ಏಷ್ಯಾವನ್ನು ಸ್ಮಶಾನವಾಗಿಸುತ್ತಿದೆ. ವರದಿಗಳ ಪ್ರಕಾರ:
ಇರಾನ್: 1,500 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಲೆಬನಾನ್: 1,100 ಕ್ಕೂ ಹೆಚ್ಚು ಮಂದಿ ಸಾವು.
ಇಸ್ರೇಲ್: ಹತ್ತಾರು ಸೈನಿಕರು ಮತ್ತು ನಾಗರಿಕರ ಸಾವು.
ಅಮೆರಿಕ: ಕಾರ್ಯಾಚರಣೆಯ ವೇಳೆ 13 ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ.
ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಹಿಂದೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂಬ ಎಚ್ಚರಿಕೆಯ ಅರ್ಥವೇನು?

ಟ್ರಂಪ್ ಅವರ ಹಿಂದೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂಬ ಮಾತು ಇರಾನ್‌ನ ಇಂಧನ ಕೇಂದ್ರಗಳು ಮತ್ತು ಪರಮಾಣು ನೆಲೆಗಳ ಮೇಲೆ ಬೃಹತ್ ವೈಮಾನಿಕ ದಾಳಿಯ ಮುನ್ಸೂಚನೆಯಾಗಿದೆ. ಸಂಧಾನದ ಮೇಜಿನ ಮೇಲೆ ಇರಾನ್ ಮಣಿಯದಿದ್ದರೆ, ಅಮೆರಿಕವು ತನ್ನ ಸೈನ್ಯವನ್ನು ನೇರವಾಗಿ ಇರಾನ್ ನೆಲಕ್ಕೆ ಇಳಿಸುವ ಸಾಧ್ಯತೆಯೂ ಇದೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಇಡೀ ಜಗತ್ತು ಇಂಧನ ಬಿಕ್ಕಟ್ಟು ಮತ್ತು ಆರ್ಥಿಕ ಕುಸಿತಕ್ಕೆ ಸಾಕ್ಷಿಯಾಗಬೇಕಾಗುತ್ತದೆ. ಟ್ರಂಪ್ ಕೊಟ್ಟಿರುವ ಈ ಗಡುವು ಮುಗಿಯುವ ಮುನ್ನ ಇರಾನ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಈಗ ಕುತೂಹಲದ ಕೇಂದ್ರವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net