ಅತ್ತ ಸೆಮಿಫೈನಲ್ ಕನಸು ಭಗ್ನ, ಇತ್ತ ಭಾರಿ ಮೊತ್ತದ ದಂಡದ ಬರೆ; ಪಾಕ್ ಆಟಗಾರರ ಸ್ಥಿತಿ ಈಗ ಅಯೋಮಯ! PCB Fine Pakistan Players

ಸೂಪರ್-8ನಲ್ಲಿ ಫ್ಲಾಪ್ ಪಾಕ್ ಶೋ: ಪಾಕಿಸ್ತಾನ ಆಟಗಾರರಿಗೆ PCB ವಿಧಿಸಿದ ಶಿಕ್ಷೆ ಕೇಳಿದ್ರೆ ಬೆಚ್ಚಿಬೀಳ್ತೀರಾ!
ಸೂಪರ್-8ನಲ್ಲಿ ಫ್ಲಾಪ್ ಪಾಕ್ ಶೋ: ಪಾಕಿಸ್ತಾನ ಆಟಗಾರರಿಗೆ PCB ವಿಧಿಸಿದ ಶಿಕ್ಷೆ ಕೇಳಿದ್ರೆ ಬೆಚ್ಚಿಬೀಳ್ತೀರಾ!
Published on
ಕರಾಚಿ: 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್(PCB Fine Pakistan Players) ತಂಡದ ಹೀನಾಯ ಪ್ರದರ್ಶನವು ಈಗ ಆಟಗಾರರ ಜೇಬಿಗೆ ಕತ್ತರಿ ಹಾಕಿದೆ. ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಆಕ್ರೋಶಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB), ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ ಸುಮಾರು 16 ಲಕ್ಷ ಭಾರತೀಯ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಭಾರತದ ವಿರುದ್ಧದ ಸೋಲೇ ಮುಳುವಾಯಿತೇ..?

ವರದಿಗಳ ಪ್ರಕಾರ, ಈ ಕಠಿಣ ನಿರ್ಧಾರದ ಹಿಂದೆ ಭಾರತದ ವಿರುದ್ಧ ಅನುಭವಿಸಿದ ಹೀನಾಯ ಸೋಲು ಪ್ರಮುಖ ಕಾರಣವಾಗಿದೆ. ಗುಂಪು ಹಂತದಲ್ಲಿ ಬದ್ಧ ವೈರಿ ಭಾರತದ ವಿರುದ್ಧ 61 ರನ್‌ಗಳ ಭಾರಿ ಅಂತರದಿಂದ ಸೋತಾಗಲೇ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಆಟಗಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆಟಗಾರರಿಗೆ ಸವಲತ್ತು ಮತ್ತು ಹಣ ನೀಡುವಾಗ ಕಂಜೂಸಿತನ ಮಾಡದ ಮಂಡಳಿ, ಅವರಿಂದ ಗೆಲುವನ್ನು ನಿರೀಕ್ಷಿಸುವುದು ತಪ್ಪಲ್ಲ ಎಂಬ ನಿಲುವು ತಾಳಿದ ಪಿಸಿಬಿ, ಈಗ ಈ ಶಿಸ್ತುಕ್ರಮ ಕೈಗೊಂಡಿದೆ.

ಸೂಪರ್-8 ಹಂತದಲ್ಲಿ ಹೀನಾಯ ಪ್ರದರ್ಶನ

ಪಾಕಿಸ್ತಾನ ತಂಡವು 2024ರ ವಿಶ್ವಕಪ್‌ಗಿಂತ ಸ್ವಲ್ಪ ಸುಧಾರಣೆ ಕಂಡು ಸೂಪರ್-8 ಹಂತಕ್ಕೇನೋ ತಲುಪಿತ್ತು. ಆದರೆ ಅಲ್ಲಿನ ಪ್ರದರ್ಶನ ಮಾತ್ರ ಅತ್ಯಂತ ಕಳಪೆಯಾಗಿತ್ತು.
ಇಂಗ್ಲೆಂಡ್ ವಿರುದ್ಧ ಸೋಲು: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಸೆಮಿಫೈನಲ್ ಹಾದಿಯನ್ನು ಕಠಿಣಗೊಳಿಸಿಕೊಂಡಿತು.
ನ್ಯೂಜಿಲೆಂಡ್ ವಿರುದ್ಧ ಮಳೆ: ಕಿವೀಸ್ ವಿರುದ್ಧದ ಪ್ರಮುಖ ಪಂದ್ಯ ಮಳೆಗೆ ಆಹುತಿಯಾಗಿ ಕೇವಲ 1 ಅಂಕಕ್ಕೆ ತೃಪ್ತಿಪಡಬೇಕಾಯಿತು.
ಶ್ರೀಲಂಕಾ ವಿರುದ್ಧ ನಾಮ್‌ಕೇವಾಸ್ತೆ ಜಯ: ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದರೂ, ಸೆಮಿಫೈನಲ್ ತಲುಪಲು ಬೇಕಿದ್ದ ನೆಟ್ ರನ್ ರೇಟ್ ಸಾಧಿಸುವಲ್ಲಿ ತಂಡ ವಿಫಲವಾಯಿತು.

ದಾಖಲೆ ಬರೆದರೂ ತಪ್ಪದ ದಂಡ!

ಈ ಟೂರ್ನಿಯಲ್ಲಿ ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್ ಅದ್ಭುತವಾಗಿ ಆಡಿ, ಒಂದೇ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ (383 ರನ್) ಗಳಿಸಿದ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದರು. ಎರಡು ಶತಕಗಳನ್ನು ಸಿಡಿಸಿದ ಫರ್ಹಾನ್ ಒಬ್ಬರನ್ನು ಹೊರತುಪಡಿಸಿ, ಬಾಬರ್ ಅಜಮ್ ಸೇರಿದಂತೆ ಉಳಿದ ಅನುಭವಿ ಆಟಗಾರರು ರನ್ ಗಳಿಸಲು ಪರದಾಡಿದರು. ವರದಿಗಳ ಪ್ರಕಾರ, ಫರ್ಹಾನ್ ಅವರ ಅತ್ಯುತ್ತಮ ಪ್ರದರ್ಶನ ಪರಿಗಣಿಸಿ ಅವರಿಗೆ ದಂಡದಿಂದ ವಿನಾಯಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಯಕತ್ವ ಬದಲಾವಣೆಯ ಮುನ್ಸೂಚನೆ

ಈಗಾಗಲೇ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಸೇರಿದಂತೆ ಹಲವು ದಿಗ್ಗಜರು ತಂಡದ ವಿರುದ್ಧ ಕಿಡಿಕಾರಿದ್ದಾರೆ. ತಂಡದ ನಾಯಕ ಸಲ್ಮಾನ್ ಅಲಿ ಆಗಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಇನ್ನು ಮುಂದೆ ಕೇವಲ ಪ್ರದರ್ಶನದ ಆಧಾರದ ಮೇಲೆ ಮಾತ್ರ ಸಂಭಾವನೆ ನೀಡಲಾಗುವುದು ಎಂದು ಮಂಡಳಿ ಖಡಕ್ ಎಚ್ಚರಿಕೆ ನೀಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡವೊಂದು ಕಳಪೆ ಪ್ರದರ್ಶನಕ್ಕಾಗಿ ಇಷ್ಟೊಂದು ಭಾರಿ ಮೊತ್ತದ ದಂಡ ತೆರುತ್ತಿರುವುದು ಬಹುಶಃ ಇದೇ ಮೊದಲು. ಈ ನಿರ್ಧಾರವು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ಆಂತರಿಕ ಕಲಹಕ್ಕೆ ಕಾರಣವಾಗುವ ಲಕ್ಷಣಗಳು ಕಾಣಿಸುತ್ತಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net