ಇರಾನ್-ಇಸ್ರೇಲ್ ಕದನ ವಿರಾಮ ಮುರಿದು ಯುದ್ಧಕ್ಕೆ ಪ್ರಚೋದನೆ ನೀಡಿದ್ದೇ ಈ ಮಾಸ್ಟರ್‌ಮೈಂಡ್! ಯಾರು ಈ ಅಹ್ಮದ್ ವಾಹಿದಿ? Ahmad Vahidi

ಇರಾನ್-ಇಸ್ರೇಲ್ ಕದನ ವಿರಾಮ ಮುರಿದು ಯುದ್ಧಕ್ಕೆ ಪ್ರಚೋದನೆ ನೀಡಿದ್ದೇ ಈ ಮಾಸ್ಟರ್‌ಮೈಂಡ್! ಯಾರು ಈ ಅಹ್ಮದ್ ವಾಹಿದಿ?
ಇರಾನ್-ಇಸ್ರೇಲ್ ಕದನ ವಿರಾಮ ಮುರಿದು ಯುದ್ಧಕ್ಕೆ ಪ್ರಚೋದನೆ ನೀಡಿದ್ದೇ ಈ ಮಾಸ್ಟರ್‌ಮೈಂಡ್! ಯಾರು ಈ ಅಹ್ಮದ್ ವಾಹಿದಿ?
Published on
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಕಳೆದ ಏಪ್ರಿಲ್ ತಿಂಗಳಿನಿಂದ ಜಾರಿಯಲ್ಲಿದ್ದ ಅತ್ಯಂತ ಸೂಕ್ಷ್ಮ ಕದನ ವಿರಾಮವನ್ನು ಗಾಳಿಗೆ ತೂರಿ, ಇಸ್ರೇಲ್ ಮೇಲೆ ಇತ್ತೀಚೆಗೆ ಭೀಕರ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮಳೆಗರೆಯುವಂತೆ ಇರಾನ್ ಸರ್ಕಾರವನ್ನು ಪ್ರಚೋದಿಸಿದ ಆ ರಹಸ್ಯ ಶಕ್ತಿ ಯಾರು ಎಂಬುದು ಈಗ ಜಾಗತಿಕ ರಕ್ಷಣಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಮೆರಿಕದ ಪ್ರಸಿದ್ಧ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಇಡೀ ಇಸ್ರೇಲ್ ಧ್ವಂಸ ಕಾರ್ಯಾಚರಣೆಯ ಹಿಂದೆ ಇರಾನ್‌ನ ಅತ್ಯಂತ ಶಕ್ತಿಶಾಲಿ ಮಿಲಿಟರಿ ಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಡೆಪ್ಯುಟಿ ಕಮ್ಯಾಂಡರ್ ಅಹ್ಮದ್ ವಾಹಿದಿ (Ahmad Vahidi) ಅವರ ಮಾಸ್ಟರ್ ಪ್ಲಾನ್ ಅಡಗಿದೆ.
ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಭೀಕರ ದಾಳಿಗಳಿಗೆ ಇರಾನ್ ಅತ್ಯಂತ ಕಠಿಣವಾದ ಮಿಲಿಟರಿ ಉತ್ತರ ನೀಡಲೇಬೇಕು ಎಂದು ಅಹ್ಮದ್ ವಾಹಿದಿ ಹಠ ಹಿಡಿದು ಈ ದಾಳಿಯನ್ನು ಮುನ್ನಡೆಸಿದ್ದಾರೆ. ಇದರ ಬೆನ್ನಲ್ಲೇ ಇಸ್ರೇಲ್ ಕೂಡ ಇರಾನ್‌ನ ಪ್ರಮುಖ ನಗರಗಳಾದ ಟೆಹ್ರಾನ್, ತಬ್ರಿಜ್, ಕರಾಜ್ ಮತ್ತು ಇಸ್ಫಹಾನ್‌ಗಳ ಮೇಲೆ ರಾತ್ರೋರಾತ್ರಿ ಸರಣಿ ಬಾಂಬ್ ದಾಳಿಗಳನ್ನು ನಡೆಸಿ ಪ್ರತಿಕಾರ ತೀರಿಸಿಕೊಂಡಿದ್ದು, ಜಾಗತಿಕ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ.

ಯಾರು ಈ ಅಹ್ಮದ್ ವಾಹಿದಿ?

ಇರಾನ್‌ನ ಅತ್ಯಂತ ಪ್ರಭಾವಿ ಮತ್ತು ಅಪಾಯಕಾರಿ ಮಿಲಿಟರಿ ನೆಟ್‌ವರ್ಕ್‌ನ ತಲೆಯಾಗಿರುವ ಅಹ್ಮದ್ ವಾಹಿದಿ ಜೂನ್ 1958 ರಲ್ಲಿ ಇರಾನ್‌ನ ಶಿರಾಜ್ ನಗರದಲ್ಲಿ ಜನಿಸಿದರು. ಕೇವಲ ಮಿಲಿಟರಿ ತರಬೇತಿಯಷ್ಟೇ ಅಲ್ಲದೆ ತಾಂತ್ರಿಕವಾಗಿಯೂ ಭಾರಿ ಬುದ್ಧಿವಂತರಾಗಿರುವ ಇವರು ಎಲೆಕ್ಟ್ರಾನಿಕ್ಸ್‌ನಲ್ಲಿ ಬ್ಯಾಚುಲರ್ ಪದವಿ, ಇಂಡಸ್ಟ್ರಿಯಲ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ಸ್ ಮತ್ತು 'ಸ್ಟ್ರಾಟೆಜಿಕ್ ಸ್ಟಡೀಸ್ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಇರಾನ್-ಇರಾಕ್ ಭೀಕರ ಯುದ್ಧದ ಸಮಯದಲ್ಲಿ ಮಿಲಿಟರಿ ಇಂಟೆಲಿಜೆನ್ಸ್ (ಗೂಢಚಾರಿಕೆ) ವಿಭಾಗದಲ್ಲಿ ಕೆಲಸ ಮಾಡಿದ ಇವರು, ಇಡೀ ಇರಾನ್ ದೇಶದ ಗುಪ್ತಚರ ಜಾಲವನ್ನು ಗಟ್ಟಿಗೊಳಿಸಿದ ಮುಖ್ಯಸ್ಥರಾಗಿದ್ದಾರೆ.

'ಕುದ್ಸ್ ಫೋರ್ಸ್'ನ ಮೊದಲ ಕಮ್ಯಾಂಡರ್!

ಹಿಜ್ಬುಲ್ಲಾ-ಹಮಾಸ್‌ನ ಸೃಷ್ಟಿಕರ್ತ: 1988 ರಲ್ಲಿ ಇರಾನ್ ದೇಶದ ಗಡಿಯಿಂದ ಹೊರಗೆ ರಹಸ್ಯ ಕಾರ್ಯಾಚರಣೆಗಳನ್ನು ನಡೆಸುವ ಐಆರ್‌ಜಿಸಿಯ ಅತ್ಯಂತ ಅಪಾಯಕಾರಿ ವಿಶೇಷ ಪಡೆಯಾದ ‘ಕುದ್ಸ್ ಫೋರ್ಸ್​ನ ಮೊದಲ ಕಮ್ಯಾಂಡರ್ ಆಗಿ ಅಹ್ಮದ್ ವಾಹಿದಿ ನೇಮಕಗೊಂಡಿದ್ದರು. ಲೆಬನಾನ್‌ನ ಹಿಜ್ಬುಲ್ಲಾ, ಗಾಜಾದ ಹಮಾಸ್ ಮತ್ತು ಇರಾಕ್‌ನ ಉಗ್ರಗಾಮಿ ಸಂಘಟನೆಗಳಿಗೆ ಹಣ, ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ತರಬೇತಿ ನೀಡಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಸಜ್ಜುಗೊಳಿಸಿದ್ದೇ ಈ ವಾಹಿದಿ.
ಸುಲೈಮಾನಿಗೆ ಗಾಡ್‌ಫಾದರ್: 1997 ರವರೆಗೆ ಈ ಪಡೆಯನ್ನು ಮುನ್ನಡೆಸಿದ ಇವರ ನಂತರವೇ ಜಗತ್ಪ್ರಸಿದ್ಧ ಜನರಲ್ ಖಾಸಿಮ್ ಸುಲೈಮಾನಿ (2020 ರಲ್ಲಿ ಅಮೆರಿಕ ದಾಳಿಗೆ ಬಲಿಯಾದವರು) ಈ ಪಡೆಯ ಜವಾಬ್ದಾರಿ ವಹಿಸಿಕೊಂಡಿದ್ದರು.

ಇರಾನ್ ಸೇನಾ ಶಕ್ತಿಯ ‘ಸುವರ್ಣ ಯುಗ’ದ ಶಿಲ್ಪಿ

ಕಳೆದ 2009 ರಿಂದ 2013 ರವರೆಗೆ ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರ ಸರ್ಕಾರದಲ್ಲಿ ಅಹ್ಮದ್ ವಾಹಿದಿ ದೇಶದ ರಕ್ಷಣಾ ಮಂತ್ರಿಯಾಗಿದ್ದರು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಇರಾನ್ ಬೇರೆ ದೇಶಗಳ ಮೇಲಿನ ಅವಲಂಬನೆ ಬಿಟ್ಟು ಸ್ವದೇಶಿಯಾಗಿಯೇ ಭೀಕರ ಕ್ಷಿಪಣಿಗಳು ಮತ್ತು ಸುಸಜ್ಜಿತ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವಂತೆ ಮಾಡಿದರು. ಇರಾನ್ ಮಾಧ್ಯಮಗಳು ಈ ಅವಧಿಯನ್ನು ದೇಶದ ಸೇನಾ ಇತಿಹಾಸದ ಸುವರ್ಣ ಯುಗ ಎಂದು ಕರೆಯುತ್ತವೆ.
ನಂತರ 2021 ರಲ್ಲಿ ಇಬ್ರಾಹಿಂ ರೈಸಿ ಅವರ ಸರ್ಕಾರದಲ್ಲಿ ದೇಶದ ಗೃಹ ಮಂತ್ರಿಯಾಗಿಯೂ ಕೆಲಸ ಮಾಡಿದರು. 2022 ರಲ್ಲಿ ಹಿಜಾಬ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾಗಿ ಸಾವನ್ನಪ್ಪಿದ ಮಹ್ಸಾ ಅಮಿನಿ ಘಟನೆಯ ನಂತರ ಇಡೀ ಇರಾನ್ ದೇಶಾದ್ಯಂತ ಭುಗಿಲೆದ್ದಿದ್ದ ಭೀಕರ ಜನತಾ ಪ್ರತಿಭಟನೆಯನ್ನು ಅತ್ಯಂತ ಕ್ರೂರವಾಗಿ ಹತ್ತಿಕ್ಕಿದ ದೇಶದ ಉನ್ನತ ನಾಯಕರಲ್ಲಿ ಈ ಅಹ್ಮದ್ ವಾಹಿದಿ ಪ್ರಮುಖರಾಗಿದ್ದಾರೆ.

ಜಾಗತಿಕ ಮಟ್ಟದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್!

ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದು ಮತ್ತು ಇರಾನ್‌ನ ರಹಸ್ಯ ಪರಮಾಣು ಬಾಂಬ್ ತಯಾರಿಕಾ ಯೋಜನೆಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅಮೆರಿಕ, ಕೆನಡಾ ಮತ್ತು ಯುರೋಪಿಯನ್ ಯೂನಿಯನ್ (EU) ದೇಶಗಳು ಅಹ್ಮದ್ ವಾಹಿದಿ ಮೇಲೆ ಭಾರಿ ಜಾಗತಿಕ ನಿಷೇಧಗಳನ್ನು ಹೇರಿವೆ.
ಅರ್ಜೆಂಟೀನಾ ದೇಶವು 1994 ರಲ್ಲಿ ಬ್ಯೂನಸ್ ಐರಿಸ್ ನಗರದಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದ (85 ಜನರ ಸಾವು) ಹಿಂದೆ ಇವರ ಕೈವಾಡವಿದೆ ಎಂದು ಆರೋಪಿಸಿದ್ದು, ಇವರ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಇಷ್ಟೊಂದು ಕರಾಳ ಹಿನ್ನೆಲೆ ಹೊಂದಿರುವ ಅಹ್ಮದ್ ವಾಹಿದಿ ಈಗ ಇರಾನ್ ಸರ್ಕಾರದ ತೆರೆಮರೆಯ ಅಸಲಿ ಚುಕ್ಕಾಣಿ ಹಿಡಿದಿದ್ದು, ಇಸ್ರೇಲ್ ವಿರುದ್ಧ ನೇರ ಯುದ್ಧ ಸಾರಲು ಇಡೀ ಇರಾನ್ ಸೇನೆಯನ್ನು ಮುನ್ನಡೆಸುತ್ತಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net