ಸಿರಿವಂತರಲ್ಲಿ ಚೀನೀ ಭಾಷೆ ಮೋಹ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಚೀನಾ ಪ್ರಸ್ತುತ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಮತ್ತು ಜಾಗತಿಕ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿದೆ. ತೀವ್ರಗತಿಯ ಆವಿಷ್ಕಾರಗಳ ಮೂಲಕ ಚೀನಾ ಜಗತ್ತಿನಾದ್ಯಂತ ತನ್ನ ಪ್ರಾಬಲ್ಯವನ್ನು ವಿಸ್ತರಿಸುತ್ತಿದೆ. ಭವಿಷ್ಯದ ದಿನಗಳು ಚೀನಾದ್ದೇ ಆಗಿರುತ್ತವೆ ಎಂದು ಸಿರಿವಂತರು ಬಲವಾಗಿ ನಂಬಿದ್ದಾರೆ. ಹಾಗಾಗಿಯೇ, ಡೊನಾಲ್ಡ್ ಟ್ರಂಪ್ ಮೊಮ್ಮಗಳಿಂದ ಹಿಡಿದು ಮಾರ್ಕ್ ಜುಕರ್​ಬರ್ಗ್ ಮಗಳವರೆಗೆ, ವಿಶ್ವದ ಅಗ್ರಗಣ್ಯ ಕೋಟ್ಯಧಿಪತಿಗಳ ಮಕ್ಕಳು, ಮೊಮ್ಮಕ್ಕಳು ಚೈನೀಸ್ ಭಾಷೆ ಕಲಿಯುತ್ತಿದ್ದಾರೆ. ಅಷ್ಟಕ್ಕೂ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ತಮ್ಮ ಮಕ್ಕಳಿಗೆ ಮ್ಯಾಂಡರಿನ್ ಭಾಷೆಯನ್ನು ಏಕೆ ಕಲಿಸುತ್ತಿದ್ದಾರೆ? ಈ ಟ್ರೆಂಡ್ ಹಬ್ಬಿರುವುದು ಹೇಗೆ? ಇಲ್ಲಿದೆ ವಿವರ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ಇತ್ತೀಚಿನ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ‘ನನ್ನ ಮಗ ಮ್ಯಾಂಡರಿನ್ (ಚೈನೀಸ್ ಭಾಷೆ) ಕಲಿಯುತ್ತಿದ್ದಾನೆ’ ಎಂದು ಮಸ್ಕ್ ಅದರಲ್ಲಿ ಬರೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಇದೇ ಮೇ ತಿಂಗಳಲ್ಲಿ ಮಸ್ಕ್ ಚೀನಾ ಪ್ರವಾಸ ಕೈಗೊಂಡಿದ್ದಾಗ, ಅವರ 6 ವರ್ಷದ ಮಗ ಚೀನಾದ ಸಾಂಪ್ರದಾಯಿಕ ಕಸೂತಿ ಜಾಕೆಟ್ ಧರಿಸಿ ಅವರೊಂದಿಗೆ ಕಾಣಿಸಿಕೊಂಡಿದ್ದ. ಮಸ್ಕ್ ಮಾತ್ರವಲ್ಲ, ವಿಶ್ವದ ಅಗ್ರಗಣ್ಯ ಕೋಟ್ಯಧಿಪತಿಗಳ ಮಕ್ಕಳು ಕೂಡ ಮ್ಯಾಂಡರಿನ್ ಕಲಿಯುತ್ತಿದ್ದಾರೆ. ಹೌದು, ಇತಿಹಾಸವನ್ನು ಗಮನಿಸಿದರೆ, ಯಾವುದೇ ದೇಶವು ಶಕ್ತಿಶಾಲಿಯಾದಾಗ ಅದರ ಭಾಷೆಯೂ ಜಗತ್ತಿನಾದ್ಯಂತ ಹರಡುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಅಲ್ಲದೆ, ಭವಿಷ್ಯದ ಜಾಗತಿಕ ಮಾರುಕಟ್ಟೆಯನ್ನು ಆಳಲು ಭಾಷೆಯೇ ದೊಡ್ಡ ಅಸ್ತ್ರ ಎಂಬುದನ್ನು ಈ ಜಾಗತಿಕ ನಾಯಕರು ಈಗಲೇ ಅರಿತುಕೊಂಡಿರುವುದು ಸ್ಪಷ್ಟವಾಗಿದೆ.

ಮ್ಯಾಂಡರಿನ್ ಪ್ರಭಾವ

ವಿಶ್ವದ ಅತ್ಯಂತ ಪ್ರಭಾವಶಾಲಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಕುಟುಂಬಗಳಲ್ಲಿ ಚೀನಿ (ಮ್ಯಾಂಡರಿನ್) ಭಾಷೆಯ ಪ್ರಭಾವ ಎಷ್ಟು ಆಳವಾಗಿ ವಿಸ್ತರಿಸಿದೆ ಎಂಬುದಕ್ಕೆ ಈ ಕೆಳಗಿನ ಉದಾಹರಣೆಗಳೇ ಸಾಕ್ಷಿ.

ಡೊನಾಲ್ಡ್ ಟ್ರಂಪ್ ಮೊಮ್ಮಕ್ಕಳು: ಇದೇ ವರ್ಷದ ಮೇ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಗೆ ಭೇಟಿ ನೀಡಿ, ಅಧ್ಯಕ್ಷ ಷಿ ಜಿನ್​ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಟ್ರಂಪ್ ಅವರ 6 ವರ್ಷದ ಮೊಮ್ಮಗಳು ಅರಾಬೆಲ್ಲಾ ಮತ್ತು 4 ವರ್ಷದ ಮೊಮ್ಮಗ ಜೋಸೆಫ್ ಚೀನಿ ಭಾಷೆಯಲ್ಲಿ ಹಾಡನ್ನು ಹಾಡಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದರು. ಇದರ ಬೆನ್ನಲ್ಲೇ, ಅಮೆರಿಕದಲ್ಲಿ ಚೀನಿ ಭಾಷೆ ಕಲಿಯುವ ಟ್ರೆಂಡ್ ಬೆಳೆಯುತ್ತಿದೆ. ಟ್ರಂಪ್ ಪುತ್ರಿ ಇವಾಂಕಾ ಕೂಡ ಮ್ಯಾಂಡರಿನ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲರು ಮತ್ತು ಅರ್ಥಮಾಡಿಕೊಳ್ಳಬಲ್ಲರು.

ಪುತಿನ್ ಕುಟುಂಬ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ‘ನನ್ನ ಕುಟುಂಬದ ಮಕ್ಕಳು ಚೀನಿ ಭಾಷೆ ಮಾತನಾಡುತ್ತಾರೆ’ ಎಂಬುದನ್ನು ಸ್ವತಃ ಬಹಿರಂಗಪಡಿಸಿದ್ದರು. ಅಲ್ಲದೆ, ಪುತಿನ್ ಮಾಧ್ಯಮ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೋವ್ ಪುತ್ರಿ ರಷ್ಯನ್ ಭಾಷೆಗಿಂತ ಮೊದಲೇ ಚೀನಿ ಭಾಷೆ ಮಾತನಾಡಲು ಕಲಿತಿದ್ದಳು; ಏಕೆಂದರೆ ಆಕೆಯನ್ನು ನೋಡಿಕೊಳ್ಳುತ್ತಿದ್ದ ಗೃಹಸಹಾಯಕಿ ಚೀನಿ ಮೂಲದವಳಾಗಿದ್ದಳು. ರಷ್ಯಾದಲ್ಲಿ ಪ್ರಸ್ತುತ ಒಂದು ಲಕ್ಷಕ್ಕೂ ಹೆಚ್ಚು ಜನರು ಚೀನಿ ಭಾಷೆಯನ್ನು ಕಲಿಯುತ್ತಿದ್ದಾರೆ.

ಜಿಮ್ ರಾಜರ್ಸ್: ಪ್ರಸಿದ್ಧ ಅಮೆರಿಕನ್ ಹೂಡಿಕೆದಾರ ಹಾಗೂ ಲೇಖಕ ಜಿಮ್ ರಾಜರ್ಸ್​ನ ಇಬ್ಬರು ಪುತ್ರಿಯರಾದ ಹ್ಯಾಪಿ ಮತ್ತು ಬಿ ರಾಜರ್ಸ್ ಮ್ಯಾಂಡರಿನ್ ಕಲಿತಿದ್ದಾರೆ. ಈ ಇಬ್ಬರು ಹೆಣ್ಣುಮಕ್ಕಳು ಚೀನಿ ಭಾಷೆಯಲ್ಲಿ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 21ನೇ ಶತಮಾನದಲ್ಲಿ ಚೀನಾ ಅತ್ಯಂತ ಪ್ರಮುಖ ದೇಶವಾಗಲಿದೆ ಎಂದು ಬಲವಾಗಿ ನಂಬಿರುವ ರಾಜರ್ಸ್, ಮಕ್ಕಳಿಗೆ ಸಂಪೂರ್ಣ ಚೀನಿ ಭಾಷೆಯ ವಾತಾವರಣವನ್ನು ಕಲ್ಪಿಸಿಕೊಡುವ ಉದ್ದೇಶದಿಂದಲೇ ಕುಟುಂಬದೊಂದಿಗೆ ಸಿಂಗಾಪುರಕ್ಕೆ ವಲಸೆ ಹೋಗಿದ್ದಾರೆ.

ಬೆಜೋಸ್

ಅಮೆಜಾನ್ ಸಂಸ್ಥೆಯ ಸಂಸ್ಥಾಪಕ ಜೆಫ್ ಬೆಜೋಸ್ ಮಾಜಿ ಪತ್ನಿ ಮೆಕೆಂಜಿ ಸಂದರ್ಶನವೊಂದರಲ್ಲಿ, ‘ನನ್ನ ನಾಲ್ಕೂ ಮಕ್ಕಳು ಮ್ಯಾಂಡರಿನ್ ಭಾಷೆಯನ್ನು ಕಲಿಯುತ್ತಿದ್ದಾರೆ’ ಎಂದು ತಿಳಿಸಿದ್ದರು.

ಕಿಂಗ್ ಚಾರ್ಲ್ಸ್

ಬ್ರಿಟನ್​ನ ಕಿಂಗ್ ಚಾರ್ಲ್ಸ್ ಅವರ ಮೊಮ್ಮಗ ಹಾಗೂ ಬ್ರಿಟಿಷ್ ರಾಜಸತ್ತೆಯ ಮುಂದಿನ ವಾರಸುದಾರರಾಗಿರುವ 12 ವರ್ಷದ ಪ್ರಿನ್ಸ್ ಜಾರ್ಜ್ ಅವರಿಗೆ ಶಾಲೆಯಲ್ಲೇ ಮ್ಯಾಂಡರಿನ್ ಭಾಷೆಯನ್ನು ಕಲಿಸಲಾಗುತ್ತಿದೆ.

ಮಾರ್ಕ್ ಜುಕರ್​ಬರ್ಗ್

ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್ ಪತ್ನಿ ಪ್ರಿಸಿಲ್ಲಾ ಚಾನ್ ಚೀನಿ ಮೂಲದವರಾಗಿದ್ದಾರೆ. ಜುಕರ್​ಬರ್ಗ್ ಬೀಜಿಂಗ್​ನ ಸಿಂಗ್ಹುವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಮ್ಯಾಂಡರಿನ್ ಭಾಷೆಯಲ್ಲೇ ಸಂವಹನ ನಡೆಸಿ ಗಮನ ಸೆಳೆದಿದ್ದರು. ಇವರ ಮೂವರು ಪುತ್ರಿಯರಿಗೆ ಬಾಲ್ಯದಿಂದಲೇ ಇಂಗ್ಲಿಷ್ ಜೊತೆಗೆ ಚೀನಿ ಭಾಷೆಯನ್ನು ಕಲಿಸಲಾಗುತ್ತಿದ್ದು, ಹಿರಿಯ ಮಗಳಿಗೆ ‘ಮ್ಯಾಕ್ಸ್’ ಎಂಬ ಚೀನಿ ಹೆಸರನ್ನು ಸಹ ಇಡಲಾಗಿದೆ.

ಸವಾಲಿನ ಕಲಿಕೆ

ಇಂಗ್ಲಿಷ್ ಭಾಷೆಯಲ್ಲಿ ಕೇವಲ 26 ಅಕ್ಷರಗಳಿದ್ದು, ಅವುಗಳನ್ನು ಕಲಿಯುವುದು ಅತ್ಯಂತ ಸುಲಭ. ಆದರೆ, ಚೀನಿ ಭಾಷೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಂಕೇತಗಳು ಇವೆ. ಕೇವಲ ಓದಲು ಮತ್ತು ಬರೆಯಲು ಕನಿಷ್ಠ 3,500 ಸಂಕೇತಗಳನ್ನು ನೆನಪಿನಲ್ಲಿ ಟ್ಟುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲದೆ, ಅವುಗಳನ್ನು ವಿಭಿನ್ನ ಧ್ವನಿ ಹಾಗೂ ಏರಿಳಿತಗಳಲ್ಲಿ ಉಚ್ಚರಿಸುವುದನ್ನು ಕಲಿಯಬೇಕಾಗುತ್ತದೆ. ಚೀನಿ ಮೂಲದವರಲ್ಲದ ಇತರ ದೇಶಗಳ ಜನರಿಗೆ ಈ ಪ್ರಕ್ರಿಯೆಯು ಕಠಿಣ ಹಾಗೂ ಸವಾಲಿನದ್ದಾಗಿದೆ. ಮತ್ತೊಂದೆಡೆ, ಕೋಡಿಂಗ್, ಇಂಟರ್ನೆಟ್, ಆಲ್ಗೋರಿದಮ್ ಸಂಶೋಧನಾ ಪ್ರಬಂಧಗಳು, ಜಾಗತಿಕ ವ್ಯಾಪಾರ ಮತ್ತು ವಿಜ್ಞಾನದಂತಹ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಇಂದಿಗೂ ಇಂಗ್ಲಿಷ್ ಭಾಷೆಯನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಚೀನಾದ ಕಾಲೇಜ್, ವಿಶ್ವವಿದ್ಯಾಲಯಗಳು ಮತ್ತು ಜಾಗತಿಕ ಕಂಪನಿಗಳಲ್ಲೂ ಅಂತಾರಾಷ್ಟ್ರೀಯ ಸಂವಹನಕ್ಕಾಗಿ ಇಂಗ್ಲಿಷನ್ನೇ ವ್ಯಾಪಕವಾಗಿ ಬಳಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಚೀನಿ ಭಾಷೆಯು ಜಾಗತಿಕ ಭಾಷೆಯಾಗಿ ಇಂಗ್ಲಿಷ್ ಅನ್ನು ತಕ್ಷಣವೇ ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಆದಾಗ್ಯೂ, ಭವಿಷ್ಯದಲ್ಲಿ ಇಂತಹದೊಂದು ಸಾಧ್ಯತೆಯನ್ನು ತಳ್ಳಿಹಾಕುವಂತೆಯೂ ಇಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ತಜ್ಞರು ಹೇಳುವುದೇನು?

ಮ್ಯಾಂಡರಿನ್ ಭಾಷೆಯನ್ನು ಕಲಿಸುವುದು ಮಕ್ಕಳ ಭವಿಷ್ಯದ ಮೇಲಿನ ಅತ್ಯಂತ ದೊಡ್ಡ ಹೂಡಿಕೆಯಾಗಿದೆ. ಚೀನಾದ ಉದಯೋನ್ಮುಖ ಮಾರುಕಟ್ಟೆ ಮಾತ್ರ ಇದಕ್ಕೆ ಕಾರಣವಲ್ಲ, ಬದಲಿಗೆ ಮ್ಯಾಂಡರಿನ್ ವಿಶ್ವದಲ್ಲೇ ಅತಿ ಹೆಚ್ಚು ಜನರ ಮಾತೃಭಾಷೆಯಾಗಿದೆ. ಇದರಲ್ಲಿರುವ ವಿಭಿನ್ನ ಧ್ವನಿಗಳು ಮತ್ತು ಉಚ್ಚಾರಣೆಗಳ ಕಾರಣದಿಂದಾಗಿ ಮಕ್ಕಳು ಸಹ ಇದನ್ನು ಇಷ್ಟಪಟ್ಟು ಕಲಿಯುತ್ತಾರೆ.

ಪ್ರಯೋಜನಗಳು

ಬಾಲ್ಯದಿಂದಲೇ ಮ್ಯಾಂಡರಿನ್ ಭಾಷೆಯನ್ನು ಕಲಿಯುವುದರಿಂದ ಭವಿಷ್ಯದಲ್ಲಿ ಮೂರು ಪ್ರಮುಖ ಪ್ರಯೋಜನಗಳು ಸಿಗುತ್ತವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಉನ್ನತ ಮಟ್ಟದ ಸಂಪರ್ಕ: ಮ್ಯಾಂಡರಿನ್ ಭಾಷೆಯ ಜ್ಞಾನವಿರುವುದರಿಂದ, ಈ ಮಕ್ಕಳು ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಓದುವ ಚೀನಾದ ಶ್ರೀಮಂತ ಮತ್ತು ರಾಜತಾಂತ್ರಿಕರ ಮಕ್ಕಳೊಂದಿಗೆ ಸುಲಭವಾಗಿ ಬೆರೆಯಬಹುದು. ಇದರಿಂದ ಬಾಲ್ಯದಿಂದಲೇ ಒಂದು ‘ಗ್ಲೋಬಲ್ ಎಲೈಟ್ ನೆಟ್​ವರ್ಕ್’ ಸೃಷ್ಟಿಯಾಗುತ್ತದೆ, ಇದು ಅವರ ಭವಿಷ್ಯದ ಬೆಳವಣಿಗೆಗೆ ಭದ್ರ ಬುನಾದಿ ಹಾಕುತ್ತದೆ.

ಸಂಸ್ಕೃತಿಯ ಅರಿವು: ಚೀನಾದಲ್ಲಿ ವ್ಯಾಪಾರ-ವ್ಯವಹಾರ ಎನ್ನುವುದು ಹಣಕಾಸಿನ ವಹಿವಾಟಿಗೆ ಸೀಮಿತವಾಗಿಲ್ಲ. ಬದಲಿಗೆ, ಅಲ್ಲಿ ವೈಯಕ್ತಿಕ ಬಾಂಧವ್ಯ ಮತ್ತು ಗೌರವಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ. ಇದನ್ನು ಚೀನೀ ಭಾಷೆಯಲ್ಲಿ ‘ಗುವಾನ್ಶಿ’ ಎಂದು ಕರೆಯಲಾಗುತ್ತದೆ. ಚೀನಿ ಭಾಷೆ ಕಲಿಯುವ ಮಕ್ಕಳು ಈ ಸಾಂಸ್ಕೃತಿಕ ಸೂಕ್ಷ್ಮತೆಯನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳುತ್ತಾರೆ.

ರಾಜತಾಂತ್ರಿಕತೆಯಲ್ಲಿ ಮುನ್ನಡೆ: ಭವಿಷ್ಯದಲ್ಲಿ ಈ ಮಕ್ಕಳು ಶತಕೋಟಿ ಡಾಲರ್ ಮೌಲ್ಯದ ಉದ್ಯಮ ಅಥವಾ ಫಂಡ್​ಗಳನ್ನು ಮುನ್ನಡೆಸುವಾಗ, ಚೀನಾದ ಅಧಿಕಾರಿಗಳು ಮತ್ತು ಡೀಲ್​ವೆುೕಕರ್​ಗಳೊಂದಿಗೆ ಅವರದ್ದೇ ಭಾಷೆಯಲ್ಲಿ ಮಾತನಾಡಿ ಉನ್ನತ ಮಟ್ಟದ ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂಟರ್​ನ್ಯಾಷನಲ್ ಲಾ ಅಥವಾ ಡಿಪ್ಲೊಮಸಿಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಚೀನಿ ಭಾಷೆಯ ಜ್ಞಾನವು ಸರ್ಕಾರಿ ಹಾಗೂ ಕಾರ್ಪೆರೇಟ್ ವಲಯದಲ್ಲಿ ಸಕಾರಾತ್ಮಕ ಅಂಶವಾಗಿ ಪರಿಗಣಿತವಾಗುತ್ತದೆ.

ಬಾಂಗ್ಲಾದೇಶದಲ್ಲೂ ಉತ್ಸಾಹ!

ಬಾಂಗ್ಲಾದೇಶದಲ್ಲಿ ಪ್ರಸ್ತುತ 250ಕ್ಕೂ ಹೆಚ್ಚು ಚೀನಿ ಕಂಪನಿಗಳಿದ್ದು, ಅವುಗಳು 3 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮಾಡಿವೆ. ಚೀನಾದ ಬಹುತೇಕ ಜನರಿಗೆ ಇಂಗ್ಲಿಷ್ ಬಾರದೇ ಇರುವುದರಿಂದ, ತಮಗೆ ಬೇಕಾದ ಚೀನಿ ಭಾಷೆ ಬಲ್ಲ ಉದ್ಯೋಗಿಗಳನ್ನು ಬಾಂಗ್ಲಾದೇಶದಲ್ಲೇ ಸುಲಭವಾಗಿ ಪಡೆಯುವುದು ಚೀನಾದ ಉದ್ದೇಶವಾಗಿದೆ. ಈ ಕಂಪನಿಗಳಲ್ಲಿ ಭಾಷೆಗೆ ಸಂಬಂಧಿಸಿದಂತೆ 25 ಸಾವಿರ ಉದ್ಯೋಗಾವಕಾಶಗಳಿವೆ. ವಿಶೇಷವೆಂದರೆ, ಫ್ರೆಂಚ್, ಜರ್ಮನ್ ಮತ್ತು ಇಂಗ್ಲಿಷ್ ಭಾಷೆ ಬಲ್ಲವರಿಗಿಂತ ಚೀನಿ ಭಾಷೆ ಬಲ್ಲವರಿಗೆ ಮೂರು ಪಟ್ಟು ಹೆಚ್ಚು ಸಂಬಳ ಸಿಗುತ್ತಿದೆ. ಅಲ್ಲದೆ, ಚೀನಿ ಭಾಷೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸರಳ ಷರತ್ತುಗಳ ಮೇಲೆ 6 ಲಕ್ಷ ರೂಪಾಯಿಗಳ ಸಾಲ ಸೌಲಭ್ಯವನ್ನು ಚೀನಾ ಸರ್ಕಾರ ಘೊಷಿಸಿದೆ. ಢಾಕಾ, ರಾಜ್​ಶಾಹಿ ಮತ್ತು ಖುಲ್ನಾ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6 ಕೇಂದ್ರಗಳ ಮೂಲಕ ‘ಸ್ಮಾರ್ಟ್ ಬಾಂಗ್ಲಾದೇಶ’ ಯೋಜನೆಯಡಿ ಚೀನಿ ಭಾಷೆಯ ತರಬೇತಿ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net