Tarique Rahman | ಸಮಾನತೆಯ ಕನಸಿಗೆ ಮರುಜೀವ: ಐ ಹ್ಯಾವ್ ಎ ಪ್ಲಾನ್, ಬಾಂಗ್ಲಾದಲ್ಲಿ ಕಿಚ್ಚೆಬ್ಬಿಸಿದ ತಾರಿಖ್ ರೆಹಮಾನ್ ಮಾತು

Tarique Rahman | ಜಿಯಾವುರ್ ರೆಹಮಾನ್ ಮತ್ತು ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಬಾಂಗ್ಲಾದೇಶಕ್ಕೆ ಮರಳಿದರು
Tarique Rahman | ಜಿಯಾವುರ್ ರೆಹಮಾನ್ ಮತ್ತು ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಬಾಂಗ್ಲಾದೇಶಕ್ಕೆ ಮರಳಿದರು
Published on
ಢಾಕಾ: 17 ವರ್ಷಗಳ ನಂತರ ಬಾಂಗ್ಲಾದೇಶಕ್ಕೆ ಆಗಮಿಸಿರುವ ಬಿಎನ್​ಪಿ ಪಕ್ಷದ ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್(Tarique Rahman), ಉತ್ತಮ ಬಾಂಗ್ಲಾದೇಶಕ್ಕಾಗಿ ನನ್ನ ಬಳಿ ಒಂದು ಯೋಜನೆ ಇದೆ ಎಂದು ಗುರುವಾರ (ಡಿ.25) ಹೇಳಿದ್ದಾರೆ.
ಈ ಬಗ್ಗೆ ಢಾಕಾದಲ್ಲಿ ನೆರೆದಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ರೆಹಮಾನ್, ಅಮೆರಿಕದ ನಾಗರಿಕ ಹಕ್ಕುಗಳ ರೂವಾರಿ ಮಾರ್ಟಿನ್ ಲೂಥರ್ ಕಿಂಗ್ ಸಾರ್ವಜನಿಕ ಭಾಷಣದಲ್ಲಿ ನನಗೆ ಒಂದು ಕನಸು ಇದೆ ಎಂದು ತಿಳಿಸಿದ್ದರು. ಅವರಂತೆಯೇ, ನಾನು ನಿಮಗೆ ಒಂದು ಮಾತು ಹೇಳಲು ಬಯಸುತ್ತೇನೆ, ಬಾಂಗ್ಲಾದೇಶಕ್ಕಾಗಿ ನನ್ನ ಬಳಿ ಒಂದು ಯೋಜನೆ ಇದೆ ಎನ್ನುವ ಮೂಲಕ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ರೆಹಮಾನ್, ದೇಶವನ್ನು ಪ್ರೀತಿಯ ಬಾಂಗ್ಲಾದೇಶ ಎಂದು ಸಂಬೋಧಿಸಿದ್ದಾರೆ. ನಾನು ಇಲ್ಲದಿದ್ದಾಗ, ಬಿಎನ್‌ಪಿಯನ್ನು ಬೆಂಬಲಿಸಿದ ಪಕ್ಷದ ಕಾರ್ಯಕರ್ತರು ಮತ್ತು ನಾಗರಿಕರಿಗೆ ಧನ್ಯವಾದ ಹೇಳುತ್ತೇನೆ. ನೀವು ನಮ್ಮನ್ನು ಬೆಂಬಲಿಸಿದರೆ, ಈ ದೇಶಕ್ಕೆ ಯಶಸ್ಸನ್ನು ತರುವ ಯೋಜನೆಯನ್ನು ನಾನು ಹೊಂದಿದ್ದೇನೆ. ಹೊಸ ಬಾಂಗ್ಲಾದ ನಿರ್ಮಾಣದಲ್ಲಿ ಭಾಗವಾಗಲು ತಮ್ಮ ದೇಶವಾಸಿಗಳನ್ನು ಒತ್ತಾಯಿಸಿದ್ದಾರೆ.
1971ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾರ ಸರ್ಕಾರದ ವಿರುದ್ಧದ 2024ರ ದಂಗೆಯ ನಡುವೆ ಹೋಲಿಕೆ ಮಾಡಿದ್ದಾರೆ. ಸ್ವತಂತ್ರ ಬಾಂಗ್ಲಾ ಕ್ರಾಂತಿಯಲ್ಲಿ ಹುತಾತ್ಮರಾದವರನ್ನು ನೆನಪಿಕೊಂಡು ಹೊಸ ದೇಶವನ್ನು ನಿರ್ಮಿಸುವ ಮೂಲಕ ಅವರನ್ನು ಗೌರವಿಸಬೇಕು. ಅಲ್ಲದೆ, ನಾವು ಹುತಾತ್ಮರ ರಕ್ತದ ಋಣವನ್ನು ಮರುಪಾವತಿಸಬೇಕು ಎಂದು ರೆಹಮಾನ್​ ಪ್ರತಿಪಾದಿಸಿದ್ದಾರೆ.
ನಾವು 1971 ರಲ್ಲಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದೆವು. 2024ರಲ್ಲಿ ನಾವು ದೇಶವನ್ನು ಮತ್ತೆ ಸ್ವತಂತ್ರಗೊಳಿಸಿದೆವು ಎಂದಿದ್ದಾರೆ. ಅಲ್ಲದೆ, 2024ರಲ್ಲಿ ಜನರು ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ರೆಹಮಾನ್​ ಸಮರ್ಥಿಸಿಕೊಂಡಿದ್ದಾರೆ.
ದೇಶದ ಪ್ರಸ್ತುತ ರಾಜಕೀಯ ವಾತಾವರಣವನ್ನು ಪ್ರಸ್ತಾಪಿಸಿದ ರೆಹಮಾನ್, ಬಾಂಗ್ಲಾವು ಎಲ್ಲರಿಗೂ ಸೇರಿದ್ದು ಎನ್ನವ ಮೂಲಕ ಸಹಿಷ್ಣುತೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇದು ಬೆಟ್ಟಗಳು ಮತ್ತು ಬಯಲು ಪ್ರದೇಶಗಳ ಭೂಮಿ, ಮುಸ್ಲಿಮರು, ಹಿಂದೂಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರು ಬಾಂಗ್ಲಾದಲ್ಲಿ ಸಮಾನವಾಗಿ ವಾಸಿಸುತ್ತಿದ್ದಾರೆ. ನಾವು ಸುರಕ್ಷಿತ ಬಾಂಗ್ಲಾದೇಶವನ್ನು ನಿರ್ಮಿಸಲು ಬಯಸುತ್ತೇವೆ. ಇಲ್ಲಿ ಯಾವುದೇ ಮಹಿಳೆ, ಪುರುಷ ಅಥವಾ ಮಗು ತಮ್ಮ ಮನೆಯನ್ನು ಸುರಕ್ಷಿತವಾಗಿ ಬಿಟ್ಟು ಸುರಕ್ಷಿತವಾಗಿ ಹಿಂತಿರುಗಬಹುದಾದ ದೇಶ ಎಂದು ರೆಹಮಾನ್ ತಿಳಿಸಿದ್ದಾರೆ.
ಷರೀಫ್ ಉಸ್ಮಾನ್ ಹಾದಿಯ ಬಗ್ಗೆ ಮಾತನಾಡಿದ ತಾರೀಕ್​, ಭಾರತ ವಿರೋಧಿ ಕಾರ್ಯಕರ್ತ ಪ್ರಜಾಪ್ರಭುತ್ವ ಬಾಂಗ್ಲಾದೇಶದ ಕನಸು ಕಂಡಿದ್ದರು ಮತ್ತು ಜನರು ತಮ್ಮ ಆರ್ಥಿಕ ಹಕ್ಕುಗಳನ್ನು ಮರಳಿ ಪಡೆಯಬೇಕೆಂದು ಬಯಸಿದ್ದರು. ಹಾದಿಯ ಹತ್ಯೆಗೆ ನ್ಯಾಯ ದೊರಕಿಸಿಕೊಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಬಾಂಗ್ಲಾದ ಭವಿಷ್ಯವು ಅಭಿವೃದ್ಧಿ ಮತ್ತು ಸ್ಥಿರತೆಗೆ ಜವಾಬ್ದಾರರಾಗಿರಬೇಕು ಎಂದು ದೇಶದ ಯುವ ಪೀಳಿಗೆಯ ನಾಗರಿಕರಿಗೆ ಕರೆ ನೀಡಿದ ರೆಹಮಾನ್​, ಬಾಂಗ್ಲಾಕ್ಕಾಗಿ ತಾವು ಹಾಕಿಕೊಂಡಿರುವ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ತಮ್ಮ ಭಾಷಣದ ನಂತರ, ರೆಹಮಾನ್ ಎವರ್‌ಕೇರ್ ಆಸ್ಪತ್ರೆಯಲ್ಲಿ ತಮ್ಮ ಅನಾರೋಗ್ಯ ಪೀಡಿತ ತಾಯಿ ಖಲೀದಾ ಜಿಯಾರನ್ನು ಭೇಟಿ ಮಾಡಲು ಹೊರಟು ಹೋದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net