ಯುದ್ಧದ ನಿಯಮಗಳೇ ಉಡೀಸ್! ಇಸ್ರೇಲ್ ಸೇನೆಯ ಈ ಅಮಾನವೀಯ ನಡೆಯಿಂದ ಜಗತ್ತೇ ಬೆಚ್ಚಿಬಿದ್ದಿದ್ದೇಕೆ..? White Phosphorus

ಯುದ್ಧದ ನಿಯಮಗಳೇ ಉಡೀಸ್! ಇಸ್ರೇಲ್ ಸೇನೆಯ ಈ ಅಮಾನವೀಯ ನಡೆಯಿಂದ ಜಗತ್ತೇ ಬೆಚ್ಚಿಬಿದ್ದಿದ್ದೇಕೆ..?
ಯುದ್ಧದ ನಿಯಮಗಳೇ ಉಡೀಸ್! ಇಸ್ರೇಲ್ ಸೇನೆಯ ಈ ಅಮಾನವೀಯ ನಡೆಯಿಂದ ಜಗತ್ತೇ ಬೆಚ್ಚಿಬಿದ್ದಿದ್ದೇಕೆ..?
Published on
ಬೈರುತ್: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ದಕ್ಷಿಣ ಲೆಬನಾನ್‌ನ ಯೋಹಮೋರ್ ಎಂಬ ಪುಟ್ಟ ಪಟ್ಟಣದ ಮೇಲೆ ಇಸ್ರೇಲ್ ಸೇನೆಯು ಅತ್ಯಂತ ಅಪಾಯಕಾರಿ ವೈಟ್ ಫಾಸ್ಫರಸ್ (White Phosphorus) ಬಾಂಬ್‌ಗಳನ್ನು ಎಸೆದಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಹ್ಯೂಮನ್ ರೈಟ್ಸ್ ವಾಚ್ ಈ ದೃಶ್ಯಗಳನ್ನು ದೃಢಪಡಿಸಿದ್ದು, ಇದು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ಗಂಭೀರ ಉಲ್ಲಂಘನೆ ಎಂದು ಕಿಡಿಕಾರಿದೆ.

ನರಕ ಸದೃಶ್ಯವಾಯ್ತು ಯೋಹಮೋರ್ ಪಟ್ಟಣ!

ಮಾರ್ಚ್ 3 ರಂದು ಯೋಹಮೋರ್ ಪಟ್ಟಣದ ಮೇಲೆ ಆಕಾಶದಿಂದ ಬೆಂಕಿಯ ಉಂಡೆಗಳು ಬಿದ್ದಂತೆ ಬಿಳಿ ರಂಜಕದ ಮುನಿಸಿಷನ್‌ಗಳು ಸ್ಫೋಟಗೊಂಡಿವೆ. ಮನೆಗಳ ಮೇಲೆ, ವಾಹನಗಳ ಮೇಲೆ ಮತ್ತು ಜನನಿಬಿಡ ರಸ್ತೆಗಳ ಮೇಲೆ ಈ ರಾಸಾಯನಿಕ ಮಳೆ ಸುರಿದಿದೆ. ಹ್ಯೂಮನ್ ರೈಟ್ಸ್ ವಾಚ್ ಪರಿಶೀಲಿಸಿದ ಏಳು ಚಿತ್ರಗಳಲ್ಲಿ, 155 ಎಂಎಂ ಫಿರಂಗಿ ಗುಂಡುಗಳಿಂದ ಹೊರಬಂದ ಈ ಬಿಳಿ ಹೊಗೆಯ ರಹಸ್ಯ ಬಯಲಾಗಿದೆ. ಕೇವಲ ಕ್ಷಣಾರ್ಧದಲ್ಲಿ ಎರಡು ಮನೆಗಳು ಮತ್ತು ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ವರದಿಯಾಗಿದೆ.

ಏನಿದು ಬಿಳಿ ರಂಜಕ? ಇದು ಎಷ್ಟು ಅಪಾಯಕಾರಿ?

ಬಿಳಿ ರಂಜಕವು ಒಂದು ಭೀಕರ ರಾಸಾಯನಿಕ ಪದಾರ್ಥವಾಗಿದ್ದು, ಇದು ಆಮ್ಲಜನಕದ ಸಂಪರ್ಕಕ್ಕೆ ಬಂದ ತಕ್ಷಣ ಉರಿಯಲು ಪ್ರಾರಂಭಿಸುತ್ತದೆ.
ನಿರಂತರ ದಹನ: ಇದು ಒಮ್ಮೆ ಹತ್ತಿಕೊಂಡರೆ ಸಂಪೂರ್ಣವಾಗಿ ಉರಿದು ಮುಗಿಯುವವರೆಗೆ ಅಥವಾ ಆಮ್ಲಜನಕ ಇಲ್ಲದಂತಾಗುವವರೆಗೆ ಆರುವುದಿಲ್ಲ.
ಮೂಳೆಗಳನ್ನು ಸುಡುತ್ತದೆ: ಇದು ಚರ್ಮಕ್ಕೆ ತಗುಲಿದರೆ ಮಾಂಸವನ್ನಷ್ಟೇ ಅಲ್ಲ, ಮೂಳೆಗಳನ್ನೂ ಸುಟ್ಟು ಕರಗಿಸುವ ಶಕ್ತಿ ಹೊಂದಿದೆ.
ಉಸಿರಾಟದ ತೊಂದರೆ: ಇದರ ಹೊಗೆಯನ್ನು ಸೇವಿಸಿದರೆ ಶ್ವಾಸಕೋಶಗಳು ಹಾನಿಗೊಳಗಾಗುತ್ತವೆ ಮತ್ತು ಆಂತರಿಕ ಅಂಗಾಂಗಗಳು ವೈಫಲ್ಯಗೊಳ್ಳಬಹುದು.

ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತದೆ..?

ಜನವಸತಿ ಪ್ರದೇಶಗಳಲ್ಲಿ ಬಿಳಿ ರಂಜಕವನ್ನು ಬಳಸುವುದನ್ನು ಅಂತಾರಾಷ್ಟ್ರೀಯ ಕಾನೂನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಏಕೆಂದರೆ ಇದು ನಿರ್ದಿಷ್ಟ ಗುರಿಯನ್ನು ಹೊಡೆಯುವ ಬದಲು ವಿಶಾಲ ಪ್ರದೇಶಕ್ಕೆ ಬೆಂಕಿ ಹಬ್ಬಿಸುತ್ತದೆ. ಜನವಸತಿ ಪ್ರದೇಶಗಳಲ್ಲಿ ಇಸ್ರೇಲ್ ಈ ಶಸ್ತ್ರಾಸ್ತ್ರ ಬಳಸಿರುವುದು ಅತ್ಯಂತ ಆತಂಕಕಾರಿ ಮತ್ತು ಇದು ನಾಗರಿಕರ ಮೇಲೆ ಭೀಕರ ಪರಿಣಾಮ ಬೀರಲಿದೆ ಎಂದು ಲೆಬನಾನ್ ಸಂಶೋಧಕ ರಮ್ಜಿ ಕೈಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಸಾವಿನ ಸಂಖ್ಯೆ ಏರಿಕೆ, ಲಕ್ಷಾಂತರ ಮಂದಿ ಅತಂತ್ರ

ಮಾರ್ಚ್ 2 ರಿಂದ ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿಗಳಲ್ಲಿ ಲೆಬನಾನ್‌ನಲ್ಲಿ ಇದುವರೆಗೆ 217 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ದಕ್ಷಿಣ ಲೆಬನಾನ್ ಮತ್ತು ಬೈರುತ್‌ನ ಕೆಲವು ಭಾಗಗಳಿಂದ ಲಕ್ಷಾಂತರ ಜನರು ಮನೆಮಠ ಬಿಟ್ಟು ಬೀದಿಗೆ ಬಿದ್ದಿದ್ದಾರೆ. ಇಸ್ರೇಲ್ ನೀಡುತ್ತಿರುವ ಸ್ಥಳಾಂತರದ ಆದೇಶಗಳು ನಾಗರಿಕರನ್ನು ರಕ್ಷಿಸುವ ಬದಲು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಹಿಜ್ಬುಲ್ಲಾ ಸಂಘಟನೆಯನ್ನು ಹತ್ತಿಕ್ಕುವ ಹೆಸರಿನಲ್ಲಿ ಇಸ್ರೇಲ್ ಬಳಸುತ್ತಿರುವ ಈ ಬಿಳಿ ರಂಜಕದ ತಂತ್ರವು ಇಡೀ ಪಶ್ಚಿಮ ಏಷ್ಯಾವನ್ನು ಮಾನವೀಯ ಬಿಕ್ಕಟ್ಟಿನ ಕೂಪಕ್ಕೆ ತಳ್ಳುತ್ತಿದೆ. ಯುದ್ಧದ ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿರುವ ಈ ದಾಳಿಗಳು ಜಾಗತಿಕ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net