ಯಾರೀ ಯಾಸಿನ್ ಅರಾಫತ್? ಬಾಂಗ್ಲಾದಲ್ಲಿ ದೀಪು ದಾಸ್ ಕೊಲೆಯ ಪ್ರಮುಖ ಆರೋಪಿ ಅರೆಸ್ಟ್​, ಹೊರಬಿತ್ತು ಸತ್ಯ ಸಂಗತಿ

ಕೊಲೆ ಆರೋಪಿ ಯಾಸಿನ್ ಅರಾಫತ್
ಕೊಲೆ ಆರೋಪಿ ಯಾಸಿನ್ ಅರಾಫತ್
Published on

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿ ದೀಪು ದಾಸ್ ಹಂತಕ ಪತ್ತೆ
  • ಪ್ರಕರಣದ ಪ್ರಮುಖ ಆರೋಪಿ ಯಾಸಿನ್ ಅರಾಫತ್ ಬಂಧನ
  • ದೀಪು ದಾಸ್ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದೇ ಈತ ಎಂಬ ಸತ್ಯ ಸಂಗತಿ ಬಯಲು
ಢಾಕಾ: ಬಾಂಗ್ಲಾದೇಶ ಮತ್ತೊಮ್ಮೆ ಹಿಂಸಾಚಾರದಿಂದ ನಲುಗಿದೆ ಎಂಬುದಕ್ಕೆ ದೀಪು ದಾಸ್ ಎಂಬ ಹಿಂದು ವ್ಯಕ್ತಿಯ ಬರ್ಬರ ಹತ್ಯೆಯೇ ಸಾಕ್ಷಿ. ಮೂಲಭೂತವಾದಿ ಇಸ್ಲಾಮಿ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನಿಂದ ಕೆರಳಿದ ಪ್ರತಿಭಟನಾಕಾರರು, ಸ್ಥಳೀಯ ಮಾಧ್ಯಮಗಳಿದ್ದ ಕಟ್ಟಡಗಳಿಗೆ ಬೆಂಕಿ ಹಚ್ಚಿ, ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು ಭಾರತೀಯರಿಗೆ ಗೊತ್ತೇ ಇದೆ. ದೀಪುವನ್ನು ಮರಕ್ಕೆ ಕಟ್ಟಿ, ಬೆಂಕಿಯಿಟ್ಟ ಪ್ರಕರಣದ ಪ್ರಮುಖ ಆರೋಪಿ ಯಾಸಿನ್ ಅರಾಫತ್​ನನ್ನು ಇದೀಗ ಪೊಲೀಸರು ಬಂಧಿಸಿದ್ದು, ಆತನಿಂದ ಹಲವು ವಿಷಯವನ್ನು ಕಕ್ಕಿಸಿದ್ದಾರೆ.
ಹಿಂದೂ ಯುವಕ ದೀಪು ಚಂದ್ರ ದಾಸ್​ನನ್ನು (29) ಅಮಾನುಷವಾಗಿ ಥಳಿಸಿ, ಕಡೆಗೆ ಮರಕ್ಕೆ ಕಟ್ಟಿ, ಜೀವಂತವಾಗಿ ಬೆಂಕಿ ಹಚ್ಚಿ ಕೊಂದ ಭೀಕರ ಹತ್ಯೆ ಇಂದಿಗೂ ಕಣ್ಣಂಚಲ್ಲಿ ನೀರು ತರಿಸುತ್ತದೆ. ಇದು ಭಾರತೀಯರು ಮರೆಯಲಾಗದ ಅತ್ಯಂತ ದುಃಖಕರ ಘಟನೆಗಳಲ್ಲಿ ಒಂದು. ಸದ್ಯ ಈ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ಸಂಭವಿಸಿದ್ದು, ದೀಪು ದಾಸ್ ಕೊಲೆ ಕೇಸ್​ನ ಪ್ರಮುಖ ಆರೋಪಿಯನ್ನು ಇದೀಗ ಬಾಂಗ್ಲಾ ಪೊಲೀಸರು ಬಂಧಿಸಿದ್ದಾರೆ. ಆತನ ಹೆಸರು ಯಾಸಿನ್ ಅರಾಫತ್. ಈತನೊಬ್ಬ ಮಾಜಿ ಶಿಕ್ಷಕ ಎನ್ನಲಾಗಿದೆ.
ಅರಾಫತ್ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂದಷ್ಟು ಬಹಮುಖ್ಯ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ದೀಪು ದಾಸ್ ಮೇಲಿನ ದಾಳಿಗೆ ಸಂಚು ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ಈ ಅರಾಫತ್ ಎನ್ನಲಾಗಿದೆ. ಅಲ್ಲಿನ ಜನಸಮೂಹವನ್ನು ಪ್ರಚೋದಿಸಿದ್ದಲ್ಲದೆ, ದೀಪು ಅವರನ್ನು ಎಳೆದೊಯ್ದು, ಅಮಾನುಷವಾಗಿ ಥಳಿಸಿ, ಸುಟ್ಟಿರುವುದು ತಿಳಿದುಬಂದಿದೆ. ಇಷ್ಟು ದಿನಗಳಿಂದ ತಲೆಮರೆಸಿಕೊಂಡಿದ್ದ ಅರಾಫತ್​ ಸೇರಿ ಈ ಪ್ರಕರಣದಲ್ಲಿ ಇಲ್ಲಿಯವರೆಗೆ 21 ಜನರನ್ನು ಬಂಧಿಸಲಾಗಿದೆ.
ದೇವದೂಷಣೆಯ ಆರೋಪದ ಮೇಲೆ ದೀಪು ದಾಸ್​ನನ್ನು ಕ್ರೂರವಾಗಿ ಹತ್ಯೆಗೈಯಲಾಯಿತು. ಆರೋಪಿ ಅರಾಫತ್ ಸಮಾಜದಲ್ಲಿ ತನ್ನ ಪ್ರಭಾವವನ್ನು ಬಳಸಿಕೊಂಡು ಗುಂಪನ್ನು ಸಜ್ಜುಗೊಳಿಸಲು ಮತ್ತು ಪ್ರಚೋದಿಸಲು, ಧರ್ಮನಿಂದೆಯ ಆರೋಪವನ್ನು ಮಾರಕ ಗುಂಪು ದಾಳಿಯಾಗಿ ಪರಿವರ್ತಿಸಿದ್ದಾನೆ ಎಂದು ತನಿಖಾಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಏನಿದು ಪ್ರಕರಣ? ಅಂದು ಆಗಿದ್ದೇನು?

2025ರ ಡಿ.18ರಂದು ಮೈಮೆನ್ಸಿಂಗ್ ಜಿಲ್ಲೆಯಲ್ಲಿ ದೀಪು ದಾಸ್ (27) ಎಂಬ ವ್ಯಕ್ತಿಯನ್ನು ಅವರ ಕಾರ್ಖಾನೆ ಮೇಲ್ವಿಚಾರಕರು ತಕ್ಷಣವೇ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಆತನನ್ನು ಕಚೇರಿಯಿಂದ ಹೊರಗೆಳೆದು ತಂದ ಗುಂಪೊಂದು, ಸ್ಥಳೀಯ ಜನರಿಗೆ ಒಪ್ಪಿಸಿತು. ದೀಪುವನ್ನು ಮನಬಂದಂತೆ ಥಳಿಸಿದ ಕಿಡಿಗೇಡಿಗಳು, ದೇಹವನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಿ ಜೀವಂತವಾಗಿ ಕೊಂದರು. ಈ ಪ್ರಕರಣದಲ್ಲಿ ದಾಸ್​ನ ಕೆಲವು ಸಹೋದ್ಯೋಗಿಗಳು ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net