ಜಿಪುಣ ಸಿರಿವಂತ ರಾಷ್ಟ್ರಗಳು

Stingy rich countries
Stingy rich countries
Published on
ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವು ಸಿರಿವಂತ ರಾಷ್ಟ್ರಗಳು ಬಡ ಮತ್ತು ಮಧ್ಯಮ ಆದಾಯದ ದೇಶಗಳಿಗೆ ನೀಡುತ್ತಿದ್ದ ನೆರವಿನಲ್ಲಿ ಭಾರಿ ಕಡಿತ ಮಾಡಿವೆ. ಇದರ ವ್ಯತಿರಿಕ್ತ ಪರಿಣಾಮ ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಿ ಗೋಚರವಾಗಲಿದ್ದು, 2030ರ ಹೊತ್ತಿಗೆ ಬಡತನ, ಅಪೌಷ್ಟಿಕತೆ, ಹಸಿವಿನಿಂದ ಜಗತ್ತಿನಲ್ಲಿ 2.26 ಕೋಟಿ ಜನರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಪೈಕಿ 5 ವರ್ಷದೊಳಗಿನ 54 ಲಕ್ಷ ಮಕ್ಕಳೂ ಸೇರಿದ್ದಾರೆ. ಶಿಕ್ಷಣ, ಪೌಷ್ಟಿಕತೆ, ಮಾನವೀಯ ನೆರವು, ಲಸಿಕೆ, ಔಷಧ ಸೇರಿ ಮಾನವೀಯ ನೆರವು ಕಾರ್ಯಗಳಿಗೆ ಈ ಹಣ ಬಳಕೆ ಆಗುತ್ತಿತ್ತು. ಈ ಹಿಂದೆಯೂ ಇಂಥ ಬೆಳವಣಿಗೆಗಳು ಸಂಭವಿಸಿದಾಗ, ಬಡರಾಷ್ಟ್ರಗಳು ತತ್ತರಿಸಿದ್ದವು. ಮತ್ತೊಮ್ಮೆ ಅದೇ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಸಿರಿವಂತ ರಾಷ್ಟ್ರಗಳು ಬಡ ಮತ್ತು ಮಧ್ಯಮ ಆದಾಯದ ದೇಶಗಳಿಗೆ ನೀಡುತ್ತಿರುವ ಮಾನವೀಯ ಆರ್ಥಿಕ ನೆರವು (ಹ್ಯೂಮನಿಟೇರಿಯನ್ ಇಕಾನಮಿಕ್ ಏಡ್) ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.Official Development Assistance ಗೆ ಕಡಿವಾಣ ಬೀಳುತ್ತಿರುವುದು ಹಲವು ಸಮಸ್ಯೆಗಳ ತೀವ್ರತೆಯನ್ನು ಹೆಚ್ಚಿಸಲಿದೆ.
ಜಾಗತಿಕ ಹೆಲ್ತ್ ಜರ್ನಲ್ ದ ಸೈಲೆಂಟ್​ ಫೆಬ್ರವರಿ 3ರಂದು ಸಂಶೋಧನಾ ವರದಿಯನ್ನು ಪ್ರಕಟಿಸಿದ್ದು, ಸಿರಿವಂತ ರಾಷ್ಟ್ರಗಳಿಂದ ನೆರವಿನ ಪ್ರಮಾಣ ಕಡಿಮೆ ಆಗುತ್ತಿರುವುದರ ಬಗ್ಗೆ ಗಮನ ಸೆಳೆದಿದೆ. ಕಳೆದ 20 ವರ್ಷಗಳ ಒಡಿಎ ಪ್ರಮಾಣವನ್ನು ವಿಶ್ಲೇಷಿಸಿರುವ ಬಾರ್ಸಿಲೋನಾ ಇನ್ಸ್ಟಿಟ್ಯೂಟ್ ಫಾರ್ ಗ್ಲೊಬಲ್ ಹೆಲ್ತ್, ನೆರವಿನ ಕಡಿತ 50ಕ್ಕೂ ಹೆಚ್ಚು ಬಡ ಹಾಗೂ ಮಧ್ಯಮ ಆದಾಯದ ರಾಷ್ಟ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದಿದೆ.
ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ಮಾನವಿಯ ನೆರವು ಕಾರ್ಯಗಳಿಗಾಗಿ ಶ್ರೀಮಂತ ರಾಷ್ಟ್ರಗಳು ಬಡ ಹಾಗೂ ಮಧ್ಯಮ ಆದಾಯದ ರಾಷ್ಟ್ರಗಳಿಗೆ ನೆರವು ನೀಡುತ್ತ ಬಂದಿದ್ದು, ಈ ನೆರವಿಗೆ ಒಡಿಎ ಎಂದು ಕರೆಯಲಾಗಿದೆ.
ದೇಶದಲ್ಲಿನ ವೆಚ್ಚ ಕಡಿತ ಮಾಡುತ್ತ, ಇತರ ದೇಶಗಳ ಮೇಲೆ ಸುಂಕ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಾಏಕಿ ಬಡರಾಷ್ಟ್ರಗಳಿಗೆ ನೆರವು ನಿಲ್ಲಿಸಿದ್ದು ಮಾತ್ರವಲ್ಲ, 2025ರಲ್ಲಿ ಯುಎಸ್ಎಐಡಿ ಯೋಜನೆಯನ್ನೇ ರದ್ದುಗೊಳಿಸಿದ್ದಾರೆ.
ಯುಎಸ್ಎಐಡಿ ಕಾರ್ಯಯೋಜನೆಗಳು(United States Agency for International Development) ಅಮೆರಿಕದ ಹಿತಾಸಕ್ತಿಗಳಿಗೆ ಸಹಕಾರಿಯಲ್ಲ ಹಾಗೂ ಅದು ವ್ಯಯಿಸುತ್ತಿರುವ ಹಣ ಅಮೆರಿಕದ ಬೊಕ್ಕಸಕ್ಕಾಗುತ್ತಿರುವ ದೊಡ್ಡ ನಷ್ಟ ಎಂದು ಹೇಳಿ ಯುಎಸ್ಎಐಡಿಯ 1,600 ನೌಕರರನ್ನು ಕಳೆದ ವರ್ಷವೇ ಕೆಲಸದಿಂದ ವಜಾ ಮಾಡಲಾಗಿದೆ.

ಒಡಿಎ ಏಕೆ ಮುಖ್ಯ?

ಜಾಗತಿಕ ಆರೋಗ್ಯವನ್ನು ಸುಧಾರಿಸಲು ಒಡಿಎ ಪರಿಣಾಮಕಾರಿ ವಿಧಾನ. ಇದಕ್ಕೆ ಹೆಚ್ಚಿನ ನೆರವನ್ನು ಅಮೆರಿಕ, ಬ್ರಿಟನ್, ಜರ್ಮನಿ, ಜಪಾನ್ ಹಾಗೂ ಫ್ರಾನ್ಸ್ ದೇಶಗಳು ನೀಡುತ್ತ ಬಂದಿವೆ. ಕಳೆದ ಎರಡು ವರ್ಷಗಳಲ್ಲಿ ಜಪಾನ್ ಹೊರತಪಡಿಸಿದರೆ ಅಮೆರಿಕ, ಬ್ರಿಟನ್, ಜರ್ಮನಿ ಹಾಗೂ ಫ್ರಾನ್ಸ್ ದೇಶಗಳು ಒಡಿಎನಲ್ಲಿ ಭಾರಿ ಕಡಿತ ಮಾಡಿವೆ. 2023ಕ್ಕೆ ಹೋಲಿಸಿದರೆ ಬಡರಾಷ್ಟ್ರಗಳಿಗೆ ಆರ್ಥಿಕ ನೆರವಿನ ಪ್ರಮಾಣ ಶೇಕಡ 33ರಷ್ಟು ಕಡಿಮೆಯಾಗಿದೆ. ನೆರವಿನ ಪ್ರಮಾಣ ಇನ್ನಷ್ಟು ಕಡಿತವಾದರೆ ಆರೋಗ್ಯ, ಲಸಿಕೆ ಹಾಗೂ ಪೌಷ್ಟಿಕತೆ ಯೋಜನೆಗಳಿಗೆ ಗ್ರಹಣ ಹಿಡಿದು 2030ರ ಹೊತ್ತಿಗೆ ಅಪೌಷ್ಟಿಕತೆ ಮತ್ತು ಬಡತನದಿಂದ ಸಂಭವಿಸುವ ಸಾವುಗಳ ಸಂಖ್ಯೆ 2 ಕೋಟಿ 23 ಲಕ್ಷಕ್ಕೆ ಹೆಚ್ಚುವ ಸಾಧ್ಯತೆ ಇದೆ. ಇದರಲ್ಲಿ ಐದು ವರ್ಷದೊಳಗಿನ 54 ಲಕ್ಷ ಮಕ್ಕಳೂ ಸೇರಿದ್ದಾರೆ ಎಂದು ಸಂಶೋಧನಾ ವರದಿಯಲ್ಲಿ ವಿವರಿಸಲಾಗಿದೆ.(Organisation for Economic Co-operation and Development ) ವರದಿ ಪ್ರಕಾರ, 2024ರಲ್ಲಿ ಒಡಿಎದಲ್ಲಿ ಶೇ.71 ಹಾಗೂ 2025ರಲ್ಲಿ ಶೇ.17ರಷ್ಟು ಕಡಿತವಾಗಿದೆ.

ಬದಲಾದ ಆರ್ಥಿಕ ನೀತಿಯೇ ಕಾರಣ

ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲು ಮತ್ತು ಬಡದೇಶಗಳ ಸಮಸ್ಯೆಗಳಿಗೆ ಸ್ಪಂದಿಸಲು ಸಿರಿವಂತ ರಾಷ್ಟ್ರಗಳು ಧಾರಾಳ ಮನಸ್ಸಿನಿಂದ ನೆರವು ನೀಡುತ್ತಿದ್ದವು. ಮಾತ್ರವಲ್ಲ, ಇದು ತಮ್ಮ ಕರ್ತವ್ಯ ಎಂದು ಭಾವಿಸಿದ್ದವು. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಆರ್ಥಿಕ ರಾಷ್ಟ್ರಗಳು ಕೂಡ ವಿತ್ತೀಯ ಸಂಕಷ್ಟವನ್ನು ಎದುರಿಸುತ್ತಿದ್ದು, ವೆಚ್ಚ ಕಡಿತಕ್ಕೆ ಮುಂದಾಗಿವೆ. ಸಿರಿವಂತ ರಾಷ್ಟ್ರಗಳು ಕೂಡ ಸಾಲದ ಒತ್ತಡದಿಂದ ಬಳಲುತ್ತಿವೆ. ಅಲ್ಲದೆ, ಜಾಗತಿಕವಾಗಿ ರಾಜಕೀಯ ಅನಿಶ್ಚಿತತೆಯ ಪರಿಸ್ಥಿತಿ ಇರುವುದರಿಂದ ರಕ್ಷಣೆಗೆ ಮಾಡುತ್ತಿರುವ ಖರ್ಚನ್ನು ಗಣನೀಯವಾಗಿ ಹೆಚ್ಚಿಸಿದ್ದು, ಬಡರಾಷ್ಟ್ರಗಳಿಗೆ ಬರುತ್ತಿದ್ದ ನೆರವು ಕಡಿಮೆಯಾಗುತ್ತಿದೆ.
ಅಮೆರಿಕ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವುದರಿಂದಲೇ, ಇತರ ರಾಷ್ಟ್ರಗಳ ಮೇಲೆ ಸುಂಕ ಹೇರಿ ಆದಾಯ ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಿದೆ. ಜಿಡಿಪಿಯೂ ಇಳಿಕೆಯಾಗಿದೆ. 2024ರಲ್ಲಿ 20 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದರೆ, 2025ರಲ್ಲಿ ಬರೀ 5.8 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಅದರಲ್ಲೂ, 2026ರ ಆರಂಭದಲ್ಲೇ ನೌಕರರ ವಜಾದಂಥ ಕ್ರಮಗಳು ವ್ಯಾಪಕವಾಗಿ ಕೈಗೊಳ್ಳಲಾಗುತ್ತಿದ್ದು, ಜನವರಿ ತಿಂಗಳಲ್ಲೇ ಒಂದು ಲಕ್ಷಕ್ಕೂ ಅಧಿಕ ಜನರು ಉದ್ಯೋಗ ಕಳೆದುಕೊಂಡು, ಚಿಂತಾಕ್ರಾಂತರಾಗಿದ್ದಾರೆ. ಅಮೆರಿಕದ ವಿವಿಧ ರಂಗಗಳಲ್ಲಿ ನೌಕರರ ಕಡಿತದ ಸರಣಿ ಇನ್ನೂ ಮುಂದುವರಿಯಲಿದ್ದು, ಸಾಮಾಜಿಕ ಸಮಸ್ಯೆ ತಲೆದೋರಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಅಮೆರಿಕ 2026ರ ಜನವರಿ 22ರಂದು ಹೊರಬಿದ್ದಿದೆ.
ಒಇಸಿಡಿಯ ವರದಿ ಪ್ರಕಾರ, ಯುರೋಪಿಯನ್ ರಾಷ್ಟ್ರಗಳು ಕೂಡ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. 2025ರಲ್ಲಿ ಫ್ರಾನ್ಸ್ನ ಒಟ್ಟು ಸಾಲ ಅದರ ಜಿಡಿಪಿಗಿಂತ ಶೇಕಡ 16.5ರಷ್ಟು ಹೆಚ್ಚಾಗಿದ್ದರೆ, ಬ್ರಿಟನ್ ಸಾಲ ಅದರ ಜಿಡಿಪಿಗಿಂತ ಶೇ.3.4ರಷ್ಟು ಅಧಿಕಗೊಂಡಿದೆ.
ಜರ್ಮನಿಯ ಕೋವಿಡ್ ಫಂಡ್ನಲ್ಲಿ 60 ಬಿಲಿಯನ್ ಯುರೋ ಸಂಗ್ರಹವಾಗಿದ್ದು, ಈ ಮೊತ್ತವನ್ನು ಹವಾಮಾನ ಬದಲಾವಣೆ ನಿಧಿ ಸೇರಿದಂತೆ ಇತರ ಯಾವುದೇ ಫಂಡ್ಗಳಿಗೆ ವರ್ಗಾಯಿಸದಂತೆ ಜರ್ಮನಿಯ ಫೆಡರಲ್ ಕೋರ್ಟ್ 2023ರ ತೀರ್ಪಿನಲ್ಲಿ ಸ್ಪಷ್ಟವಾಗಿ ಸೂಚಿಸಿದೆ. ಹೀಗಾಗಿ, ಜರ್ಮನಿಯಿಂದ ದೊರೆಯುತ್ತಿದ್ದ ನೆರವು ಕೂಡ ಕಡಿಮೆಯಾಗಿದೆ.
ಭೂರಾಜಕೀಯ ಸಂಘರ್ಷಗಳು ಹೆಚ್ಚಿದ್ದು, ಶಸ್ತ್ರಾಸ್ತ್ರಗಳ ಖರೀದಿಗೆ ಹೆಚ್ಚಿನ ಹಣ ವ್ಯಯಿಸಲಾಗುತ್ತಿದೆ. ರಷ್ಯಾ-ಯೂಕ್ರೇನ್ ಯುದ್ಧದ ಅವಧಿಯಲ್ಲಿ, ಬಡರಾಷ್ಟ್ರಗಳಿಗೆ ನೆರವು ಕಡಿಮೆಯಾಗಿದೆ. ನ್ಯಾಟೋ ರಾಷ್ಟ್ರಗಳು ರಕ್ಷಣಾ ವೆಚ್ಚದಲ್ಲಿ ಭಾರಿ ಏರಿಕೆ ಮಾಡಿವೆ.

ಜಾಗತಿಕ ಪರಿಣಾಮಗಳು

ಒಡಿಎ ಕಡಿಮೆಯಾಗುವುದರಿಂದ ಜಾಗತಿಕ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಅನಾರೋಗ್ಯ ಹೆಚ್ಚಳ: ಒಡಿಎಯಿಂದ 2002ರಿಂದ 2021ರ ಅವಧಿಯಲ್ಲಿ ಮಕ್ಕಳ ಮರಣ ಪ್ರಮಾಣ ಸರಾಸರಿ 39% ಕಡಿಮೆಯಾಗಿತ್ತು ಮತ್ತು ಎಚ್ಐವಿ ಏಡ್ಸ್ಗೆ ಸಂಬಂಧಿಸಿದ ಸಾವುಗಳಲ್ಲಿ 70% ಇಳಿಕೆಯಾಗಿತ್ತು. ಒಡಿಎ ಇಳಿಕೆಯಿಂದ ಸುಸ್ಥಿರ ಅಭಿವೃದ್ಧಿ ಸಾಧಿಸಲು ಕೂಡ ಅಡ್ಡಿಯಾಗುತ್ತದೆ ಮತ್ತು ಈ ನಿಟ್ಟಿನಲ್ಲಿ ಹಣಕಾಸಿನ ಕೊರತೆ ಸೃಷ್ಟಿಯಾಗುತ್ತದೆ. ಬಡತನ, ಹಸಿವು ಮತ್ತು ರೋಗಗಳು ಹೆಚ್ಚುತ್ತವೆ. ಸಾರ್ವಜನಿಕ ಸೌಲಭ್ಯಗಳು ಮರೀಚಿಕೆಯಾಗುತ್ತವೆ ಮತ್ತು ಮಾನವೀಯ ಸಂಕಷ್ಟದ ಪರಿಸ್ಥಿತಿ ಹೆಚ್ಚುತ್ತದೆ. ಮುಖ್ಯವಾಗಿ ಆಫ್ರಿಕನ್ ದೇಶಗಳಲ್ಲಿ.
ಭೂರಾಜಕೀಯ ಬದಲಾವಣೆಗಳು: ಸಾಂಪ್ರದಾಯಿಕ ದಾನಿಗಳಾದ ಸಿರಿವಂತ ರಾಷ್ಟ್ರಗಳು ಈಗ ಹಿಂದೆ ಸರಿಯುತ್ತಿ ರುವುದರಿಂದ ಚೀನಾ, ಭಾರತ, ಟರ್ಕಿ ಮತ್ತು ಸೌದಿ ಅರೇಬಿಯಾ ದೇಶಗಳು ನೆರವು ನೀಡಿ ಪ್ರಭಾವ ಹೆಚ್ಚಿಸಬಹುದು.

ಭಾರತದ ಮೇಲಿನ ಪರಿಣಾಮಗಳು

ಭಾರತ ಮಧ್ಯಮ ಆದಾಯದ ದೇಶ ವಾಗಿರುವುದರಿಂದ ಒಡಿಎ ಮೇಲಿನ ಅವಲಂಬನೆ ಕಡಿಮೆಯಾಗಿದೆ. 2000ರ ನಂತರ ಭಾರತ ನೆಟ್ ಡೋನರ್ ಆಗಿ ಪರಿವರ್ತನೆಗೊಂಡಿದ್ದು, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ದೇಶಗಳಿಗೆ 48 ಬಿಲಿಯನ್ ಡಾಲರ್ ನೆರವು ನೀಡಿದೆ. ಆದರೂ ಒಡಿಎ ಕಡಿತದಿಂದ ಆರೋಗ್ಯ ಮತ್ತು ಅಭಿವೃದ್ಧಿ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ.

ಯಾವ ದೇಶಗಳಿಗೆ ಹೆಚ್ಚು ಸಮಸ್ಯೆ.?

ಅಪ್ಘಾನಿಸ್ತಾನದಲ್ಲಿ ಈಗಾಗಲೇ ವೈದ್ಯಕೀಯ ನೆರವಿನ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಇದಲ್ಲದೆ, ರ್ಬುನಾ ಫಾಸೊ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಚಾಡ್, ಕಾಂಗೋ, ಇಥಿಯೋಪಿಯಾ, ಹೈತಿ, ಮಾಲಿ, ಸೋಮಾಲಿಯಾ, ದಕ್ಷಿಣ ಸುಡಾನ್, ಯಮನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಾನವೀಯ ನೆರವು ಕಾರ್ಯಕ್ರಮಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net