ಪ್ರೇಯಸಿಯನ್ನ ಕೊಂದ ಕಿರಾತಕನಿಗೆ ವಿಡಿಯೋ ಗೇಮ್ ಚಿಂತೆ! ನನಗೆ ಜಿಟಿಎ-6 ಆಡಲು ಸಿಗಲ್ಲ ಎಂದು ಅತ್ತ ಕೊಲೆಗಡುಕ

ಪ್ರೇಯಸಿಯನ್ನು ಕೊಲೆಮಾಡಿದ ರಾಬರ್ಟ್ ರಿಚೆನ್ಸ್
ಪ್ರೇಯಸಿಯನ್ನು ಕೊಲೆಮಾಡಿದ ರಾಬರ್ಟ್ ರಿಚೆನ್ಸ್
Published on

ಪ್ರಮುಖ ಮುಖ್ಯಾಂಶಗಳು

  • ಕೊಲೆ ಎಂಬುದು ಅತ್ಯಂತ ಭೀಕರ ಅಪರಾಧ
  • ಹೆಂಡತಿ ರಾಚೆಲ್ ವಾಘನ್​ಳನ್ನು ಕೊಂದ ಪತಿ ರಾಬರ್ಟ್ ರಿಚೆನ್ಸ್
  • ಜೈಲಿಗೆ ಹೋದರೆ ಜಿಟಿಎ ಆಡಲು ಆಗಲ್ಲ ಎಂದು ಅತ್ತ ಕಟುಕ
ಲಂಡನ್: ಕೊಲೆ ಎಂಬುದು ಅತ್ಯಂತ ಭೀಕರ ಅಪರಾಧ. ಇಂತಹ ಕೃತ್ಯವೆಸಗಿದವರು ಸಿಕ್ಕಿಬಿದ್ದಾಗ ಸಾಮಾನ್ಯವಾಗಿ ಶಿಕ್ಷೆಯ ಭಯದಿಂದ ಅಥವಾ ಮಾಡಿದ ತಪ್ಪಿನ ಅರಿವಾಗಿ ಅಳುವುದು ಸಹಜವಾಗಿರುತ್ತದೆ. ಆದರೆ ಬ್ರಿಟನ್‌ನ ಈ ರಾಬರ್ಟ್ ರಿಚೆನ್ಸ್ ಎಂಬ ವ್ಯಕ್ತಿಯ ಕಥೆಯೇ ಬೇರೆ.
ಈತ ತನ್ನ ಪ್ರೇಯಸಿ ರಾಚೆಲ್ ವಾಘನ್ (40) ರನ್ನು ಅವರದ್ದೇ ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆದರೆ ಪೊಲೀಸರು ಈತನನ್ನು ಬಂಧಿಸಿ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಈತ ಅತ್ತಿದ್ದು ಮಾತ್ರ ಸತ್ತ ಮಹಿಳೆಗಲ್ಲ, ಬದಲಿಗೆ ತನಗೆ ಬಿಡುಗಡೆಯಾಗಲಿರುವ ವಿಡಿಯೋ ಗೇಮ್ ಆಡಲು ಸಿಗುವುದಿಲ್ಲ ಎಂಬ ಕಾರಣಕ್ಕೆ!.

ಪೊಲೀಸ್ ವ್ಯಾನ್‌ನಲ್ಲಿ ವಿಚಿತ್ರ ಪ್ರಲಾಪ!

ಪೊಲೀಸರು ರಾಬರ್ಟ್‌ನನ್ನು ಬಂಧಿಸಿ ಕರೆದೊಯ್ಯುತ್ತಿದ್ದಾಗ ಆತ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ್ದ. ಇದನ್ನು ನೋಡಿದ ಅಧಿಕಾರಿಗಳು ಈತ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಭಾವಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಆತ, ನಾನು ಜಿಟಿಎ (GTA 6) ಕಳೆದುಕೊಳ್ಳಲಿದ್ದೇನೆ, ಅದನ್ನು ಆಡಲು ನನಗೆ ಸಾಧ್ಯವಾಗುವುದಿಲ್ಲ ಎಂದು ಕಿರುಚಿದ್ದಾನೆ.
ಬಂಧನದ ಗಡಿಬಿಡಿಯಲ್ಲಿದ್ದ ಅಧಿಕಾರಿಗೆ ಮೊದಲು ಅದು ಅರ್ಥವಾಗಲಿಲ್ಲ. ಯಾಕೆ ಅಳುತ್ತಿದ್ದಿಯಾ? ಎಂದು ಪೊಲೀಸ್ ಅಧಿಕಾರಿ ಕೇಳಿದಾಗ, ರಾಬರ್ಟ್, ನನಗೇನಾದರೂ ಶಿಕ್ಷೆಯಾದರೆ ನಾನು ಜಿಟಿಎ 6 ಗೇಮ್​ನ್ನು ಆಡಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಅಂದರೆ ಆತನಿಗೆ ತನ್ನ ಪ್ರೇಯಸಿಯ ಸಾವಿಗಿಂತಲೂ ತಾನು ಜೈಲಿಗೆ ಹೋದರೆ ವಿಡಿಯೋ ಗೇಮ್ ಆಡಲು ಸಿಗುವುದಿಲ್ಲ ಎನ್ನುವ ಚಿಂತೆಯೇ ಹೆಚ್ಚಾಗಿತ್ತು.

ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಈ ಭೀಕರ ಘಟನೆ ನಡೆದ ನಂತರ ರಾಬರ್ಟ್ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ನಡೆಸಿದ ನ್ಯಾಯಾಲಯವು ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕನಿಷ್ಠ 16 ವರ್ಷಗಳ ಕಾಲ ಈತ ಜೈಲಿನಿಂದ ಹೊರಬರುವಂತಿಲ್ಲ. ಅಂದರೆ, ಜಗತ್ತೇ ಕಾತುರದಿಂದ ಕಾಯುತ್ತಿರುವ ಜಿಟಿಎ 6 ಗೇಮ್ ಬಿಡುಗಡೆಯಾದಾಗ ಈತ ಜೈಲಿನ ಕಂಬಿ ಎಣಿಸುತ್ತಿರುತ್ತಾನೆ ಎಂದು ನಟ್ಟಿಗರು ಹೇಳುತ್ತಿದ್ದಾರೆ.

ತನಿಖಾಧಿಕಾರಿಗಳ ಆಕ್ರೋಶ

ತನಿಖೆ ನಡೆಸಿದ ಹಿರಿಯ ಅಧಿಕಾರಿ ಸ್ಟುವರ್ಟ್ ಮೇ, ರಾಬರ್ಟ್‌ನ ನಡವಳಿಕೆಯನ್ನು ಹೃದಯಹೀನ ಎಂದು ಕರೆದಿದ್ದಾರೆ. ರಾಚೆಲ್ ತನ್ನ ಮನೆಯಲ್ಲೇ ಸುರಕ್ಷಿತವಾಗಿರಬೇಕಿತ್ತು. ಆದರೆ ಈತ ಅವಳನ್ನು ಕೊಂದ ಮೇಲೆ ವೈದ್ಯಕೀಯ ನೆರವು ನೀಡುವ ಪ್ರಯತ್ನವನ್ನೂ ಮಾಡದೆ ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದ. ಈತನಿಗೆ ಈಗ ತನ್ನ ಕ್ರೂರ ಕೃತ್ಯದ ಫಲ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಒಬ್ಬ ಮನುಷ್ಯನ ಪ್ರಾಣಕ್ಕಿಂತಲೂ ಒಂದು ವಿಡಿಯೋ ಗೇಮ್ ದೊಡ್ಡದಾಯಿತೇ? ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ. ಈ ಘಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೆಟ್ಟಿಗರ ನಡುವೆ ತೀರ್ವ ಚರ್ಚೆ ನಡೆಯುತ್ತಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net