ಟೆಕ್ಕಿಗಳ ಕಂಪ್ಯೂಟರ್ ಮೇಲೆ ಕಣ್ಗಾವಲು!

ಎಐ ಚಿತ್ರ
ಎಐ ಚಿತ್ರ
Published on

ಮೆಟಾ ಕಂಪನಿ ತನ್ನ ಎಐ ಮಾಡೆಲ್​ಗಳಿಗೆ ತರಬೇತಿ ನೀಡುವುದಕ್ಕಾಗಿ ಉದ್ಯೋಗಿಗಳ ಕಂಪ್ಯೂಟರ್ ಚಟುವಟಿಕೆಗಳನ್ನು ಗಮನಿಸುವ ‘ಮಾಡೆಲ್ ಕೆಪ್ಯಾಬಿಲಿಟಿ ಇನಿಶಿಯೇಟಿವ್’ (ಎಂಸಿಐ) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದು ತಂತ್ರಜ್ಞಾನ ಲೋಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಏನೆಲ್ಲಾ ಟ್ರಾ್ಯಕ್ ಮಾಡಲಾಗುತ್ತದೆ?: ಉದ್ಯೋಗಿಗಳು ತಮ್ಮ ಕೆಲಸದ ಲ್ಯಾಪ್​ಟಾಪ್​ಗಳಲ್ಲಿ ಒತ್ತುವ ಕೀಲಿಗಳು (ಕೀ ಸ್ಟ್ರೋಕ್ಸ್), ಮೌಸ್ ಚಲನೆಗಳು ಮತ್ತು ಸ್ಕ್ರೀನ್​ಶಾಟ್​ಗಳನ್ನು ಈ ತಂತ್ರಜ್ಞಾನವು ದಾಖಲಿಸಿಕೊಳ್ಳುತ್ತದೆ. ವಿಶೇಷವಾಗಿ ಜಿಮೇಲ್, ವಿಎಸ್ ಕೋಡ್ ಮತ್ತು ಮೆಟಾಮಾಟೆಯಂತಹ ಆಪ್​ಗಳ ಬಳಕೆಯನ್ನು ಇದು ಗಮನಿಸುತ್ತದೆ.

ಉದ್ದೇಶವೇನು?: ಮನುಷ್ಯರು ಕಂಪ್ಯೂಟರ್​ನಲ್ಲಿ ದೈನಂದಿನ ಕೆಲಸಗಳನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಎಐ ಏಜೆಂಟ್​ಗಳಿಗೆ ಕಲಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಉದಾಹರಣೆಗೆ, ಡ್ರಾಪ್​ಡೌನ್ ಮೆನು, ಶಾರ್ಟ್​ಕಟ್ ಕೀಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ದಾಖಲಿಸಿಕೊಂಡು, ಎಐ ಏಜೆಂಟ್​ಗಳಿಗೆ ಕಲಿಸಲಾಗುತ್ತದೆ.

ಉದ್ಯೋಗಿಗಳ ಆತಂಕ: ಒಂದು ಕಡೆ ಕಂಪನಿ ಸುಮಾರು 8,000 ಉದ್ಯೋಗಿಗಳನ್ನು, ಅಂದರೆ, ಶೇ. 10ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಈ ಕಠಿಣ ನಿಯಮ ಜಾರಿಗೆ ಬಂದಿರುವುದು ನೌಕರರಲ್ಲಿ ಅಸಮಾಧಾನ ಮೂಡಿಸಿದೆ. ಇದು ದಬ್ಬಾಳಿಕೆ ಎಂದು ಕೆಲವರು ಬಣ್ಣಿಸಿದ್ದಾರೆ. ಈ ಕಣ್ಗಾವಲು ವ್ಯವಸ್ಥೆಯಿಂದ ಹೊರಬರಲು ಅವಕಾಶ ನೀಡುವಂತೆ ಉದ್ಯೋಗಿಗಳು ಆಂತರಿಕವಾಗಿ ಒತ್ತಾಯಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಕಂಪನಿಯ ಸಿಟಿಒ ಆಂಡ್ರೂ್ಯ ಬೋಸ್ವರ್ತ್, ಕಂಪನಿ ನೀಡಿರುವ ಲ್ಯಾಪ್​ಟಾಪ್​ಗಳಲ್ಲಿ ಈ ವ್ಯವಸ್ಥೆಯನ್ನು ನಿರಾಕರಿಸುವ ಯಾವುದೇ ಆಯ್ಕೆ ನಿಮಗಿಲ್ಲ. ನೀವು ಕೋಪಗೊಳ್ಳಬಹುದು ಅಥವಾ ಆಘಾತಕ್ಕೊಳಗಾಗಬಹುದು, ಆದರೆ ಇದನ್ನು ಒಪ್ಪಿಕೊಳ್ಳಲೇಬೇಕು ಎಂದು ನೇರವಾಗಿ ಹೇಳಿದ್ದಾರೆ. ಆದರೆ ಈ ಡೇಟಾವನ್ನು ಉದ್ಯೋಗಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕೆ ಬಳಸುವುದಿಲ್ಲ. ವೈಯಕ್ತಿಕ ಫೋನ್​ಗಳ ಮೇಲೆ ಇದು ನಿಗಾ ಇಡುವುದಿಲ್ಲ ಎಂದು ತಿಳಿಸಿದ್ದಾರೆ.

ಮಾರ್ಕ್ ಜುಕರ್​ಬರ್ಗ್ ಸಮರ್ಥನೆ

ಇತ್ತೀಚಿನ ಕಂಪನಿ ಸಭೆಯಲ್ಲಿ ಮಾರ್ಕ್ ಜುಕರ್​ಬರ್ಗ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಹೊರಗಿನ ಕಾಂಟ್ರಾಕ್ಟರ್​ಗಳಿಗಿಂತ ಮೆಟಾ ಉದ್ಯೋಗಿಗಳು ಹೆಚ್ಚು ಬುದ್ಧಿವಂತರಾಗಿದ್ದು, ಅವರ ಕೆಲಸದ ವಿಧಾನದ ಮೂಲಕ ಸಂಗ್ರಹಿಸಿದ ಡೇಟಾದಿಂದ ಎಐ ಮಾಡೆಲ್​ಗಳನ್ನು ಹೆಚ್ಚು ಶಕ್ತಿಯುತವಾಗಿ ತರಬೇತುಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಹುದ್ದೆ ಎಐ ಬಿಲ್ಡರ್

ಕಂಪನಿಯು ಸಾಫ್ಟ್​ವೇರ್ ಎಂಜಿನಿಯರ್​ಗಳ ಬದಲಿಗೆ ಎಐ ಬಿಲ್ಡರ್ ಎಂಬ ಹೊಸ ಹುದ್ದೆಗಳನ್ನು ಸೃಷ್ಟಿಸುತ್ತಿದೆ. ಅಂದರೆ ಉದ್ಯೋಗಿಗಳು ಕೇವಲ ಕೋಡಿಂಗ್ ಮಾಡುವುದಷ್ಟೇ ಅಲ್ಲದೆ, ಎಐ ಅನ್ನು ಹೇಗೆ ತರಬೇತಿಗೊಳಿಸಬೇಕು ಎಂಬುದರ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.

8000 ಜನರ ವಜಾ?

ಈ ಕಣ್ಗಾವಲು ವ್ಯವಸ್ಥೆ ಜಾರಿಗೆ ಬಂದ ಬೆನ್ನಲ್ಲೇ, ಮುಂದಿನ ತಿಂಗಳು ಸುಮಾರು 10% ಉದ್ಯೋಗಿಗಳನ್ನು, ಅಂದರೆ ಸುಮಾರು 8,000 ಜನರನ್ನು ವಜಾಗೊಳಿಸಲು ಮೆಟಾ ಸಿದ್ಧತೆ ನಡೆಸುತ್ತಿದೆ. ಇದು ಉದ್ಯೋಗಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆ

ಮೆಟಾದ ಈ ಕ್ರಮ ಕೇವಲ ಅಮೆರಿಕಕ್ಕೆ ಸೀಮಿತವಾಗಿಲ್ಲ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಇರುವ ಟೆಕ್ ಹಬ್​ಗಳಲ್ಲಿ ಉದ್ಯೋಗಿಗಳ ಖಾಸಗಿತನದ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿವೆ.

ಆಘಾತಕಾರಿ ಸಂಗತಿಗಳು

  • ಎಐ ಏಜೆಂಟ್ ಆಗುವ ನೌಕರರು: ಈ ಯೋಜನೆಯ ಗುರಿ ಏನೆಂದರೆ, ಭವಿಷ್ಯದಲ್ಲಿ ಒಬ್ಬ ಮನುಷ್ಯ ಮಾಡುವ ಕೆಲಸವನ್ನು ಎಐ ಏಜೆಂಟ್ ಮಾಡುವುದು. ಅಂದರೆ ಉದ್ಯೋಗಿಗಳು ಇಂದು ಮಾಡುತ್ತಿರುವ ಕೆಲಸವೇ ನಾಳೆ ಅವರ ಜಾಗಕ್ಕೆ ಬರುವ ಎಐಗೆ ಪಾಠವಾಗುತ್ತಿದೆ! 
  •  ಆಂಗ್ರಿ ಫೇಸ್ ಎಮೋಜಿ ಪ್ರತಿಭಟನೆ: ಕಂಪನಿಯ ಆಂತರಿಕ ವೇದಿಕೆಯಲ್ಲಿ ಈ ಬಗ್ಗೆ ಪ್ರಕಟಣೆ ಹೊರಬಿದ್ದಾಗ, ಸಾವಿರಾರು ಉದ್ಯೋಗಿಗಳು ಆಂಗ್ರಿ ಫೇಸ್ (ಕೋಪದ ಮುಖ) ಎಮೋಜಿ ಹಾಕುವ ಮೂಲಕ ತಮ್ಮ ವಿರೋಧ ದಾಖಲಿಸಿದ್ದಾರೆ.
  • ಯುರೋಪ್​ನಲ್ಲಿ ಕಾನೂನು ತೊಡಕು: ಇಟಲಿ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಉದ್ಯೋಗಿಗಳ ಮೇಲೆ ಇಂತಹ ಕಣ್ಗಾವಲು ಇಡುವುದು ಕಾನೂನುಬಾಹಿರ. ಹಾಗಾಗಿ, ಈ ವ್ಯವಸ್ಥೆ ಯನ್ನು ಜಾಗತಿಕವಾಗಿ ಜಾರಿಗೆ ತರಲು ಮೆಟಾ ಕಾನೂನು ಸಂಘರ್ಷ ಎದುರಿಸ ಬೇಕಾಗುತ್ತದೆ.
  • ವೈಯಕ್ತಿಕ ಫೋನ್​ಗಳಿಗೆ ವಿನಾಯಿತಿ: ಸದ್ಯಕ್ಕೆ ಈ ನಿಗಾ ವ್ಯವಸ್ಥೆ ಕೇವಲ ಕಂಪನಿ ನೀಡಿದ ಲ್ಯಾಪ್​ಟಾಪ್​ಗಳಿಗೆ ಸೀಮಿತವಾಗಿದೆ. ವೈಯಕ್ತಿಕ ಫೋನ್​ಗಳು ಅಥವಾ ಆಪ್​ಗಳ ಮೇಲೆ ಇದು ಕಣ್ಣಿಡುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
  • ಇತರರದೂ ಇದೇ ಹಾದಿ?: ಈ ಬೆಳವಣಿಗೆ ಯನ್ನು ತಜ್ಞರು ವೈಟ್ ಕಾಲರ್ ಸರ್ವೆಲೆನ್ಸ್ ಎಂದು ಕರೆಯುತ್ತಿದ್ದಾರೆ. ಇದು ಕೇವಲ ಮೆಟಾಗೆ ಸೀಮಿತವಾಗದೆ, ಭವಿಷ್ಯ ದಲ್ಲಿ ಇತರ ಟೆಕ್ ಕಂಪನಿಗಳೂ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net