ಥರ್ಡ್ ವರ್ಲ್ಸ್ ಕಂಟ್ರೀಸ್ನ ವಲಸೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ
ಟ್ರಂಪ್ ಈ ಪ್ರಮುಖ ನಿರ್ಧಾರವನ್ನು ಕೈಗೊಂಡಿರುವುದು ಗಮನಾರ್ಹ
ಅಷ್ಟಕ್ಕೂಏನಿದು ಥರ್ಡ್ ವರ್ಲ್ಸ್ ಕಂಟ್ರೀಸ್?
ಯುಎಸ್: ಶ್ವೇತಭವನದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ರಾಷ್ಟ್ರೀಯ ಗಾರ್ಡ್‌ಗಳು ಹತ್ಯೆಗೀಡಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಥರ್ಡ್ ವರ್ಲ್ಸ್ ಕಂಟ್ರೀಸ್ ದೇಶಗಳಿಂದ ವಲಸೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ. ಗುಂಡಿನ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಅಮೆರಿಕ ಕರೆದಿದ್ದು, ದಾಳಿಕೋರ ಅಫ್ಘಾನ್ ಪ್ರಜೆ ಎಂದು ಬಹಿರಂಗವಾದ ಬಳಿಕ ಟ್ರಂಪ್ ಈ ಪ್ರಮುಖ ನಿರ್ಧಾರವನ್ನು ಕೈಗೊಂಡಿರುವುದು ಗಮನಾರ್ಹ.
ದೇಶದ ವ್ಯವಸ್ಥೆಯು ಸಂಪೂರ್ಣವಾಗಿ ಪುನಃಸ್ಥಾಪಿಸಲ್ಪಡುವವರೆಗೆ ನಾನು ಎಲ್ಲಾ ಮೂರನೇ ವಿಶ್ವ ರಾಷ್ಟ್ರಗಳಿಂದ ವಲಸೆಯನ್ನು ಸ್ಥಗಿತಗೊಳಿಸುವೆ. ಪರಿಸ್ಥಿತಿಯನ್ನು ಸಂಪೂರ್ಣವಾಗಿ ಸರಿಪಡಿಸಲು ಉಳಿದಿರುವ ಒಂದೇ ಒಂದು ಮಾರ್ಗವೆಂದರೆ ಅದು ಹಿಮ್ಮುಖ ವಲಸೆ ಎಂದು ಟ್ರಂಪ್ ಹೇಳಿದ್ದಾರೆ.
ಆದಾಗ್ಯೂ, ಟ್ರಂಪ್ 'ಮೂರನೇ ವಿಶ್ವ ರಾಷ್ಟ್ರಗಳು' ಎಂದು ಯಾವ ದೇಶಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅಸಲಿಗೆ, ಶೀತಲ ಸಮರದ ಸಮಯದಲ್ಲಿ ಈ ಪದವನ್ನು ಬಳಸಲಾಗುತ್ತಿತ್ತು. ಅಧಿಕ ಮಟ್ಟದ ಬಡತನ ಹೊಂದಿರುವ ದೇಶಗಳನ್ನು ಉಲ್ಲೇಖಿಸಲು ಪ್ರಸ್ತುತ ಕಾಲಘಟ್ಟದಲ್ಲಿ ಕೆಲವರು ಈ ಪದವನ್ನು ಬಳಸುತ್ತಾರೆ ಎನ್ನಲಾಗಿದೆ.
ಯುಎಸ್ ವಲಸೆ ಇಲಾಖೆಯ ಪ್ರಕಾರ, ಮೂರನೇ ವಿಶ್ವ ರಾಷ್ಟ್ರಗಳು ಎಂಬ ಪದದ ವ್ಯಾಖ್ಯಾನವಿಲ್ಲ. ಟ್ರಂಪ್ ಅವರ ನಡೆಯಿಂದ ಯಾವ ದೇಶಗಳು ಪರಿಣಾಮಕ್ಕೆ ಒಳಗಾಗುತ್ತವೆ ಎಂಬುದರ ಕುರಿತು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ.
ಅಷ್ಟಕ್ಕೂ ಮೂರನೇ ವಿಶ್ವ ರಾಷ್ಟ್ರಗಳು ಯಾವುವು?
ಈ ಪದವು ಹೇಗೆ ಹುಟ್ಟಿಕೊಂಡಿತು ಎಂಬುದೇ ಅಸ್ಪಷ್ಟ. ಇತಿಹಾಸಕಾರರು ಹೇಳುವಂತೆ ಇದು ಮೊದಲು 1952ರಲ್ಲಿ ಆಲ್ಫ್ರೆಡ್ ಸ್ಯಾವೇಜ್ ಬರೆದ 'ಮೂರು ಪ್ರಪಂಚಗಳು, ಒಂದು ಗ್ರಹ' ಎಂಬ ಲೇಖನದಲ್ಲಿ ಕಾಣಿಸಿಕೊಂಡಿತು. ಕೋಲ್ಡ್ ವಾರ್ ಸಮಯದಲ್ಲಿ ದೇಶಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲು ಈ ಪರಿಕಲ್ಪನೆ ಬಂದಿತು ಎನ್ನಲಾಗಿದೆ. ಆದಾಗ್ಯೂ, ಆ ಸಮಯದಲ್ಲಿ, ಈ ಪದವು ಶ್ರೀಮಂತ ದೇಶಗಳು ಮತ್ತು ಬಡ ದೇಶಗಳು ಎಂಬ ಅರ್ಥವನ್ನು ಕೊಡುತ್ತಿರಲಿಲ್ಲ.
ಶೀತಲ ಸಮರದ ಸಮಯದಲ್ಲಿ, ದೇಶಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಯಿತು. ಮೊದಲ ಜಗತ್ತಿನ ದೇಶಗಳು, ಎರಡನೇ ಜಗತ್ತಿನ ದೇಶಗಳು ಮತ್ತು ಮೂರನೇ ಜಗತ್ತಿನ ದೇಶಗಳು. ಇದರಲ್ಲಿ ಮೊದಲ ಜಗತ್ತಿನ ದೇಶಗಳಲ್ಲಿ ಅಮೆರಿಕ, ಪಶ್ಚಿಮ ಯುರೋಪ್ ಮತ್ತು ಮಿತ್ರರಾಷ್ಟ್ರಗಳು (ಬಂಡವಾಳಶಾಹಿ ಬಣ) ಸೇರಿವೆ. ಇವು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶಗಳಾಗಿವೆ.
ಎರಡನೇ ಜಗತ್ತಿನ ದೇಶಗಳಲ್ಲಿ ಸೋವಿಯತ್ ಒಕ್ಕೂಟ, ಚೀನಾ ಮತ್ತು ಪೂರ್ವ ಬಣ (ಕಮ್ಯುನಿಸ್ಟ್ ಬಣ) ಸೇರಿವೆ. ಇವು ಸರ್ಕಾರಿ ನಿಯಂತ್ರಣದಲ್ಲಿ ನಡೆಯುವ ಕಮ್ಯುನಿಸ್ಟ್ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳಾಗಿವೆ.
ಇನ್ನು ಮೂರನೇ ಜಗತ್ತಿನ ದೇಶಗಳು ಯಾವುದೇ ಬಣದ (ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ) ಭಾಗವಾಗಿರದ ದೇಶಗಳಿಗೆ ಸೇರಿದೆ. ಹೀಗಾಗಿ, ಮೂರನೇ ಪ್ರಪಂಚ ಎಂಬ ಪದವನ್ನು ಮೂಲತಃ ಬಡ ದೇಶಗಳನ್ನು ಉಲ್ಲೇಖಿಸಲು ಅಥವಾ ಅರ್ಥೈಸಲು ಬಳಸುತ್ತಿರಲಿಲ್ಲ ಎಂದು ಹೇಳಲಾಗಿದೆ.
ಪ್ರಸ್ತುತ ಮೂರನೇ ಜಗತ್ತಿನ ದೇಶಗಳು ಯಾವುವು?
ಸೋವಿಯತ್ ಒಕ್ಕೂಟದ ಪತನದ ನಂತರ 'ಮೂರನೇ ಪ್ರಪಂಚ' ಎಂಬ ಪದವು ಬಳಕೆಯಿಂದ ಹೊರಗುಳಿದಿದೆ. ಈ ಪದದ ಸ್ಪಷ್ಟ ವ್ಯಾಖ್ಯಾನ ಈಗಿಲ್ಲ. ಇಂದಿನ ದಿನಗಳಲ್ಲಿ, ಕೆಲವರು ಆರ್ಥಿಕವಾಗಿ ಹಿಂದುಳಿದ ದೇಶಗಳನ್ನು ಉಲ್ಲೇಖಿಸಲು ಇದನ್ನು ಬಳಸುತ್ತಾರೆ. ವಿಶ್ವಸಂಸ್ಥೆಯು ಇವುಗಳನ್ನು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು ಅಥವಾ ಎಲ್ಡಿಸಿಗಳು ಎಂದು ವರ್ಗೀಕರಿಸುತ್ತದೆ.
ಪ್ರಸ್ತುತ, UN LDC ಪಟ್ಟಿಯಲ್ಲಿ 44 ದೇಶಗಳಿವೆ. ಅವುಗಳ ಪೈಕಿ ಆಫ್ರಿಕಾದಲ್ಲಿ 32, ಏಷ್ಯಾದಲ್ಲಿ 8 (ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್ ಸೇರಿದಂತೆ), ಕೆರಿಬಿಯನ್‌ನಲ್ಲಿ ಹೈಟಿ ಮತ್ತು ಪೆಸಿಫಿಕ್‌ನಲ್ಲಿ ಸೊಲೊಮನ್ ದ್ವೀಪಗಳು, ಕಿರಿಬಾಟಿ ಮತ್ತು ಟುವಾಲು ಸೇರಿವೆ,(ಏಜೆನ್ಸೀಸ್).