ಅಲ್ಲಿ ಕೋಚ್​ಗಳೇ ಬಲಿಪಶುಗಳು!..ಪಾಕ್ ಕ್ರಿಕೆಟ್‌ನ ಕರಾಳ ಮುಖ ಬಿಚ್ಚಿಟ್ಟ ಗ್ಯಾರಿ ಕರ್ಸ್ಟನ್ | Gary Kirsten

Gary Kirsten | ಟೀಮ್​ ಇಂಡಿಯಾ ಕೋಚ್ ಗ್ಯಾರಿ ಕರ್ಸ್ಟನ್
Gary Kirsten | ಟೀಮ್​ ಇಂಡಿಯಾ ಕೋಚ್ ಗ್ಯಾರಿ ಕರ್ಸ್ಟನ್
Published on
Gary Kirsten: ಪಾಕಿಸ್ತಾನದ ವೈಟ್-ಬಾಲ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್, ಇದೀಗ ತಮ್ಮ ನಿರ್ಗಮನದ ಹಿಂದಿನ ಕಹಿ ಸತ್ಯಗಳನ್ನು ಬಹಿರಂಗಪಡಿಸಿದ್ದು, ಪಾಕ್​ ಕ್ರಿಕೆಟ್ ಮಂಡಳಿ (PCB) ಮತ್ತು ತಂಡದ ಒಳಗಿನ ವಾತಾವರಣವು ಅತ್ಯಂತ ವಿಷಕಾರಿಯಾಗಿದೆ ಎಂದು ಆರೋಪಿಸಿದ್ದಾರೆ.
ಟಾಕ್‌ಸ್ಪೋರ್ಟ್ ಕ್ರಿಕೆಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕರ್ಸ್ಟನ್, ಪಾಕ್​ ತಂಡದಲ್ಲಿನ ವಾತಾವರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2024ರ ಏಪ್ರಿಲ್‌ನಲ್ಲಿ ಕೋಚ್ ಆಗಿ ನೇಮಕಗೊಂಡಿದ್ದ ಕರ್ಸ್ಟನ್, ಕೇವಲ ಆರು ತಿಂಗಳಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕುತೂಹಲಕಾರಿ ವಿಷಯವೆಂದರೆ, ಅವರು ಕೋಚ್ ಆಗಿದ್ದ ಅವಧಿಯಲ್ಲಿ ಪಾಕಿಸ್ತಾನದ ಪರವಾಗಿ ಒಂದೇ ಒಂದು ಏಕದಿನ ಪಂದ್ಯದಲ್ಲೂ ಮಾರ್ಗದರ್ಶನ ನೀಡುವ ಅವಕಾಶ ಅವರಿಗೆ ಸಿಕ್ಕಿರಲಿಲ್ಲ.
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಡೆಯುವ ಹಸ್ತಕ್ಷೇಪವನ್ನು ಕಂಡು ತಮಗೆ ಆಶ್ಚರ್ಯವಾಗಿದೆ ಎಂದಿರುವ ಕರ್ಸ್ಟನ್, ಆ ಮಟ್ಟದಲ್ಲಿ ಮೂಗು ತೂರಿಸುವುದನ್ನು ತಾವು ಇಲ್ಲಿಯವರೆಗೂ ನೋಡಿರಲಿಲ್ಲ ಮತ್ತು ತಂಡದ ಪ್ರದರ್ಶನ ಕಳಪೆಯಾದಾಗಲೆಲ್ಲಾ ಆಟಗಾರರಿಗಿಂತ ಹೆಚ್ಚಾಗಿ ತರಬೇತುದಾರರನ್ನು ಗುರಿ ಮಾಡಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಸರಿ ಇಲ್ಲ ಎಂದಾಕ್ಷಣ ಕೋಚ್ ಆಗಿರುವವರನ್ನು ತೆಗೆದುಹಾಕೋಣ ಎನ್ನುವುದು ಅಲ್ಲಿನ ಸಂಪ್ರದಾಯವಾಗಿದೆ ಎಂದು ಆರೋಪಿಸಿರುವ ಕರ್ಸ್ಟನ್, ಹೊರಗಿನಿಂದ ಕೇಳಿ ಬರುವ ನಿರಂತರ ಟೀಕೆಗಳು ತರಬೇತುದಾರನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಮತ್ತು ಆಟಗಾರರೊಂದಿಗೆ ಕೆಲಸ ಮಾಡುವ ಮನಸ್ಸನ್ನೇ ಹಾಳು ಮಾಡುತ್ತದೆ ಎಂದರು.
ಕಳಪೆ ಪ್ರದರ್ಶನಕ್ಕಾಗಿ ತರಬೇತುದಾರರನ್ನು ತೆಗೆದುಹಾಕೋಣ ಅಥವಾ ತರಬೇತುದಾರರ ಮೇಲೆ ನಿರ್ಬಂಧ ಹೇರೋಣ ಎನ್ನುವುದು ಮಂಡಳಿ ಪಾಲಿಗೆ ತುಂಬಾ ಸುಲಭ ಆದರೆ, ಅದು ನನ್ನ ಅಭಿಪ್ರಾಯದಲ್ಲಿ ಒಳ್ಳೆಯದಲ್ಲ. ಪ್ರತಿ ಹಂತದಲ್ಲೂ ತರಬೇತುದಾರನನ್ನು ದೂಷಿಸುತ್ತಾ ಹೋದರೆ, ನೀವು ಕೋಚ್​​ಗಳನ್ನೇಕೆ ನೇಮಿಸಿಕೊಳ್ಳುತ್ತೀರಿ ಎಂದು ಕರ್ಸ್ಟನ್ ಪ್ರಶ್ನಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net