ನೈಜ ಸುಖಕ್ಕಿಂತ 'ಅದೇ' ಹೆಚ್ಚಾಯ್ತು! ಜಾಗತಿಕ ಜನನ ಪ್ರಮಾಣ ಕುಸಿತದ ಹಿಂದೆ ಅಡಗಿದೆ ಶಾಕಿಂಗ್ ಸತ್ಯ! Birth Rates

ನೈಜ ಸುಖಕ್ಕಿಂತ 'ಅದೇ' ಹೆಚ್ಚಾಯ್ತು! ಜಾಗತಿಕ ಜನನ ಪ್ರಮಾಣ ಕುಸಿತದ ಹಿಂದೆ ಅಡಗಿದೆ ಶಾಕಿಂಗ್ ಸತ್ಯ! Birth Rates
ನೈಜ ಸುಖಕ್ಕಿಂತ 'ಅದೇ' ಹೆಚ್ಚಾಯ್ತು! ಜಾಗತಿಕ ಜನನ ಪ್ರಮಾಣ ಕುಸಿತದ ಹಿಂದೆ ಅಡಗಿದೆ ಶಾಕಿಂಗ್ ಸತ್ಯ! Birth Rates
Published on

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕ ಭದ್ರತೆ ಮತ್ತು ಉತ್ತಮ ಜೀವನಮಟ್ಟದಿಂದಾಗಿ ಜನನ ಪ್ರಮಾಣ ಕುಸಿತ
  • ಮುಂದುವರಿಯುತ್ತಿರುವ ದೇಶಗಳಲ್ಲಿ ಜನನ ಪ್ರಮಾಣದ ಇಳಿಕೆಯ ಟ್ರೆಂಡ್​ ಕಂಡುಬರುತ್ತಿಲ್ಲ ಎಂದ ಸಂಶೋಧಕರು
  • ತಂತ್ರಜ್ಞಾನವು ಮಾನವನ ನಡವಳಿಕೆಯಲ್ಲಿ ತಂದಿರುವ ದೊಡ್ಡ ಬದಲಾವಣೆ ಜನನ ಪ್ರಮಾಣ ಕುಸಿಯಲು ಕಾರಣ
  • ಸ್ಮಾರ್ಟ್‌ಫೋನ್‌ಗಳ ಆಗಮನಕ್ಕೂ ಮತ್ತು ಜನನ ಪ್ರಮಾಣದ ಕುಸಿತಕ್ಕೂ ಅತ್ಯಂತ ನಿಕಟ ಸಂಪರ್ಕವಿದೆ
Birth Rates : ಕಳೆದ ಎರಡು ದಶಕಗಳ ಜಾಗತಿಕ ಜನನ ಪ್ರಮಾಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕ ಭದ್ರತೆ ಮತ್ತು ಉತ್ತಮ ಜೀವನಮಟ್ಟದಿಂದಾಗಿ ಜನನ ಪ್ರಮಾಣವು ಗಣನೀಯವಾಗಿ ಕುಸಿಯುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಆದರೆ, ಇದೇ ಪರಿಸ್ಥಿತಿ ಎಲ್ಲಾ ಕಡೆಗಳಲ್ಲೂ ಇಲ್ಲ, ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿರುವ ಬಡ ಹಾಗೂ ಮುಂದುವರಿಯುತ್ತಿರುವ ದೇಶಗಳಲ್ಲಿ ಜನನ ಪ್ರಮಾಣದ ಇಳಿಕೆಯ ಟ್ರೆಂಡ್​ ಕಂಡುಬರುತ್ತಿಲ್ಲ ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಮುಂದುವರಿದ ರಾಷ್ಟ್ರಗಳು ಸಣ್ಣ ಕುಟುಂಬದತ್ತ ಮುಖ ಮಾಡುತ್ತಿದ್ದರೆ, ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ದೇಶಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಇಂದಿಗೂ ಸ್ಥಿರವಾಗಿ ಮುಂದುವರಿದಿರುವುದು ಸಂಶೋಧನೆಯಿಂದ ದೃಢಪಟ್ಟಿದೆ.
ಅಂದಹಾಗೆ, ಜಾಗತಿಕವಾಗಿ ಜನನ ಪ್ರಮಾಣ ಕುಸಿಯುತ್ತಿರುವುದಕ್ಕೆ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ತಗಲುವ ಭಾರಿ ವೆಚ್ಚವೇ ಪ್ರಮುಖ ಕಾರಣ ಎಂದು ಇದುವರೆಗೆ ವಿಶ್ಲೇಷಿಸಲಾಗುತ್ತಿತ್ತು. ಆರ್ಥಿಕ ಹೊರೆಗೆ ಹೆದರಿ ಅನೇಕರು ಮಕ್ಕಳನ್ನು ಹೆರಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ನಿಜವಾದರೂ, ಇದರ ಹಿಂದೆ ತಂತ್ರಜ್ಞಾನವು ಮಾನವನ ನಡವಳಿಕೆಯಲ್ಲಿ ತಂದಿರುವ ದೊಡ್ಡ ಬದಲಾವಣೆಯೂ ಅಡಗಿದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಅತಿಯಾದ ಬಳಕೆ ಮತ್ತು ಜನರ ಜೀವನಶೈಲಿಯಲ್ಲಿನ ಬದಲಾವಣೆಗಳು ಜನನ ಪ್ರಮಾಣದ ಇಳಿಕೆಗೆ ಪರೋಕ್ಷವಾಗಿ ಭಾರಿ ಕೊಡುಗೆ ನೀಡುತ್ತಿವೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ.
ಅಮೆರಿಕದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ ಸೇರಿದಂತೆ ಪ್ರಮುಖ ಸಂಸ್ಥೆಗಳು ನಡೆಸಿರುವ ಹೊಸ ಅಧ್ಯಯನಗಳು, ಸ್ಮಾರ್ಟ್‌ಫೋನ್‌ಗಳ ಆಗಮನಕ್ಕೂ ಮತ್ತು ಜನನ ಪ್ರಮಾಣದ ಕುಸಿತಕ್ಕೂ ಅತ್ಯಂತ ನಿಕಟ ಸಂಬಂಧವಿರುವುದನ್ನು ಪತ್ತೆಹಚ್ಚಿವೆ.
ಯುಎಸ್‌ನ ಮಿಡಲ್‌ಬರಿ ಕಾಲೇಜಿನ ಅರ್ಥಶಾಸ್ತ್ರಜ್ಞೆ ಕೈಟ್ಲಿನ್ ಮೈಯರ್ಸ್ ಮತ್ತು ಅವರ ವಿದ್ಯಾರ್ಥಿ ಎಜೆಕಿಯಲ್ ಹೂಪರ್ ನಡೆಸಿರುವ ಜಂಟಿ ಸಂಶೋಧನೆಯ ಪ್ರಕಾರ, ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳು ವ್ಯಾಪಕವಾಗಿ ಬಳಕೆಗೆ ಬಂದ 2007 ರಿಂದ 2024 ರ ನಡುವಿನ ಅವಧಿಯಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿ ಶೇ. 22 ರಷ್ಟು ಭಾರಿ ಕುಸಿತ ಕಂಡುಬಂದಿದೆ.
ಇದು ಕೇವಲ ಅಮೆರಿಕ ಅಥವಾ ಯಾವುದೋ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುವ ಸಮಸ್ಯೆಯಲ್ಲ, ಬದಲಿಗೆ ಇಡೀ ವಿಶ್ವವನ್ನೇ ಕಾಡುತ್ತಿರುವ ಜಾಗತಿಕ ವಿದ್ಯಮಾನವಾಗಿದೆ. ಸ್ಮಾರ್ಟ್‌ಫೋನ್ ಮತ್ತು ಡಿಜಿಟಲ್ ತಂತ್ರಜ್ಞಾನದ ಅತಿಯಾದ ಹರಡುವಿಕೆಯಿಂದಾಗಿ ಜನರ ನಡುವಿನ ಪ್ರತ್ಯಕ್ಷ ಅಥವಾ ಮುಖಾಮುಖಿ ಒಡನಾಟ ಗಣನೀಯವಾಗಿ ಕಡಿಮೆಯಾಗಿದೆ. ಉದಾಹರಣೆಗೆ, 2003 ರಲ್ಲಿ ಜನರು ದಿನಕ್ಕೆ ಸರಾಸರಿ 68 ನಿಮಿಷಗಳನ್ನು ಪರಸ್ಪರ ಭೇಟಿಯಾಗಿ ಮಾತನಾಡಲು ಕಳೆಯುತ್ತಿದ್ದರು, ಆದರೆ 2019ರ ವೇಳೆಗೆ ಈ ಸಮಯ ಕೇವಲ 38 ನಿಮಿಷಗಳಿಗೆ ಕುಸಿದಿದೆ. ಇದೇ ಅವಧಿಯಲ್ಲಿ ಜನರು ಕಂಪ್ಯೂಟರ್ ಮತ್ತು ಫೋನ್‌ಗಳ ಪರದೆಯ ಮುಂದೆ ಕಳೆಯುವ ಸಮಯ 22 ನಿಮಿಷಗಳಿಂದ ಬರೋಬ್ಬರಿ 96 ನಿಮಿಷಗಳಿಗೆ ಏರಿಕೆಯಾಗಿದೆ.
ಇಂಟರ್ನೆಟ್‌ನಲ್ಲಿ ಅಶ್ಲೀಲ ಸಾಹಿತ್ಯ ಹಾಗೂ ವಿಡಿಯೋಗಳನ್ನು ಹುಡುಕುವ ಮತ್ತು ವೀಕ್ಷಿಸುವವರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದ್ದರೂ, ವಾಸ್ತವದಲ್ಲಿ ದಂಪತಿ ಅಥವಾ ವ್ಯಕ್ತಿಗಳ ನಡುವಿನ ಲೈಂಗಿಕ ಚಟುವಟಿಕೆಗಳು ಗಣನೀಯವಾಗಿ ಕ್ಷೀಣಿಸಿವೆ ಎಂದು ಈ ಅಧ್ಯಯನಗಳು ತೋರಿಸಿವೆ. ಇಂಟರ್ನೆಟ್‌ನಲ್ಲಿ ಅತ್ಯಂತ ಸುಲಭವಾಗಿ ಮತ್ತು ಉಚಿತವಾಗಿ ಲಭ್ಯವಿರುವ ಇಂತಹ ದೃಶ್ಯಗಳನ್ನೇ ತಮ್ಮ ನೈಜ ಲೈಂಗಿಕ ಜೀವನಕ್ಕೆ ಪರ್ಯಾಯವಾಗಿ ಬಳಸಿಕೊಂಡು ತೃಪ್ತಿಪಡುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವುದು ಈ ಸಂಶೋಧನೆಯಲ್ಲಿ ಕಂಡುಬಂದಿರುವ ಅತ್ಯಂತ ಆಘಾತಕಾರಿ ಅಂಶವಾಗಿದೆ. ತಂತ್ರಜ್ಞಾನದ ಈ ವ್ಯಸನವು ಮನುಷ್ಯರನ್ನು ನೈಜ ಸಂಬಂಧಗಳಿಂದ ದೂರವಿಡುತ್ತಿದ್ದು, ಜಾಗತಿಕ ಜನನ ಪ್ರಮಾಣದ ಕುಸಿತಕ್ಕೆ ಪ್ರಮುಖ ಕಾರಣವಾಗುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net