ಟೆಹ್ರಾನ್: ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿಯ ಅಂತ್ಯದ ನಂತರ, ಇಡೀ ಜಗತ್ತಿನ ಕಣ್ಣು ಈಗ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮೇಲೆ ನೆಟ್ಟಿದೆ.
ಈ ಬಗ್ಗೆ ಮಾತನಾಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ನೀಡಿರುವ ಹೇಳಿಕೆಯೊಂದು ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ನಮ್ಮ ಮಿಲಿಟರಿ ಘಟಕಗಳು ಈಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿ ಇಲ್ಲ ಎಂದಿದ್ದಾರೆ. ಐಆರ್ಜಿಸಿ ಈಗ ಇರಾನ್ನ ಅಲಿಖಿತ ಸುಲ್ತಾನನಾಗಿ ಹೊರಹೊಮ್ಮಿದೆಯೇ ಎಂಬ ಅನುಮಾನ ಹುಟ್ಟಿಸಿದೆ.
ಏನಿದು ಐಆರ್ಜಿಸಿ..?
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ನ ಮೊದಲ ಸರ್ವೋಚ್ಚ ನಾಯಕ ರುಹೊಲ್ಲಾ ಖೊಮೇನಿ ಈ ಪಡೆಯನ್ನು ಸ್ಥಾಪಿಸಿದರು. ಕೇವಲ ದೇಶದ ಗಡಿ ಕಾಯುವುದು ಇದರ ಕೆಲಸವಲ್ಲ, ಬದಲಿಗೆ ಇರಾನ್ನ ಇಸ್ಲಾಮಿಕ್ ವ್ಯವಸ್ಥೆಯನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಬಲಿಷ್ಠ ಸೈನ್ಯ: ಇದು ತನ್ನದೇ ಆದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯನ್ನು ಹೊಂದಿದೆ.
ಸಂಖ್ಯೆ: ಸುಮಾರು 1.5 ಲಕ್ಷದಿಂದ 2 ಲಕ್ಷ ಸಕ್ರಿಯ ಸೈನಿಕರನ್ನು ಈ ಪಡೆ ಹೊಂದಿದೆ ಎಂದು ಅಂದಾಜಿಸಲಾಗಿದೆ.
ಐಆರ್ಜಿಸಿಯ ಮೂರು ಪ್ರಮುಖ ವಿಭಾಗಗಳು
ಕುದ್ಸ್ ಫೋರ್ಸ್: ಇದು ಐಆರ್ಜಿಸಿಯ ಅತ್ಯಂತ ಭಯಾನಕ ವಿಭಾಗವಾಗಿದೆ. ಇದು ವಿದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಇರಾಕ್, ಸಿರಿಯಾ, ಲೆಬನಾನ್ ಮತ್ತು ಯೆಮನ್ನಲ್ಲಿರುವ ಸಶಸ್ತ್ರ ಗುಂಪುಗಳಿಗೆ ಇದು ಬೆಂಬಲ ನೀಡುತ್ತದೆ. ಈ ಕಾರಣಕ್ಕಾಗಿಯೇ ಅಮೆರಿಕ ಇದನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.
ಬಸಿಜ್ ಪಡೆ: ಇದು ಇರಾನ್ನ ಒಳಗಿನ ವ್ಯವಹಾರಗಳನ್ನು ನಿಯಂತ್ರಿಸುವ ಪೊಲೀಸ್ ಪಡೆಯಂತೆ ಕೆಲಸ ಮಾಡುತ್ತದೆ. ಇಸ್ಲಾಮಿಕ್ ನೈತಿಕ ಸಂಹಿತೆಗಳನ್ನು ಜಾರಿಗೊಳಿಸುವುದು ಇದರ ಕೆಲಸ. ಈ ಪಡೆಯಲ್ಲಿ ಸುಮಾರು 4.5 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ.
ನೌಕಾ ಮತ್ತು ಕ್ಷಿಪಣಿ ವಿಭಾಗ: ಪರ್ಶಿಯನ್ ಗಲ್ಫ್ನಲ್ಲಿ ಅಮೆರಿಕದ ಹಡಗುಗಳಿಗೆ ಸವಾಲು ಹಾಕುವ ಶಕ್ತಿ ಇರುವುದು ಈ ಪಡೆಗೆ ಮಾತ್ರ.
ಖಮೇನಿ ಸಾವಿನ ನಂತರ ಐಆರ್ಜಿಸಿ ಇರಾನ್ ಅನ್ನು ರಕ್ಷಿಸಬಲ್ಲದೇ..?
ವಿಶ್ಲೇಷಕರ ಪ್ರಕಾರ, ಖಮೇನಿ ಸಾವಿನ ನಂತರ ಇರಾನ್ನ ನಿಜವಾದ ಅಧಿಕಾರ ಈಗ ಐಆರ್ಜಿಸಿ ಕೈಯಲ್ಲಿದೆ. ಅಧ್ಯಕ್ಷ ಪೆಜೆಶ್ಕಿಯಾನ್ ಅಥವಾ ತಾತ್ಕಾಲಿಕ ಮಂಡಳಿಗಿಂತಲೂ ಮಿಲಿಟರಿ ಕಮಾಂಡರ್ಗಳೇ ಈಗ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.
ಹೆಚ್ಚುತ್ತಿರುವ ನಿಯಂತ್ರಣ: ರಾಜಕೀಯ ನಾಯಕತ್ವ ದುರ್ಬಲವಾಗಿರುವ ಈ ಸಮಯದಲ್ಲಿ ಐಆರ್ಜಿಸಿ ಇಡೀ ದೇಶವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಬಹುದು.
ಡೊನಾಲ್ಡ್ ಟ್ರಂಪ್ಗೆ ಸವಾಲು: ಐಆರ್ಜಿಸಿ ಎಂದಿಗೂ ಅಮೆರಿಕ ಅಥವಾ ಇಸ್ರೇಲ್ನೊಂದಿಗೆ ಮಾತುಕತೆಗೆ ಒಪ್ಪುವುದಿಲ್ಲ. ಬದಲಿಗೆ, ಈ ಪ್ರದೇಶವನ್ನು ಪೂರ್ಣ ಪ್ರಮಾಣದ ಯುದ್ಧಕ್ಕೆ ತಳ್ಳುವ ಮೂಲಕ ಅಮೆರಿಕ ಮತ್ತು ಗಲ್ಫ್ ರಾಷ್ಟ್ರಗಳಿಗೆ ಗರಿಷ್ಠ ಹಾನಿ ಮಾಡುವುದು ಇವರ ಗುರಿಯಾಗಿದೆ.
ಸ್ವತಂತ್ರ ಕಾರ್ಯಾಚರಣೆ: ವಿದೇಶಾಂಗ ಸಚಿವರೇ ಹೇಳಿರುವಂತೆ, ಈ ಪಡೆಗಳು ಈಗ 'ಸ್ವತಂತ್ರವಾಗಿ' ದಾಳಿಗಳನ್ನು ನಡೆಸುತ್ತಿವೆ. ಅಂದರೆ, ಓಮನ್ ಅಥವಾ ಕುವೈತ್ ಮೇಲಿನ ದಾಳಿಗಳು ಸರ್ಕಾರದ ಅನುಮತಿಯಿಲ್ಲದೆಯೇ ನಡೆಯುತ್ತಿರಬಹುದು.
ಯುದ್ಧದ ಮುಂದಿನ ಹಂತವೇನು..?
ಮಾಜಿ ರಕ್ಷಣಾ ಅಧಿಕಾರಿ ಮೈಕೆಲ್ ಮುಲ್ರಾಯ್ ಅವರ ಪ್ರಕಾರ, ಐಆರ್ಜಿಸಿ ಈಗ ಸೇಡಿನ ಜ್ವಾಲೆಯಲ್ಲಿ ಉರಿಯುತ್ತಿದೆ. ಅವರು ಕೇವಲ ಅಮೆರಿಕವನ್ನು ಮಾತ್ರವಲ್ಲ, ಅಮೆರಿಕಕ್ಕೆ ಬೆಂಬಲ ನೀಡುತ್ತಿರುವ ಸೌದಿ ಅರೇಬಿಯಾ ಮತ್ತು ಯುಎಇ ಮೇಲೆಯೂ ಭೀಕರ ದಾಳಿ ನಡೆಸಲು ಸಜ್ಜಾಗಿದ್ದಾರೆ.
ಖಮೇನಿ ಸಾವು ಇರಾನ್ ಅನ್ನು ದುರ್ಬಲಗೊಳಿಸುವ ಬದಲು, ಐಆರ್ಜಿಸಿಯನ್ನು ಮತ್ತಷ್ಟು ಉಗ್ರವಾಗಿಸುವ ಸಾಧ್ಯತೆ ಇದೆ. ಇದು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಬದಲು ಮಹಾಯುದ್ಧಕ್ಕೆ ನಾಂದಿ ಹಾಡಬಹುದು,(ಏಜೆನ್ಸೀಸ್).