ಯುಎಇ ಅಣು ವಿದ್ಯುತ್ ಸ್ಥಾವರದ ಮೇಲೆ ಭೀಕರ ಡ್ರೋನ್ ದಾಳಿ: ಅಣು ವಿಕಿರಣ ಸೋರಿಕೆಯ ಭೀತಿಯಲ್ಲಿ ಜಗತ್ತು! UAE nuclear plant fire

ಯುಎಇ ಅಣು ವಿದ್ಯುತ್ ಸ್ಥಾವರದ ಮೇಲೆ ಭೀಕರ ಡ್ರೋನ್ ದಾಳಿ: ಅಣು ವಿಕಿರಣ ಸೋರಿಕೆಯ ಭೀತಿಯಲ್ಲಿ ಜಗತ್ತು!
ಯುಎಇ ಅಣು ವಿದ್ಯುತ್ ಸ್ಥಾವರದ ಮೇಲೆ ಭೀಕರ ಡ್ರೋನ್ ದಾಳಿ: ಅಣು ವಿಕಿರಣ ಸೋರಿಕೆಯ ಭೀತಿಯಲ್ಲಿ ಜಗತ್ತು!
Published on
ಅಬುಧಾಬಿ: ಜಾಗತಿಕ ರಾಜಕಾರಣದಲ್ಲಿ ಅಮೆರಿಕ ಹಾಗೂ ಇರಾನ್ ನಡುವಿನ ಸರಣಿ ಯುದ್ಧದ ಕಿಡಿಗಳು ಇದೀಗ ಗಲ್ಫ್ ರಾಷ್ಟ್ರಗಳ ಇಂಧನ ಮತ್ತು ಅಣುಶಕ್ತಿ ಕೇಂದ್ರಗಳಿಗೂ ಹರಡಲಾರಂಭಿಸಿವೆ. ಭಾನುವಾರ ಯುಎಇ ರಾಜಧಾನಿ ಅಬುಧಾಬಿಯ ಅಲ್ ಧಾಫ್ರಾ ಪ್ರದೇಶದಲ್ಲಿರುವ ವಿಶ್ವಪ್ರಸಿದ್ಧ ಬರಾಕಾ ಅಣು ವಿದ್ಯುತ್ ಸ್ಥಾವರದ (UAE nuclear plant fire) ಹೊರಭಾಗದಲ್ಲಿ ಭೀಕರ ಡ್ರೋನ್ ದಾಳಿ ನಡೆದಿದ್ದು, ಇಡೀ ಆವರಣದಲ್ಲಿ ಜ್ವಾಲಾಮುಖಿಯಂತೆ ಬೆಂಕಿ ಹೊತ್ತಿ ಉರಿದಿದೆ.
ಅಣು ಸ್ಥಾವರದ ಕಾಂಪೌಂಡ್ ಗೋಡೆಯ ಬಳಿಯೇ ಈ ಸ್ಪೋಟ ಸಂಭವಿಸಿದ್ದರಿಂದ, ಜಗತ್ತಿನಾದ್ಯಂತ ಅಣು ವಿಕಿರಣ ಸೋರಿಕೆಯಾಗಬಹುದೇ ಎಂಬ ದೊಡ್ಡ ಮಟ್ಟದ ಆತಂಕ ಸೃಷ್ಟಿಯಾಗಿತ್ತು.

ವಿಕಿರಣ ಸುರಕ್ಷತೆಗಿಲ್ಲ ಧಕ್ಕೆ: ಅಧಿಕೃತ ಪ್ರಕಟಣೆ

ದಾಳಿಯ ತೀವ್ರತೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಯುಎಇ ಪರಮಾಣು ನಿಯಂತ್ರಣದ ಫೆಡರಲ್ ಪ್ರಾಧಿಕಾರ (FANR) ಮತ್ತು ಅಬುಧಾಬಿ ಮಾಧ್ಯಮ ಕಚೇರಿಯು ಎಕ್ಸ್ ಮೂಲಕ ಅಧಿಕೃತ ಪ್ರಕಟಣೆ ಹೊರಡಿಸಿದೆ. ಬರಾಕಾ ಅಣು ವಿದ್ಯುತ್ ಸ್ಥಾವರದ ಗಡಿಭಾಗದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ತಕ್ಷಣವೇ ನಿಯಂತ್ರಣಕ್ಕೆ ತರಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅತ್ಯಂತ ಮುಖ್ಯವಾಗಿ, ಈ ದಾಳಿಯಿಂದ ಸ್ಥಾವರದ ಮುಖ್ಯ ಸಿಸ್ಟಮ್‌ಗಳಿಗೆ ಅಥವಾ ವಿಕಿರಣ ಸುರಕ್ಷತಾ ಮಟ್ಟಕ್ಕೆ ಯಾವುದೇ ಹಾನಿಯಾಗಿಲ್ಲ. ಸ್ಥಾವರದ ಎಲ್ಲಾ ಘಟಕಗಳು ಎಂದಿನಂತೆ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಈ ಸೂಕ್ಷ್ಮ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳನ್ನು ಹರಡಬಾರದು ಮತ್ತು ಕೇವಲ ಅಧಿಕೃತ ಮೂಲಗಳ ಮಾಹಿತಿಯನ್ನಷ್ಟೇ ನಂಬಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಯುಎಇ ಶಕ್ತಿಯ ಬೆನ್ನೆಲುಬು 'ಬರಾಕಾ ಸ್ಥಾವರ'

2020 ರಲ್ಲಿ ಕಾರ್ಯಾಚರಣೆ ಆರಂಭಿಸಿದ ಈ ಬರಾಕಾ ಅಣು ಸ್ಥಾವರವು ಸೌದಿ ಅರೇಬಿಯಾ ಮತ್ತು ಕತಾರ್ ದೇಶಗಳ ಗಡಿಯ ಸಮೀಪದಲ್ಲಿದೆ. ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಫ್‌ಪಿ ವರದಿಯ ಪ್ರಕಾರ, ಇಡೀ ಯುಎಇ ದೇಶಕ್ಕೆ ಸರಬರಾಜಾಗುವ ಒಟ್ಟು ವಿದ್ಯುತ್ ಶಕ್ತಿಯಲ್ಲಿ ಬರೋಬ್ಬರಿ ನಾಲ್ಕನೇ ಒಂದು ಭಾಗವನ್ನು (ಶೇ.25) ಕೇವಲ ಈ ಒಂದೇ ಅಣು ಸ್ಥಾವರ ಉತ್ಪಾದಿಸುತ್ತದೆ. ಇಂತಹ ಆಯಕಟ್ಟಿನ ಜಾಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಯುಎಇ ಆರ್ಥಿಕತೆ ಮತ್ತು ಭದ್ರತೆಗೆ ಒಡ್ಡಿದ ನೇರ ಸವಾಲಾಗಿದೆ.

ಇರಾನ್ ವಿರುದ್ಧ ಬಲವಾದ ಅನುಮಾನದ ಮುಳ್ಳು!

ಈ ಭೀಕರ ದಾಳಿಯ ಹೊಣೆಯನ್ನು ಸದ್ಯಕ್ಕೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲವಾದರೂ ಮತ್ತು ಯುಎಇ ಯಾರ ಹೆಸರನ್ನೂ ಬಹಿರಂಗವಾಗಿ ಹೇಳದಿದ್ದರೂ, ಇದರ ಹಿಂದೆ ಇರಾನ್ ಸರ್ಕಾರದ ನೇರ ಹಸ್ತವಿದೆ ಎಂದು ಪ್ರಬಲವಾಗಿ ಶಂಕಿಸಲಾಗಿದೆ. ಕಳೆದ ಫೆಬ್ರವರಿ 28 ರಿಂದ ಗಲ್ಫ್ ಪ್ರದೇಶದಲ್ಲಿ ಯುದ್ಧದ ಜ್ವಾಲೆ ಹೊತ್ತಿಕೊಂಡ ದಿನದಿಂದಲೂ, ಯುಎಇ ದೇಶದ ಪ್ರಮುಖ ತೈಲ ಸಂಸ್ಕರಣಾಗಾರ ಹಾಗೂ ಆರ್ಥಿಕ ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ಸರಣಿ ಡ್ರೋನ್ ದಾಳಿಗಳಿಗೆ ಇರಾನ್ ದೇಶವೇ ಕಾರಣ ಎಂದು ಯುಎಇ ನಿರಂತರವಾಗಿ ದೂಷಿಸುತ್ತಾ ಬಂದಿದೆ.

'ರಹಸ್ಯ' ಪ್ರತಿಕಾರದ ರಹಸ್ಯ ಬಯಲು ಮಾಡಿದ ವಾಲ್ ಸ್ಟ್ರೀಟ್ ಜರ್ನಲ್!

ಇದೇ ಸಂದರ್ಭದಲ್ಲಿ, ಜಾಗತಿಕ ಮಾಧ್ಯಮವಾದ ದಿ ವಾಲ್ ಸ್ಟ್ರೀಟ್ ಜರ್ನಲ್ ಇತ್ತೀಚೆಗೆ ಸ್ಫೋಟಕ ವರದಿಯೊಂದನ್ನು ಪ್ರಕಟಿಸಿತ್ತು. ಇರಾನ್ ಸರಣಿ ದಾಳಿಗಳಿಗೆ ಪ್ರತಿಯಾಗಿ ಯುಎಇ ಕೂಡ ಇರಾನ್ ದೇಶದ ಒಳಗಿರುವ ಪ್ರಮುಖ ಮೂಲಸೌಕರ್ಯಗಳ ಮೇಲೆ 'ರಹಸ್ಯ ಮಿಲಿಟರಿ ದಾಳಿಯನ್ನು ನಡೆಸಿ ಸೇಡು ತೀರಿಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ವರದಿಯ ಬೆನ್ನಲ್ಲೇ ಯುಎಇ ವಿದೇಶಾಂಗ ಸಚಿವಾಲಯವು ನೇರವಾಗಿ ಯಾವುದೇ ದೇಶದ ಹೆಸರು ಹೇಳದೆ, ಇತ್ತೀಚಿನ ದಿನಗಳಲ್ಲಿ ನಾವು ಕೈಗೊಂಡಿರುವ ಎಲ್ಲಾ ಮಿಲಿಟರಿ ಕ್ರಮಗಳು ಕೇವಲ ನಮ್ಮ ದೇಶದ ಗಡಿ, ಸಾರ್ವಜನಿಕರು ಮತ್ತು ನಮ್ಮ ಪ್ರಮುಖ ಮೂಲಸೌಕರ್ಯಗಳನ್ನು ರಕ್ಷಿಸಿಕೊಳ್ಳಲು ಅನಿವಾರ್ಯವಾಗಿ ಮಾಡಿಕೊಂಡಿರುವ ರಕ್ಷಣಾತ್ಮಕ ಸಿದ್ಧತೆಗಳಷ್ಟೇ ಎಂದು ಹೇಳಿಕೆ ನೀಡಿರುವುದು ಯುದ್ಧದ ತೀವ್ರತೆಯನ್ನು ಸಾಬೀತುಪಡಿಸಿದೆ.

ಮುಗಿಯದ ಅಮೆರಿಕ-ಇರಾನ್ ಭೀಕರ ವೈರತ್ವ!

ಮತ್ತೊಂದೆಡೆ, ಸೂಪರ್ ಪವರ್ ಅಮೆರಿಕ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಇರಾನ್ ನಡುವಿನ ವೈರತ್ವ ಶಮನಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕಾ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅಮೆರಿಕ ಪಟ್ಟು ಹಿಡಿದಿದೆ. ಆದರೆ, ಇದಕ್ಕೆ ಕಠಿಣವಾಗಿ ಪ್ರತಿಕ್ರಿಯಿಸಿರುವ ಟೆಹ್ರಾನ್, ನಮ್ಮ ಪರಮಾಣು ಯೋಜನೆ ಕೇವಲ ನಾಗರಿಕ ಬಳಕೆ ಮತ್ತು ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗಿದ್ದು, ನಾವು ಯಾರ ಬೆದರಿಕೆಗೂ ಬಗ್ಗುವುದಿಲ್ಲ ಎಂದು ಸಾರಿರುವುದು ಮಧ್ಯಪ್ರಾಚ್ಯವನ್ನು ಮೂರನೇ ಮಹಾಯುದ್ಧದ ಸನ್ನಾಹಕ್ಕೆ ತಳ್ಳುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net