ಟ್ರಂಪ್ ಆರ್ಥಿಕ ಕ್ರಾಂತಿ; ಅಮೆರಿಕನ್ನರಿಗೆ ತೆರಿಗೆ ಮುಕ್ತಿ..? ವಿದೇಶಿ ಸರಕುಗಳ ಮೇಲೆ ಕಣ್ಣಿಟ್ತು ಶ್ವೇತಭವನ! | Donald Trump

Donald Trump | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​​: ಅಮೆರಿಕದ ಆರ್ಥಿಕ ನೀತಿಗಳ ಮೇಲೆ ಭಾರಿ ಪರಿಣಾಮ ಬೀರಬಲ್ಲ ಬೆಳವಣಿಗೆಯೊಂದರಲ್ಲಿ, ಸುಂಕಗಳ ಹೇರಿಕೆಯ ಕುರಿತಾದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅತ್ಯಂತ ದುರದೃಷ್ಟಕರ ಎಂದು ಕರೆದಿದ್ದಾರೆ.
ವಾಷಿಂಗ್ಟನ್‌ನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕ್ಯಾಪಿಟಲ್‌ನ ಹೌಸ್ ಚೇಂಬರ್‌ನಲ್ಲಿ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ತಮ್ಮ ಎರಡನೇ ಅವಧಿಯ ಮೊದಲ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣ ಮಾಡಿದ ಟ್ರಂಪ್​, ವಿದೇಶಗಳು ಪಾವತಿಸುವ ಸುಂಕಗಳು, ಆಧುನಿಕ ಆದಾಯ ತೆರಿಗೆ ವ್ಯವಸ್ಥೆಯನ್ನು ಗಣನೀಯವಾಗಿ ಬದಲಾಯಿಸುತ್ತವೆ ಮತ್ತು ನಾನು ಪ್ರೀತಿಸುವ ಜನರಿಂದ ದೊಡ್ಡ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತವೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಅಮೆರಿಕದ ನಾಗರಿಕರು ತಾವು ಸಂಪಾದಿಸಿದ ಹಣವನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ನೀಡುತ್ತಿದ್ದಾರೆ, ನಾವು ವಿದೇಶಿ ಸರಕುಗಳ ಮೇಲೆ ಸುಂಕ ವಿಧಿಸುವ ಮೂಲಕ ಈ ಹಣವನ್ನು ಸಂಗ್ರಹಿಸಬಹುದು. ಇದರಿಂದ ಅಮೆರಿಕನ್ನರ ಮೇಲೆ ತೆರಿಗೆ ಹೊರೆ ಇರುವುದಿಲ್ಲ ಎಂದು ಟ್ರಂಪ್​ ವಿವರಿಸಿದ್ದಾರೆ.
19ನೇ ಶತಮಾನದಲ್ಲಿದ್ದಂತೆ, ಕೇವಲ ಸುಂಕಗಳ ಮೂಲಕವೇ ದೇಶದ ಬೊಕ್ಕಸವನ್ನು ತುಂಬಿಸುವ ಹಳೆಯ ಆರ್ಥಿಕ ಮಾದರಿಯನ್ನು ಮರಳಿ ತರುವುದು ನಮ್ಮ ಆದ್ಯತೆಯಾಗಿದೆ ಎಂದು ಟ್ರಂಪ್​ ಹೇಳಿಕೊಂಡಿದ್ದಾರೆ. ವಿದೇಶಿ ಸರಕುಗಳು ದುಬಾರಿಯಾದಾಗ, ಅಮೆರಿಕದಲ್ಲೇ ಉತ್ಪಾದನೆ ಹೆಚ್ಚುತ್ತದೆ ಮತ್ತು ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಅಮೆರಿಕಾ ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಈ ಸುಂಕಗಳನ್ನು ಬಳಸಿದೆ, ನಮ್ಮ ದೇಶಕ್ಕೆ ಆರ್ಥಿಕವಾಗಿ ಮತ್ತು ರಾಷ್ಟ್ರೀಯ ಭದ್ರತಾ ಆಧಾರದ ಮೇಲೆ ಉತ್ತಮ ವ್ಯವಹಾರಗಳನ್ನು ಮಾಡಲು ನೂರಾರು ಶತಕೋಟಿ ಡಾಲರ್‌ಗಳನ್ನು ಪಡೆದುಕೊಂಡೆ. ಎಲ್ಲವೂ ಚೆನ್ನಾಗಿ ಕೆಲಸ ಮಾಡುತ್ತಿತ್ತು, ಕೋರ್ಟ್​ ಇದಕ್ಕೆ ಅಡ್ಡಗಾಲು ಹಾಕಿತು ಎನ್ನುವುದು ಟ್ರಂಪ್ ವಾದ.

ಸುಪ್ರೀಂ ಕೋರ್ಟ್ ಹೇಳಿದ್ದೇನು..?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ವಿವಾದಾತ್ಮಕ ಮತ್ತು ಆಕ್ರಮಣಕಾರಿ ಆರ್ಥಿಕ ನೀತಿಯಾದ ಸಾರ್ವತ್ರಿಕ ಸುಂಕ ವಿಧಿಸಿರುವುದಕ್ಕೆ, ಸ್ವತಃ ಅಲ್ಲಿನ ಸುಪ್ರೀಂ ಕೋರ್ಟ್ (US Supreme Court) ಶುಕ್ರವಾರ ತಡೆ ನೀಡಿದ್ದು, ಟ್ರಂಪ್ ವಿಧಿಸಿದ್ದ ಎಲ್ಲಾ ಸುಂಕಗಳನ್ನು ರದ್ದುಗೊಳಿಸಿರುವ ನ್ಯಾಯಾಲಯವು, ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಟ್ರಂಪ್ ಸುಂಕಗಳನ್ನು ವಿಧಿಸುವ ಮೂಲಕ ಸಂವಿಧಾನವು ನೀಡಿದ ಅಧಿಕಾರವನ್ನು ಮೀರಿದ್ದು, ತೆರಿಗೆ ಮತ್ತು ಸುಂಕಗಳ ನಿರ್ಧಾರವು ಕಾಂಗ್ರೆಸ್ (ಅಮೆರಿಕದ ಸಂಸತ್ತು) ವ್ಯಾಪ್ತಿಗೆ ಬರುತ್ತದೆಯೇ ಹೊರತು ಕೇವಲ ಅಧ್ಯಕ್ಷರ ನಿರ್ಧಾರವಲ್ಲ ಎಂದು ಕೋರ್ಟ್ ಹೇಳಿದೆ.
ಟ್ರಂಪ್ 'ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆಕ್ಟ್' (IEEPA) ಅಡಿಯಲ್ಲಿ ಈ ಸುಂಕಗಳನ್ನು ಜಾರಿಗೆ ತಂದಿದ್ದರು. ಈ ಕಾನೂನನ್ನು ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು ಎನ್ನುವ ನಿಯಮವಿದ್ದು, ಆದರೆ ಈಗ ಅದನ್ನು ಸಾಮಾನ್ಯ ವ್ಯಾಪಾರ ನೀತಿಗಾಗಿ ಬಳಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net