ಗಂಟೆಗಟ್ಟಲೇ ಕಾಯುವಂತಿಲ್ಲ, ಪದೇ ಪದೇ ಬ್ರೇಕ್​ ಹಾಕುವ ಸಮಸ್ಯೆಯಿಲ್ಲ; ಟ್ರಾಫಿಕ್​ ಸಿಗ್ನಲ್ ಮುಕ್ತ ದೇಶವಿದು

ಟ್ರಾಫಿಕ್​ ಸಿಗ್ನಲ್​ ಮುಕ್ತ ದೇಶವಿದು
ಟ್ರಾಫಿಕ್​ ಸಿಗ್ನಲ್​ ಮುಕ್ತ ದೇಶವಿದು
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು, ಮುಂಬೈನಲ್ಲಿರುವ ಟ್ರಾಫಿಕ್​ ಸಮಸ್ಯೆ ಈ ದೇಶದಲ್ಲಿಲ್ಲ
  • ಇಲ್ಲಿ ಒಂದೇ ಒಂದು ಟ್ರಾಫಿಕ್​ ಸಿಗ್ನಲ್​ ಕೂಡ ಇಲ್ಲ
  • ಜನರು ನೆಮ್ಮದಿಯಿಂದ ಬದುಕುತ್ತಿರುವ ದೇಶದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ
No Traffic Lights: ದಟ್ಟ ಟ್ರಾಫಿಕ್​ನಿಂದ ಕೂಡಿರುವ ರಸ್ತೆಗಳು, ಜೋರು ಹಾರ್ನ್​ಗಳು, ಅಲ್ಲಲ್ಲಿ ತಮ್ಮ ಗಾಡಿಗೆ ಟಚ್​ ಆಗಿದೆ ಎಂಬ ವಾಹನ ಸವಾರರ ಜಗಳ ಮತ್ತು ಧೂಳು, ಹೊಗೆಯಿಂದ ಕೂಡಿದ ಟ್ರಾಫಿಕ್​ನಲ್ಲಿ ಗಂಟೆಗಟ್ಟಲೇ ಕಾಯುವುದು ದೆಹಲಿ, ಮುಂಬೈ, ಹೈದರಾಬಾದ್​ ಮತ್ತು ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಜೀವನ ನಡೆಸುತ್ತಿರುವ ಜನಸಾಮಾನ್ಯರ ನಿತ್ಯ ಪರದಾಟವಿದು. ಒಂದು ದಿನವೂ ನೆಮ್ಮದಿಯಿಂದ ಪ್ರಯಾಣಿಸಲು ಇಲ್ಲಿನ ರಸ್ತೆಗಳಲ್ಲಿ ಸಾಧ್ಯವಿಲ್ಲ. ಅದಕ್ಕೆ ಮುಖ್ಯ ಕಾರಣವೇ ಟ್ರಾಫಿಕ್​ ಸಿಗ್ನಲ್​ಗಳು.
1 ಅಥವಾ 2 ಕಿ.ಮೀಗೆ ಒಂದು ಟ್ರಾಫಿಕ್​ ಸಿಗ್ನಲ್​ ಅಳವಡಿಸುವ ಸಂಚಾರಿ ಪೊಲೀಸರು, ವಾಹನ ದಟ್ಟಣೆಯನ್ನು ನಿಯಂತ್ರಿಸುವ ಹಾಗೂ ಸುಗುಮ ಸಂಚಾರದ ಉದ್ದೇಶದಿಂದ ಕೆಂಪು, ಹಳದಿ ಮತ್ತು ಹಸಿರು ಬಣ್ಣವುಳ್ಳ ಸಿಗ್ನಲ್​ಗಳನ್ನು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಅಳವಡಿಸಿರುತ್ತಾರೆ. ಬೆಂಗಳೂರಿನಂತಹ ಸಿಲಿಕಾನ್​ ಸಿಟಿಯಲ್ಲಿ ದಿನಕ್ಕೆ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಹೀಗಿರುವಾಗ, 5 ಕಿ.ಮೀ ಇರುವ ಒಂದು ಪ್ರದೇಶಕ್ಕೆ ತಲುಪಲು ಕನಿಷ್ಠ 20ರಿಂದ 25 ನಿಮಿಷಗಳು ಬೇಕಾಗುತ್ತದೆ. ಕಾರಣ, ಆ ಮಟ್ಟಿಗಿನ ಟ್ರಾಫಿಕ್​. ಈ ಸಮಸ್ಯೆಯಿಂದ ಜನರಂತು ದಿನನಿತ್ಯ ರಸ್ತೆಗಳಲ್ಲಿ ಹೈರಾಣಗಿದ್ದಾರೆ.
ಟ್ರಾಫಿಕ್​ ಜಾಮ್​ ಅಥವಾ ಸಿಗ್ನಲ್​ಗಳೇ ಇಲ್ಲದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಎಷ್ಟು ನೆಮ್ಮದಿಯಿಂದ ಪ್ರಯಾಣಿಸಬಹುದು ಅಲ್ವಾ ಎಂದು ಚಿಂತಿಸುವ ಜನರಿಗೆ ಟ್ರಾಫಿಕ್​ ಸಿಗ್ನಲ್​ಗಳೇ ಇಲ್ಲದ ಒಂದು ದೇಶದ ಬಗ್ಗೆ ಮಾಹಿತಿ ನೀಡಿದರೆ, ಖಂಡಿತ ಕುತೂಹಲ ಹೆಚ್ಚಾಗುವುದರಲ್ಲಿ ಅನುಮಾನವೇ ಬೇಡ. ಸಿಗ್ನಲ್​ ದೀಪಗಳಿಲ್ಲದ ರಸ್ತೆಗಳು ಇಲ್ಲಿ ತುಂಬಾ ಶಾಂತವಾಗಿವೆ. ಅಸಲಿಗೆ ಯಾವ ರಾಷ್ಟ್ರವಿದು? ಟ್ರಾಫಿಕ್ ಸಿಗ್ನಲ್‌ಗಳೇ ಬೇಡ ಎನ್ನಲು ಕಾರಣವೇನು? ಎಂಬುದರ ಸಂಪೂರ್ಣ ವಿವರ ಹೀಗಿದೆ ನೋಡಿ.
ಟ್ರಾಫಿಕ್ ಸಿಗ್ನಲ್‌ಗಳು (ಟ್ರಾಫಿಕ್ ಲೈಟ್ಸ್​) ಇಲ್ಲದ ವಿಶ್ವದ ಏಕೈಕ ದೇಶ ಎಂದರೆ ಅದು ಭೂತಾನ್. ಇದಕ್ಕೆ ಹಲವು ಕಾರಣಗಳಿವೆ. ಭೂತಾನ್ ಜನರು, ಯಂತ್ರಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಮನುಷ್ಯರಿಗೆ ನೀಡುತ್ತಾರೆ. ಹೀಗಾಗಿಯೇ, ಇಲ್ಲಿನ ಜನರು ತಮ್ಮಿಂದ ಆಗುವ ಕೆಲಸಗಳನ್ನು ಹೆಚ್ಚಾಗಿ ಮಾಡಿಕೊಳ್ಳುತ್ತಾರೆ. ಸಾಧ್ಯವಾದಷ್ಟು ಪ್ರಮಾಣದಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ದೂರವಿಡುತ್ತಾರೆ. 1990ರ ದಶಕದಲ್ಲಿ ರಾಜಧಾನಿ ಥಿಂಪುವಿನಲ್ಲಿ ಸಂಚಾರ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ, ಅಲ್ಲಿನ ಜನರು ಅವುಗಳನ್ನು ತುಂಬಾ ನಿರ್ಜೀವ ಮತ್ತು ಯಾಂತ್ರಿಕ ಎಂದು ಪರಿಗಣಿಸಿ ಕೆಲವೇ ಗಂಟೆಗಳಲ್ಲಿ ಕಿತ್ತುಬಿಸಾಡಿದರು.
ಟ್ರಾಫಿಕ್​ ದೀಪಗಳಿಲ್ಲದಿದ್ದರೆ ಸಂಚಾರ ನಿಯಂತ್ರಣ ಪರಿಸ್ಥಿತಿ ಹೇಗೆ? ಎಂದು ನೀವು ಯೋಚಿಸುತ್ತಿರಬಹುದು. ಅಸಲಿಗೆ ಇಲ್ಲಿ ಸಂಚಾರ ದೀಪಗಳ ಬದಲಿಗೆ, ಟ್ರಾಫಿಕ್​ ಪೊಲೀಸರು ತಮ್ಮ ಕೈ ಸಂಕೇತಗಳೊಂದಿಗೆ ವಾಹನಗಳಿಗೆ ಸಿಗ್ನಲ್​ ತೋರಿಸುತ್ತಾರೆ. ಅವರು ಮಾಡುವ ಸನ್ನೆಗಳು ಬಹಳ ಲಯಬದ್ಧವಾಗಿರುತ್ತವೆ ಮತ್ತು ಡ್ಯಾನ್ಸ್​ ಮಾಡಿದಂತೆ ಇರುತ್ತದೆ. ಹೀಗಾಗಿಯೇ, ಅವರನ್ನು ನೃತ್ಯ ಸಂಚಾರ ಪೊಲೀಸರು ಎಂದೂ ಕರೆಯಲಾಗುತ್ತದೆ.
ಭೂತಾನ್ ತನ್ನ ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಇತರೆ ದೇಶಗಳಿಗಿಂತ ಮೂರು ಹೆಜ್ಜೆ ಮುಂದಿದೆ. ಆಧುನಿಕ ತಂತ್ರಜ್ಞಾನಕ್ಕಿಂತ ತಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಧಾನಗಳನ್ನು ಅವರು ಇಂದಿಗೂ ಅನುಸರಿಸುತ್ತಾರೆ. ಇಷ್ಟಲ್ಲದೇ, ಅಲ್ಲಿನ ವಾಹನ ಚಾಲಕರು ಕೂಡ ಶಿಸ್ತುಬದ್ಧರು. ಅಡ್ಡಾದಿಡ್ಡಿ ವಾಹನ ಚಲಾಯಿಸುವುದು ಅಥವಾ ನಿಯಮ ಮುರಿದು ಹೋಗುವುದು, ಪದೇ ಪದೇ ಹಾರ್ನ್ ಮಾಡುವುದು. ಹೀಗೆಲ್ಲ ಮಾಡುವುದಿಲ್ಲ ಮತ್ತು ಗೌರವಯುತವಾಗಿ ಚಾಲನೆ ಮಾಡುತ್ತಾರೆ. ಭೂತಾನ್‌ನಲ್ಲಿ ಕಡಿಮೆ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆಯಿಂದಾಗಿ ಈ ವ್ಯವಸ್ಥೆಯು ಅಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮತ್ತು ದೇಶವು ಜಗತ್ತಿಗೆ ಒಂದು ಮಾದರಿಯನ್ನೂ ಸ್ಥಾಪಿಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net