ಹೃದಯ ಬಡಿತವನ್ನೇ ಹಿಂಬಾಲಿಸುತ್ತೆ ಈ ತಂತ್ರಜ್ಞಾನ: ಇರಾನ್‌ನಲ್ಲಿ ಅಮೆರಿಕದ ಪೈಲಟ್ ರಕ್ಷಿಸಿದ ಸಿಐಎಯ ರಹಸ್ಯ ಟೆಕ್ನಾಲಜಿ! Ghost Murmur

ಹೃದಯ ಬಡಿತವನ್ನೇ ಹಿಂಬಾಲಿಸುತ್ತೆ ಈ ತಂತ್ರಜ್ಞಾನ: ಇರಾನ್‌ನಲ್ಲಿ ಅಮೆರಿಕದ ಪೈಲಟ್ ರಕ್ಷಿಸಿದ ಸಿಐಎಯ ರಹಸ್ಯ ಟೆಕ್ನಾಲಜಿ!
ಹೃದಯ ಬಡಿತವನ್ನೇ ಹಿಂಬಾಲಿಸುತ್ತೆ ಈ ತಂತ್ರಜ್ಞಾನ: ಇರಾನ್‌ನಲ್ಲಿ ಅಮೆರಿಕದ ಪೈಲಟ್ ರಕ್ಷಿಸಿದ ಸಿಐಎಯ ರಹಸ್ಯ ಟೆಕ್ನಾಲಜಿ!
Published on
ನ್ಯೂಯಾರ್ಕ್: ವೈರಿ ಪಡೆಯ ಕಣ್ತಪ್ಪಿಸಿ ಭೂಮಿಯ ಆಳದಲ್ಲಿ ಅಥವಾ ಗುಹೆಯೊಳಗೆ ಅಡಗಿಕೊಂಡರೂ ಸರಿ, ನಿಮ್ಮ ಹೃದಯದ ಬಡಿತವನ್ನೇ ಪತ್ತೆಹಚ್ಚಿ ನಿಮ್ಮನ್ನು ಹುಡುಕಿ ತೆಗೆಯಬಲ್ಲ ಶಕ್ತಿ ಈಗ ಅಮೆರಿಕದ ಗುಪ್ತಚರ ದಳಕ್ಕೆ ಸಿಕ್ಕಿದೆ. ಇರಾನ್‌ನಲ್ಲಿ ಪತನಗೊಂಡ ಅಮೆರಿಕದ ಯುದ್ಧ ವಿಮಾನದ ಪೈಲಟ್ ಅನ್ನು ರಕ್ಷಿಸಲು ಸಿಐಎ ಮೊದಲ ಬಾರಿಗೆ ಘೋಸ್ಟ್ ಮರ್ಮರ್ (Ghost Murmur) ಎಂಬ ಅತ್ಯಾಧುನಿಕ ಕ್ವಾಂಟಮ್ ಮ್ಯಾಗ್ನೆಟೋಮೆಟ್ರಿ ತಂತ್ರಜ್ಞಾನವನ್ನು ಬಳಸಿ ಯಶಸ್ವಿಯಾಗಿದೆ.

ಏನಿದು ಘೋಸ್ಟ್ ಮರ್ಮರ್ ತಂತ್ರಜ್ಞಾನ..?

ಘೋಸ್ಟ್ ಮರ್ಮರ್ ಎಂಬುದು ಕ್ವಾಂಟಮ್ ಭೌತಶಾಸ್ತ್ರ ಮತ್ತು ಕೃತಕ ಬುದ್ಧಿಮತ್ತೆ ಎರಡನ್ನೂ ಒಳಗೊಂಡಿರುವ ಒಂದು ಅದ್ಭುತ ವ್ಯವಸ್ಥೆಯಾಗಿದೆ. ಈ ತಂತ್ರಜ್ಞಾನವು ಮಾನವನ ಹೃದಯ ಬಡಿತದಿಂದ ಹೊರಹೊಮ್ಮುವ ಅತ್ಯಂತ ಸೂಕ್ಷ್ಮವಾದ ವಿದ್ಯುತ್ಕಾಂತೀಯ ಸಂಕೇತಗಳನ್ನು ಪತ್ತೆಹಚ್ಚುತ್ತದೆ.
ಹೆಸರಿನ ಅರ್ಥ: ವೈದ್ಯಕೀಯ ಲೋಕದಲ್ಲಿ ಹೃದಯದ ಲಯವನ್ನು ಮರ್ಮರ್ ಎನ್ನಲಾಗುತ್ತದೆ. ಕಾಣೆಯಾದ ಅಥವಾ ಅಡಗಿಕೊಂಡಿರುವ ವ್ಯಕ್ತಿಯನ್ನು ಹುಡುಕುವುದರಿಂದ ಇದಕ್ಕೆ ಘೋಸ್ಟ್ ಮರ್ಮರ್ ಎಂದು ಹೆಸರಿಡಲಾಗಿದೆ.
ವಜ್ರದ ಬಳಕೆ: ಈ ತಂತ್ರಜ್ಞಾನದಲ್ಲಿ ಸಂಶ್ಲೇಷಿತ ವಜ್ರಗಳಲ್ಲಿರುವ ಸೂಕ್ಷ್ಮ ನ್ಯೂನತೆಗಳನ್ನು ಬಳಸಿ ಸೆನ್ಸಾರ್‌ಗಳನ್ನು ತಯಾರಿಸಲಾಗಿದೆ. ಇವು ಎಷ್ಟೇ ದೂರದಲ್ಲಿದ್ದರೂ ಮನುಷ್ಯನ ಅಸ್ತಿತ್ವವನ್ನು ಪತ್ತೆಹಚ್ಚಬಲ್ಲವು.

ಇರಾನ್ ಬೆಟ್ಟಗಳಲ್ಲಿ ನಡೆದ ರೋಚಕ ರಕ್ಷಣೆ

ದಕ್ಷಿಣ ಇರಾನ್‌ನಲ್ಲಿ ಅಮೆರಿಕದ F-15 ಯುದ್ಧ ವಿಮಾನ ಪತನಗೊಂಡಾಗ, ಅದರ ಪೈಲಟ್ 'ಡ್ಯೂಡ್ 44 ಬ್ರಾವೋ ಎಂಬುವವರು ಪಾರಾಗಿದ್ದರು. ಆದರೆ ಅವರು ಇರಾನ್ ಸೈನಿಕರಿಗೆ ಸಿಲುಕಬಾರದೆಂಬ ಕಾರಣಕ್ಕೆ ನಿರ್ಜನ ಪರ್ವತದ ಸಂದುಗಳ ನಡುವೆ ಅಡಗಿಕೊಂಡಿದ್ದರು. ಸುಮಾರು ಎರಡು ದಿನಗಳ ಕಾಲ ಅವರು ಯಾರಿಗೂ ಪತ್ತೆಯಾಗದೆ ನಾಪತ್ತೆಯಾಗಿದ್ದರು.
ಅವರು ಹೊಂದಿದ್ದ ಸಂಕೇತ ನೀಡುವ ಉಪಕರಣಗಳು ಸರಿಯಾದ ಜಾಗವನ್ನು ತೋರಿಸುತ್ತಿರಲಿಲ್ಲ. ಆಗ ಸಿಐಎ ಈ ಘೋಸ್ಟ್ ಮರ್ಮರ್ ತಂತ್ರಜ್ಞಾನವನ್ನು ಬಳಕೆಗೆ ತಂದಿತು. ಜನರಿಲ್ಲದ ಆ ನಿರ್ಜನ ಪ್ರದೇಶದಲ್ಲಿ ಮನುಷ್ಯನ ಹೃದಯದ ಬಡಿತದ ಸಂಕೇತಗಳನ್ನು ಈ ಉಪಕರಣವು ಪತ್ತೆಹಚ್ಚಿತು. ಈ ಮೂಲಕ ಪೈಲಟ್ ಇದ್ದ ನಿಖರವಾದ ಜಾಗವನ್ನು ಖಚಿತಪಡಿಸಿಕೊಂಡ ಅಮೆರಿಕದ ರಕ್ಷಣಾ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಕರೆತಂದಿದೆ.

ಇದು ಹೇಗೆ ಕೆಲಸ ಮಾಡುತ್ತದೆ..?

ಸಾಮಾನ್ಯವಾಗಿ ಮನುಷ್ಯನ ಹೃದಯದ ಬಡಿತದ ಸಂಕೇತಗಳು ಎಷ್ಟು ಕ್ಷೀಣವಾಗಿರುತ್ತವೆ ಎಂದರೆ, ಅವುಗಳನ್ನು ಆಸ್ಪತ್ರೆಯಲ್ಲಿ ಎದೆಗೆ ಸೆನ್ಸಾರ್ ಅಂಟಿಸಿದರೆ ಮಾತ್ರ ಅಳೆಯಲು ಸಾಧ್ಯವಾಗುತ್ತದೆ. ಆದರೆ ಕ್ವಾಂಟಮ್ ಮ್ಯಾಗ್ನೆಟೋಮೆಟ್ರಿ ತಂತ್ರಜ್ಞಾನವು ಈ ಸಂಕೇತಗಳನ್ನು ಮೈಲುಗಳ ದೂರದಿಂದಲೇ ಪತ್ತೆಹಚ್ಚಬಲ್ಲದು. ಸುತ್ತಮುತ್ತಲಿನ ಶಬ್ದಗಳು ಮತ್ತು ಇತರ ವಿದ್ಯುತ್ಕಾಂತೀಯ ಅಡೆತಡೆಗಳ ನಡುವೆಯೂ ಕೇವಲ ಮನುಷ್ಯನ ಹೃದಯದ ಸಂಕೇತವನ್ನು ಮಾತ್ರ ಬೇರ್ಪಡಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತದೆ.

ಭವಿಷ್ಯದ ಯುದ್ಧಗಳಲ್ಲಿ ಇದರ ಪಾತ್ರ

ಈ ತಂತ್ರಜ್ಞಾನವನ್ನು ಅಮೆರಿಕದ ಪ್ರಸಿದ್ಧ ಲಾಕ್ಹೀಡ್ ಮಾರ್ಟಿನ್ ಕಂಪನಿಯ ಸ್ಕಂಕ್ ವರ್ಕ್ಸ್ ವಿಭಾಗವು ಅಭಿವೃದ್ಧಿಪಡಿಸಿದೆ. ಸದ್ಯಕ್ಕೆ ಇದನ್ನು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳಲ್ಲಿ ಪರೀಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ F-35 ನಂತಹ ಸುಧಾರಿತ ಯುದ್ಧ ವಿಮಾನಗಳಲ್ಲಿಯೂ ಇದನ್ನು ಅಳವಡಿಸುವ ಸಾಧ್ಯತೆಯಿದೆ.
ಇದು ಜನನಿಬಿಡ ಪ್ರದೇಶಗಳಲ್ಲಿ ಕೆಲಸ ಮಾಡುವುದು ಕಷ್ಟ. ಆದರೆ ಇರಾನ್‌ನ ಮರುಭೂಮಿಯಂತಹ ನಿರ್ಜನ ಪ್ರದೇಶಗಳಲ್ಲಿ, ತಾಪಮಾನದ ವ್ಯತ್ಯಾಸ ಹೆಚ್ಚಿರುವ ಜಾಗಗಳಲ್ಲಿ ಇದು ಅಮೋಘವಾಗಿ ಕೆಲಸ ಮಾಡುತ್ತದೆ ಎಂದು ಅಧ್ಯಕ್ಷ ಟ್ರಂಪ್ ಮತ್ತು ಸಿಐಎ ನಿರ್ದೇಶಕ ಜಾನ್ ರಾಟ್‌ಕ್ಲಿಫ್ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net