ಅಲ್ಲಿ ಯಾರೂ ಉಳಿದಿಲ್ಲ, ಏನೂ ಉಳಿದಿಲ್ಲ!: ಇರಾನ್ ಅಂತ್ಯ ಘೋಷಿಸಿದ ಟ್ರಂಪ್, ಜಗತ್ತನ್ನೇ ನಡುಗಿಸಿದ ಆ ಒಂದು ಮಾತು! Donald Trump

ಅಲ್ಲಿ ಯಾರೂ ಉಳಿದಿಲ್ಲ, ಏನೂ ಉಳಿದಿಲ್ಲ!: ಇರಾನ್ ಅಂತ್ಯ ಘೋಷಿಸಿದ ಟ್ರಂಪ್, ಜಗತ್ತನ್ನೇ ನಡುಗಿಸಿದ ಆ ಒಂದು ಮಾತು!
ಅಲ್ಲಿ ಯಾರೂ ಉಳಿದಿಲ್ಲ, ಏನೂ ಉಳಿದಿಲ್ಲ!: ಇರಾನ್ ಅಂತ್ಯ ಘೋಷಿಸಿದ ಟ್ರಂಪ್, ಜಗತ್ತನ್ನೇ ನಡುಗಿಸಿದ ಆ ಒಂದು ಮಾತು!
Published on
ನ್ಯೂಯಾರ್ಕ್: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಇರಾನ್ ಸಾಮ್ರಾಜ್ಯ ಈಗ ಪತನದ ಅಂಚಿನಲ್ಲಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸುತ್ತಿರುವ ಸತತ ವೈಮಾನಿಕ ದಾಳಿಯಿಂದಾಗಿ ಇರಾನ್‌ನ ನೌಕಾಪಡೆ, ವಾಯುಪಡೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಘೋಷಿಸಿದ್ದಾರೆ.
ಈ ಬಗ್ಗೆ ಮಂಗಳವಾರ ತಮ್ಮ ಟ್ರೂತ್ ಸೋಷಿಯಲ್​ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್​, ಇರಾನ್‌ನ ನಾಯಕತ್ವ ಮತ್ತು ಮಿಲಿಟರಿ ಶಕ್ತಿ ಈಗ ಇತಿಹಾಸವಾಗಿದೆ. ಅವರು ಈಗ ಮಾತುಕತೆಗೆ ಹಪಹಪಿಸುತ್ತಿದ್ದಾರೆ, ಆದರೆ ಅದಕ್ಕೆ ನಾನು ತುಂಬಾ ತಡವಾಗಿದೆ ಎಂದು ಉತ್ತರಿಸಿದ್ದೇನೆ ಎಂದು ಗುಡುಗಿದ್ದಾರೆ.

ಟ್ರಂಪ್ ಡಾಕ್ಟ್ರಿನ್: 47 ವರ್ಷಗಳ ಸಂಘರ್ಷಕ್ಕೆ ಅಂತ್ಯ..?

ಟ್ರಂಪ್ ಅವರ ಈ ನಿರ್ಧಾರವನ್ನು ಸಮರ್ಥಿಸಿರುವ 'ವಾಷಿಂಗ್ಟನ್ ಪೋಸ್ಟ್'ನ ಅಂಕಣಕಾರ ಮಾರ್ಕ್ ಥಿಸನ್, ಇದನ್ನು ಟ್ರಂಪ್ ಡಾಕ್ಟ್ರಿನ್ ಎಂದು ಕರೆದಿದ್ದಾರೆ. ಇದು ಹೊಸ ಯುದ್ಧದ ಆರಂಭವಲ್ಲ, ಬದಲಾಗಿ 1979 ರಿಂದ ಅಂದರೆ ಕಳೆದ 47 ವರ್ಷಗಳಿಂದ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿದ್ದ ಸುದೀರ್ಘ ಸಂಘರ್ಷದ ಅಂತಿಮ ಹಂತ ಎಂದು ವಿಶ್ಲೇಷಿಸಲಾಗಿದೆ.
ತಂತ್ರಗಾರಿಕೆ: ಅಮೆರಿಕದ ಭೂಸೇನೆ ಬಳಸದೆ, ಕೇವಲ ಅತ್ಯಾಧುನಿಕ ವೈಮಾನಿಕ ದಾಳಿ, ಕಠಿಣ ಆರ್ಥಿಕ ದಿಗ್ಬಂಧನ ಮತ್ತು ರಾಜತಾಂತ್ರಿಕ ಒತ್ತಡದ ಮೂಲಕ ಇರಾನ್ ಅನ್ನು ಮಣಿಸುವುದು ಈ ಸಿದ್ಧಾಂತದ ಮುಖ್ಯ ಉದ್ದೇಶವಾಗಿದೆ.

ಐಆರ್‌ಜಿಸಿ ಕಮಾಂಡ್ ಕೇಂದ್ರಗಳು ನೆಲಸಮ..!

ಅಮೆರಿಕದ ಮಿಲಿಟರಿ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಇರಾನ್‌ನ ಅತ್ಯಂತ ಪ್ರಬಲ ಸಶಸ್ತ್ರ ಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್​ನ ಕಮಾಂಡ್ ಪೋಸ್ಟ್‌ಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಅಷ್ಟೇ ಅಲ್ಲದೆ, ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ ಮತ್ತು ಕ್ಷಿಪಣಿ ಉಡಾವಣಾ ಕೇಂದ್ರಗಳನ್ನು ಪುಡಿಪುಡಿ ಮಾಡಲಾಗಿದೆ.

ಇರಾನ್ ಸ್ಥಿತಿ ಈಗ ಹೇಗಿದೆ..?

ಟ್ರಂಪ್ ಅವರ ಘೋಷಣೆಯ ಪ್ರಕಾರ, ಇರಾನ್ ಈಗ ಯಾವುದೇ ಪ್ರತಿರೋಧ ಒಡ್ಡಲಾಗದ ಸ್ಥಿತಿಗೆ ತಲುಪಿದೆ. ಇರಾನ್‌ನ ನಾಯಕತ್ವವು ಚದುರಿ ಹೋಗಿದ್ದು, ದೇಶದ ಒಳಗಿನ ಮಿಲಿಟರಿ ಮೂಲಸೌಕರ್ಯಗಳು ಹಳಿ ತಪ್ಪಿವೆ. ಅಮೆರಿಕದ ಈ ಮಿಂಚಿನ ದಾಳಿಯು ಇರಾನ್‌ನ ಆಡಳಿತ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ತಲ್ಲಣ ಮತ್ತು ಮುಂದಿನ ಹಾದಿ

ಒಂದು ಕಾಲದಲ್ಲಿ ಜಗತ್ತನ್ನೇ ನಡುಗಿಸುತ್ತಿದ್ದ ಇರಾನ್‌ನ ಇಸ್ಲಾಮಿಕ್ ಆಡಳಿತ ಈಗ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ನಾವು ಶಾಂತಿ ಬಯಸುತ್ತೇವೆ ಎಂದು ಇರಾನ್ ಹೇಳುತ್ತಿದೆ. ಆದರೆ ದಶಕಗಳಿಂದ ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆ ತಂದ ಇರಾನ್ ನಾಯಕರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂಬುದು ಟ್ರಂಪ್ ಅವರ ಕಠಿಣ ನಿಲುವು. ಈ ಟ್ರಂಪ್ ಡಾಕ್ಟ್ರಿನ್ ಮುಂಬರುವ ದಿನಗಳಲ್ಲಿ ಇಡೀ ಮಧ್ಯಪ್ರಾಚ್ಯದ ಭೂಪಟವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net