ಅಕ್ಟೋಬರ್ 7ರ ನರಮೇಧದ ಮಾಸ್ಟರ್‌ಮೈಂಡ್ ಹತ್ಯೆ! ಕದನ ವಿರಾಮದ ನಡುವೆಯೂ ಗಾಜಾದಲ್ಲಿ ನಡುಕ ಹುಟ್ಟಿಸಿದ ಇಸ್ರೇಲ್​ನ ಮಹಾ ಕಾರ್ಯಾಚರಣೆ! Izz Al -Din Al -Haddad

ಅಕ್ಟೋಬರ್ 7ರ ನರಮೇಧದ ಮಾಸ್ಟರ್‌ಮೈಂಡ್ ಹತ್ಯೆ! ಕದನ ವಿರಾಮದ ನಡುವೆಯೂ ಗಾಜಾದಲ್ಲಿ ನಡುಕ ಹುಟ್ಟಿಸಿದ ಇಸ್ರೇಲ್​ನ ಮಹಾ ಕಾರ್ಯಾಚರಣೆ!
ಅಕ್ಟೋಬರ್ 7ರ ನರಮೇಧದ ಮಾಸ್ಟರ್‌ಮೈಂಡ್ ಹತ್ಯೆ! ಕದನ ವಿರಾಮದ ನಡುವೆಯೂ ಗಾಜಾದಲ್ಲಿ ನಡುಕ ಹುಟ್ಟಿಸಿದ ಇಸ್ರೇಲ್​ನ ಮಹಾ ಕಾರ್ಯಾಚರಣೆ!
Published on
ಟೆಲ್ ಅವೀವ್: ಪಶ್ಚಿಮ ಏಷ್ಯಾದ ಯುದ್ಧದ ಇತಿಹಾಸದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರ ಮತ್ತೊಂದು ಬೃಹತ್ ಯಶಸ್ಸನ್ನು ಅಧಿಕೃತವಾಗಿ ಖಚಿತಪಡಿಸಿವೆ. ಅಕ್ಟೋಬರ್ 7 ರ ಇಸ್ರೇಲ್ ನರಮೇಧದ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ, ಹಮಾಸ್‌ನ ಮಿಲಿಟರಿ ವಿಭಾಗದ ಮುಖ್ಯಸ್ಥ ಇಜ್ಜುದ್ದೀನ್ ಅಲ್-ಹದ್ದಾದ್ (Izz al-Din al-Haddad) ಶುಕ್ರವಾರ ರಾತ್ರಿ ನಡೆದ ಇಸ್ರೇಲ್‌ನ ಭೀಕರ ವಾಯುದಾಳಿಗೆ ಬಲಿಯಾಗಿದ್ದಾನೆ. ಮೊಹಮ್ಮದ್ ಸಿನ್ವರ್ ಹತ್ಯೆಯ ನಂತರ ಹಮಾಸ್ ಪಡೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದ ಈತನ ಪತನ, ಹಮಾಸ್ ಸಂಘಟನೆಗೆ ಚೇತರಿಸಿಕೊಳ್ಳಲಾಗದ ಮರಣಶಾಸನ ಬರೆದಿದೆ.

ಒತ್ತೆಯಾಳುಗಳನ್ನೇ 'ಮನುಷ್ಯ ಗುರಾಣಿ' ಮಾಡಿಕೊಂಡಿದ್ದ ಕ್ರೂರಿ!

ಇಸ್ರೇಲ್ ಸೇನೆಯ ಪ್ರಕಾರ, ಅಲ್-ಹದ್ದಾದ್ ಯುದ್ಧದುದ್ದಕ್ಕೂ ಇಸ್ರೇಲಿ ಒತ್ತೆಯಾಳುಗಳನ್ನು ತನ್ನ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದ. ಇಸ್ರೇಲ್ ಪಡೆಗಳು ತನ್ನ ಮೇಲೆ ದಾಳಿ ಮಾಡಬಾರದು ಎಂಬ ಕಾರಣಕ್ಕೆ ಆತ ಸದಾ ಇಸ್ರೇಲಿ ಒತ್ತೆಯಾಳುಗಳಿಂದಲೇ ಸುತ್ತುವರೆದಿರುತ್ತಿದ್ದ. ಒತ್ತೆಯಾಳುಗಳ ಸೆರೆಮನೆ ವ್ಯವಸ್ಥೆಯನ್ನು ಖುದ್ದಾಗಿ ಈತನೇ ನಿಯಂತ್ರಿಸುತ್ತಿದ್ದ. ಆದರೆ, ಇಸ್ರೇಲ್‌ನ ಇಂಟೆಲಿಜೆನ್ಸ್ ಪಡೆಗಳು ನೀಡಿದ ನಿಖರವಾದ ರಹಸ್ಯ ಮಾಹಿತಿಯ ಆಧಾರದ ಮೇಲೆ ನಡೆಸಿದ ದಾಳಿಯಲ್ಲಿ ಈತ ಅಡಗಿದ್ದ ತಾಣವನ್ನು ಧ್ವಂಸಗೊಳಿಸಲಾಗಿದೆ. ಹದ್ದಾದ್ ಜೊತೆಗೆ ಕನಿಷ್ಠ ಆರು ಮಂದಿ ಇತರ ಉಗ್ರರು ಸತ್ತಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಶನಿವಾರ ಗಾಜಾ ನಗರದಲ್ಲಿ ಹದ್ದಾದ್‌ನ ಶವಯಾತ್ರೆ ನಡೆದಿದ್ದು, ಆತನ ಶವವನ್ನು ಹಮಾಸ್ ಮತ್ತು ಪ್ಯಾಲೇಸ್ತೀನ್ ಧ್ವಜಗಳಿಂದ ಮುಚ್ಚಲಾಗಿತ್ತು. 1980 ರ ದಶಕದಲ್ಲಿ ಹಮಾಸ್ ಸ್ಥಾಪನೆಯಾದಾಗ ಸೇರಿಕೊಂಡಿದ್ದ ಈತ, ಇಸ್ರೇಲ್ ಪರ ಕೆಲಸ ಮಾಡುವ ಇನ್ಫಾರ್ಮರ್‌ಗಳನ್ನು ಹತ್ಯೆ ಮಾಡುವ ಹಮಾಸ್‌ನ 'ಮಜ್ದ್' ವಿಭಾಗದ ಪ್ರಮುಖನಾಗಿದ್ದ.

ಕದನ ವಿರಾಮದ ನಡುವೆಯೂ ನಿಲ್ಲದ ರಕ್ತಪಾತ

ಕಳೆದ ಅಕ್ಟೋಬರ್ ತಿಂಗಳಿನಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಜಾರಿಯಲ್ಲಿದ್ದರೂ, ಅದು ಅತ್ಯಂತ ದುರ್ಬಲವಾಗಿದೆ. ಹಮಾಸ್ ಸಂಪೂರ್ಣವಾಗಿ ಶಸ್ತ್ರಾಸ್ತ್ರ ತ್ಯಜಿಸಬೇಕು ಎಂಬ ಇಸ್ರೇಲ್‌ನ ಶರತ್ತಿಗೆ ಹಮಾಸ್ ಒಪ್ಪದ ಕಾರಣ ಶಾಂತಿ ಮಾತುಕತೆಗಳು ಹಳ್ಳ ಹಿಡಿದಿವೆ. ಕದನ ವಿರಾಮದ ನಡುವೆಯೂ ಗಾಜಾದಲ್ಲಿ ಇಸ್ರೇಲ್ ನಿರಂತರವಾಗಿ ಹಮಾಸ್ ಉಗ್ರರನ್ನು ಆಯ್ದು ಆಯ್ದು ಬೇಟೆಯಾಡುತ್ತಿದೆ. ಕದನ ವಿರಾಮ ಘೋಷಣೆಯಾದ ನಂತರವೂ ಇಸ್ರೇಲ್ ದಾಳಿಯಲ್ಲಿ 850 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಯುದ್ಧ ಆರಂಭವಾದಾಗಿನಿಂದ ಇಸ್ರೇಲ್‌ನ ಪ್ರತಿಕಾರ ದಾಳಿಗಳಿಗೆ ಗಾಜಾದಲ್ಲಿ ಇದುವರೆಗೆ 72,700 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ಹಮಾಸ್ ನೇತೃತ್ವದ ಗಾಜಾ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳು ಹೇಳಿವೆ. ಈ ಅಂಕಿಅಂಶಗಳನ್ನು ಅಂತಾರಾಷ್ಟ್ರೀಯ ಸಮುದಾಯವು ಸಾಮಾನ್ಯವಾಗಿ ವಿಶ್ವಾಸಾರ್ಹವೆಂದು ಪರಿಗಣಿಸುತ್ತದೆ.

ಇಸ್ರೇಲ್ ಸೇನಾ ಮುಖ್ಯಸ್ಥರ ಖಡಕ್ ಸಂದೇಶ

ಅಲ್-ಹದ್ದಾದ್ ಹತ್ಯೆಯನ್ನು ಅತ್ಯಂತ ಮಹತ್ವದ ಕಾರ್ಯಾಚರಣೆ ಎಂದು ಬಣ್ಣಿಸಿರುವ ಇಸ್ರೇಲ್ ಸೇನಾ ಮುಖ್ಯಸ್ಥರು, ನಮ್ಮ ನಾಗರಿಕರನ್ನು ಕೊಂದ ಪ್ರತಿಯೊಬ್ಬ ಶತ್ರುವನ್ನು ನಾವು ಹುಡುಕಿ ಹುಡುಕಿ ಹತ್ಯೆ ಮಾಡುತ್ತೇವೆ. ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇತ್ತೀಚೆಗಷ್ಟೇ ಹಮಾಸ್‌ನ ಪ್ರಮುಖ ಸಂಧಾನಕಾರ ಖಲೀಲ್ ಅಲ್-ಹಯ್ಯಾ ಅವರ ಮಗನನ್ನು ಇಸ್ರೇಲ್ ಪಡೆಗಳು ಗಾಜಾ ಗಡಿಯಲ್ಲಿ ಹೊಡೆದುರುಳಿಸಿದ್ದವು. ಈಗ ಮಿಲಿಟರಿ ಕಮಾಂಡರ್ ಕೂಡ ಹತನಾಗಿರುವುದರಿಂದ ಹಮಾಸ್ ಸಂಪೂರ್ಣವಾಗಿ ನಾಯಕರಿಲ್ಲದ ಅನಾಥ ಸಂಘಟನೆಯಾಗಿ ಬದಲಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net