ಆಗಸದಲ್ಲೇ 200 ದಿನ ಸತತ ಹಾರಾಟ, ನಿದ್ರೆ ಬಂದ್ರೂ ಕೆಳಗೆ ಬೀಳಲ್ಲ: ಪಕ್ಷಿಗಳ ಅದ್ಭುತ ರಹಸ್ಯವನ್ನು ತಿಳಿಯಿರಿ...Amazing Secret Of Birds

ಆಗಸದಲ್ಲೇ 200 ದಿನ ಸತತ ಹಾರಾಟ, ನಿದ್ರೆ ಬಂದ್ರೂ ಕೆಳಗೆ ಬೀಳಲ್ಲ: ಪಕ್ಷಿಗಳ ಅದ್ಭುತ ರಹಸ್ಯವನ್ನು ತಿಳಿಯಿರಿ...Amazing Secret Of Birds
ಆಗಸದಲ್ಲೇ 200 ದಿನ ಸತತ ಹಾರಾಟ, ನಿದ್ರೆ ಬಂದ್ರೂ ಕೆಳಗೆ ಬೀಳಲ್ಲ: ಪಕ್ಷಿಗಳ ಅದ್ಭುತ ರಹಸ್ಯವನ್ನು ತಿಳಿಯಿರಿ...Amazing Secret Of Birds
Published on

ಪ್ರಮುಖ ಮುಖ್ಯಾಂಶಗಳು

  • ಈ ಭೂಮಂಡಲದಲ್ಲಿ ಲೆಕ್ಕವಿಲ್ಲದಷ್ಟು ನಿಗೂಢತೆ ಅಡಗಿದೆ
  • ವಿಸ್ಮಯ ಲೋಕದ ಬಗ್ಗೆ ಮಾನವ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದ ಆಳದಷ್ಟಿದೆ
  • ಆದರೆ, ಮಾನವ ಇಂದು ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ
  • ಕೆಲವು ಪಕ್ಷಿಗಳಂತೂ ವಿಜ್ಞಾನ ಲೋಕವನ್ನೇ ತಮ್ಮ ವಿಸ್ಮಯಗಳಿಂದ ಬೆರಗುಗೊಳಿಸಿವೆ
Amazing Secret Of Birds : ಈ ಭೂಮಂಡಲದಲ್ಲಿ ಲೆಕ್ಕವಿಲ್ಲದಷ್ಟು ನಿಗೂಢತೆ ಅಡಗಿದೆ. ಅವುಗಳಿಂದಲೇ ಭೂಮಿ ಕೂಡಿರುವುದು ಹೊಸ ವಿಷಯವೇನಲ್ಲ ಬಿಡಿ. ವಿಸ್ಮಯಕಾರಿ ಲೋಕದ ಬಗ್ಗೆ ಮಾನವ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದ ಆಳದಷ್ಟಿದೆ. ಆದರೆ, ತಿಳಿದಿರುವುದು ಒಂದು ಬೊಗಸೆಯಷ್ಟು ಮಾತ್ರ. ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ಒಂದು ನಿಮಷ ನಾವೇ ಬೆರಗಾಗುತ್ತೀವಿ.
ಸಾಧಾರಣವಾಗಿ ಯಾವುದೇ ಜೀವಿಗಳು ವಿಶ್ರಾಂತಿ ಸ್ಥಿತಿಯಲ್ಲಿದ್ದಾಗ ಅಥವಾ ದೇಹವು ಯಾವುದೇ ಕ್ರಿಯೆಯಿಲ್ಲದೆ ನಿಶ್ಚಲವಾಗಿದ್ದಾಗ ಮಾತ್ರ ನಿದ್ದೆ ಮಾಡಲು ಸಾಧ್ಯ ಎಂಬುದು ನಮ್ಮಲ್ಲಿನ ಸಹಜ ನಂಬಿಕೆಯಾಗಿದೆ, ಆದರೆ ಕೆಲವು ಪಕ್ಷಿಗಳು ಈ ಕಲ್ಪನೆಯನ್ನು ಸಂಪೂರ್ಣ ಸುಳ್ಳು ಮಾಡಿ ವಿಜ್ಞಾನ ಲೋಕವನ್ನೇ ಬೆರಗುಗೊಳಿಸಿವೆ!
ಹೌದು, ಸಾವಿರಾರು ಕಿಲೋಮೀಟರ್‌ಗಳ ಸುದೀರ್ಘ ವಲಸೆ ಪ್ರಯಾಣದ ಸಂದರ್ಭದಲ್ಲಿ, ಆಕಾಶದಲ್ಲಿ ಹಾರಾಡುತ್ತಿರುವಾಗಲೇ ನಿದ್ದೆ ಮಾಡುವ ಅದ್ಭುತ ಸಾಮರ್ಥ್ಯ ಈ ಪಕ್ಷಿಗಳಿಗಿದೆ. ವೈಜ್ಞಾನಿಕವಾಗಿ 'ಯೂನಿಹೆಮಿಸ್ಫೆರಿಕ್ ಸ್ಲೋ-ವೇವ್ ಸ್ಲೀಪ್' ಎಂದು ಕರೆಯಲಾಗುವ ಈ ಅಪರೂಪದ ಪ್ರಕ್ರಿಯೆಯಲ್ಲಿ, ಪಕ್ಷಿಗಳು ತಮ್ಮ ಮೆದುಳಿನ ಒಂದು ಭಾಗಕ್ಕೆ ಸಂಪೂರ್ಣ ವಿಶ್ರಾಂತಿ ನೀಡಿ ಮತ್ತೊಂದು ಭಾಗವನ್ನು ಸಕ್ರಿಯವಾಗಿಟ್ಟುಕೊಳ್ಳುತ್ತವೆ. ಇದರಿಂದಾಗಿ ಅವು ಮೈದಾನದಲ್ಲೋ ಅಥವಾ ಮರದಲ್ಲೋ ಕುಳಿತುಕೊಳ್ಳದೆ, ಹಾರಾಟದ ಮಧ್ಯೆಯೇ ದಾರಿ ತಪ್ಪದಂತೆ, ಎದುರಾಗುವ ಅಪಾಯ ಹಾಗೂ ಅಡೆತಡೆಗಳನ್ನು ಗ್ರಹಿಸುತ್ತಲೇ ನಿರಾಯಾಸವಾಗಿ ನಿದ್ದೆಯನ್ನೂ ಸವಿಯುತ್ತವೆ!
ಆದರೆ, ಪ್ರಕೃತಿಯಲ್ಲಿರುವ ಎಲ್ಲಾ ಪಕ್ಷಿಗಳಿಗೂ ಇಂತಹ ಅಪರೂಪದ ಸಾಮರ್ಥ್ಯವಿರುವುದಿಲ್ಲ, ಬದಲಿಗೆ ಸಾವಿರಾರು ಕಿಲೋಮೀಟರ್‌ಗಳ ವಲಸೆಗಾಗಿ ತಿಂಗಳುಗಟ್ಟಲೆ ಬಿಡುವಿಲ್ಲದೆ ನಿರಂತರವಾಗಿ ಹಾರಾಡಬೇಕಾದ ಅನಿವಾರ್ಯತೆ ಇರುವ ವಿಶಿಷ್ಟ ಹಕ್ಕಿಗಳಿಗೆ ಮಾತ್ರ ಈ ನೈಸರ್ಗಿಕ ವರ ಒಲಿದಿದೆ. ಈ ಹಾರಾಟದ ಅವಧಿಯಲ್ಲಿ ಕೆಲವು ಪಕ್ಷಿಗಳು ತಮ್ಮ ಒಂದು ಕಣ್ಣನ್ನು ಮುಚ್ಚಿ ಮತ್ತೊಂದು ಕಣ್ಣನ್ನು ತೆರೆದಿಟ್ಟುಕೊಂಡೇ ನಿದ್ದೆ ಮಾಡಿದರೆ, ಇನ್ನೂ ಕೆಲವು ಪಕ್ಷಿಗಳು ತಮ್ಮ ಇಚ್ಛೆಗೆ ಅನುಗುಣವಾಗಿ ಮೆದುಳಿನ ಯಾವುದೇ ಒಂದು ಭಾಗವನ್ನು ಸುಲಭವಾಗಿ ವಿಶ್ರಾಂತಿ ಸ್ಥಿತಿಗೆ ಕೊಂಡೊಯ್ಯುವ ಅದ್ಭುತ ನಿಯಂತ್ರಣವನ್ನು ಹೊಂದಿರುತ್ತವೆ.

ಆಲ್ಪೈನ್​ ಸ್ವಿಫ್ಟ್​

ಹಾರಾಡುತ್ತಲೇ ನಿದ್ದೆ ಮಾಡುವ ವಿಶಿಷ್ಟ ಪಕ್ಷಿಗಳ ಸಾಲಿನಲ್ಲಿ ಅತ್ಯಂತ ಪ್ರಮುಖವಾಗಿ ಗುರುತಿಸಿಕೊಳ್ಳುವುದು 'ಆಲ್ಪೈನ್ ಸ್ವಿಫ್ಟ್'. ಯಾವುದೇ ಅಡೆತಡೆಯಿಲ್ಲದೆ ಸುದೀರ್ಘ ಅವಧಿಗೆ ನಿರಂತರವಾಗಿ ಹಾರಾಟ ನಡೆಸಿದ ಜಗತ್ತಿನ ಏಕೈಕ ಪಕ್ಷಿ ಎಂಬ ಅಪರೂಪದ ದಾಖಲೆಯೂ ಇದರ ಹೆಸರಲ್ಲಿದೆ. ಸಂಶೋಧನೆಗಳ ಪ್ರಕಾರ, ಈ ಹಕ್ಕಿಯು ಆಕಾಶದಲ್ಲಿ ಬರೋಬ್ಬರಿ 200 ದಿನಗಳ ಕಾಲ ಸತತವಾಗಿ ಹಾರಾಡಬಲ್ಲದು ಮತ್ತು ಕೇವಲ ಸಂತಾನೋತ್ಪತ್ತಿಯ ಅವಧಿಯಲ್ಲಿ ಗೂಡು ಕಟ್ಟಲು ಮಾತ್ರವೇ ಇದು ಭೂಮಿಗೆ ಇಳಿಯುತ್ತದೆ. ಅತ್ಯಂತ ಸುದೀರ್ಘ ಪ್ರಯಾಣದ ಮಧ್ಯೆ ಹಾರಾಟ ನಡೆಸುತ್ತಿರುವಾಗಲೇ, ಈ ಆಲ್ಪೈನ್ ಸ್ವಿಫ್ಟ್ ಹಕ್ಕಿಗಳು ಅತ್ಯಲ್ಪ ಅವಧಿಗೆ ಗಾಢ ನಿದ್ದೆಯನ್ನು ಆಸ್ವಾದಿಸುತ್ತವೆ.

ಕಾಮನ್​ ಸ್ವಿಫ್ಟ್​

ಕಾಮನ್ ಸ್ವಿಫ್ಟ್ ಪಕ್ಷಿಗಳು ಆಲ್ಪೈನ್ ಸ್ವಿಫ್ಟ್‌ಗಳಷ್ಟು ದೀರ್ಘಕಾಲ ನಿರಂತರವಾಗಿ ಹಾರಾಡದಿದ್ದರೂ, ಹಾರಾಟದ ಮಧ್ಯೆಯೇ ನಿದ್ದೆ ಜಾರುವ ಅದ್ಭುತ ಕೌಶಲವನ್ನು ಹೊಂದಿವೆ. ಇವುಗಳು ಆಕಾಶದಲ್ಲಿ ಪ್ರಯಾಣಿಸುವಾಗ ದಿನಕ್ಕೆ ಸುಮಾರು 40 ನಿಮಿಷಗಳ ಕಾಲ ಹಾರಾಡುತ್ತಲೇ ನಿದ್ರಿಸಬಲ್ಲವು. ವಿಶೇಷವೆಂದರೆ, ಅತ್ಯಂತ ಎತ್ತರದ ಪ್ರದೇಶದಲ್ಲಿ ಹಾರುವಾಗ ಇವು ತಮ್ಮ ರೆಕ್ಕೆಗಳನ್ನು ಬಡಿಯದೆ, ಕೇವಲ ಗಾಳಿಯ ತೇಲಾಟದ ನೆರವಿನಿಂದಲೇ ನಿದ್ದೆ ಮಾಡುತ್ತವೆ. ಪಕ್ಷಿಗಳ ಈ ಜಾಣ್ಮೆಯು ಅವುಗಳ ದೇಹದ ಶಕ್ತಿ ವ್ಯರ್ಥವಾಗದಂತೆ ತಡೆಯಲು ಮತ್ತು ಸುದೀರ್ಘ ಪ್ರಯಾಣಕ್ಕೆ ಅಗತ್ಯವಿರುವ ದೈಹಿಕ ಎನರ್ಜಿಯನ್ನು ಉಳಿಸಿಕೊಳ್ಳಲು ಪ್ರಮುಖವಾಗಿ ಸಹಾಯ ಮಾಡುತ್ತದೆ.

ಫ್ರಿಗೇಟ್‌ ಬರ್ಡ್ಸ್

ಉಷ್ಣವಲಯದ ಸಾಗರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ 'ಫ್ರಿಗೇಟ್‌ ಬರ್ಡ್ಸ್' ಹೆಸರಿನ ಸಮುದ್ರ ಹಕ್ಕಿಗಳು, ಸಮುದ್ರದ ಮೇಲೆಯೇ ಹಾರಾಡುತ್ತಾ ಅತ್ಯಂತ ಚಾಣಾಕ್ಷತನದಿಂದ ಬೇಟೆಯಾಡುವುದರಿಂದ ಇವುಗಳನ್ನು 'ಕಡಲ್ಗಳ್ಳರು' ಎಂದೂ ಕರೆಯಲಾಗುತ್ತದೆ. ವಾರಗಟ್ಟಲೆ ಸಾಗರಗಳ ಮೇಲೆ ನಿರಂತರವಾಗಿ ಹಾರಬಲ್ಲ ಈ ಪಕ್ಷಿಗಳು, ದಿನಕ್ಕೆ ಕೇವಲ 45 ನಿಮಿಷಗಳ ಕಾಲ ಮಾತ್ರ, ಅದೂ ಕತ್ತಲಾದ ನಂತರವಷ್ಟೇ ಹಾರಾಟದ ಮಧ್ಯೆ ನಿದ್ದೆ ಮಾಡುತ್ತವೆ. ಭೂಮಿಯ ಮೇಲಿದ್ದಾಗ ಕೇವಲ ಒಂದು ನಿಮಿಷದವರೆಗೆ ಹಾಗೂ ಸಮುದ್ರದ ಮೇಲಿದ್ದಾಗ ಗರಿಷ್ಠ 12 ನಿಮಿಷಗಳವರೆಗೆ ಕಿರುನಿದ್ದೆ ಮಾಡುವ ಈ ಹಕ್ಕಿಗಳಿಗೆ, ಇತರ ಸಮುದ್ರ ಪಕ್ಷಿಗಳಂತೆ ನೀರಿನಲ್ಲಿ ಈಜಲು ಬರುವುದಿಲ್ಲ ಎಂಬುದು ಮತ್ತೊಂದು ವಿಶೇಷ! ಇನ್ನು ಸಂತಾನೋತ್ಪತ್ತಿಯ ಅವಧಿಯಲ್ಲಿ ಹೆಣ್ಣು ಹಕ್ಕಿಗಳನ್ನು ಆಕರ್ಷಿಸಲು ಗಂಡು ಫ್ರಿಗೇಟ್‌ಬರ್ಡ್ಸ್ ತನ್ನ ಕತ್ತಿನ ಭಾಗದಲ್ಲಿರುವ ಕೆಂಪು ಬಣ್ಣದ ಬಲೂನ್ ತರಹದ ಚೀಲವನ್ನು ಉಬ್ಬಿಸಿಕೊಳ್ಳುವ ವಿಶಿಷ್ಟ ನೈಸರ್ಗಿಕ ಶೈಲಿಯನ್ನು ಹೊಂದಿವೆ.

ಸ್ವೈನ್ಸನ್ಸ್ ಥ್ರಷ್

ಸಮುದ್ರದ ಮೇಲೆ ಹಾರಾಟ ನಡೆಸುವ ಪಕ್ಷಿಗಳಿಗಿಂತ ತೀರಾ ಭಿನ್ನವಾಗಿರುವ 'ಸ್ವೈನ್ಸನ್ಸ್ ಥ್ರಷ್' ಹಕ್ಕಿಗಳು, ರಾತ್ರಿಯ ವೇಳೆಯಲ್ಲಿ ಭೂಪ್ರದೇಶಗಳ ಮೇಲಿಂದ ವಲಸೆ ಹೋಗುತ್ತವೆ. ಈ ಸುದೀರ್ಘ ರಾತ್ರಿ ಪ್ರಯಾಣದ ಅವಧಿಯಲ್ಲಿ ಇವುಗಳಿಗೆ ಕೇವಲ ಅತ್ಯಲ್ಪ ಸಮಯದ ಕಿರುನಿದ್ದೆ ಮಾಡಲು ಮಾತ್ರವೇ ಸಾಧ್ಯವಾಗುತ್ತದೆ. ವಿಶೇಷವೆಂದರೆ, ಇವು ಆಕಾಶದಲ್ಲಿ ಹಾರುತ್ತಿರುವಾಗ ಜೊತೆಯಲ್ಲಿರುವ ಇತರ ಸಹವರ್ತಿ ಪಕ್ಷಿಗಳು ನೀಡುವ ವಿಶಿಷ್ಟ ಧ್ವನಿ ಅಥವಾ ಸಂಕೇತಗಳನ್ನು ಬಳಸಿಕೊಂಡು, ತಮ್ಮ ಮೆದುಳಿನ ಒಂದು ಭಾಗವನ್ನು ಸುಲಭವಾಗಿ ವಿಶ್ರಾಂತಿ ಸ್ಥಿತಿಗೆ ಕೊಂಡೊಯ್ಯುತ್ತವೆ; ಈ ನೈಸರ್ಗಿಕ ಜಾಣ್ಮೆಯಿಂದಾಗಿ ಅವು ಹಾರಾಟವನ್ನು ನಿಲ್ಲಿಸದೆಯೇ ನಿರಾಯಾಸವಾಗಿ ನಿದ್ದೆಯನ್ನೂ ಸರಿದೂಗಿಸಿಕೊಳ್ಳುತ್ತವೆ.

ಬಾರ್ನ್ ಸ್ವಾಲೋಸ್

ಕೃಷಿ ಭೂಮಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ 'ಬಾರ್ನ್ ಸ್ವಾಲೋಸ್' ಹಕ್ಕಿಗಳು ಹೆಚ್ಚಾಗಿ ಭೂಮಿಯ ಮೇಲೆಯೇ ವಿಶ್ರಮಿಸಿ ನಿದ್ದೆ ಮಾಡುತ್ತವೆ; ಆದರೆ ಸುದೀರ್ಘ ವಲಸೆ ಪ್ರಯಾಣದ ಸಂದರ್ಭದಲ್ಲಿ, ವಿಶೇಷವಾಗಿ ಹಿಂಡುಗಳಲ್ಲಿ ಹಾರಾಡುವಾಗ ಇವುಗಳು ಹಾರಾಟದ ಮಧ್ಯೆಯೇ ಭಾಗಶಃ ನಿದ್ದೆಯ ಸ್ಥಿತಿಗೆ ಜಾರುತ್ತವೆ. ಗುಂಪಿನಲ್ಲಿ ಪ್ರಯಾಣಿಸುವಾಗ ಎದುರಾಗುವ ಸುರಕ್ಷತೆಯ ನಡುವೆ ಈ ರೀತಿ ಕಿರುನಿದ್ದೆ ಮಾಡುವುದರಿಂದ, ತಮ್ಮ ದೀರ್ಘ ಪ್ರಯಾಣಕ್ಕೆ ಅಗತ್ಯವಿರುವ ದೈಹಿಕ ಎನರ್ಜಿಯನ್ನು ಉಳಿಸಿಕೊಳ್ಳಲು ಮತ್ತು ದೇಹದ ಶಕ್ತಿ ವ್ಯರ್ಥವಾಗದಂತೆ ದಕ್ಷತೆಯಿಂದ ಕಾಯ್ದುಕೊಳ್ಳಲು ಈ ಹಕ್ಕಿಗಳಿಗೆ ಸಾಧ್ಯವಾಗುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net