ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಅಬ್ಬರಕ್ಕೆ ತತ್ತರಿಸಿದ ಭಾರತ; 76 ರನ್‌ಗಳ ಭಾರಿ ಸೋಲು ಅನುಭವಿಸಿದ ಬ್ಲೂಬಾಯ್ಸ್​ | South Africa win

ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಅಬ್ಬರಕ್ಕೆ ತತ್ತರಿಸಿದ ಭಾರತ; 76 ರನ್‌ಗಳ ಭಾರಿ ಸೋಲು ಅನುಭವಿಸಿದ ಬ್ಲೂಬಾಯ್ಸ್
ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಅಬ್ಬರಕ್ಕೆ ತತ್ತರಿಸಿದ ಭಾರತ; 76 ರನ್‌ಗಳ ಭಾರಿ ಸೋಲು ಅನುಭವಿಸಿದ ಬ್ಲೂಬಾಯ್ಸ್
Published on
ಅಹಮದಾಬಾದ್: ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(South Africa win) ತಂಡ ಭಾರತದ ವಿರುದ್ಧ 76 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಕೇವಲ 111 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿದೆ.

ಹರಿಣಗಳ ಬ್ಯಾಟಿಂಗ್ ವೈಭವ

ಆರಂಭದಲ್ಲಿ ಜಸ್ಪ್ರೀತ್ ಬುಮ್ರಾ ದಾಳಿಗೆ ಸಿಲುಕಿ 20 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಡೇವಿಡ್ ಮಿಲ್ಲರ್ (63 ರನ್, 35 ಎಸೆತ) ಮತ್ತು ಡೆವಾಲ್ಡ್ ಬ್ರೆವಿಸ್ (45 ರನ್) ಆಸರೆಯಾದರು. ಇವರಿಬ್ಬರ 97 ರನ್‌ಗಳ ಸ್ಫೋಟಕ ಜೊತೆಯಾಟ ತಂಡದ ಮೊತ್ತವನ್ನು ಹೆಚ್ಚಿಸಿತು. ಅಂತಿಮ ಹಂತದಲ್ಲಿ ಟ್ರಿಸ್ಟಾನ್ ಸ್ಟಬ್ಸ್ (44*) ಅಬ್ಬರಿಸಿದ್ದರಿಂದ ತಂಡ 187 ರನ್‌ಗಳ ಸವಾಲಿನ ಮೊತ್ತ ತಲುಪಿತು. ಭಾರತದ ಪರ ಬುಮ್ರಾ 15 ರನ್‌ಗಳಿಗೆ 3 ವಿಕೆಟ್ ಪಡೆದು ಮಿಂಚಿದರೂ, ಉಳಿದ ಬೌಲರ್‌ಗಳು ರನ್ ನಿಯಂತ್ರಿಸುವಲ್ಲಿ ವಿಫಲರಾದರು.

ಭಾರತದ ಬ್ಯಾಟಿಂಗ್ ಕುಸಿತ

188 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಇಶಾನ್ ಕಿಶನ್, ತಿಲಕ್ ವರ್ಮಾ ಮತ್ತು ಅಭಿಷೇಕ್ ಶರ್ಮಾ ಪವರ್‌ಪ್ಲೇ ಒಳಗೇ ಪೆವಿಲಿಯನ್ ಸೇರಿದರು. ನಾಯಕ ಸೂರ್ಯಕುಮಾರ್ ಯಾದವ್ (18) ಮತ್ತು ಹಾರ್ದಿಕ್ ಪಾಂಡ್ಯ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಕೇವಲ ಒಂದೇ ಓವರ್‌ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಭಾರತದ ಮಧ್ಯಮ ಕ್ರಮಾಂಕವನ್ನು ಧೂಳೀಪಟ ಮಾಡಿದರು. ಅಂತಿಮವಾಗಿ ಭಾರತ 18.4 ಓವರ್‌ಗಳಲ್ಲಿ 111 ರನ್‌ಗಳಿಗೆ ಸರ್ವಪತನ ಕಂಡಿತು.
ಈ ಸೋಲಿನೊಂದಿಗೆ ಭಾರತಕ್ಕೆ ಸೆಮಿಫೈನಲ್ ಹಾದಿ ಸ್ವಲ್ಪ ಕಠಿಣವಾಗಿದ್ದು, ಮುಂದಿನ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳು ನಿರ್ಣಾಯಕವಾಗಿವೆ.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 187/7 (20 ಓವರ್) - ಮಿಲ್ಲರ್ 63, ಸ್ಟಬ್ಸ್ 44*; ಬುಮ್ರಾ 3/15.
ಭಾರತ: 111/10 (18.4 ಓವರ್) - ಪಾಂಡ್ಯ 18, ಅಭಿಷೇಕ್ 15; ಮಹಾರಾಜ್ 3/24,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net