ಆಗ ಪ್ರಜಾಪ್ರಭುತ್ವದ ಕನಸು... ಈಗ ವಿಶ್ವದ ಮಹಾಶಕ್ತಿ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

2026ರ ಜುಲೈ 4. ಅಮೆರಿಕ ತನ್ನ 250ನೇ ಸ್ವಾತಂತ್ರೊ್ಯೕತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದೆ. 1776ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ವಾತಂತ್ರ್ಯದ ಘೊಷಣೆ ಮಾಡಿದ 13 ವಸಾಹತುಗಳು ಇಂದು ವಿಶ್ವದ ಅತ್ಯಂತ ಪ್ರಭಾವಿ ರಾಷ್ಟ್ರಗಳಾಗಿ ಬೆಳೆದಿವೆ. ಎರಡೂವರೆ ಶತಮಾನಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಅಂತರಿಕ್ಷ, ಶಿಕ್ಷಣ, ಆರ್ಥಿಕತೆ, ಮನರಂಜನೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಅಮೆರಿಕ ನಿರ್ವಿುಸಿರುವ ಪ್ರಭಾವ ವಿಶ್ವದ ಇತಿಹಾಸದಲ್ಲೇ ಅಪೂರ್ವ.

ಈ ವರ್ಷ ‘ಅಮೆರಿಕ 250’ ಎಂಬ ರಾಷ್ಟ್ರೀಯ ಅಭಿಯಾನದ ಮೂಲಕ ದೇಶ ತನ್ನ ಇತಿಹಾಸವನ್ನು ನೆನಪಿಸಿಕೊಳ್ಳುತ್ತಿದೆ. ರಾಷ್ಟ್ರದ ಐವತ್ತು ರಾಜ್ಯಗಳಲ್ಲೂ ಸುಡುಮದ್ದು ಪ್ರದರ್ಶನಗಳು, ಐತಿಹಾಸಿಕ ಮೆರವಣಿಗೆಗಳು, ಸಂಗೀತ ಕಾರ್ಯಕ್ರಮಗಳು, ಶಾಲೆಗಳಲ್ಲಿ ವಿಶೇಷ ನಾಗರಿಕ ಶಿಕ್ಷಣ, ಮ್ಯೂಸಿಯಂ ಪ್ರದರ್ಶನಗಳು, ಸ್ಮಾರಕ ನಾಣ್ಯಗಳು, ಅಂಚೆ ಚೀಟಿಗಳು, ಸೇನಾ ಗೌರವ ಸಮಾರಂಭಗಳು ಮತ್ತು ಸಮುದಾಯ ಉತ್ಸವಗಳು ನಡೆಯುತ್ತಿವೆ. ಈ ಆಚರಣೆಯ ಉದ್ದೇಶ ಕೇವಲ ಭೂತಕಾಲವನ್ನು ಸ್ಮರಿಸುವುದಲ್ಲ; ಮುಂದಿನ 250 ವರ್ಷಗಳ ಅಮೆರಿಕ ಹೇಗಿರಬೇಕು ಎಂಬ ಚಿಂತನೆಯೂ ಆಗಿದೆ.

ಅಮೆರಿಕದ ಯಶಸ್ಸಿನ ರಹಸ್ಯ ಕೇವಲ ಅದರ ಹಣ ಅಥವಾ ಸೇನೆಯಲ್ಲ. ವಿಶ್ವದ ಅತ್ಯುತ್ತಮ ಪ್ರತಿಭೆಯನ್ನು ತನ್ನತ್ತ ಸೆಳೆಯುವ ಸಾಮರ್ಥ್ಯ ಅದರಲ್ಲಿದೆ. ಜಗತ್ತಿನೆಲ್ಲೆಡೆಯಿಂದ ಬಂದ ಜನರಿಗೆ ಅವಕಾಶ ನೀಡಿ, ಅವರ ಪ್ರತಿಭೆಯನ್ನು ರಾಷ್ಟ್ರದ ಶಕ್ತಿಯನ್ನಾಗಿ ಪರಿವರ್ತಿಸಿದ ದೇಶ ಅಮೆರಿಕ. ಇಂದು ವಿಶ್ವದ ಅನೇಕ ಪ್ರಮುಖ ತಂತ್ರಜ್ಞಾನ ಕಂಪನಿಗಳು, ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಅಮೆರಿಕದ ಜಾಗತಿಕ ನಾಯಕತ್ವವನ್ನು ಪ್ರತಿಬಿಂಬಿಸುತ್ತವೆ.

ಮಾನವನನ್ನು ಚಂದ್ರನ ಮೇಲೆ ಇಳಿಸಿದ್ದು ಅಮೆರಿಕದ 250 ವರ್ಷಗಳ ಇತಿಹಾಸದಲ್ಲಿನ ಒಂದು ಪ್ರಮುಖ ಸಾಧನೆ. 1969ರಲ್ಲಿ ಅಪೊಲೊ-11 ಯಾನದ ಮೂಲಕ ನೀಲ್ ಆರ್ಮ್​ಸ್ಟ್ರಾಂಗ್​ ಚಂದ್ರನ ಮೇಲೆ ಕಾಲಿಟ್ಟ ಕ್ಷಣ ಕೇವಲ ಅಮೆರಿಕದ ವಿಜಯವಲ್ಲ; ಅದು ಇಡೀ ಮಾನವಕುಲದ ವಿಜಯ. ‘ಒಬ್ಬ ಮನುಷ್ಯನ ಸಣ್ಣ ಹೆಜ್ಜೆ, ಮಾನವಕುಲದ ಮಹಾ ಜಿಗಿತ’ ಎಂಬ ಅವರ ಮಾತು ಇಂದಿಗೂ ವಿಶ್ವ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ.

ಎರಡನೇ ಮಹಾಯುದ್ಧದ ನಂತರ ಆರಂಭವಾದ ಶೀತಲಯುದ್ಧವು ವಿಶ್ವವನ್ನು ಎರಡು ಭಾಗಗಳಾಗಿ ವಿಭಜಿಸಿತು. ಒಂದೆಡೆ ಅಮೆರಿಕ, ಮತ್ತೊಂದೆಡೆ ಸೋವಿಯತ್ ಒಕ್ಕೂಟ. ನಾಲ್ಕು ದಶಕಗಳ ಕಾಲ ಈ ಎರಡು ರಾಷ್ಟ್ರಗಳ ಸ್ಪರ್ಧೆ ರಾಜಕೀಯ, ಅಣ್ವಸ್ತ್ರ, ಅಂತರಿಕ್ಷ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂದುವರಿಯಿತು. ಆದರೆ 1991ರಲ್ಲಿ ಸೋವಿಯತ್ ಒಕ್ಕೂಟ ಪತನಗೊಂಡ ನಂತರ ಅಮೆರಿಕ ಜಗತ್ತಿನ ಏಕೈಕ ಮಹಾಶಕ್ತಿಯಾಗಿ ಹೊರಹೊಮ್ಮಿತು. ಡಾಲರ್ ಜಾಗತಿಕ ಆರ್ಥಿಕತೆಯ ಕೇಂದ್ರವಾಯಿತು. ವಿಶ್ವ ವ್ಯಾಪಾರ, ತಂತ್ರಜ್ಞಾನ, ಶಿಕ್ಷಣ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಅಮೆರಿಕದ ಪ್ರಭಾವ ಮತ್ತಷ್ಟು ಬಲವಾಯಿತು.

ಅಮೆರಿಕದ ಪ್ರಜಾಪ್ರಭುತ್ವದ ಪಯಣದಲ್ಲೂ ಕೆಲವು ಐತಿಹಾಸಿಕ ಕ್ಷಣಗಳಿವೆ. 2008ರಲ್ಲಿ ಬರಾಕ್ ಒಬಾಮಾ ಅಮೆರಿಕದ ಮೊದಲ ಕಪ್ಪು ವರ್ಣದ ಅಧ್ಯಕ್ಷರಾಗಿ ಆಯ್ಕೆಯಾದದ್ದು ವಿಶ್ವದ ಗಮನ ಸೆಳೆಯಿತು. ಒಂದು ಕಾಲದಲ್ಲಿ ಗುಲಾಮಗಿರಿಯ ಕಹಿ ಇತಿಹಾಸ ಹೊಂದಿದ್ದ ರಾಷ್ಟ್ರ, ಅದೇ ಸಮುದಾಯದ ವ್ಯಕ್ತಿಯನ್ನು ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಿದ್ದು ಪ್ರಜಾಪ್ರಭುತ್ವದ ಶಕ್ತಿಗೆ ಸಾಕ್ಷಿಯಾಯಿತು.

ಆದರೆ ಇದೇ ಸಮಯದಲ್ಲಿ ಒಂದು ಪ್ರಶ್ನೆಯೂ ಉಳಿದಿದೆ. 250 ವರ್ಷಗಳ ಅಮೆರಿಕದ ಇತಿಹಾಸದಲ್ಲಿ ಇನ್ನೂ ಒಬ್ಬ ಮಹಿಳೆಯೂ ರಾಷ್ಟ್ರಪತಿಯಾಗಿಲ್ಲ. ಹಿಲರಿ ಕ್ಲಿಂಟನ್ ಮತ್ತು ಕಮಲಾ ಹ್ಯಾರಿಸ್ ಅವರು ಇತಿಹಾಸ ನಿರ್ವಿುಸುವ ಹಂತದವರೆಗೆ ಬಂದರೂ ಅಂತಿಮವಾಗಿ ಯಶಸ್ಸು ಸಿಗಲಿಲ್ಲ. ವಿಶ್ವಕ್ಕೆ ಪ್ರಜಾಪ್ರಭುತ್ವದ ಮಾದರಿಯಾಗಿರುವ ಅಮೆರಿಕ, ಮಹಿಳಾ ನಾಯಕತ್ವದ ಈ ಅಧ್ಯಾಯವನ್ನು ಇನ್ನೂ ಬರೆಯಬೇಕಿದೆ.

ಅಮೆರಿಕದ ನಿಜವಾದ ಶಕ್ತಿ ಅದರ ‘ಚೆಕ್ಸ್ ಆಂಡ್ ಬ್ಯಾಲನ್ಸಸ್’ ವ್ಯವಸ್ಥೆಯಲ್ಲಿ ಅಡಗಿದೆ. ಅಧ್ಯಕ್ಷರು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಕಾಂಗ್ರೆಸ್, ನ್ಯಾಯಾಂಗ ಮತ್ತು ರಾಜ್ಯ ಸರ್ಕಾರಗಳು ಅಧಿಕಾರದ ಮೇಲೆ ನಿಯಂತ್ರಣ ಇಡುತ್ತವೆ. ನ್ಯಾಯಾಲಯಗಳು ಅಧ್ಯಕ್ಷರ ನಿರ್ಧಾರಗಳನ್ನು ಪರಿಶೀಲಿಸುತ್ತವೆ. ಕಾಂಗ್ರೆಸ್ ಪ್ರಶ್ನಿಸುತ್ತದೆ. ರಾಜ್ಯಗಳು ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತವೆ. ಈ ಅಧಿಕಾರ ಸಮತೋಲನವೇ ಕಳೆದ 250 ವರ್ಷಗಳಿಂದ ಅಮೆರಿಕದ ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸಿದೆ. ಅಮೆರಿಕದಲ್ಲಿ ಕೇಂದ್ರ ಚುನಾವಣಾ ಆಯೋಗ ಇಲ್ಲ. ಪ್ರತಿಯೊಂದು ರಾಜ್ಯವೂ ತನ್ನದೇ ಚುನಾವಣಾ ಕಾನೂನು, ಮತದಾನ ವಿಧಾನವನ್ನು ಹೊಂದಿದೆ. ಈ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಬಲ ನೀಡಿದರೂ, ಕೆಲವೊಮ್ಮೆ ಸಾಮಾನ್ಯ ಮತದಾರನಿಗೆ ಸಂಕೀರ್ಣವಾಗಿ ಕಾಣುತ್ತದೆ.

ಇನ್ನೊಂದು ವಿಶೇಷವೆಂದರೆ, ಅಮೆರಿಕದ ಸಂವಿಧಾನ ಬಹುಪಕ್ಷ ವ್ಯವಸ್ಥೆಯನ್ನು ನಿರ್ಬಂಧಿಸಿಲ್ಲ. ಆದರೂ ಕಳೆದ ಹಲವು ತಲೆಮಾರುಗಳಿಂದ ರಾಷ್ಟ್ರೀಯ ರಾಜಕೀಯವನ್ನು ಡೆಮಾಕ್ರಾಟಿಕ್ ಮತ್ತು ರಿಪಬ್ಲಿಕನ್ ಎಂಬ ಎರಡು ಪಕ್ಷಗಳೇ ನಿರ್ಧರಿಸುತ್ತಿವೆ. ಸಣ್ಣ ಪಕ್ಷಗಳು ಇದ್ದರೂ, ಅಧಿಕಾರದ ನಿಜವಾದ ಸ್ಪರ್ಧೆ ಈ ಎರಡು ಪಕ್ಷಗಳ ನಡುವೆಯೇ ನಡೆಯುತ್ತದೆ.

ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಅಮೆರಿಕ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದೆ. ವಲಸೆ ನೀತಿ, ಸುಂಕ, ನ್ಯಾಟೊ, ಯೂಕ್ರೇನ್ ಯುದ್ಧ, ಮಧ್ಯಪ್ರಾಚ್ಯದ ಪರಿಸ್ಥಿತಿ, ಜಾಗತಿಕ ವ್ಯಾಪಾರ ಮತ್ತು ‘ಅಮೆರಿಕ ಫಸ್ಟ್’ ನೀತಿ ಬಗ್ಗೆ ಅಮೆರಿಕದಲ್ಲಿ ಬೆಂಬಲವೂ ಇದೆ, ಟೀಕೆಯೂ ಇದೆ. ಇವೆಲ್ಲದರ ನಡುವೆಯೂ ಅಮೆರಿಕದ ಪ್ರಜಾಪ್ರಭುತ್ವ ತನ್ನ ಸಂವಿಧಾನದ ಚೌಕಟ್ಟಿನೊಳಗೆ ಮುಂದುವರಿಯುತ್ತಿರುವುದು ಅದರ ದೊಡ್ಡ ಬಲ.

ಇಂದು ಅಮೆರಿಕದ ಎದುರು ನಿಂತಿರುವ ಅತಿದೊಡ್ಡ ಸವಾಲು ಚೀನಾ. ಕಳೆದ ಮೂರು ದಶಕಗಳಲ್ಲಿ ಚೀನಾ ಉತ್ಪಾದನೆ, ಕೈಗಾರಿಕೆ, ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ವೇಗವಾಗಿ ಬೆಳೆಯುತ್ತಿದೆ. ಭಾರತವೂ ತನ್ನ ಯುವ ಜನಸಂಖ್ಯೆ, ಪ್ರಜಾಪ್ರಭುತ್ವ, ಡಿಜಿಟಲ್ ಆರ್ಥಿಕತೆ ಮತ್ತು ತಂತ್ರಜ್ಞಾನ ಸಾಮರ್ಥ್ಯದ ಮೂಲಕ ವಿಶ್ವದಲ್ಲಿ ಹೊಸ ಸ್ಥಾನ ಪಡೆಯುತ್ತಿದೆ. ಮುಂದಿನ ವಿಶ್ವ ವ್ಯವಸ್ಥೆಯಲ್ಲಿ ಅಮೆರಿಕ, ಚೀನಾ ಮತ್ತು ಭಾರತದ ಪಾತ್ರವೇ ನಿರ್ಣಾಯಕವಾಗಲಿದೆ. ಭವಿಷ್ಯದಲ್ಲಿ ಒಂದೇ ಜಾಗತಿಕ ಮಹಾಶಕ್ತಿ ಇರುವುದಿಲ್ಲ. ಬಹುಧ್ರುವೀಯ ವಿಶ್ವ ಇರಲಿದೆ. ವಿಜ್ಞಾನ, ಕೃತಕ ಬುದ್ಧಿಮತ್ತೆ, ಆರ್ಥಿಕತೆ, ಸೈನಿಕ ಶಕ್ತಿ, ಮಾನವ ಸಂಪನ್ಮೂಲಗಳ ಆಧಾರದ ಮೇಲೆ ಅಮೆರಿಕ, ಚೀನಾ, ಭಾರತ ವಿಶ್ವದ ಭವಿಷ್ಯವನ್ನು ರೂಪಿಸಲಿವೆ. ಅಮೆರಿಕ ತನ್ನ ಪ್ರಜಾಪ್ರಭುತ್ವ, ಆವಿಷ್ಕಾರ ಮತ್ತು ಪ್ರತಿಭೆಗೆ ಅವಕಾಶ ನೀಡುವ ಸಂಸ್ಕೃತಿಯನ್ನು ಉಳಿಸಿಕೊಂಡರೆ, ಮುಂದಿನ ಹಲವು ದಶಕಗಳ ಕಾಲವೂ ಜಗತ್ತಿನ ನಾಯಕತ್ವವನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿದೆ.

26 ವರ್ಷಗಳ ಹಿಂದೆ ನಾನು ಅಮೆರಿಕಕ್ಕೆ ಬಂದಾಗ ‘ಇದು ಅವಕಾಶಗಳ ನಾಡು’ ಎಂದು ಭಾಸವಾಯಿತು. ಇಂದಿಗೂ ಆ ನಂಬಿಕೆ ಬದಲಾಗಿಲ್ಲ. ಅಮೆರಿಕಕ್ಕೂ ಸಮಸ್ಯೆಗಳಿವೆ. ರಾಜಕೀಯ ಧ್ರುವೀಕರಣ, ಗನ್ ಹಿಂಸಾಚಾರ, ರಾಷ್ಟ್ರೀಯ ಸಾಲ, ವಲಸೆ ವಿವಾದ, ಆರೋಗ್ಯ ವೆಚ್ಚ ಮತ್ತು ಸಾಮಾಜಿಕ ಅಸಮಾನತೆ ಇತ್ಯಾದಿ. ಆದರೆ ಈ ದೇಶದ ದೊಡ್ಡ ಶಕ್ತಿಯೆಂದರೆ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವ ಧೈರ್ಯ, ತಪ್ಪುಗಳನ್ನು ತಿದ್ದಿಕೊಳ್ಳುವ ಮನೋಭಾವ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ.

250 ವರ್ಷಗಳ ಹಿಂದೆ ಸ್ವಾತಂತ್ರ್ಯದ ಕನಸಿನಿಂದ ಹುಟ್ಟಿದ ಅಮೆರಿಕ ಇಂದು ಮತ್ತೊಂದು ಇತಿಹಾಸದ ತಿರುವಿನಲ್ಲಿದೆ. ಕಳೆದ ಎರಡೂವರೆ ಶತಮಾನ ಈ ದೇಶವನ್ನು ವಿಶ್ವದ ಮಹಾಶಕ್ತಿಯನ್ನಾಗಿ ರೂಪಿಸಿದ್ದರೆ, ಮುಂದಿನ 25 ವರ್ಷಗಳು ಅದರ ನಾಯಕತ್ವವನ್ನು ಪರೀಕ್ಷಿಸಲಿವೆ. ಅಮೆರಿಕ, ಚೀನಾ, ಭಾರತ ಈ ಮೂರು ರಾಷ್ಟ್ರಗಳ ನಿರ್ಧಾರಗಳೇ ಮುಂದಿನ ಶತಮಾನದ ವಿಶ್ವ ಇತಿಹಾಸವನ್ನು ರೂಪಿಸಲಿವೆ.

-(ಲೇಖಕರು ಹವ್ಯಾಸಿ ಬರಹಗಾರರು, ಅಮೆರಿಕದ ನ್ಯೂಯಾರ್ಕ್ ನಿವಾಸಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net