ಉಗ್ರನಿಂದ ಗನ್​ ಕಸಿದು ಪ್ರವಾಸಿಗರ ಪ್ರಾಣ ಉಳಿಸಿದ ಈ ಧೈರ್ಯವಂತ ಯಾರು? ಸಿಡ್ನಿ ದಾಳಿಯ 'ಹೀರೋ' ಈತ

ಸಿಡ್ನಿ ಗುಂಡಿನ ದಾಳಿಯ ದೃಶ್ಯ
ಸಿಡ್ನಿ ಗುಂಡಿನ ದಾಳಿಯ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಸಿಡ್ನಿಯ ಬೋಂಡಿ ಬೀಚ್​​ನಲ್ಲಿ ಉಗ್ರರ ಗುಂಡಿನ ದಾಳಿ
  • ಭೀಕರ ಗುಂಡಿನ ದಾಳಿಯಲ್ಲಿ ಒಟ್ಟು 16 ಮಂದಿ ಬಲಿ
  • ದಾಳಿಯ ಇಬ್ಬರೂ ಉಗ್ರರು ಪಾಕಿಸ್ತಾನಿಗಳು ಎನ್ನಲಾಗಿದೆ
ಆಸ್ಟ್ರೇಲಿಯಾ: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಇದುವರೆಗೆ ಒಟ್ಟು 16 ಮಂದಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 29ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗುಂಡು ಹಾರಿಸಿದ ಇಬ್ಬರು ಉಗ್ರರು ತಂದೆ-ಮಗ ಎನ್ನಲಾಗಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆ ಪಾಲಾಗಿದ್ದಾನೆ. ಪಾಕಿಸ್ತಾನಿ ಮೂಲದ ಇಬ್ಬರು ಉಗ್ರರ ಗುರುತನ್ನು ಪತ್ತೆಹಚ್ಚಿರುವ ಸಿಡ್ನಿ ಪೊಲೀಸರು, ಈ ಘಟನೆಯಲ್ಲಿ ಉಗ್ರನಿಂದ ಬಂದೂಕನ್ನು ಕಸಿದು, ಪ್ರವಾಸಿಗರ ಪ್ರಾಣ ಉಳಿಸಿದ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ.
ಯಹೂದಿಗಳನ್ನು ಗುರಿಯಾಗಿಸಿಕೊಂಡ ಉಗ್ರರು, ಅವರ ಹನುಕ್ಕಾ ಹಬ್ಬದ ಆಚರಣೆಯ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಿದರು. ಪ್ರವಾಸಿಗರಲ್ಲಿ ಮಕ್ಕಳು, ವಯಸ್ಕರು, ವೃದ್ಧರು ಯಾರನ್ನೂ ನೋಡದೆ ಗುಂಡು ಹಾರಿಸುತ್ತಿದ್ದ ಉಗ್ರನಿಂದ ಸ್ಥಳೀಯ ಹಣ್ಣಿನ ವ್ಯಾಪಾರಿ ಅಹ್ಮದ್​, ಹಿಂಬದಿಯಿಂದ ಗನ್​ ಕಸಿದು, ಅವನಿಗೆ ಫೈರ್​ ಮಾಡಿದ ದೃಶ್ಯ ನಿಜಕ್ಕೂ ಎಂಥವರ ಮೈಯನ್ನು ನಡುಗಿಸುತ್ತದೆ. ಚಾಣಾಕ್ಷತನದಿಂದ ಮತ್ತು ಧೈರ್ಯದಿಂದ ದಾಳಿಕೋರನಿಂದ ಬಂದೂಕನ್ನು ಕಸಿದುಕೊಂಡು ಅನೇಕ ಪ್ರವಾಸಿಗರ ಜೀವ ಉಳಿಸಿದ ಈತನಿಗೆ ಆಸ್ಟ್ರೇಲಿಯಾ ಪ್ರಧಾನಿ 'ಹೀರೋ' ಎಂಬ ಪಟ್ಟವನ್ನು ನೀಡಿ, ಶ್ಲಾಘಿಸಿದ್ದಾರೆ.
ಅಹ್ಮದ್​ ಧೈರ್ಯದಿಂದ ಉಗ್ರನಿಂದ ಬಂದೂಕು ಕಸಿದುಕೊಂಡ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆಸ್ಟ್ರೇಲಿಯಾ ಪ್ರಧಾನಿ ಮಾತ್ರವಲ್ಲದೇ, ನೆಟ್ಟಿಗರು ಕೂಡ ಅಹ್ಮದ್​ರನ್ನು ಹೀರೋ ಎಂದು ಗುಣಗಾನ ಮಾಡಿದ್ದಾರೆ. ಅಷ್ಟಕ್ಕೂ ಹಣ್ಣಿನ ವ್ಯಾಪಾರಿಯಾದ ಈತನ ಹೆಸರು ಅಹ್ಮದ್ ಅಲ್ ಅಹ್ಮದ್ (43). ವರದಿಗಳ ಪ್ರಕಾರ, ಘಟನೆ ವೇಳೆ ಈ ವ್ಯಕ್ತಿಯ ಬಳಿ ಯಾವುದೇ ಆಯುಧವಿರಲಿಲ್ಲ. ಆದರೆ, ಉಗ್ರನು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವಾಗ, ನಿಧಾನದಲ್ಲಿ ಹಿಂಬದಿಯಿಂದ ಹೋಗಿ, ಗನ್​ ಕಸಿದ ಅಹ್ಮದ್​, ಆತನನ್ನು ಕಡೆಗೂ ಯಮಲೋಕಕ್ಕೆ ಕಳುಹಿಸಿದ್ದಾರೆ.

ಅಷ್ಟಕ್ಕೂ ಯಾರು ಈತ?

ಅಹ್ಮದ್ ಅಲ್ ಅಹ್ಮದ್ ಓರ್ವ ಹಣ್ಣಿನ ವ್ಯಾಪಾರಿ. ಈ ದಾಳಿಯ ಸಂದರ್ಭದಲ್ಲಿ ಅವನಿಗೆ ಎರಡು ಗುಂಡುಗಳು ಬಿದ್ದಿವೆ. ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಮುಸ್ತಫಾ ಎಂಬ ವ್ಯಕ್ತಿ ತಾನು ಅಹ್ಮದ್​ನ ಸಂಬಂಧಿ ಎಂದು ಹೇಳಿ, ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. "ಅಹ್ಮದ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಳಗೆ ಅವನ ಸ್ಥಿತಿ ಏನೆಂದು ನಮಗೆ ಇನ್ನೂ ಸ್ಪಷ್ಟವಾಗಿ ಹೆಚ್ಚಾಗಿ ತಿಳಿದಿಲ್ಲ. ಅವನೊಬ್ಬ ಹೀರೋ ಎಂಬುದರಲ್ಲಿ ಅನುಮಾನವೇ ಬೇಡ" ಎಂದು ಕೊಂಡಾಡಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬನೀಸ್ ಕೂಡ ಅಹ್ಮದ್​ ಧೈರ್ಯವನ್ನು ಮೆಚ್ಚಿ, ಅವರನ್ನು ಹೀರೋ ಎಂದು ಹೊಗಳಿದ್ದಾರೆ. ಹನುಕ್ಕಾ ಆಚರಣೆಯ ಸಮಯದಲ್ಲಿ ಬೋಂಡಿ ಬೀಚ್‌ನಲ್ಲಿ ಯಹೂದಿ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಗುಂಡಿನ ದಾಳಿ ನಡೆಸಲಾಗಿದೆ ಎಂದು ಸಿಡ್ನಿ ಪೊಲೀಸರು ತಾವು ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ದಾಳಿಯ ಹಿಂದಿರುವ ತಂದೆ-ಮಗ ಜೋಡಿಯನ್ನು ಸಾಜಿದ್ ಅಕ್ರಮ್ (50) ಮತ್ತು ನವೀದ್ ಅಕ್ರಮ್ (24) ಎಂದು ಗುರುತಿಸಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net