ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ ರದ್ದುಗೊಳಿಸುವ ಟ್ರಂಪ್ ಯತ್ನಕ್ಕೆ ಸುಪ್ರೀಂಕೋರ್ಟ್ ಬ್ರೇಕ್! Birthright Citizenship

ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ ರದ್ದುಗೊಳಿಸುವ ಟ್ರಂಪ್ ಯತ್ನಕ್ಕೆ ಸುಪ್ರೀಂಕೋರ್ಟ್ ಬ್ರೇಕ್!
ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ ರದ್ದುಗೊಳಿಸುವ ಟ್ರಂಪ್ ಯತ್ನಕ್ಕೆ ಸುಪ್ರೀಂಕೋರ್ಟ್ ಬ್ರೇಕ್!
Published on
ವಾಷಿಂಗ್ಟನ್: ಅಕ್ರಮ ವಲಸಿಗರು ಮತ್ತು ತಾತ್ಕಾಲಿಕ ವೀಸಾಗಳ ಮೇಲೆ ಅಮೆರಿಕದಲ್ಲಿ ನೆಲೆಸಿರುವವರ ಮಕ್ಕಳಿಗೆ ಸಿಗುತ್ತಿದ್ದ ಸ್ವಯಂಚಾಲಿತ ಜನ್ಮಸಿದ್ಧ ಪೌರತ್ವ (Birthright Citizenship) ರದ್ದುಗೊಳಿಸಲು ಮುಂದಾಗಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಯುಎಸ್ ಸುಪ್ರೀಂ ಕೋರ್ಟ್ ಭಾರಿ ಹಿನ್ನಡೆ ನೀಡಿದೆ. ಅಮೆರಿಕದ ನೆಲದಲ್ಲಿ ಜನಿಸುವ ಪ್ರತಿಯೊಬ್ಬರಿಗೂ ಸಾಂವಿಧಾನಿಕವಾಗಿ ಸಿಗುವ ಪೌರತ್ವದ ಹಕ್ಕನ್ನು ಕೋರ್ಟ್ ಎತ್ತಿಹಿಡಿದಿದೆ.
ತನ್ನ ಅಧಿಕಾರಾವಧಿಯ ಕೊನೆಯ ದಿನದಂದು ಅತ್ಯಂತ ಕುತೂಹಲ ಕೆರಳಿಸಿದ್ದ ಈ ಪ್ರಕರಣದ ತೀರ್ಪು ಪ್ರಕಟಿಸಿದ ಸುಪ್ರೀಂ, 6-3ರ ಬಹುಮತದೊಂದಿಗೆ ಟ್ರಂಪ್ ಅವರ ಆದೇಶವನ್ನು ವಜಾಗೊಳಿಸಿತು. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಬಹುಮತದ ತೀರ್ಪನ್ನು ಬರೆಯುತ್ತಾ, ಪೌರತ್ವ ಎಂಬುದು ಹಕ್ಕುಗಳನ್ನು ಹೊಂದುವ ಹಕ್ಕಾಗಿದೆ. ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯನ್ನು ರೂಪಿಸಿದವರು ಈ ದೇಶದ ಪ್ರತಿಯೊಬ್ಬ ಮುಕ್ತ ವ್ಯಕ್ತಿಗೂ ಈ ಭರವಸೆಯನ್ನು ನೀಡಿದ್ದಾರೆ. ನಾವು ಇಂದು ಆ ಭರವಸೆಯನ್ನು ಉಳಿಸಿಕೊಳ್ಳುತ್ತಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಏನಿದು ವಿವಾದ? ಪ್ರಕರಣದ ಹಿನ್ನೆಲೆ:

ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಶ್ವೇತಭವನಕ್ಕೆ ಮರಳಿದ ಮೊದಲ ದಿನವೇ ವಿವಾದಾತ್ಮಕ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. ಅದರ ಪ್ರಕಾರ, ಅಮೆರಿಕದಲ್ಲಿ ಕಾನೂನುಬಾಹಿರವಾಗಿ ಇರುವವರು ಅಥವಾ ಪ್ರವಾಸಿ/ತಾತ್ಕಾಲಿಕ ವೀಸಾಗಳ ಮೇಲೆ ಬಂದಿರುವ ವಿದೇಶಿಯರ ಮಕ್ಕಳು ಅಮೆರಿಕದ ಮಣ್ಣಿನಲ್ಲಿ ಜನಿಸಿದರೂ ಅವರಿಗೆ ಇನ್ನು ಮುಂದೆ ಸ್ವಯಂಚಾಲಿತವಾಗಿ ಯುಎಸ್ ಪೌರತ್ವ ಸಿಗುವುದಿಲ್ಲ ಎಂದು ಘೋಷಿಸಲಾಗಿತ್ತು.
ಟ್ರಂಪ್ ಅವರ ಈ ಕಠಿಣ ವಲಸೆ ನೀತಿಯನ್ನು ಪ್ರಶ್ನಿಸಿ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಹಲವು ಫೆಡರಲ್ ನ್ಯಾಯಾಲಯಗಳು, ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದವು. ಪೋಷಕರ ಕಾನೂನು ಸ್ಥಾನಮಾನ ಏನೇ ಇರಲಿ, ಅಮೆರಿಕದ ನೆಲದಲ್ಲಿ ಜನಿಸುವ ಮಕ್ಕಳಿಗೆ ಪೌರತ್ವ ಸಿಗಬೇಕು ಎಂದು ಸಂವಿಧಾನ ಹೇಳುತ್ತದೆ ಎಂದು ಕೋರ್ಟ್‌ಗಳು ಅಭಿಪ್ರಾಯಪಟ್ಟಿದ್ದವು. ಇದನ್ನು ಟ್ರಂಪ್ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಸವಾಲು ಹಾಕಿತ್ತು.

ಟ್ರಂಪ್ ನೇಮಿಸಿದ ನ್ಯಾಯಮೂರ್ತಿಗಳೂ ಕೈಕೊಟ್ಟರು!

ಪ್ರಸ್ತುತ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ 6-3 ರಷ್ಟಿರುವ ಸಂಪ್ರದಾಯವಾದಿ ನ್ಯಾಯಮೂರ್ತಿಗಳ ಬಹುಮತವಿದೆ. ತಮ್ಮ ಮೊದಲ ಅವಧಿಯಲ್ಲಿ ಟ್ರಂಪ್ ಅವರೇ ಮೂವರು ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಮೂಲಕ ಈ ನ್ಯಾಯಾಲಯದ ಸೈದ್ಧಾಂತಿಕ ಸಮತೋಲನವನ್ನು ಬದಲಾಯಿಸಿದ್ದರು. ಹೀಗಿದ್ದೂ, ನ್ಯಾಯಾಲಯ ಮಾತ್ರ ಟ್ರಂಪ್ ಸರ್ಕಾರದ ನೀತಿಯ ಪರವಾಗಿ ನಿಲ್ಲಲಿಲ್ಲ. ಇತ್ತೀಚೆಗಷ್ಟೇ ಟ್ರಂಪ್ ಅವರ ಸುಂಕದ ನೀತಿಯನ್ನು ತಳ್ಳಿಹಾಕಿದ್ದ ಸುಪ್ರೀಂ ಕೋರ್ಟ್, ಈಗ ಪೌರತ್ವದ ವಿಚಾರದಲ್ಲೂ ಟ್ರಂಪ್‌ಗೆ ಶಾಕ್ ನೀಡಿದೆ.

ಸಂವಿಧಾನದ 14ನೇ ತಿದ್ದುಪಡಿ ಹೇಳುವುದೇನು?

ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಪೌರತ್ವದ ವಿಧಿಯು ಹೀಗೆ ಹೇಳುತ್ತದೆ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಜನಿಸಿದ ಅಥವಾ ಪೌರತ್ವ ಪಡೆದ ಮತ್ತು ಅದರ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ವ್ಯಕ್ತಿಗಳು ಅಮೆರಿಕದ ಹಾಗೂ ಅವರು ವಾಸಿಸುವ ರಾಜ್ಯದ ಪ್ರಜೆಗಳಾಗಿರುತ್ತಾರೆ.
ಅಮೆರಿಕದ ಅಂತರ್ಯುದ್ಧದ ನಂತರ, 1868 ರಲ್ಲಿ ಈ ತಿದ್ದುಪಡಿಯನ್ನು ತರಲಾಗಿತ್ತು. ಗುಲಾಮಗಿರಿಯಿಂದ ಮುಕ್ತರಾದ ಕರಿಯರು ಮತ್ತು ಅವರ ವಂಶಸ್ಥರಿಗೆ ಕಾನೂನುಬದ್ಧ ರಕ್ಷಣೆ ಹಾಗೂ ಸಮಾನ ಪೌರತ್ವ ನೀಡಲು ಇದನ್ನು ರೂಪಿಸಲಾಗಿತ್ತು. ಕಳೆದ 150 ವರ್ಷಗಳಿಂದ ಯುಎಸ್ ನ್ಯಾಯಾಲಯಗಳು ಈ ವಿಧಿಯನ್ನು ಸರಳವಾಗಿ ಅರ್ಥೈಸುತ್ತಾ ಬಂದಿದ್ದು, ವಿದೇಶಿ ರಾಯಭಾರಿಗಳ ಮಕ್ಕಳನ್ನು ಹೊರತುಪಡಿಸಿ ಅಮೆರಿಕದ ನೆಲದಲ್ಲಿ ಹುಟ್ಟುವ ಯಾರಿಗಾದರೂ ಸ್ವಯಂಚಾಲಿತವಾಗಿ ಪೌರತ್ವ ಸಿಗುತ್ತದೆ ಎಂದು ನಿಯಮ ಪಾಲಿಸಿಕೊಂಡು ಬರಲಾಗಿದೆ.

ಜನ್ಮಸಿದ್ಧ ಪೌರತ್ವವನ್ನು ಟ್ರಂಪ್ ವಿರೋಧಿಸುವುದೇಕೆ?

ವಲಸಿಗರ ಮಕ್ಕಳಿಗೆ ಸಿಗುವ ಈ ಪೌರತ್ವ ಸೌಲಭ್ಯದಿಂದಾಗಿ ಅಮೆರಿಕದ ತೆರಿಗೆದಾರರ ಹಣ ವಿನಾಶವಾಗುತ್ತಿದೆ ಎನ್ನುವುದು ಟ್ರಂಪ್ ವಾದವಾಗಿದೆ. ಇದು ಸರ್ಕಾರಿ ಶಾಲೆಗಳು, ಆರೋಗ್ಯ ವ್ಯವಸ್ಥೆ ಮತ್ತು ಇತರ ಸಾರ್ವಜನಿಕ ಸೇವೆಗಳ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಹೇರುತ್ತಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಈ ಕಾನೂನಿನಿಂದಾಗಿಯೇ ಅಕ್ರಮ ವಲಸೆ ಹೆಚ್ಚುತ್ತಿದೆ ಮತ್ತು ಭವಿಷ್ಯದಲ್ಲಿ ಈ ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಇಡೀ ಕುಟುಂಬವನ್ನು ಅಮೆರಿಕಕ್ಕೆ ಕರೆಸಿಕೊಳ್ಳಲು ಸ್ಪಾನ್ಸರ್ ಮಾಡುತ್ತಾರೆ ಎಂಬುದು ಟ್ರಂಪ್ ಕಳವಳವಾಗಿತ್ತು.
ವಿಚಾರಣೆಗೂ ಮುನ್ನವೇ ತಮಗೆ ಸೋಲಾಗಬಹುದು ಎಂದು ಟ್ರಂಪ್ ಭವಿಷ್ಯ ನುಡಿದಿದ್ದರು. ಕಳೆದ ಏಪ್ರಿಲ್‌ನಲ್ಲಿ ನಡೆದ ಮೌಖಿಕ ವಾದದ ವೇಳೆ ಟ್ರಂಪ್ ಖುದ್ದಾಗಿ ಸುಪ್ರೀಂ ಗ್ಯಾಲರಿಯಲ್ಲಿ ಕುಳಿತು ವಿಚಾರಣೆ ವೀಕ್ಷಿಸಿದ್ದರು. ಆ ಮೂಲಕ ನ್ಯಾಯಾಲಯದ ಕಲಾಪಕ್ಕೆ ಹಾಜರಾದ ಅಮೆರಿಕದ ಮೊದಲ ಹಾಲಿ ಅಧ್ಯಕ್ಷ ಎಂಬ ಇತಿಹಾಸ ಸೃಷ್ಟಿಸಿದ್ದರು. ಆದರೆ, ಅವರ ಸುದೀರ್ಘ ಪ್ರಯತ್ನಕ್ಕೆ ಈಗ ಕಾನೂನಿನ ಅಂತಿಮ ಹೊಡೆತ ಬಿದ್ದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net