ತಿಹಾರ್ ಜೈಲಿನ ಊಟ ಸರಿಯಿಲ್ಲ: ದೆಹಲಿ ಕೋರ್ಟ್​ಗೆ ಡಯಟ್​ ಫುಡ್​ ಕೊಡುವಂತೆ ಕೇಳಿದ ಅಮೆರಿಕ ಪ್ರಜೆ

ತಿಹಾರ್​ ಜೈಲಿನಲ್ಲಿರುವ ಆರೋಪಿ ಮ್ಯಾಥ್ಯೂ ವ್ಯಾನ್​ಡೈಕೆ
ತಿಹಾರ್​ ಜೈಲಿನಲ್ಲಿರುವ ಆರೋಪಿ ಮ್ಯಾಥ್ಯೂ ವ್ಯಾನ್​ಡೈಕೆ
Published on

ಪ್ರಮುಖ ಮುಖ್ಯಾಂಶಗಳು

  • ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಯುಎಸ್​ ಪ್ರಜೆ
  • ತಿಹಾರ್​ ಜೈಲಿನ ಆಹಾರ ಸರಿಯಿಲ್ಲ ಎಂದು ಆರೋಪ
  • ಜೈಲಿನ ಊಟ ಬದಲಿಗೆ ತಾನೇ ಅಡುಗೆ ಮಾಡಿಕೊಳ್ಳುವುದಾಗಿ ಮನವಿ
ನವದೆಹಲಿ: ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ (Tihar Jail Food) ಅಮೆರಿಕ ಮೂಲದ ಆರೋಪಿ ಮ್ಯಾಥ್ಯೂ ವ್ಯಾನ್​ಡೈಕೆ, ತನಗೆ ಡಯಟ್​ ಆಹಾರವೇ ಬೇಕೆಂದು ಕೋರ್ಟ್​ಗೆ ವಿಶೇಷ ಮನವಿ ಸಲ್ಲಿಸಿರುವುದು ವರದಿಯಾಗಿದೆ. 
ದೆಹಲಿಯ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಆರೋಪಿ, ತಿಹಾರ್ ಜೈಲಿನಲ್ಲಿ ಕೊಡುತ್ತಿರುವ ಆಹಾರವನ್ನು ನನ್ನಿಂದ ತಿನ್ನಲು ಸಾಧ್ಯವಿಲ್ಲ. ಅವರು ಉಣಬಡಿಸುವ ಆಹಾರಗಳಲ್ಲಿ ಮೆಣಸಿನಕಾಯಿ, ಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳು ಹೆಚ್ಚಿವೆ. ಇದರಿಂದ ಹೊಟ್ಟೆಗೆ ಊಟ ಸೇರುತ್ತಿಲ್ಲ. ಅಮೆರಿಕದ ಆಹಾರಗಳನ್ನೇ ಕಳುಹಿಸಿಕೊಟ್ಟರೆ, ನಾನೇ ಅಡುಗೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಕೋರಿದ್ದಾನೆ. 

50 ದಿನಗಳಿಂದ ಇದೇ ಸಮಸ್ಯೆ 

ಅರ್ಜಿಯಲ್ಲಿ ವ್ಯಾನ್ ಡೈಕ್ ನೀಡಿರುವ ವಿವರಗಳ ಪ್ರಕಾರ, ಪ್ರಸ್ತುತ ಜೈಲಿನಲ್ಲಿ ಎಲ್ಲ ಖೈದಿಗಳಿಗೆ ನೀಡುತ್ತಿರುವ ಆಹಾರವನ್ನು ನನ್ನಿಂದ ತಿನ್ನಲು ಆಗುತ್ತಿಲ್ಲ. 50 ದಿನಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇನೆ. ಈ ಸಮಯದಲ್ಲಿ ಸೋಯಾ ಮಿಲ್ಕ್‌ ಸೇರಿ ಹಾಲನ್ನೇ ದ್ರವರೂಪದ ಆಹಾರವನ್ನಾಗಿ ಸೇವಿಸುತ್ತಿರುವೆ. ಇದರಿಂದಾಗಿ ಕಳೆದ ಮೂರು ತಿಂಗಳಲ್ಲಿ ಸುಮಾರು 14 ಕೆಜಿ ತೂಕ ಕಳೆದುಕೊಂಡಿದ್ದೇನೆ. ಇದರ ಮೇಲಾಗಿ ಅಪೌಷ್ಟಿಕತೆಯಿಂದ ಆರೋಗ್ಯ ಹದಗೆಟ್ಟಿದ್ದು, ರೋಗನಿರೋಧಕ ಶಕ್ತಿಯೂ ಕಡಿಮೆಯಾಗಿದೆ ಎಂದು ಹೇಳಿದ್ದಾನೆ.

ಆಲಿವ್ ಎಣ್ಣೆ, ಬ್ರೆಡ್, ಬೆಣ್ಣೆ, ಚಿಕನ್...

ಇದರ ಜೊತೆ ಮತ್ತೊಂದು ವಿಷಯವನ್ನು ಉಲ್ಲೇಖಿಸಿರುವ ವ್ಯಾನ್‌ಡೈಕ್, ತನ್ನ ಕುಟುಂಬ ಸದಸ್ಯರಿಗೆ ಇಂಡಕ್ಷನ್ ಸ್ಟೌವ್ ಮತ್ತು ಅಡುಗೆ ಪಾತ್ರೆಗಳನ್ನು ಜೈಲಿಗೆ ತರಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೇಳಿಕೊಂಡಿದ್ದಾನೆ. ಪಾಸ್ತಾ, ಆಲಿವ್ ಎಣ್ಣೆ, ಅಕ್ಕಿ, ಮಸೂರ, ಬ್ರೆಡ್, ಬೆಣ್ಣೆ, ಚಿಕನ್, ಮೀನು ಮತ್ತು ಸೋಯಾ ಹಾಲು ಮುಂತಾದ ಆಹಾರ ಪದಾರ್ಥಗಳ ಪೂರೈಕೆಗೆ ಕೋರ್ಟ್​ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾನೆ. 
ಮ್ಯಾಥ್ಯೂ ವ್ಯಾನ್ ಡೈಕ್ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. ಭಾರತ ಮತ್ತು ಮ್ಯಾನ್ಮಾರ್‌ನಲ್ಲಿ ಸಶಸ್ತ್ರ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಿದ ಆರೋಪದ ಮೇರೆಗೆ ಮತ್ತು ಇತರರ ವಿರುದ್ಧ ಡ್ರೋನ್ ತರಬೇತಿ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಸ್ತುತ, ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವ್ಯಾನ್ ಡೈಕ್ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೋರ್ಟ್​ ತಿಹಾರ್ ಜೈಲಿನ ಅಧಿಕಾರಿಗಳಿಗೆ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಲಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net